ಜೆಡಿಎಸ್ ಭದ್ರಕೋಟೆಯಲ್ಲಿ ಗೆದ್ದ ಕಾಂಗ್ರೆಸ್; ಠೇವಣಿ ಕಳೆದುಕೊಂಡ ಜೆಡಿಎಸ್ ಅಭ್ಯರ್ಥಿ!
ರಾಮನಗರ ಜಿಲ್ಲೆ ಜೆಡಿಎಸ್ನ ಭದ್ರಕೋಟೆಯಾಗಿದೆ. ಆದರೆ, ರಾಮನಗರದ ನಗರಸಭೆಯ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಠೇವಣಿ ಕಳೆದುಕೊಂಡು ಸೋಲನುಭವಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಗೆಲುವು ಸಾದಿಸಿದೆ.
ರಾಮನಗರ ನಗರಸಭೆಯ 4ನೇ ವಾರ್ಡ್ಗೆ ಉಪಚುನಾವಣೆ ನಡೆದಿದ್ದು, ಸೋಮವಾರ ಫಲಿತಾಂಶ ಪ್ರಕಟವಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ತೇಜಸ್ವಿನಿ ಸುರೇಶ್ ಗೆಲವು ಸಾಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಅನುಸೂಯ ಉಮೇಶ್ ಸೋತಿದ್ದು ಮಾತ್ರವಲ್ಲದೇ, ಠೇವಣಿಯನ್ನೂ ಕಳೆದುಕೊಂಡಿದ್ದಾರೆ.
ಈ ಹಿಂದೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಲೀಲಾ ಗೋವಿಂದರಾಜು ಚುನಾವಣೆಯಲ್ಲಿ ಜಯಗಳಿಸಿದ್ದರು. ಆದರೆ ಚುನಾವಣೆಯ ಫಲಿತಾಂಶ ಹೊರಬರುವ ಮುನ್ನವೇ ಕೋವಿಡ್ಗೆ ಬಲಿಯಾಗಿದ್ದರು. ಹೀಗಾಗಿ ಉಪಚುನಾವಣೆ ನಡೆದಿತ್ತು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 1090 ಪಡೆದು 899 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ. ಎದುರಾಳಿಯಾಗಿದ್ದ ಜೆಡಿಎಸ್ ಅಭ್ಯರ್ಥಿ ಕೇವಲ 191 ಮತ ಪಡೆಯುವ ಮೂಲಕ ಠೇವಣಿ ಕಳೆದುಕೊಂಡಿದ್ದಾರೆ.
ಇನ್ನೂ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪತ್ನಿ ಶಾಸಕಿ ಅನಿತಾ ಕುಮಾರಸ್ವಾಮಿ ಕ್ಷೇತ್ರವನ್ನು ಪ್ರತಿನಿದಿಸುತ್ತಿದ್ದು, ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದು ಪಕ್ಷದ ಅಭ್ಯರ್ಥಿ ಠೇವಣಿ ಕಳೆದುಕೊಂಡಿರುವುದು ವಿರೋಧಿಗಳ ಅಪಹಾಸ್ಯಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ತರೀಕೆರೆ ಪುರಸಭೆ: ಕಾಂಗ್ರೆಸ್ ಭರ್ಜರಿ ಗೆಲುವು; ಒಂದು ಸ್ಥಾನ ಗೆದ್ದ ಬಿಜೆಪಿಗೆ ಭಾರೀ ಮುಖಭಂಗ!

