ಬೆಲೆ ಏರಿಕೆ: 14 ವರ್ಷಗಳ ನಂತರ ಬೆಂಕಿಪೊಟ್ಟಣ ಬೆಲೆ ದುಪ್ಪಟ್ಟು ಹೆಚ್ಚಳ!

ಪೆಟ್ರೋಲ್, ಡಿಸೇಲ್, ಎಲ್‌ಪಿಜಿ ಸಿಲಿಂಡರ್‌ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ದಿನೇ ದಿನೇ ಏರುತ್ತಲೇ ಇದೆ. ಇದೀಗ ಬೆಂಕಿಪೊಟ್ಟಣಕ್ಕೂ ಬೆಲೆ ಏರಿಕೆ ಬಿಸಿ ತಟ್ಟಿದ್ದು, ಬರೋಬ್ಬರಿ  14 ವರ್ಷಗಳ ಬಳಿಕ ಬೆಂಕಿಪೊಟ್ಟಣದ ಬೆಲೆ ದುಪ್ಪಟ್ಟು ಹೆಚ್ಚಾಗಿದೆ.

ತಮಿಳುನಾಡಿನ ಶಿವಕಾಶಿಯಲ್ಲಿರುವ ಆಲ್ ಇಂಡಿಯಾ ಚೇಂಬರ್ ಆಫ್ ಮ್ಯಾಚಸ್ 14 ವರ್ಷಗಳ ನಂತರ ಬೆಂಕಿಪೊಟ್ಟಣದ ಬೆಲೆಯನ್ನು 1 ರಿಂದ 2 ರೂಪಾಯಿಗೆ ಏರಿಸಲು ನಿರ್ಧರಿಸಿದೆ. ಹೆಚ್ಚುತ್ತಿರುವ ವೆಚ್ಚಗಳು ಮತ್ತು ಹಣದುಬ್ಬರವನ್ನು ಉಲ್ಲೇಖಿಸಿ ಈ ಒಕ್ಕೂಟವೂ ಬೆಂಕಿಪೊಟ್ಟಣದ ಬೆಲೆ ಡಿಸೆಂಬರ್ 1 ರಿಂದ ಏರಿಕೆಯಾಗುವುದನ್ನು ಘೋಷಿಸಿದೆ.

ಕಳೆದ 14 ವರ್ಷಗಳಲ್ಲಿ ಬೆಲೆ ಏರಿಕೆ ಕಾಣದ ದಿನ ಬಳಕೆ ವಸ್ತುಗಳಲ್ಲಿದ್ದ ಏಕೈಕ ವಸ್ತು ಬೆಂಕಿಪೊಟ್ಟಣವಾಗಿತ್ತು.  2007ರಲ್ಲಿ ಬೆಂಕಿ ಪೊಟ್ಟಣದ ದರವನ್ನು 50 ಪೈಸೆಗಳಿಂದ 1 ರೂಪಾಯಿಗೆ ಹೆಚ್ಚಿಸಲಾಗಿತ್ತು. ಅದಕ್ಕಿಂತ ಮೊದಲು 1995 ರಲ್ಲಿ ಮ್ಯಾಚ್‌ಬಾಕ್ಸ್‌ನ ಬೆಲೆಯನ್ನು 25 ಪೈಸೆಯಿಂದ 50 ಪೈಸೆಗೆ  ಹೆಚ್ಚಿಸಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಲಸಿಕೆಗೂ ಮುನ್ನವೇ ಶಾಲೆಗಳ ಆರಂಭ: ಮಕ್ಕಳ ಬದುಕಿನಲ್ಲಿ ಸರ್ಕಾರ ಚೆಲ್ಲಾಟ.?

ಮ್ಯಾಚ್‌ಬಾಕ್ಸ್‌ಗಳನ್ನು ತಯಾರಿಸಲು 14 ಬಗೆಯ ಕಚ್ಚಾ ಸಾಮಗ್ರಿಗಳು ಬೇಕಾಗುತ್ತವೆ ಎಂದು ತಯಾರಕರು ತಿಳಿಸಿದ್ದಾರೆ. ಬೆಂಕಿಪೊಟ್ಟಣ ತಯಾರಿಸಲು ಬೇಕಾಗುವ ಪ್ರಮುಖ ವಸ್ತುವಾದ ಕೆಂಪು ರಂಜಕ ಒಂದು ಕೆಜಿಗೆ 425 ರಿಂದ 810 ರೂಪಾಯಿಯಾಗಿದೆ.

ಮೇಣದ ಬೆಲೆ 58 ರಿಂದ 80 ರೂಪಾಯಿಯಾಗಿದೆ. ಹೊರ ಬಾಕ್ಸ್ ಬೋರ್ಡ್ 36 ರಿಂದ 55 ರೂ. ಒಳಗಿನ ಬಾಕ್ಸ್ ಬೋರ್ಡ್ ಬೆಲೆ 32 ರಿಂದ  58 ರೂಪಾಯಿಗೆ ಏರಿಕೆಯಾಗಿದೆ ಎಂದು ಆಲ್ ಇಂಡಿಯಾ ಚೇಂಬರ್ ಆಫ್ ಮ್ಯಾಚಸ್ ತಿಳಿಸಿದೆ.

ಇದರ ಜೊತೆಗೆ ಪೇಪರ್, ಸ್ಪ್ಲಿಂಟ್ಸ್, ಪೊಟ್ಯಾಶಿಯಂ ಕ್ಲೋರೇಟ್ ಮತ್ತು ಸಲ್ಫರ್ ನಂತಹ ವಸ್ತುಗಳ ಬೆಲೆಯೂ ಹೆಚ್ಚಾಗಿದೆ. ಇವುಗಳು ಕೂಡ ಬೆಂಕಿಪೊಟ್ಟಣ ಬೆಲೆ ಏರಿಕೆಗೆ ಕಾರಣವಾಗಿದೆ. ನಿರಂತರವಾಗಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿ ಸಾಗಣೆ ವೆಚ್ಚ ಕೂಡ ಅಧಿಕವಾಗಿದೆ ಎಂದು ತಯಾರಕರು ಹೇಳಿದ್ದಾರೆ.

ಇದನ್ನೂ ಓದಿ: ಮುಝಫರ್‌ನಗರ ಕೋಮುಗಲಭೆ ಪ್ರಕರಣ: ಬಿಜೆಪಿ ಶಾಸಕ ಸೇರಿ 12 ಮಂದಿ ಖುಲಾಸೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights