ಗೌರಿ ಲಂಕೇಶ್‌ ಹತ್ಯೆ ಪ್ರಕರಣ: ಆರೋಪಿಗಳ ವಿರುದ್ಧ KOCCA ಕಾಯ್ದೆಯನ್ನು ಕೈಬಿಡದಂತೆ ಸುಪ್ರೀಂ ತಡೆಯಾಜ್ಞೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ದ ದಾಖಲಿಸಲಾಗಿರುವ KOCCA ಕಾಯ್ದೆಯನ್ನು ಕೈಬಿಡದಂತೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಮಹತ್ವದ ತೀರ್ಪು ನೀಡಿದೆ.

ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ್ದಾರೆ ಎನ್ನಲಾದ ಆರೋಪಿಗಳ ವಿರುದ್ಧ ದಾಖಲಿಸಿರುವ KOCCA ಕಾಯ್ದೆಯನ್ನು ಕಳೆದ ಏಪ್ರಿಲ್ 23 ರಂದು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು. ಅದನ್ನು ಪ್ರಶ್ನಿಸಿ ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಕರ್ನಾಟಕ ಹೈಕೋರ್ಟ್‌ನ ಏಪ್ರಿಲ್ 23 ರ ಆದೇಶಕ್ಕೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ.

ಗೌರಿ ಲಂಕೇಶ್ ಹಂತಕರ ವಿರುದ್ಧ ಸಲ್ಲಿಸಲಾಗಿದ್ದ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ 2000 (KOCCA Act, 2000) ಅಡಿಯಲ್ಲಿನ ಆರೋಪಗಳನ್ನು ವಜಾಗೊಳಿಸಿದ್ದ ಹೈಕೋರ್ಟ್ ಹತ್ಯೆಯನ್ನು ಸಾಮಾನ್ಯ ಕೊಲೆಯಂತೆ ವಿಚಾರಣೆ ನಡೆಸಲು ಮುಂದಾಗಿತ್ತು. ಗೌರಿ ಲಂಕೇಶ್ ಕೊಲೆ ಆರೋಪಿಯಾಗಿರುವ ಮೋಹನ್ ನಾಯಕ್ ಮೇಲೆ ಹಾಕಲಾಗಿದ್ದ KOCCA ಕಾಯಿದೆಯನ್ನು ಕಳೆದ ಏಪ್ರಿಲ್ 23 ರಂದು ರದ್ದು ಮಾಡಿತ್ತು. ಇದರಿಂದಾಗಿ ಆತನಿಗೂ ಹಾಗೂ ಸಹ ಆರೋಪಿಗಳಿಗೆ ಸುಲಭವಾಗಿ ಜಾಮೀನು ಸಿಗುವ ಸಂಭವ ಉಂಟಾಗಿತ್ತು. ಆದರೆ ಇಂದು ಸುಪ್ರೀಂ ಕೋರ್ಟ್ ಹೈಕೋರ್ಟ್‌ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ.

Read Also: ನಶಿಸುತ್ತಿದೆ ಆಕ್ಸಿಜನ್‌ ತೊಟ್ಟಿಲು ಅಮೆಜಾನ್‌; ಕಾಡು ರಕ್ಷಣೆಗಾಗಿ ಸೇನೆ ಕಳಿಸಲಿದೆ ಬ್ರೆಜಿಲ್‌ ಸರ್ಕಾರ!

ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೆಲ್ಮನವಿ ಸಲ್ಲಿಸಬೇಕೆಂದು ಗೌರಿ ಲಂಕೆಶ್ ಅವರ ಸಹೋದರಿ, ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಅವರು ಕರ್ನಾಟಕ ಗೃಹ ಸಚಿವ ಎಸ್‌.ಆರ್‌.ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿದ್ದರು. ಸಚಿವರು ಕವಿತಾ ಲಂಕೆಶ್ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರೂ ಕಾನೂನು ಪ್ರಕ್ರಿಯೆ ವಿಳಂಬವಾಗುತ್ತಲೇ ಸಾಗಿತ್ತು.

ಗೌರಿ ಲಂಕೇಶ್ ಅವರ ಹತ್ಯೆ ಸಾಮಾನ್ಯ ಕೊಲೆ ಅಲ್ಲ. ಒಂದು ಸಂಘಟಿತ ಮತ್ತು ಸೈದ್ಧಾಂತಿಕ ದ್ವೇಷದ ಕಾರಣಕ್ಕೆ ನಡೆಸಲಾದ ಹತ್ಯೆ. ಕೋಕಾ ಕಾಯ್ದೆಯನ್ನು ಕೈಬಿಡುವುದರಿಂದ ಹತ್ಯೆಯ ಹಿಂದಿರುವ ಕಾಣದ ಕೈಗಳಿಗೆ ಶಿಕ್ಷೆಯಾಗುವುದಿಲ್ಲ ಎಂದು ಕವಿತಾ ಲಂಕೇಶ್ ಅವರ ಪರವಾಗಿ ನ್ಯಾಯವಾದಿ ತೀಸ್ತಾ ಸೆತೆಲ್ದಾರ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದರು.

Read Also: ಜುಲೈ 31 ರವರೆಗೆ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ ಯೋಜನೆ ಜಾರಿಗೆ ತರಲು ಸುಪ್ರೀಂ ಆದೇಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights