ಬೆಂಗಳೂರಲ್ಲಿ ಭಾರೀ ಮಳೆ; ರಸ್ತೆ ಕಾಣದೆ ಡಿವೈಡರ್‌ಗೆ ಗುದ್ದಿದ ಕಾರು; ಮೂವರ ಸಾವು

ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆಯ ಅವಾಂತರಗಳು ಮುಂದುವರಿದಿವೆ.

ಭಾರೀ ಮಳೆ ಆರ್ಭಟಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ರಸ್ತೆಯ ಬೆಟ್ಟಹಲಸೂರು ಕ್ರಾಸ್ ಬಳಿ ರಸ್ತೆ ಕಾಣದೆ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುವಾರ ರಾತ್ರಿ 9 ಗಂಟೆಗೆ ನಡೆದಿದೆ.

ದೇವನಹಳ್ಳಿ ಕಡೆಯಿಂದ ಬೆಂಗಳೂರಿಗೆ ಕಾರು ಬರುತ್ತಿತ್ತು. ಈ ವೇಳೆ ಬೆಟ್ಟಹಲಸೂರು ಬಳಿಯ ಫ್ಲೈಓವರ್ ಮೇಲೆ ಅಪಘಾತ ಸಂಭವಿಸಿದೆ. ಮೂವರು ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಮತ್ತಿಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮಳೆಯಿಂದಾಗಿ ರಸ್ತೆ ಕಾಣದೆ ಡಿವೈಡರ್‍ಗೆ ಡಿಕ್ಕಿ ಹೊಡೆದು ಬಳಿಕ ಎದುರಿಗೆ ಬರುತ್ತಿದ್ದ ಮತ್ತೊಂದು ಕಾರಿನ ಮೇಲೆ ಕಾರು ಬಿದ್ದಿದೆ.

ಮಳೆ ಹಿನ್ನೆಲೆ ಕಾರಿನಲ್ಲಿದ್ದ ಮೃತದೇಹ ತೆಗೆಯಲು ಹರಸಾಹಸ ಪಡಬೇಕಾಯಿತು. ಸ್ಥಳಕ್ಕೆ ಚಿಕ್ಕಜಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾರೀ ಮಳೆಯಿಂದ ಇತರ ಅವಾಂತರಗಳು

ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಆದರೆ ಗುರುವಾರ ದಿನಪೂರ್ತಿ ಧಾರಾಕಾರ ಮಳೆ ಸುರಿದಿದೆ. ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟದ ಪರಿಣಾಮ ಕೆಲವು ಕಡೆ ರಸ್ತೆಗಳು ಕೆರೆಯಂತಾದರೆ ಮತ್ತೆ ಹಲವು ಕಡೆ ಜನರ ಮನೆಗಳಿಗೆ ನೀರು ನುಗ್ಗಿದೆ.

ಬೆಂಗಳೂರು ಸೇರಿದಂತೆ ಹೊರವಲಯದಲ್ಲೂ ನಿನ್ನೆ ಸಂಜೆ ಧಾರಾಕಾರವಾಗಿ ಮಳೆ ಸುರಿದಿದೆ. ನಗರದ ಬಹುಪಾಲು ರಸ್ತೆಗಳು ಕೆರೆಯಂತಾಗಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬೆಂಗಳೂರಿನಲ್ಲಿ‌ ಸಂಜೆ ವೇಳೆ ಎಂ.ಜಿ. ರಸ್ತೆ, ಕೆ.ಜಿ. ರಸ್ತೆ, ಸಿಟಿ‌ ಮಾರ್ಕೆಟ್, ಕಾರ್ಪೋರೇಷನ್, ಕೆ.ಆರ್. ಸರ್ಕಲ್, ಚಾಲುಕ್ಯ ಸರ್ಕಲ್, ವಿಂಡ್ಸರ್ ಮ್ಯಾನರ್, ಮಲ್ಲೇಶ್ವರ, ಯಶವಂತಪುರ, ಹೆಬ್ಬಾಳ, ಪೀಣ್ಯ ಸೇರಿದಂತೆ ಹಲವೆಡೆ ಪ್ರಮುಖ ರಸ್ತೆಗಳು ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights