ಮಹಿಳಾ ದಿನಾಚರಣೆ: ಮಹಿಳಾ ಸುರಕ್ಷತಾ ಜಾಗೃತಿಗಾಗಿ ಮಿಡ್‌ನೈಟ್ ವಾಕ್ ಥಾನ್!

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಸುರಕ್ಷತೆಯ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರಿನ ರೈನ್ ಬೋ ಮಕ್ಕಳ ಆಸ್ಪತ್ರೆಯು ಮಿಡ್ ನೈಟ್ ವಾಕ್ ಥಾನ್ಅನ್ನು ಮಾರ್ಚ್‌ 07 ಮತ್ತು 08ರ ನಡುವಿನ ರಾತ್ರಿ ನಡೆಸಿದೆ.

ಬನ್ನೇರಘಟ್ಟ ರಸ್ತೆಯ ರಾಯಲ್ ಮೀನಾಕ್ಷಿ ಮಾಲ್‌ನಿಂದ ಆರಂಭಗೊಂಡ ವಾಕಾಥಾನ್‌ ಬನ್ನೇರುಘಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯಿತು. ಇದರಲ್ಲಿ ರೈನ್ ಬೋ ಮಕ್ಕಳ ಆಸ್ಪತ್ರೆಯ ಸರ್ಕಾರಿ ಅಧಿಕಾರಿಗಳು, ಸೆಲೆಬ್ರಿಟಿಗಳು, ಉದ್ಯಮಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು..

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ ಮಾತನಾಡಿ,”ಮಹಿಳೆ ನಿರಾತಂಕವಾಗಿ ಮಧ್ಯರಾತ್ರಿ ಓಡಾಡುವ ವಾತಾವರಣ ಸೃಷ್ಟಿಯಾದಾಗ ಮಾತ್ರ ಸುರಕ್ಷತೆ ಎಂಬುದಕ್ಕೆ ನಿಜವಾದ ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ರೈನ್ ಬೋ ಆಸ್ಪತ್ರೆ ಆಯೋಜಿಸಿರುವ ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ. ಮಹಿಳೆಯರಲ್ಲಿ ಮತ್ತಷ್ಟು ಆತ್ಮಬಲ ತುಂಬುವ ನಿಟ್ಟಿನಲ್ಲಿ ಈ ರೀತಿಯ ಇನ್ನಷ್ಟು ಕಾರ್ಯಕ್ರಮಗಳನ್ನ ಆಯೋಜಿಸುವ ಅಗತ್ಯತೆ ಇದೆ. ಹಾಗಾದಾಗ ಮಾತ್ರ ಮಹಿಳೆಯರಿಗೆ ಎಲ್ಲ ಸ್ವಾತಂತ್ರ್ಯ , ಗೌರವ ಸಿಗುವುದಕ್ಕೆ ಸಾಧ್ಯ,” ಎಂದು ತಿಳಿಸಿದರು.

ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಎಂಡಿ, ಐಜಿಪಿ ರೂಪಾ ಮೌದ್ಗಿಲ್,”ಮಹಿಳೆಯರ ಸುರಕ್ಷತೆಗಾಗಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಇಷ್ಟೊಂದು ಮಹಿಳೆಯರು ಭಾಗವಹಿಸಿದ್ದು ನಿಜಕ್ಕೂ ಸಂತಸ ತಂದಿದೆ. ಇದೊಂದು ಪ್ರಶಂಸನಾರ್ಹ ನಡೆ. ಮಹಿಳೆಯ ಸುರಕ್ಷತೆಯ ವಿಷಯ ಬಂದಾಗ ಯಾವುದಕ್ಕೂ ರಾಜಿ ಮಾಡಿಕೊಳ್ಳುವ ಪ್ರಸಂಗ ಬರಬಾರದು” ಎಂದರು.

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮಾತನಾಡಿ,”ಹೆಣ್ಣು ಎಂದರೆ ಮಮತಾಮಯಿ. ಪ್ರತಿ ಮಹಿಳೆಯಲ್ಲೂ ಒಬ್ಬ ತಾಯಿ ಇದ್ದೇ ಇರುತ್ತಾಳೆ. ಹೀಗಾಗಿ ಸ್ತ್ರೀ ಯರನ್ನ ಗೌರವಿಸಬೇಕು, ಸಮಾನವಾಗಿ ಕಾಣಬೇಕು ‌ಎಂಬುದು ನನ್ನ ಅಭಿಪ್ರಾಯ ಎಂದರು

ರೈನ್ ಬೋ ಮಕ್ಕಳ ಆಸ್ಪತ್ರೆಯ ಯುನಿಟ್ ಹೆಡ್ ನಿತ್ಯಾನಂದ ಪಿ, ಮಾತನಾಡಿ”ಈ ಬಾರಿಯ ಮಹಿಳಾ ದಿನಾಚರಣೆಯ ಪರಿಕಲ್ಪನೆಯೇ ಚೂಸ್ ಟು ಚಾಲೆಂಜ್ ಎಂಬುದಾಗಿದೆ. ಇದನ್ನ ಕಾರ್ಯಗತಗೊಳಿಸುವದಕ್ಕೆಂದೆ ನಾವು ಮಿಡ್ ನೈಟ್ ವಾಕ್ ಥಾನ್ ಆಯೋಜಿಸಿದ್ದೇವೆ. ಮಹಿಳೆ ರಾತ್ರಿಯ ವೇಳೆ ಸುರಕ್ಷಿತವಾಗಿ ಓಡಾಡುವಂತಾಗಬೇಕು ಎಂಬುದನ್ನ ತಿಳಿಸುವುದೇ ಇದರ ಉದ್ದೇಶ”, ಎಂದರು.

ಇದನ್ನೂ ಓದಿ: ಅಂತರ್‌ಜಾತಿ ವಿವಾಹಕ್ಕೆ ಜಾತಿ ಮುಖ್ಯಸ್ಥನ ಅಡ್ಡಿ-ಬೆದರಿಕೆ; ಪೊಲೀಸರಿಗೆ ದೂರು ನೀಡಿದ ಯುವಕ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights