ಎಂಎಸ್‌ಪಿ ಎಲ್ಲಿದೆ ತೋರಿಸಿ – ಎಂಎಸ್‌ಪಿ ಕೊಡಿಸಿ; ಆಂದೋಲನಕ್ಕೆ ಯೋಗೇಂದ್ರ ಯಾದವ್‌ ಚಾಲನೆ!

ಎಂಎಸ್‌ಪಿ ಎಲ್ಲಿದೆ ತೋರಿಸಿ – ಎಂಎಸ್‌ಪಿ ಕೊಡಿಸಿ ಆಂದೋಲನಕ್ಕೆ ಕರ್ನಾಟಕದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲನಾ ಸಮಿತಿಯ ಯೋಗೇಂದ್ರ ಯಾದವ್‌ ಚಾಲನೆ ನೀಡಿದ್ದಾರೆ.

‘ರೈತ ಹೋರಾಟದ ಭಾಗವಾಗಿ ಕರ್ನಾಟಕದ ರೈತರೊಂದಿಗೆ ರಾಜ್ಯಾದ್ಯಂತ ಸಂಚರಿಸುತ್ತಿರುವ ಅವರು‌, ಕಲಬುರ್ಗಿಯ ಎಪಿಎಂಸಿ ಮತ್ತು ಬಳ್ಳಾರಿಯ ಎಪಿಎಂಸಿಗಳಲ್ಲಿ ಮಾರ್ಚ್ 5 ಮತ್ತು ಮಾರ್ಚ್ 6ರಂದು ಸಂಯುಕ್ತ ಹೋರಾಟ ಕರ್ನಾಟಕದ ಹಲವು ನಾಯಕರ ಜೊತೆಗೆ ಅವರು ಖುದ್ದು ಭೇಟಿ ಕೊಟ್ಟು ಮಾಹಿತಿ ಸಂಗ್ರಹಿಸಿದ್ದರು. ಸರ್ಕಾರವು ಅಧಿಕೃತವಾಗಿ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಯನ್ನು, ಸದರಿ ಮಾರುಕಟ್ಟೆಗಳಲ್ಲಿ ಈ ದಿನಗಳಂದು ರೈತರು ಪಡೆದುಕೊಂಡ ಬೆಲೆಗಳಿಗೆ ಹೋಲಿಸಿ ಅಂಕಿ-ಅಂಶಗಳನ್ನು ಮುಂದಿಟ್ಟಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ದೆಹಲಿಯಲ್ಲಿ ರೈತ ಹೋರಾಟವನ್ನು ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾದ 7 ಜನರ ಸಮನ್ವಯ ಸಮಿತಿಯ ಭಾಗವಾದ ನಾನು ಇಂದು ಇಂದು ಕರ್ನಾಟಕಕ್ಕೆ ಬಂದಿದ್ದೇನೆ. ಐತಿಹಾಸಿಕ ರೈತ ಹೋರಾಟವು ಸೆಂಚುರಿ ದಿನಗಳನ್ನು ಪೂರೈಸಿದೆ. ಇದರಿಂದ ನಮಗೆ ಸಂತೋಷವಾಗಿಲ್ಲ. ಏಕೆಂದರೆ ನಾವು ನೂರು ದಿನಗಳನ್ನು ಪೂರೈಸಲು ಹೋರಾಟ ನಡೆಸುತ್ತಿಲ್ಲ. ಬದಲಿಗೆ ನಮ್ಮ ಹಕ್ಕುಗಳನ್ನು ಪಡೆಯಲು ಹೋರಾಡುತ್ತಿದ್ದೇವೆ” ಎಂದರು.

ಕಡಲೆಗೆ ಕ್ವಿಂಟಾಲ್‌ಗೆ ಎಂಎಸ್‌ಪಿ 5100ರೂ ಇದೆ. ಆದರೆ ಕೇವಲ 4182 ರೂ ನೀಡುತ್ತಿದ್ದಾರೆ. ತೊಗರಿ ಬೆಳೆಗೆ ಕ್ವಿಂಟಾಲ್‌ಗೆ ಎಂಎಸ್‌ಪಿ 6000 ರೂ ಇದೆ. ಆದರೆ ಕೇವಲ 4943 ರೂ ನೀಡಲಾಗುತ್ತಿದೆ. ಇದು ಕೇವಲ ಒಂದು ಮಾರ್ಕೆಟ್‌ನ ಒಂದು ದಿನದ ಸ್ಯಾಂಪಲ್ ಅಷ್ಟೇ ನಾವು ಹೇಳುತ್ತಿರುವುದು. ಪ್ರಧಾನಿ ಮಂತ್ರಿ ಎಂಎಸ್‌ಪಿ ಇತ್ತು, ಇದೆ, ಇರಲಿದೆ ಎನ್ನುತ್ತಾರೆ. ನಾವು ಹೇಳುತ್ತೇವೆ ಎಂಎಸ್‌ಪಿ ಕಾಗದದಲ್ಲಿ ಇತ್ತು, ಕಾಗದಲ್ಲಿ ಇದೆ ಮತ್ತು ಕಾಗದದಲ್ಲಿಯೇ ಇರಲಿದೆ ಹೊರತು ರೈತರಿಗೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: 50 ಸಾವಿರ ಜನರ ದಾದ್ರಿ ಮಹಾಪಂಚಾಯತ್‌; ರೈತರು ಕೈಗೊಂಡ 5 ನಿರ್ಣಯಗಳು ಹೀಗಿವೆ!

ಈ ನೂರು ದಿನಗಳಲ್ಲಿ ಕೇಂದ್ರ ಸರ್ಕಾರವು ರೈತರೊಂದಿಗೆ ಕಠಿಣವಾಗಿ ವರ್ತಿಸಿದೆ. ರೈತರ ಮೇಲೆ ದಬ್ಬಾಳಿಕೆ ನಡೆಸಿದೆ. ರೈತರ ವಿರುದ್ಧ ಪ್ರೊಪಗಂಡಾ ಯುದ್ದ ನಡೆಸಿದೆ. ಇದು ಸರ್ಕಾರದ ಉದ್ದಟತವನ್ನು ತೋರಿಸುತ್ತದೆ. ಕೇಂದ್ರ ಸರ್ಕಾರ ರೈತರ ವಿರುದ್ಧ ಸುಳ್ಳು ಹೇಳಿದ ನೂರು ದಿನಗಳಾಗಿವೆ. ಇದು ಸರ್ಕಾರದ ಅಹಂಕಾರದ ಮತ್ತು ರೈತರ ಸಂಕಲ್ಪದ ನೂರು ದಿನಗಳಾಗಿವೆ ಎಂದರು.

ಈ ಐತಿಹಾಸಿಕ ಹೋರಾಟವನ್ನು ಆರಂಭದಲ್ಲಿ ಇದು ಕೇವಲ ಪಂಜಾಬ್ ರೈತರ ಹೋರಾಟ ಎಂದರು. ನಂತರ ಇದು ಕೇವಲ ಪಂಜಾಬ್ ಮತ್ತು ಹರಿಯಾಣ ರೈತರ ಹೋರಾಟ ಎಂದರು. ಆನಂತರ ಇದು ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರಖಂಡ ಮತ್ತು ಉತ್ತರ ಪ್ರದೇಶದ ರೈತರ ಹೋರಾಟ ಎಂದರು. ಶೀಘ್ರದಲ್ಲಿಯೇ ಅವರು ಇದು ಕೇವಲ ಭಾರತದ ರೈತರ ಹೋರಾಟ ಎನ್ನುವ ಕಾಲ ಬರಲಿದೆ. ಈ ರೈತ ಹೋರಾಟ ಇಡೀ ದೇಶಕ್ಕೆ ಹರಡುತ್ತಿದೆ ಎಂದು ಯೋಗೇಂದ್ರ ಯಾದವ್ ತಿಳಿಸಿದರು.

ಸರ್ಕಾರ ಈ ಹೋರಾಟವನ್ನು ಕೊಲ್ಲಲು, ದಮನಿಸಲು ಯತ್ನಿಸುತ್ತಿದೆ. ಆದರೆ ಹೋರಾಟ ಮಾತ್ರ ದೊಡ್ಡದಾಗುತ್ತ ದೇಶಾದ್ಯಂತ ಹರಡುತ್ತಿದೆ. ಜನವರಿ 26ರ ನಂತರವಂತೂ ಈ ಹೋರಾಟವನ್ನು ಕೊನೆಗೊಳಿಸಲು ಸರ್ಕಾರ ಇನ್ನಿಲ್ಲದ ಯತ್ನ ಮಾಡಿತು. ದೆಹಲಿಯ ಗಡಿಗಳಲ್ಲಿ ರೈತರ ಸಂಖ್ಯೆ ಕರಗುತ್ತಿದೆ ಎಂದು ಮಾಧ್ಯಮಗಳು ತೋರಿಸುತ್ತಿವೆ. ಆದರೆ ಪಂಜಾಬ್‌ನ ಬರ್ನಾಲದಲ್ಲಿ, ಹರಿಯಾಣ ಖಂಡೇಲಾದಲ್ಲಿ, ರಾಜಸ್ಥಾನದ ಹಳ್ಳಿ ಹಳ್ಳಿಗಳಲ್ಲಿ ಬೃಹತ್ ಮಹಾಪಂಚಾಯತ್‌ಗಳು ನಡೆಯುತ್ತಿರುವುದನ್ನು ಅವು ಹೇಳುತ್ತಿಲ್ಲ. ಕರ್ನಾಟಕದಲ್ಲಿಯೂ ಮಹಾಪಂಚಾಯತ್ ನಡೆಸಲು ತಯಾರಿ ನಡೆದಿದೆ. ಕೇಂದ್ರ ಸಚಿವರೇ ಅವರ ಸ್ವಗ್ರಾಮಗಳಿಗೆ ಹೋಗಲು ಹೆದರುತ್ತಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ಬಿಜೆಪಿಯನ್ನು ಬಹಿಷ್ಕರಿಸಲಾಗುತ್ತಿದೆ. ಮದುವೆ ಸಮಾರಂಭಗಳಿಗೆ ಅವರನ್ನು ಆಹ್ವಾನಿಸುತ್ತಿಲ್ಲ. ಒಟ್ಟಾರೆಯಾಗಿ ಈ ಹೋರಾಟ ದೇಶಾದ್ಯಂತ ಹಬ್ಬುತ್ತಿದೆ ಎಂದರು.

ಇದನ್ನೂ ಓದಿ: 04 ಲಕ್ಷ ಅಲ್ಲ 40 ಲಕ್ಷ ಟ್ರಾಕ್ಟರ್‌ಗಳು ಸಂಸತ್‌ಗೆ ಮುತ್ತಿಗೆ ಹಾಕಲಿವೆ: ರೈತ ನಾಯಕ ಟಿಕಾಯತ್‌

ಪ್ರಧಾನ ಮಂತ್ರಿಗಳು ಎಂಎಸ್‌ಪಿ ಇತ್ತು, ಈಗಲೂ ಇದೆ ಮತ್ತು ಮುಂದೆಯು ಇರಲಿದೆ ಎಂದು ಹೇಳಿದ್ದಾರೆ. ಅದು ಎಲ್ಲಿದೆ ತೋರಿಸಿ, ಅದರ ವಿಳಾಸ ಕೊಡಿ ಎಂದು ನಾವು ಕೇಳುತ್ತಿದ್ದೇವೆ. ಹಾಗಾಗಿ ರೈತರಿಗೆ ಎಂಎಸ್‌ಪಿ ಕೊಡಿಸಿ ಎಂಬ ರಾಷ್ಟ್ರೀಯ ಆಂದೋಲನವನ್ನು ಕರ್ನಾಟಕದಿಂದ ಆರಂಭಿಸುತ್ತಿದ್ದೇವೆ ಎಂದು ಯೋಗೇಂದ್ರ ಯಾದವ್ ಹೇಳಿದರು.

ಕರ್ನಾಟಕ ರೈತ ಹೋರಾಟದ ಹೆಮ್ಮೆಯ ಸಂಕೇತವಾಗಿದೆ. ಇಲ್ಲಿ ಕಾಗೋಡು ಸತ್ಯಾಗ್ರಹ ನಡೆದಿದೆ. ಶಾಂತವೇರಿ ಗೋಪಾಲಗೌಡರು, ಪ್ರೊ ನಂಜುಂಡಸ್ವಾಮಿಯವರು ಬೃಹತ್ ರೈತ ಚಳವಳಿ ಕಟ್ಟಿದ್ದಾರೆ. 2020ರ ಸೆಪ್ಟಂಬರ್ 21 ರಂದೇ ಕರ್ನಾಟಕದಲ್ಲಿ ಮೂರು ಕೃಷಿ ಕಾಯ್ದೆಗಳ ವಿರುದ್ಧ ಮತ್ತು ರಾಜ್ಯ ಸರ್ಕಾರದ ತಿದ್ದುಪಡಿಗಳ ವಿರುದ್ಧ ಹೋರಾಟ ನಡೆದಿದೆ. ಹಾಗಾಗಿ ಕರ್ನಾಟಕದ ಕಲಬುರ್ಗಿ, ಬಳ್ಳಾರಿಯಿಂದ ನಮ್ಮ ಎಂಎಸ್‌ಪಿ ದಿಲಾವೋ ಆಂದೋಲನ ಆರಂಭಿಸಿದ್ದೇವೆ ಎಂದರು.

72% ಕರ್ನಾಟಕದ ಬೆಲೆಗಳು ಕರ್ನಾಟಕದಲ್ಲಿ ಎಂಎಸ್‌ಪಿಗಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಇದು ರೈತರ ಬಗೆಗಿನ ಕ್ರೂರ ಜೋಕ್ ಆಗಿದೆ. ಇದರಿಂದ ಕರ್ನಾಟಕ ಎಲ್ಲಾ ರೈತರಿಗೆ ಪ್ರತಿವರ್ಷ 3190 ಕೋಟಿ ರೂಗಳು ನಷ್ಟವಾಗುತ್ತಿದೆ. ಸ್ವಾಮಿನಾಥನ್‌ರವರ ಎಂಎಸ್‌ಪಿ ಲೆಕ್ಕಾಚಾರಲ್ಲಿ ಪ್ರತಿ ವರ್ಷ 2339 ಕೋಟಿ ರೂಗಳನ್ನು ರೈತರಿಂದ ಕಿತ್ತುಕೊಳ್ಳಲಾಗುತ್ತಿದೆ. ಕಿಸಾನ್ ಸಮ್ಮಾನ್ ಮೂಲಕ ಹಣ ಕೊಡುತ್ತಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಇನ್ನೊಂದು ಕೈಯಲ್ಲಿ ಇಷ್ಟು ಹಣವನ್ನು ಕಿತ್ತುಕೊಳ್ಳುತ್ತಿದೆ ಎಂದು ಯೋಗೇಂದ್ರ ಯಾದವ್ ಕಿಡಿಕಾರಿದರು.

ಅಷ್ಟೊಂದು ಎಂಎಸ್‌ಪಿ ಕೊಡಲಾಗುತ್ತದೆಯೇ ಎಂದು ಹಲವರು ಕೇಳುತ್ತಾರೆ. ಖಂಡಿತವಾಗಿಯೂ ಕೊಡಲು ಸಾಧ್ಯ. ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಇರಬೇಕು ಅಷ್ಟೇ. ಅದಕ್ಕಾಗಿ ಕರ್ನಾಟಕದಲ್ಲಿ 10,000 ಕೋಟಿ ರೂಗಳು ಸಾಕು. ಎಲ್ಲರಿಗೂ ಎಂಎಸ್‌ಪಿ ನೀಡಬಹುದು ಎಂದರು.

ಹೋರಾಟಗಾರರಾದ ಡಾ.ವಾಸು ಎಚ್‌.ವಿ ಮಾತನಾಡಿ “ಕೇವಲ ಒಂದು ವರ್ಷದಲ್ಲಿ ಕರ್ನಾಟಕದಲ್ಲಿ 13 ಬೆಳೆಗಳಿಗೆ ಸಂಬಂಧಿಸಿದಂತೆ 20,000 ಕೋಟಿ ರೂ ನಷ್ಟವಾಗಿದೆ. ಇದರರ್ಥ ಕಳೆದ 20 ವರ್ಷದಲ್ಲಿ ಕರ್ನಾಟಕದ ರೈತರಿಗಾಗಿರುವ ನಷ್ಟ 4 ಲಕ್ಷ ಕೋಟಿ ರೂ. 2016 ರಲ್ಲಿ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ವಿಶೇ‍ಷ ವರದಿ ಸಲ್ಲಿಸಿದೆ. ಅದರ ಪ್ರಕಾರ 2001 ರಿಂದ ಇಲ್ಲಿಯವರೆಗೆ ಬರ ಮತ್ತು ನೆರೆಯ ಕಾರಣಕ್ಕೆ ಆದ ನಷ್ಟ 4 ಲಕ್ಷ ಕೋಟಿ ರೂಗಳಾಗಿದೆ. ಅಂದರೆ ಬೆಳೆ ನಷ್ಟವೂ 4 ಲಕ್ಷ ಕೋಟಿ ರೂ ಮತ್ತು ಬರನಷ್ಟವು 4 ಲಕ್ಷ ಕೋಟಿ ರೂ ಆಗಿದೆ. ಇದನ್ನು ಕರ್ನಾಟಕದ ಗ್ರಾಮೀಣ ಭಾಗ 8 ಲಕ್ಷ ಕೋಟಿ ಸಬ್ಸಿಡಿ ಹಣವನ್ನು ಕೊಟ್ಟಿದೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ರೈತರಿಗೆ ಸಬ್ಸಿಡಿ ಎಂದು ಹೇಳಲಾಗುತ್ತಿರುವುದು ಸುಳ್ಳು. ಬದಲಿಗೆ ರೈತರೇ ಸರ್ಕಾರಕ್ಕೆ ಸಬ್ಸಿಡಿ ನೀಡುತ್ತಿದ್ದಾರೆ. ಅದಕ್ಕಾಗಿಯೇ ಈ ಹಿಂದೆ ಪ್ರೊ.ನಂಜುಂಡಸ್ವಾಮಿಯವರು ‘ರೈತ ಸಾಲಗಾರನಲ್ಲ, ಸರ್ಕಾರವೇ ಬಾಕಿದಾರ’ ಎಂಬ ಘೋಷಣೆ ನೀಡಿದ್ದರು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಂಜಾಬಿನ ಹೋರಾಟಗಾರ ಸತ್ನಾಮ್ ಸಿಂಗ್, ಹರಿಯಾಣದ ದೀಪಕ್ ಲಂಬ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರಾದ ಡಾ.ಪ್ರಕಾಶ್ ಕಮ್ಮರಡಿ, ಕರ್ನಾಟಕ ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ, ಕೋಡಿಹಳ್ಳಿ ಚಂದ್ರಶೇಖರ್, ಚಾಮರಸಮಾಲೀ ಪಾಟೀಲ್, ಸಾಮಾಜಿಕ ಹೋರಾಟಗಾರ ಎಸ್.ಆರ್ ಹಿರೇಮಠ್, ದೊಡ್ಡಿಪಾಳ್ಯ ನರಸಿಂಹಮೂರ್ತಿ, ಕರ್ನಾಟಕ ಪ್ರಾಂತ ರೈತ ಸಂಘದ ಯಶವಂತ್, ಆರ್‌ಕೆಎಸ್‌ ಸಂಘಟನೆಯ ಶಿವಪ್ರಕಾಶ್ ಹಾಜರಿದ್ದರು.

ಇದನ್ನೂ ಓದಿ: ರೈತ ಹೋರಾಟಕ್ಕೆ 100 ದಿನ: ಸರ್ಕಾರದ ದಮನ vs ಪುಟಿದೇಳುತ್ತಿರುವ ರೈತರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights