Fact Check: ಯುವತಿಯರು ಸಾರ್ವಜನಿಕವಾಗಿ ಮದ್ಯಪಾನ ಮಾಡುವ ನಾಟಕೀಯ ವಿಡಿಯೋವನ್ನು ದೆಹಲಿ ಸಿಎಂ ವಿರುದ್ದ ಅಪಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ!
ಇಬ್ಬರು ಯುವತಿಯರು ಸಾರ್ವಜನಿಕವಾಗಿ ಮದ್ಯ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾರ್ವಜನಿಕವಾಗಿ ಮದ್ಯ ಸೇವನೆ ಮಾಡುತ್ತಿದ್ದ ಯುವತಿಯರ ವಿರುದ್ದ ಯುವಕನೊಬ್ಬ ನೈತಿಕ ಪೊಲೀಸ್ ಗಿರಿ ಮಾಡಲು ಮುಂದಾಗಿದ್ದು, ಯುವತಿ ಆತನೊಂದಿಗೆ ಕೋಪದಿಂದ ಜಗಳವಾಡುವುದನ್ನು ವಿಡಿಯೋದಲ್ಲಿ ಕೇಳಬಹುದು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಬಳಕೆದಾರರು ‘ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್’ ಅವರನ್ನು ಟೀಕಿಸಿ ಹಂಚಿಕೊಂಡಿದ್ದಾರೆ. ಅವರಲ್ಲಿ ಬಿಜೆಪಿ ಬೆಂಬಲಿಗ ರೇಣುಕಾ ಜೈನ್ ಅವರು “ದೆಹಲಿಯನ್ನು ಮದ್ಯದ ರಾಜಧಾನಿಯನ್ನಾಗಿ ಮಾಡಿದ್ದಕ್ಕಾಗಿ ಅರವಿಂದ್ ಕೇಜ್ರಿವಾಲ್ ಅವರಿಗೆ ಅಭಿನಂದನೆಗಳು” ಎಂದು ವಿಡಿಯೋ ಜೊತೆ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ. ಪೋಸ್ಟ್ನ ಆರ್ಕೈವ್ ಲಿಂಕ್ ಇಲ್ಲಿದೆ.
Congratulations @ArvindKejriwal for making Delhi liquor capital pic.twitter.com/ukbMJSVtFc
— #RenukaJain (@RenukaJain6) December 7, 2021
ಹೊಸ ಅಬಕಾರಿ ನೀತಿಯ ಅಡಿಯಲ್ಲಿ, ದೆಹಲಿ ಸರ್ಕಾರವು ಚಿಲ್ಲರೆ ಮದ್ಯದ ವ್ಯಾಪಾರವನ್ನು ನಿಷೇಧಿಸಿದೆ ಮತ್ತು ನಗರದಾದ್ಯಂತ 32 ವಲಯಗಳಲ್ಲಿ ಖಾಸಗಿ ಮದ್ಯದ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ದಿ ಎಕನಾಮಿಕ್ ಟೈಮ್ಸ್ ಪ್ರಕಾರ, “ಖಾಸಗಿಯಾಗಿ ನಡೆಸಲ್ಪಡುವ 260 ಮಳಿಗೆಗಳನ್ನು ಒಳಗೊಂಡಂತೆ ರಾಜಧಾನಿಯಲ್ಲಿ ಸುಮಾರು 850 ಮದ್ಯ ಮಾರಾಟ ಮಳಿಗೆಗಳನ್ನು ಖಾಸಗಿ ಸಂಸ್ಥೆಗಳಿಗೆ ಮುಕ್ತ ಟೆಂಡರ್ ಮೂಲಕ ನೀಡಲಾಗಿದೆ. “ಈ ಹಿನ್ನಲೆಯಲ್ಲಿ ಹೊಸದಿಲ್ಲಿಯಲ್ಲಿ ಮದ್ಯದ ಸೇವನೆ ಮಿತಿಮೀರಿದೆ. ಯುವಜನರು ಬೀದಿಯ ಮೂಲೆ ಮೂಲೆಗಳಲ್ಲಿ ಬಹಿರಂಗವಾಗಿ ಮದ್ಯಪಾನ ಮಾಡುತ್ತಿದ್ದಾರೆ” ಎಂದು ಆರೋಪಿಸಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
ಹಲವಾರು ನೆಟ್ಟಿಗರು ಫೇಸ್ಬುಕ್ (ಲಿಂಕ್ 1, ಲಿಂಕ್ 2, ಲಿಂಕ್ 3) ಮತ್ತು ಟ್ವಿಟರ್ನಲ್ಲಿ ವೀಡಿಯೊವನ್ನು ಪ್ರಚಾರ ಮಾಡಿದ್ದಾರೆ.
ಸತ್ಯ-ಪರಿಶೀಲನೆ:
ವೈರಲ್ ವೀಡಿಯೊದ 1:07 ಮಾರ್ಕ್ನಲ್ಲಿ ನೋಡಿದಾಗ, ಮೇಲಿನ ಪ್ರತಿಪಾದನೆ ತಪ್ಪು ಎಂದು ಗೊತ್ತಾಗುತ್ತದೆ. ವಿಡಿಯೋವನ್ನು ಮನರಂಜನೆ ಮತ್ತು ಪ್ರಚಾರದ ಉದ್ದೇಶಗಳಿಗಾಗಿ ಮಾತ್ರ ಚಿತ್ರೀಕರಿಸಲಾಗಿದೆ. ಇದನ್ನು ವಾಣಿಜ್ಯ ಬಳಕೆಗಾಗಿ ಪ್ರಸಾರ ಮಾಡುವ ಉದ್ದೇಶವಿಲ್ಲ ಎಂದು ಅದು ಹೇಳುತ್ತದೆ. ಇದು ಈ ವೀಡಿಯೊ ಸ್ಕ್ರಿಪ್ಟೆಡ್ ಕಿರುಚಿತ್ರ ಎಂದು ಇದು ಖಚಿತಪಡಿಸುತ್ತದೆ.

ವಿಡಿಯೋ ಕ್ಲಿಪ್ನಲ್ಲಿ ‘Mr_thakur1612’ ಎಂದಿರುವ ವಾಟರ್ಮಾರ್ಕ್ ಅನ್ನು ಸಹ ಕಾಣಬಹುದು. ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ, ಸನ್ನಿ ಠಾಕೂರ್ ಎಂಬ ಬಳಕೆದಾರರಿಂದ ನಡೆಸಲ್ಪಡುವ Instagram ಖಾತೆ ಗಮಸಿದಾಗ, ಅವರದ್ದೇ ಆದ YouTube ಚಾನಲ್ ಕೂಡ ದೊರೆತಿದೆ. ಆದಾಗ್ಯೂ, ಎರಡೂ ಖಾತೆಗಳಲ್ಲಿ ವೀಡಿಯೊವನ್ನು ಹುಡುಕಲು ಸಾಧ್ಯವಾಗಲಿಲ್ಲ.
ನವೆಂಬರ್ 26, 2021 ರಂದು, ಠಾಕೂರ್ ಅವರು ಫೇಸ್ಬುಕ್ನಲ್ಲಿ ವೈರಲ್ ಕ್ಲಿಪ್ನ ಸುದೀರ್ಘ (ಮೂಲ ವಿಡಿಯೋ) ಆವೃತ್ತಿಯನ್ನು ಹಂಚಿಕೊಂಡಿದ್ದಾರೆ. ದೆಹಲಿಯ ರಾಜೀವ್ ಚೌಕ್ ಪ್ರದೇಶದ ಬಳಿ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ. “ವೀಡಿಯೊದಲ್ಲಿರುವ ಹುಡುಗಿಯರು ನಟಿಸುತ್ತಿದ್ದಾರೆ. ಅವರು ಮದ್ಯಪಾನ ಮಾಡುತ್ತಿಲ್ಲ. ಜನರು ಸಾರ್ವಜನಿಕವಾಗಿ ಮದ್ಯಪಾನ ಮಾಡುವ ಇಂತಹ ಘಟನೆಗಳನ್ನು ನಾವು ಇತ್ತೀಚೆಗೆ ಕೇಳುತ್ತಿದ್ದೇವೆ. ಆದ್ದರಿಂದ ನಾವು ಜಾಗೃತಿ ಮೂಡಿಸಲು ಈ ವೀಡಿಯೊವನ್ನು ರಚಿಸುತ್ತಿದ್ದೇವೆ ಎಂದು ವಿಡಿಯೋದ ಟ್ಯಾಗ್ಲೈನ್ನಲ್ಲಿ ಹೇಳಲಾಗಿದೆ.
ಸನ್ನಿ ಅವರನ್ನು ಆಲ್ಟ್ ನ್ಯೂಸ್ ಸಂಪರ್ಕಿಸಿದ್ದು, ಅವರು ಇದು “ಜಾಗೃತಿ” ವೀಡಿಯೊ ಎಂದು ದೃಢಪಡಿಸಿದ್ದಾರೆ. ಅವರು ಇದೇ ರೀತಿಯ ಮತ್ತೊಂದು ವಿಡಿಯೋವನ್ನೂ ಸಹ ಪೋಸ್ಟ್ ಮಾಡಿದ್ದರು. ಅದರ ಶೀರ್ಷಿಕೆಯ ಪ್ರಕಾರ, ಇದು ತಮಾಷೆಯ ವೀಡಿಯೊವಾಗಿದೆ.
ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಯುವತಿಯರು ಮದ್ಯ ಸೇವಿಸುತ್ತಿರುವ ನಾಟಕೀಯ ವಿಡಿಯೋವನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ವಿರುದ್ದ ಅಪಪ್ರಚಾರ ಮಾಡಲು ಬಳಸಿಕೊಳ್ಳಲಾಗುತ್ತಿದೆ.
ಕೃಪೆ: ಆಲ್ಟ್ ನ್ಯೂಸ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ
ಇದನ್ನೂ ಓದಿ: Fact Check: ಬಾಂಗ್ಲಾದೇಶದ ನಮಾಜ್ ಚಿತ್ರವನ್ನು ಗುರುಗ್ರಾಮದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ!

