Breaking: ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗಳು ರದ್ದು; ಗ್ರೇಡ್‌ ಆಧಾರದಲ್ಲಿ ಪಾಸ್‌!

ರಾಜ್ಯದಲ್ಲಿ ಆಕ್ರಮಿಸುತ್ತಿರುವ ಕೊರೊನಾ ಎರಡನೇ ಅಲೆಯ ಕಾರಣದಿಂದಾಗಿ ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಪಡಿಸಿರುವುದಾಗಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಘೋಷಿಸಿದ್ದಾರೆ.

ಪ್ರಥಮ ಪಿಯುಸಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಗ್ರೇಡಿಂಗ್ ಮೇಲೆ ಉತ್ತೀರ್ಣ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹಿಂದಿನ ಶಿಕ್ಷಣ ಸಚಿವರು, ಶಿಕ್ಷಣ ತಜ್ಞರು ಸೇರಿದಂತೆ ಹಲವರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಮೂರು ಸುತ್ತಿನ ಚರ್ಚೆ ಮಾಡಿದ್ದೇನೆ. ಶಿಕ್ಷಣ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಕೆಲಸ ಮಾಡಿಕೊಂಡು ಬರುತ್ತಿರುವವರೊಂದಿಗೂ ಮಾತನಾಡಿದ್ದೇನೆ. ಹೀಗಾಗಿ ನಾವೊಂದು ತಿರ್ಮಾನಕ್ಕೆ ಬಂದಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಒಂದು ವರ್ಗವು ಪರೀಕ್ಷೆ ಬೇಡ ಎನ್ನುತ್ತಿದ್ದರೆ, ಇನ್ನೊಂದು ವರ್ಗವು ಪರೀಕ್ಷೆ ಬೇಕು ಎನ್ನುತ್ತಿದೆ. ಪ್ರತಿಯೊಂದು ನಿರ್ಧಾರದ ಬಗ್ಗೆ ಪರ-ವಿರೋಧಗಳು ವ್ಯಕ್ತವಾಗುವುದು ಸರ್ವೇ ಸಾಮಾನ್ಯವಾಗಿದೆ. ವಿದ್ಯಾರ್ಥಿಗಳ ಆರೋಗ್ಯ ಮತ್ತು ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಇಸ್ರೇಲ್ ಸರ್ಕಾರ ಪತನ ಸಾಧ್ಯತೆ; ಹೊಸ ಸರ್ಕಾರ ರಚನೆಗೆ ವಿಪಕ್ಷಗಳ ಸಿದ್ದತೆ!

ವಿದ್ಯಾರ್ಥಿಗಳನ್ನು ಗ್ರೇಡ್ ಆಧಾರದಲ್ಲಿ ಉತ್ತೀರ್ಣ ಮಾಡಲಾಗುವುದು. ತಮಗೆ ಸಿಕ್ಕ ಗ್ರೇಡ್‌ಗಳಲ್ಲಿ ಅಸಮಾಧಾನ, ಅತೃಪ್ತಿ ಇದ್ದಂತಹ ವಿದ್ಯಾರ್ಥಿಗಳಿಗೆ ಕೊರೊನಾ ಮುಗಿದ ನಂತರ ಪರೀಕ್ಷೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮೇ 24 ರಂದು ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ಆಯೋಜಿಸಿದ್ದ ಸರ್ವ ರಾಜ್ಯಗಳ ಶಿಕ್ಷಣ ಸಚಿವರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಸಚಿವ ಸುರೇಶ್‌ ಕುಮಾರ್‌, “ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಸುರಕ್ಷಿತವಾಗಿ ನಡೆಸಲು ಎಲ್ಲ ಪೂರ್ವ ಸಿದ್ದತೆಗಳನ್ನು ಮಾಡಲಾಗಿದೆ, ಜುಲೈ ತಿಂಗಳಲ್ಲಿ ಪರೀಕ್ಷೆ ನಡೆಸಲು ಸಾಧ್ಯವಾದರೆ ಆಗಸ್ಟ್‌ನಲ್ಲಿ ಪರೀಕ್ಷಾ ಫಲಿತಾಂಶ ಘೋಷಿಸಲು ಸಾಧ್ಯವಾಗುತ್ತದೆ” ಎಂದು ಸೂಚನೆ ನೀಡಿದ್ದರು.

ಆದರೆ ಇದೀಗ ದ್ವಿತೀಯ ಪಿಯು ಪರೀಕ್ಷೆಗಳನ್ನು ನಡೆಸುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಜೂನ್​ 14ರವರೆಗೆ ಲಾಕ್​ಡೌನ್ ವಿಸ್ತರಣೆ; ಮತ್ತೆ ಒಂದು ವಾರ ಎಲ್ಲವೂ ಬಂದ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights