ಪಾಲಿಕೆಯಲ್ಲಿ JDS-ಕಾಂಗ್ರೆಸ್ ಮೈತ್ರಿ ಪತನ; BJP ಜೊತೆ ಮೈತ್ರಿ ಬಗ್ಗೆ ಹೆಚ್ಡಿಕೆ ಹೇಳಿದ್ದೇನು?
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಕಾಳಗ ನಡೆಯುತ್ತಲೇ ಇದೆ. ಈ ಹಿಂದೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದವು. ಇದೀಗ ಆ ಮೈತ್ರಿಯೂ ಮುರಿದು ಬಿದ್ದಿದ್ದು, ಜೆಡಿಎಸ್ ಯಾರಿಗೆ ಬೆಂಬಲಿಸಲಿದೆ. ಯಾರು ಅಧಿಕಾರ ಹಿಡಿಯಲಿದ್ದಾರೆ ಎಂದು ಕಗ್ಗಂಟಾಗಿ ಉಳಿದಿದೆ.
ಕಾಂಗ್ರೆಸ್ ಜೊತೆಗೆ ಮೈತ್ರಿ ಮುರಿದು ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, “ನಾವು ಒಪ್ಪಂದ ಮಾಡಿಕೊಂಡಿದ್ದ ಮೈತ್ರಿ ಮುರಿದು ಬೀಳಲು ಸಿದ್ದರಾಮಯ್ಯ ಕಾರಣ. ನಮ್ಮ ಶಕ್ತಿ ಏನೆಂದು ಕಾಂಗ್ರೆಸ್ ನಾಯಕರಿಗೆ ತೋರಿಸುವ ಅಗತ್ಯವಿದೆ. ಅದಕ್ಕಾಗಿ ಮೈತ್ರಿಯನ್ನು ಮುರಿದಿದ್ದೇವೆ” ಎಂದು ಹೇಳಿದ್ದಾರೆ.
ಜೆಡಿಎಸ್ ಒಂದು ಪಕ್ಷವೇ ಅಲ್ಲ, ಅದಕ್ಕೆ ಶಕ್ತಿಯೇ ಇಲ್ಲ ಎಂದು ಈ ಹಿಂದೆ ಸಿದ್ದರಾಮಯ್ಯ ಹೇಳಿದ್ದರು. ನಮ್ಮ ಪಕ್ಷದ ಬಗ್ಗೆ ದ್ವೇಷದ ಭಾವ ಹೊಂದಿರವು ಅವರಿಗೆ ಮೈಸೂರಿನಲ್ಲಿ ಕಾಂಗ್ರೆಸ್ಸಿಗಿಂತ ನಮ್ಮ ಪಕ್ಷದ ಶಕ್ತಿ ಏನೆಂಬುದನ್ನು ಮನವರಿಕೆ ಮಾಡಿಕೊಡಬೇಕಿದೆ. ಅದಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
“ಕೇಂದ್ರದ ಬಿಜೆಪಿ ನಾಯಕರು ಕರ್ನಾಟಕವನ್ನು ಅತ್ಯಂತ ಲಘುವಾಗಿ ಪರಿಗಣಿಸಿದ್ದಾರೆ. ರಾಜ್ಯದ ಯಾವ ಸಮಸ್ಯೆಗಳಿಗೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ನಮ್ಮ ರಾಜ್ಯದ ವಿಷಯದಲ್ಲಿ ಬಿಜೆಪಿ ಪಕ್ಷದ ತೀರ್ಮಾನ ಏನಿದೆ ಎಂಬುದು ಗೊತ್ತಿಲ್ಲ. ಹೀಗಾಗಿ ಈ ಎರಡೂ ಪಕ್ಷಗಳ ಜೊತೆಗಿನ ಮೈತ್ರಿಯಿಂದ ಹಿಂದೆ ಸರಿದಿದ್ದೇವೆ” ಎಂದೂ ಹೆಚ್ಡಿಕೆ ಹೇಳಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನರ ವಿಶ್ವಾದ ಪಡೆದು ಅಧಿಕಾರಕ್ಕೆ ಬರುತ್ತೇವೆ. ತಮಿಳುನಾಡು ಹಾಗೂ ಕೇರಳದಂತೆ ಪ್ರದೇಶಿಕ ಪಕ್ಷವು ಸ್ವತಂತ್ರವಾಗಿ ಅಧಿಕಾರಕ್ಕೆ ಬರುವಂತೆ ಪಕ್ಷಕ್ಕೆ ಶಕ್ತಿ ತುಂಬಲು ಈ ನಿರ್ಧಾರಕ್ಕೆ ಬಂದಿದ್ದೇವೆ. ಎರಡೂ ಪಕ್ಷಗಳಿಗೆ ಈ ಮೂಲಕ ಸ್ಪಷ್ಟ ಸಂದೇಶ ನೀಡಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಗುಜರಾತ್ ಚುನಾವಣೆ: 576 ಸ್ಥಾನಗಳಲ್ಲಿ 483 ಗೆದ್ದ BJP; ಕಾಂಗ್ರೆಸ್ ನಾಯಕರ ಸರಣಿ ರಾಜೀನಾಮೆ!

