Fact check: ಪತ್ರಕರ್ತೆ ರಾಣಾ ಅಯೂಬ್ ಬಂಧನವಾಗಿಲ್ಲ, ಸುಳ್ಳು ಸುದ್ದಿ ಹರಡಲಾಗಿದೆ
ಪತ್ರಕರ್ತೆ ರಾಣಾ ಅಯೂಬ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಹೇಳಲಾಗುತ್ತಿರುವ ಪೋಸ್ಟ್‌ವೊಂದು ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗುತ್ತಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತೆ ರಾಣಾ ಅಯ್ಯುಬ್ ಅವರ 1.77 ಕೋಟಿ ರು. ಮೌಲ್ಯದ ನಿಧಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಬಡವರ ಸೇವೆಗಾಗಿ ನೀಡಲಾಗಿದ್ದ ನಿಧಿಯನ್ನು ಅವರು ತಮ್ಮ ಸ್ವಂತಕ್ಕೆ ಬಳಸಿದ್ದಾರೆ ಎಂಬ ಆರೋಪದ ಮೇರೆಗೆ ಅವರನ್ನು ಬಂಧಿಸಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ. ಈ ವೈರಲ್ ಸುದ್ದಿಯನ್ನು ಪರಿಶೀಲಿಸೋಣ.

https://twitter.com/Shivpra70195272/status/1492387577537904640
ಫ್ಯಾಕ್ಟ್‌ಚೆಕ್
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೊ ಈಗಿನದ್ದಲ್ಲ. ಇದು 2021ರಲ್ಲಿ ರಾಣಾ ಅಯೂಬ್ ತನ್ನ ಹೇಳಿಕೆಯನ್ನು ನೀಡಲು ಪೊಲೀಸ್ ಠಾಣೆಗೆ ಆಗಮಿಸಿದ್ದ ಆ ಸಂದರ್ಭದಲ್ಲಿ ಮಾಡಿರುವ ವಿಡಿಯೊವಾಗಿದೆ. ಅದನ್ನು ಈಗ ಶೇರ್ ಮಾಡಿಕೊಳ್ಳುವ ಮೂಲಕ ರಾಣಾ ಅಯೂಬ್ ಅವರನ್ನು ಬಂಧಿಸಿದ್ದಾರೆ ಎಂದು ವೈರಲ್ ಮಾಡಲಾಗುತ್ತಿದೆ. ಬೂಮ್ ಸುದ್ದಿಗೆ ಮಾಹಿತಿ ನೀಡಿರುವ ರಾಣಾ ಅಯ್ಯೂಬ್ ತಮ್ಮ ಬಂಧನವಾಗಿರುವ ಸುದ್ದಿಯನ್ನು ತಳ್ಳಿಹಾಕಿದ್ದಾರೆ.
ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 11 ರಂದು ಇಡಿ ಅಯೂಬ್ ಅವರಿಗೆ ಸೇರಿದ 1.77 ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಿದ ನಂತರ ವೀಡಿಯೊ ವೈರಲ್ ಆಗಿದೆ. ಇದರ ಬೆನ್ನಲ್ಲೇ ಅಯ್ಯೂಬ್ ತನ್ನ ಮೇಲಿನ ಆರೋಪಗಳನ್ನು ತಿರಸ್ಕರಿಸಿ ಟ್ವಿಟ್ಟರ್ ನಲ್ಲಿ ಹೇಳಿಕೆಯನ್ನೂ ನೀಡಿದ್ದಾರೆ.
ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಲಾಗಿದ್ದು ಜುಲೈ 2, 2021 ರಂದು ಯೂಟ್ಯೂಬ್ ಚಾನೆಲ್ ದಿ ನ್ಯೂಸ್ ರಿವೈವರ್ಸ್ ನಲ್ಲಿ ಅಪ್‌ಲೋಡ್ ಮಾಡಿದ ವೈರಲ್ ವೀಡಿಯೊ ಲಭ್ಯವಾಗಿದೆ. ‘ಘಾಜಿಯಾಬಾದ್ ನಕಲಿ ದ್ವೇಷದ ವೀಡಿಯೊ: ರಾಣಾ ಅಯೂಬ್ ಅವರನ್ನು ಯುಪಿ ಪೊಲೀಸರು ವಿಚಾರಣೆ ನಡೆಸಿದ್ದರು, ಅವರ ಹೇಳಿಕೆಯನ್ನು ದಾಖಲಿಸಿದ್ದರು ಎಂದು ಮಾಹಿತಿ ಇದ್ದು, ಯೂಟ್ಯೂಬ್‌ನಲ್ಲಿ ಕೀವರ್ಡ್ ಸರ್ಚ್ ನಡೆಸಿದಾಗ “ಪಂಜಾಬ್ ಕೇಸರಿ ಯುಪಿಯ ಯೂಟ್ಯೂಬ್ ಚಾನೆಲ್‌ನಲ್ಲಿ” ಅದೇ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದು, ಅದರಲ್ಲಿ ‘Old man’ ದಾಳಿ ಪ್ರಕರಣದಲ್ಲಿ ರಾಣಾ ಅಯೂಬ್ ತನ್ನ ಹೇಳಿಕೆಯನ್ನು ನೀಡುತ್ತಾರೆ, ಎರಡು ಗಂಟೆಗಳ ಕಾಲ ಪೊಲೀಸ್ ವಿಚಾರಣೆ ನಡೆಯುತ್ತದೆ’ ಎಂಬ ಹೇಳಿಕೆ ಇದೆ.
ಗಾಜಿಯಾಬಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ 2021 ರ ಜೂನ್‌ನಲ್ಲಿ ಉತ್ತರ ಪ್ರದೇಶದ ಪೊಲೀಸರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಗಳಾದ ಟ್ವಿಟರ್, ಪತ್ರಕರ್ತರು, ಕಾಂಗ್ರೆಸ್ ನಾಯಕರು ಮತ್ತು ಸುದ್ದಿ ವೆಬ್‌ಸೈಟ್ ದಿ ವೈರ್ ಸೇರಿದಂತೆ ಒಟ್ಟು ಒಂಬತ್ತು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದಾಗ ನಡೆದಿರುವ ಘಟನೆ ಎಂದು ಬೂಮ್ ವರದಿ ಮಾಡಿದೆ.
ಯುಪಿ ಪೊಲೀಸರು ಪತ್ರಕರ್ತರಾದ ರಾಣಾ ಅಯ್ಯೂಬ್, ಸಬಾ ನಖ್ವಿ, ಫ್ಯಾಕ್ಟ್‌ಚೆಕ್ ಆದ ಆಲ್ಟ್ ನ್ಯೂಸ್‌ನ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್, ಮೂವರು ಕಾಂಗ್ರೆಸ್ ಮುಖಂಡರಾದ ಶಾಮಾ ಮೊಹಮ್ಮದ್, ಸಲ್ಮಾನ್ ನಿಜಾಮಿ ಮತ್ತು ಮಸ್ಕೂರ್ ಉಸ್ಮಾನಿ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಜೂನ್ 2021ರಲ್ಲಿ 72 ವರ್ಷದ ಅಬ್ದುಲ್ ಸಮದ್ ಸೈಫಿ ಎಂಬುವವರ ಮೇಲೆ ಹಲ್ಲೆ ನಡೆಸಿ, ಆತನನ್ನು ಹೊಡೆದು ಗಡ್ಡವನ್ನು ಕತ್ತರಿಸಿದ್ದಾರೆ ಎಂದು ಆರೋಪಿಸಿ ಬಲಿಪಶು ಅಬ್ದುಲ್ ಸಮದ್ ಸೈಫಿ ಎಂಬುವವರ ಪರವಾಗಿ ವೀಡಿಯೊವನ್ನು ಕೆಲವು ಅನ್‌ವೆರಿಫೈಡ್ ಅಕೌಂಟ್‌ನಿಂದ ಟ್ವೀಟ್ ಮಾಡಿದ್ದರು. ಈ ಟ್ವಿಟ್‌ಗಳನ್ನು ಪರಿಶೀಲಿಸಿದ ಪೊಲೀಸರು ಇದು ಅನ್‌ವೆರಿಫೈಡ್ ಅಕೌಂಟ್‌ನಿಂದ ಬಂದಿರುವ ಟ್ವಿಟ್‌ಗಳಾಗಿದ್ದು ಇದರಿಂದ ಶಾಂತಿ ಸುವ್ಯಸ್ಥೆಗೆ ಧಕ್ಕೆ ತಂದಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.
ಒಟ್ಟಾರೆಯಾಗಿ ಹೇಳುವುದಾದರೆ ಪತ್ರಕರ್ತೆ ರಾಣಾ ಅಯೂಬ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಆರೋಪ ಸುಳ್ಳಾಗಿದ್ದು, ರಾಣಾ ಅಯೂಬ್ ಅವರ ಹಳೆಯ ವಿಡಿಯೊವನ್ನು ಈಗಿನ ಘಟನೆಗೆ ತಳುಕುಹಾಕಿ ಸಾಮಾಜಿಕ ಮಾದ್ಯಮದಲ್ಲಿ ವೈರಲ್ ಮಾಡಲಾಗಿದೆ. ಹಾಗಾಗಿ ವೈರಲ್ ವಿಡಿಯೊದಲ್ಲಿ ಪ್ರತಿಪಾದಿಸಲಾಗಿರುವ ಸುದ್ದಿ ಸುಳ್ಳಾಗಿದೆ.
ಇದನ್ನು ಓದಿರಿ: Fact check: ವಿದ್ಯಾರ್ಥಿನಿ ಮುಸ್ಕಾನ್ ಫೋಟೋ ಬುರ್ಜ್ ಖಲೀಫಾದಲ್ಲಿ ಪ್ರಸಾರ ಮಾಡಿಲ್ಲ

