ಶಿವಮೊಗ್ಗ ರೈತ ಮಹಾಪಂಚಾಯತ್: ರಾಕೇಶ್ ಟಿಕಾಯತ್ ವಿರುದ್ದ FIR ದಾಖಲು!
ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಬೆಂಬಲಿಸಿ ಶಿವಮೊಗ್ಗದಲ್ಲಿ ನಡೆದ ರೈತ ಮಹಾಪಂಚಾಯತ್ನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪದ ಮೇಲೆ ರೈತ ಹೋರಾಟದ ನಾಯಕ ರಾಕೇಶ್ ಟಿಕಾಯರ್ ವಿರುದ್ದ ಶಿವಮೊಗ್ಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಾರ್ಚ್ 20ರಂದು ನಡೆದ ಮಹಾಪಂಚಾಯತ್ನಲ್ಲಿ ಭಾಗವಹಿಸಿದ್ದ ರಾಕೇಶ್ ಟಿಕಾಯತ್ ಅವರು, “ಇಂದು ದೇಶದ ಬಡವರ ಹಸಿವಿನ ಮೇಲೆ ವ್ಯಾಪಾರ ನಡೆಯುತ್ತಿದೆ. ದೊಡ್ಡ ಬಂಡವಾಳಶಾಹಿಗಳು ರೈತರ ರೊಟ್ಟಿ, ಅನ್ನವನ್ನು ತಮ್ಮ ತಿಜೋರಿಗಳಲ್ಲಿ ಬಂಧಿಸಿಡಲು ಹುನ್ನಾರ ನಡೆಸುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು. ರೈತ ಹೋರಾಟ ತೀವ್ರಗೊಳಿಸಬೇಕು. ರಾಜ್ಯದ ರೈತರು ಬೆಂಗಳೂರಿಗೆ ದಿಗ್ಬಂಧನ ಹಾಕಬೇಕು. ಟ್ರ್ಯಾಕ್ಟರ್ಗಳನ್ನೇ ಅಸ್ತ್ರವಾಗಿ ಬಳಸಬೇಕು” ಎಂದು ಕರೆ ನೀಡಿದ್ದರು.
ಅವರ ಈ ಹೇಳಿಕೆಗಳನ್ನು ಆಧರಿಸಿ ಟಿಕಾಯತ್ ವಿರುದ್ಧ ಕೋಟೆ ಠಾಣೆಯ ಪೊಲೀಸರು ಪ್ರಕರಣ ದಾಖಲಸಿದ್ದಾರೆ.
ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ಕ್ರಮ. ಇಂತಹ ಹೇಳಿಕೆಗಳು ಚಳವಳಿಯ ಒಂದು ಭಾಗ. ಅವರ ಭಾಷಣದಲ್ಲಿ ಸಂವಿಧಾನಕ್ಕೆ ವಿರುದ್ಧವಾದ ಯಾವ ಅಂಶಗಳೂ ಇಲ್ಲ. ಬಿಜೆಪಿ ಭಿನ್ನಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಈ ಪ್ರಕರಣ ಉದಾಹರಣೆ’ ಎಂದು ಮಹಾ ಪಂಚಾಯತ್ ಸಂಘಟಕರಾದ ಕೆ.ಎಲ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಯುವಜನರನ್ನು ಭೂಮಿ ಜೊತೆ ಬೆಸೆಯುವ ಕೆಲಸ ಮಾಡಬೇಕು. ಅವರು ಮಣ್ಣನ್ನು ಮೈಗಂಟಿಸಿಕೊಳ್ಳಬೇಕು. ಅವರು ತಮ್ಮ ಭೂಮಿಯ ಮಣ್ಣನ್ನು ಕೈಲಿಡಿದು ರೈತ ಹೋರಾಟಕ್ಕೆ ಬರಬೇಕು. ಕಾಯ್ದೆ ವಾಪಸಾತಿ ಮಾತನಾಡುತ್ತಿರುವ ಯುವಜನರು ಸರ್ಕಾರ ವಾಪಸಾತಿ ಮಾತನಾಡಿದರೆ ಏನಾಗುತ್ತದೆ ಎಂದು ಸರ್ಕಾರ ಯೋಚಿಸಬೇಕು. ಯುವಜನರು ರೊಚ್ಚಿಗೇಳುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಬೇರೆ ಸರ್ಕಾರವಾಗಿದ್ದರೆ ಎಚ್ಚೆತ್ತುಕೊಳ್ಳುತ್ತಿತ್ತು. ಆದರೆ ಈ ಸರ್ಕಾರವನ್ನು ಕಾರ್ಪೊರೇಟ್ ಕುಳಗಳೇ ನಡೆಸುತ್ತಿದ್ದಾರೆ. ಅದನ್ನು ಕಿತ್ತೊಗೆಯುವ ಕೆಲಸ ನಮ್ಮದು” ಎಂದು ರಾಕೇಶ್ ಟಿಕಾಯತ್ ಹೇಳಿದ್ದರು.
ಐಕ್ಯ ಹೋರಾಟ ಸಮಿತಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಂದು ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ರಾಕೇಶ್ ಟಿಕಾಯತ್ ಸೇರಿದಂತೆ ಸಂಯುಕ್ತ ಮೋರ್ಚಾ ನಾಯಕರಾದ ದರ್ಶನ್ ಪಾಲ್, ಯುದ್ಧ್ವೀರ್ ಸಿಂಗ್ ಭಾಗವಹಿಸಿದ್ದರು.
ಇದನ್ನೂ ಓದಿ: ಬಸವಣ್ಣ-ಟಿಪ್ಪು ಹುಟ್ಟಿದ ಕರ್ನಾಟಕದ ಮಣ್ಣಿಗೆ ನನ್ನ ನಮನ: ದರ್ಶನ್ ಪಾಲ್

