ಫ್ಯಾಕ್ಟ್‌ಚೆಕ್: ಮಾಜಿ ಸಚಿವರ ಮತ್ತು ಶಾಸಕರ ಪಿಂಚಣಿಯನ್ನು ಪಂಜಾಬ್‌ನ AAP ಸರ್ಕಾರ ರದ್ದು ಪಡಿಸಿದೆ ಎಂಬುದು ಸುಳ್ಳು

ಪಂಜಾಬ್‌ನಲ್ಲಿ ಭಾರಿ ಬಹುಮತದೊಂದಿಗೆ ಆಮ್ ಆದ್ಮಿ ಪಕ್ಷವು ಅಧಿಕಾರಕ್ಕೆ ಬಂದೊಡನೆ  ‘ಮಾಜಿ ಶಾಸಕರು ಮತ್ತು ಮಂತ್ರಿಗಳ ಪಿಂಚಣಿಯನ್ನು ರದ್ದುಗೊಳಿಸುವ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ’ ಎಂದು ಹೇಳುವ ಪೋಸ್ಟ್ ವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೆ ಎಂಬುದನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಗೂಗಲ್ ಸರ್ಚ್ ಮಾಡಿದಾಗ ಪಂಜಾಬ್‌ನ ಎಎಪಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಒಬ್ಬ ಶಾಸಕ ಒಂದು ಪಿಂಚಣೆಯ ಯೋಜನೆಯ  ಮಾಹಿತಿ ಲಭ್ಯವಾಗಿದೆ. ಅದಕ್ಕೆ ಸಂಬಂಧಿಸಿದ ವರದಿಗಳನ್ನು (ಇಲ್ಲಿ ಮತ್ತು ಇಲ್ಲಿ) ನೋಡಬಹುದು. ಈ ವರದಿಗಳಲ್ಲಿ ಉಲ್ಲೇಖಿಸಿರುವ ಯೋಜನೆಯನ್ನು ತಿರುಚಿ, ಪಿಂಚಣಿ ರದ್ದು ಎಂಬ ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್  ಮಾಡಲಾಗುತ್ತಿದೆ.

ಪ್ರಸ್ತುತದಲ್ಲಿ ಇರುವ ಕಾನೂನಿನ ಪ್ರಕಾರ, ರಾಜ್ಯ ವಿಧಾನಸಭೆಯ ಯಾವುದೇ ಮಾಜಿ ಶಾಸಕರು  ಪಿಂಚಣಿಗಳಿಗೆ ಅರ್ಹರಾಗಿರುತ್ತಾರೆ. 26 ಅಕ್ಟೋಬರ್ 2016 ರಿಂದ ಜಾರಿಗೆ ಬರುವಂತೆ, ಶಾಸಕರಾಗಿ ಸೇವೆ ಸಲ್ಲಿಸಿದ ಪ್ರತಿ ಮಾಜಿ ಸದಸ್ಯರು ಮೂಲ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ತಿಂಗಳಿಗೆ 15,000 ಜೊತೆಗೆ ಡಿ.ಎ. ಇರುತ್ತದೆ ಇದರ ಜೊತೆಗೆ,  ಎರಡು ಅಥವಾ ಅದಕ್ಕೂ ಹೆಚ್ಚು ಬಾರಿ ಗೆದ್ದಿದ್ದರೆ ಹೆಚ್ಚುವರಿ ಪಿಂಚಣಿ ರೂ. ತಿಂಗಳಿಗೆ 10,000 ಜೊತೆಗೆ ಡಿ.ಎ. ಸಿಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇತ್ತೀಚಿನ ವರದಿಗಳು ರಾಜ್ಯದ ಬೊಕ್ಕಸಕ್ಕೆ ಆರ್ಥಿಕ ಹೊರೆಯಾಗಿರುವುದರಿಂದ, ಬಹು ಪಿಂಚಣಿಗಳನ್ನು ತೊಡೆದುಹಾಕಲು ‘ಒಬ್ಬ ಶಾಸಕ ಒಂದು ಪಿಂಚಣಿ’ ಯೋಜನೆಯನ್ನು ಜಾರಿಗೆ ತರಲು ಎಎಪಿ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸೂಚಿಸುತ್ತದೆ.

ಆದಾಗ್ಯೂ, ಸರ್ಕಾರವು ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆಯನ್ನು ಮಾಡಿಲ್ಲ ಅಥವಾ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದು ನಮೂದಿಸಿರುವುದನ್ನು ಗಮನಿಸಬೇಕು. ಇದಲ್ಲದೆ, ‘ಒಬ್ಬ ಶಾಸಕರಿಗೆ ಒಂದು ಪಿಂಚಣಿ’ ಪರಿಕಲ್ಪನೆಯಿಂದಾಗಿ ಮಾಜಿ ಶಾಸಕರಿಗೆ ಪಿಂಚಣಿಯನ್ನು ಸಂಪೂರ್ಣವಾಗಿ ನಿಲ್ಲಿಸುತ್ತೇವೆಂದು ಹೇಳಿಲ್ಲ. ಈ ನಿಯಮದ ಪ್ರಕಾರ ಒಬ್ಬ ಜನಪ್ರತಿನಿಧಿ (ಶಾಸಕ) ಎಷ್ಟೇ ಭಾರಿ ಆಯ್ಕೆಯಾದರೂ ಅವರಿಗೆ ಒಂದೇ ರೀತಿಯ ಪಿಂಚಣಿ ಸೌಲಭ್ಯ ಸಿಗುತ್ತದೆ ಎಂದು ಹೇಳುತ್ತದೆ.

ಅಲ್ಲದೆ, ಎಎಪಿ ಇಂತಹ ಕ್ರಮಗಳನ್ನು ಜಾರಿ ಮಾಡಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ವಿರೋಧ ಪಕ್ಷದಲ್ಲಿದ್ದಾಗಲೂ ಎಎಪಿ ಈ ವಿಷಯದಲ್ಲಿ ಇದೇ ರೀತಿಯ ಹಕ್ಕೊತ್ತಾಯ ಮಂಡಿಸಿತ್ತು.

ಇತ್ತೀಚಿಗೆ ಏಕ ಪಿಂಚಣಿ ವಿಷಯದಲ್ಲಿ ಪಕ್ಷಾತೀತವಾಗಿ ಧ್ವನಿಗಳು ಹೆಚ್ಚುತ್ತಿವೆ. ಒಬ್ಬ ಶಾಸಕನಿಗೆ ಒಂದೇ ಪಿಂಚಣಿ ನೀಡಬೇಕೆಂದು ಬಿಜೆಪಿಯ ಸದಸ್ಯರು ಸಹ ಒತ್ತಾಯಿಸಿದ್ದಾರೆ. ಪಂಜಾಬ್ ವಿಧಾನಸಭೆಯ ಚುನಾಯಿತ ಮತ್ತು ಮಾಜಿ ಪ್ರತಿನಿಧಿಗಳಾದ ಪ್ರಕಾಶ್ ಸಿಂಗ್ ಬಾದಲ್, ಜಸ್ವಂತ್ ಸಿಂಗ್ ಮುಂತಾದವರು ಪಿಂಚಣಿಗಳನ್ನು ತ್ಯಜಿಸಲು ನಿರ್ಧರಿಸಿದ್ದಾರೆ ಮತ್ತು ಬದಲಿಗೆ ಈ ಮೊತ್ತವನ್ನು ಜನರ ಕಲ್ಯಾಣಕ್ಕಾಗಿ ಬಳಸುವಂತೆ ರಾಜ್ಯ ಸರ್ಕಾರವನ್ನು ವಿನಂತಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಪಂಜಾಬ್‌ನ ಎಎಪಿ ಸರ್ಕಾರವು ಮಾಜಿ ಶಾಸಕರು ಮತ್ತು ಮಂತ್ರಿಗಳಿಗೆ ಪಿಂಚಣಿಯನ್ನು ನಿಷೇಧಿಸಿಲ್ಲ ಆದರೆ ‘ಒಬ್ಬ ಶಾಸಕರಿಗೆ ಒಂದು ಪಿಂಚಣಿ’ ಕುರಿತು ಚಿಂತನೆಯನ್ನು ನಡೆಸಿದೆ. ಆದರೆ ಅದನ್ನು ತಿರುಚಿ ಪಂಜಾಬ್‌ನ ಎಎಪಿ ಸರ್ಕಾರವು ಮಾಜಿ ಶಾಸಕ ಮತ್ತು ಮಾಜಿ ಸಚಿವರಿಗೆ ಪಿಂಚಣಿಯನ್ನು ರದ್ದು ಮಾಡಲಾಗಿದೆ ಎಂದು ಸುಳ್ಳು ಸುದ್ದಿಯನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿರುವುದು ಸುಳ್ಳು ಪ್ರತಿಪಾದನೆ.


ಗಮನಿಸಿ: ನಿಮ್ಮ ಸುತ್ತಮುತ್ತ ಮತ್ತು ನಿಮ್ಮ ವಾಟ್ಸಪ್ ಗುಂಪುಗಳಲ್ಲಿ ಸುಳ್ಳು ಸುದ್ದಿಗಳು ಕಂಡು ಬಂದಲ್ಲಿ ensuddi.com  ವೆಬ್‌ಸೈಟ್‌ ಅನ್ನು ಸಂಪರ್ಕಿಸಿ ensuddii@gmail.com


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights