ಮಹಾರಾಷ್ಟ್ರಕ್ಕೆ ಕೊರೊನಾ ಲಸಿಕೆ ರಫ್ತು ಮಾಡಿದರೆ ಕಂಪನಿಗಳ ಲೈಸನ್ಸ್ ರದ್ದು; ಕೇಂದ್ರದ ವಿರುದ್ಧ ಮಹಾರಾಷ್ಟ್ರ ಸಚಿವ ಆರೋಪ!
ಕೊರೊನಾ ಸೋಂಕಿನ ವಿರುದ್ಧ ನೀಡಲಾಗುತ್ತಿರುವ ರೆಮ್ಡಿಸಿವಿರ್ ಲಸಿಕೆಯನ್ನು ಮಹಾರಾಷ್ಟ್ರಕ್ಕೆ ನೀಡದಂತೆ ಲಸಿಕೆ ರಫ್ತು ಮಾಡುವ ಕಂಪೆನಿಗಳಿಗೆ ಕೇಂದ್ರ ಸರ್ಕಾರವು ತಾಕೀತು ಮಾಡಿದೆ. ಒಂದು ವೇಳೆ ಲಸಿಕೆಯನ್ನು ಮಹಾರಾಷ್ಟ್ರಕ್ಕೆ ನೀಡಿದರೆ ಲಸಿಕಾ ಕಂಪನಿಯ ಪರವಾನಗಿಯನ್ನು ರದ್ದು ಮಾಡುವುದಾಗಿ ಬೆದರಿಕೆ ಹಾಕಿದೆ ಎಂದು ಮಹಾರಷ್ಟ್ರ ಸಚಿವ ನವಾಬ್ ಮಲಿಕ್ ಶನಿವಾರ ಗಂಭೀರ ಆರೋಪ ಮಾಡಿದ್ದಾರೆ.
ಕೊರೊನಾ ಪ್ರಾರಂಭವಾದಾಗಿನಿಂದ ಮಹಾರಾಷ್ಟ್ರದಲ್ಲೇ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗುತ್ತಿದೆ. ಅಲ್ಲದೆ ಸೋಂಕಿನ ಎರಡನೇ ಅಲೆ ಪ್ರಾರಂಭವಾದಗಿನಿಂದ ದೇಶದಲ್ಲಿ ವರದಿಯಾಗುತ್ತಿರುವ ಅರ್ಧದಷ್ಟು ಪ್ರಕರಣಗಳು ಮಹಾರಾಷ್ಟ್ರ ಒಂದರಲ್ಲೇ ವರದಿಯಾಗುತ್ತದೆ.
ಇದನ್ನೂ ಓದಿ: ಮಹಾ ಕುಂಭಮೇಳ ಎಫೆಕ್ಟ್: ಉತ್ತರಾಖಂಡದಲ್ಲಿ ಕೊರೊನಾ ಪ್ರಕರಣಗಳು 89 ಪಟ್ಟು ಹೆಚ್ಚಳ!
ಶನಿವಾರ ಟ್ವೀಟ್ ಮಾಡಿರುವ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್, “ಮಹಾರಾಷ್ಟ್ರ ಸರ್ಕಾರವು 16 ರಫ್ತು ಕಂಪನಿಗಳನ್ನು ರೆಮ್ಡೆಸಿವಿರ್ಗಾಗಿ ಕೇಳಿತ್ತು. ಆದರೆ ರಾಜ್ಯಕ್ಕೆ ಔಷಧಿಯನ್ನು ಸರಬರಾಜು ಮಾಡದಂತೆ ಕೇಂದ್ರ ಸರ್ಕಾರ ಕೇಳಿದೆ ಎಂದು ನಮಗೆ ಅವರು ತಿಳಿಸಿದ್ದಾರೆ. ಒಂದು ವೇಳೆ ಲಸಿಕೆ ನೀಡಿದರೆ ಕಂಪೆನಿಗಳ ಲೈಸನ್ಸ್ ರದ್ದುಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ” ಎಂದು ಅವರು ಆರೋಪಿಸಿದ್ದಾರೆ.
“ಇದು ಅಪಾಯಕಾರಿ ನಿದರ್ಶನವಾಗಿದ್ದು, ಈ ಸಂದರ್ಭಗಳಲ್ಲಿ ಮಹಾರಾಷ್ಟ್ರ ಸರ್ಕಾರವು ಈ ರಫ್ತುದಾರರಿಂದ ರೆಮ್ಡೆಸಿವಿರ್ನ ದಾಸ್ತಾನು ವಶಪಡಿಸಿಕೊಳ್ಳುವುದು ಮತ್ತು ಅಗತ್ಯವಿರುವವರಿಗೆ ಪೂರೈಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ” ಎಂದು ಅವರು ತಿಳಿಸಿದ್ದಾರೆ.
ಕೊರೊನಾ ಹೆಚ್ಚಾದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಇತ್ತೀಚೆಗೆ ಲಾಕ್ಡೌನ್ ಕೂಡಾ ಘೋಷಿಸಲಾಗಿದೆ. ಜೊತೆಗೆ ರಾಜ್ಯದಲ್ಲಿ ಲಸಿಕೆ ಕೊರತೆಯಿದೆ ಎಂದು ಕೇಂದ್ರದ ಬಳಿ ಹೇಳಿಕೊಂಡಿತ್ತು.
ಇದನ್ನೂ ಓದಿ: ಮೋದಿ ತವರು ಗುಜರಾತ್ನಲ್ಲಿ ಕೊರೊನಾ ಆಕ್ರಮಣ: ಒಂದೇ ದಿನ 8,920 ಪ್ರಕರಣ – 94 ಸಾವು!

