ಕಾಂಗ್ರೆಸ್ ಪಕ್ಷ ಮಾತ್ರವೇ ಜೆಡಿಎಸ್ ಪಕ್ಷಕ್ಕೆ ಟಾರ್ಗೇಟ್, ಬಿಜೆಪಿಯಲ್ಲ: ಸಿದ್ದರಾಮಯ್ಯ
ಜೆಡಿಎಸ್ ಪಕ್ಷಕ್ಕೆ ಯಾವಾಗಲೂ ಕಾಂಗ್ರೆಸ್ ಪಕ್ಷ ಮಾತ್ರವೇ ಟಾರ್ಗೇಟ್, ಬಿಜೆಪಿಯಲ್ಲ. ಬಿಜೆಪಿಗೆ ಅನುಕೂಲ ಮಾಡಿಕೊಡುವುದೇ ಜೆಡಿಎಸ್ನ ಉದ್ದೇಶವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, “ಜೆಡಿಎಸ್ ಪಕ್ಷವು ಹಾಸನ, ಮಂಡ್ಯದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ. ಆದರೆ, ಉತ್ತರ ಕರ್ನಾಟಕ ಭಾಗದ ಉಪ ಚುನಾವಣೆಯಲ್ಲಿ ಮಾತ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರುವುದು ಬಿಜೆಪಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ. ಅದರೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲವು ನಿಶ್ಚಿತ” ಎಂದು ಹೇಳಿದ್ದಾರೆ.
ಅಲ್ಪಸಂಖ್ಯಾತರಿಗೆ ಅವಕಾಶ ಕೊಡಬಾರದು ಎಂದಲ್ಲಾ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ನೆಲೆಯಿದೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಅವರಿಗೆ ಅಂತಹ ಪ್ರಾಬಲ್ಯವಿಲ್ಲ. ಹೀಗಾಗಿಯೇ ಈ ಭಾಗದ ಚುನಾವಣೆಗಳಲ್ಲಿ ಬಿಜೆಪಿ ಅನುಕೂಲ ಮಾಡಿಕೊಡುವ ಕೆಲಸವನ್ನು ಜೆಡಿಎಸ್ ಮಾಡುತ್ತಿದೆ. ಒಳ ಒಪ್ಪಂದ ಮಾಡಿಕೊಂಡಿದ್ದಾರೋ ಎನ್ನುವುದರ ಬಗ್ಗೆ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಆಡಳಿತದಲ್ಲಿ ಪ್ರತಿ ದಿನವೂ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ದರ ಏರಿಕೆಯಾಗುತ್ತಿದೆ. ಇದರಿಂದ ಇತರೆ ಅಗತ್ಯ ವಸ್ತುಗಳ ಬೆಲೆ ಕೂಡ ಹೆಚ್ಚಳವಾಗಿ ಬಡವರು ಜೀವನ ನಡೆಸಿದಂತಹ ಪರಿಸ್ಥಿತಿ ತಂದೊಡ್ಡಿದ್ದಾರೆ. ಬಿಜೆಪಿ ರಾಜ್ಯದ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.
ಐಎಎಸ್, ಐಪಿಎಸ್ ಗಳಲ್ಲಿ ಆರ್.ಎಸ್.ಎಸ್ ಕಾರ್ಯಕರ್ತರ ಆಯ್ಕೆ ಬಗ್ಗೆ ಗೊತ್ತಿಲ್ಲ. ಆದರೆ ಇದೊಂದು ಕೋಮುವಾದ ಸಂಘಟನೆ ಎಂಬುವುದರಲ್ಲಿ ಎರಡು ಮಾತಿಲ್ಲ. ಆರ್ಎಸ್ಎಸ್ ಮುಖವಾಡವೇ ಬಿಜೆಪಿ. ಅವರ ಅಣತಿಯಂತೆ ಬಿಜೆಪಿ ನಡೆದುಕೊಳ್ಳುತ್ತಿದೆ. ಆಡಳಿತದಲ್ಲಿ ಕೋಮುವಾದಿ ಸಂಘಟನೆಗಳ ಹಸ್ತಕ್ಷೇಪ ದೇಶಕ್ಕೆ ಒಳ್ಳೆಯದಲ್ಲ. ಮುಸ್ಲಿಮರ ಮೇಲೆ ಹಿಂದೂಗಳನ್ನು ಎತ್ತಿಗಟ್ಟಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವುದೇ ಇವರ ಕೆಲಸ. ಆದರೆ ಕಾಂಗ್ರೆಸ್ ಪಕ್ಷ ಎಲ್ಲಾ ಧರ್ಮಗಳನ್ನು ಗೌರವಿಸಿ ಸಮಾನವಾಗಿ ಕಾಣುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದನ್ನೂ ಓದಿ: ಸರಕಾರಿ ಹುದ್ದೆ, ಶಿಕ್ಷಣ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಕೇಸರೀಕರಣ : ಡಿಕೆಶಿ ಆರೋಪ!

