ಹಂಪಿನಗರದ ಮನೆಯೊಂದರಲ್ಲಿ ನಿಗೂಢ ಸ್ಪೋಟ : ಇಬ್ಬರಿಗೆ ಗಾಯ – ಆತಂಕಗೊಂಡ ಸ್ಥಳೀಯರು!
ಬೆಂಗಳೂರಿನ ವಿಜಯನಗರದ ಹಂಪಿನಗರದ ಮನೆಯಲ್ಲಿ ನಿಗೂಢ ಸ್ಪೋಟವೊಂದು ಸಂಭವಿಸಿದ್ದು ನೆರೆಹೊರೆಯವರು ಭಯಭೀತರಾಗಿದ್ದಾರೆ.
ಹೌದು.. ಎರಡಂತಸ್ತಿನ ಕಟ್ಟಡದ ಮೊದಲನೇ ಮಹಡಿಯಲ್ಲಿ ಭಾರೀ ಸ್ಟೋಟದ ಶಬ್ದ ಕೇಳಿಬಂದಿದ್ದು ನೆರೆಹೊರೆಯವರು ಬೆಚ್ಚಿಬಿದ್ದಿದ್ದಾರೆ. ಆದರೆ ಈ ಸ್ಪೋಟ ಹೇಗೆ ಸಂಬಂವಿದೆ ಅನ್ನೋದು ಮಾತ್ರ ನಿಗೂಢವಾಗಿದೆ. ಸ್ಪೋಟದ ತೀವ್ರತೆಗೆ ಮನೆಯ ಕಿಟಕಿಗಳ ಗಾಜಿ ನುಚ್ಚುನೂರಾಗಿದ್ದು, ಮನೆ ಗೋಡೆ ಬಿರುಕುಗೊಂಡಿದೆ.
ಮಧ್ಯರಾತ್ರಿ 12:45 ಸುಮಾರಿಗೆ ಸಂಭವಿಸಿದ ಸ್ಪೋಟದ ತೀವ್ರತಿಗೆ ಮನೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದು ಹಾನಿಗೊಳಗಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯಲ್ಲಿದ್ದ ಸೂರ್ಯನಾರಾಯಣ ಶೆಟ್ಟಿ(74), ಪುಷ್ಪಾವಮ್ಮ(70) ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿಜಯನಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆರಂಭದಲ್ಲಿ ಇದನ್ನು ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡರಬಹುದು ಎಂದು ಶಂಕಿಸಲಾಗಿತ್ತು. ಆದರೆ ಮನೆಯಲ್ಲಿದ್ದ ಗ್ಯಾಸ್ ಗಳಿಗೆ ಯಾವುದೇ ಹಾನಿಯಾಗಿರಲಿಲ್ಲ. ಮನೆಯ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಇನ್ನುಳಿದಂತೆ ಮನೆಯಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿ ಮಾಡಲಾಗಿತ್ತು. ಆದರೆ ಅದಕ್ಕೂ ಯಾವುದೇ ಹಾನಿಯಾಗಿಲ್ಲ. ಮನೆಯಲ್ಲಿ ಹೊಸದಾಗಿ ಖರೀದಿಸಿದ್ದ ಫ್ರಿಜ್ ಮಾತ್ರ ಛಿದ್ರಛಿದ್ರವಾಗಿದೆ.
ಹೀಗಾಗಿ ಘಟನೆಗೆ ನಿಖರ ಕಾರಣ ಏನು ಎನ್ನುವುದು ಪೊಲೀಸರಿಗೂ ಗೊತ್ತಾಗುತ್ತಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದ್ದು, ಸ್ಪೋಟಕ್ಕೆ ಕಾರಣವೇನು ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.