ಕಲಬುರಗಿ ತಾಲೂಕಿನ ಹಲವು ಗ್ರಾಮಗಳಲ್ಲಿ ಭೂಕಂಪನದ ಅನುಭವ..!
3.9 ತೀವ್ರತೆಯಲ್ಲಿ ತೆಲಂಗಾಣದಲ್ಲಿ ಭೂಕಂಪ ಸಂಭವಿಸಿದ್ದರ ಪರಿಣಾಮ ಕಲಬುರಗಿ ತಾಲೂಕಿನ ಗಡಿಕೇಶ್ವರ ಸೇರಿ ಹಲವು ಗ್ರಾಮಗಳಲ್ಲಿ ಶಕ್ರವಾರ ಭೂಮಿಯಿಂದ ಭಾರೀ ಸದ್ದು ಕೇಳಿಸಿದೆ. ಇದರಿಂದಾಗಿ ಸ್ಥಳೀಯರು ಭಯಭೀತರಾಗಿ ಮನೆಯಿಂದ ಹೊರ ಓಡಿ ಬಂದ ಘಟನೆ ಸಂಭವಿಸಿದೆ.
ಭೂತಪೂರ, ರಾಜಾಪೂರ, ಹಲಚೇರಿ, ಕೊಡಂಪಳ್ಳಿ, ಗಡಿಕೇಶ್ವರ, ಚಿಂತಪಳ್ಳಿ, ಬೆಡಕಪಳ್ಳಿ, ರಾಯಕೂಡ, ಭಂಟನಳ್ಳಿ, ಹೊಸಳ್ಳಿ, ತೇಗಲತಿಪ್ಪಿ ಕೆರೋಳಿಯಲ್ಲಿ ಬೆಳಿಗ್ಗೆ ಮತ್ತು ಮಧ್ಯಾಹ್ನ ಭೂಮಿ ಕಂಪಿಸಿದ ಅನುಭವವಾಗಿದೆ. ಮನೆಯಲ್ಲಿದ್ದ ಸಾಮಾನುಗಳು ಕೆಳಗೆ ಬಿದ್ದಿವೆ.
ಅನೇಕ ವರ್ಷಗಳಿಂದ ಗಡಿಕೇಶ್ವರ ಗ್ರಾಮದಲ್ಲಿ ಭೂಮಿ ಆಗಾಗ ಕಂಪಿಸುತ್ತಿತ್ತು. ಈಗ ಗಡಿಕೇಶ್ವರ ಗ್ರಾಮದಿಂದ ಕೇವಲ 2-3 ಕಿ.ಮೀ. ದೂರದಲ್ಲಿರುವ ಗ್ರಾಮಗಳಲ್ಲೂ ಭೂಮಿ ನಡಗುತ್ತಿರುವುದು ಭೀತಿಗೆ ಕಾರಣವಾಗಿದೆ.

