ಫ್ಯಾಕ್ಟ್‌ಚೆಕ್: ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಭಾರತ ದಿವಾಳಿಯಾಗುತ್ತದೆ ಎಂದು ಬರಾಕ್ ಒಬಾಮ ಹೇಳಿದ್ದು ನಿಜವೆ?

ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ನರೇಂದ್ರ ಮೋದಿಯವರು ಮತ್ತೊಮ್ಮೆ ಭಾರತದ ಪ್ರಧಾನಿಯಾದರೆ ಭಾರತ ದಿವಾಳಿಯಾಗುವುದು ನಿಶ್ಚಿತ ಎಂದು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಹೇಳಿಕೆ ನೀಡಿದಾರೆ ಎಂದು ಪೋಸ್ಟರ್‌ನಲ್ಲಿ ಹೇಳಲಾಗಿದೆ. ಭಾರತದ ಪ್ರಧಾನಿಯೊಬ್ಬರ ಬಗ್ಗೆ ಅಮೆರಿಕಾದ ಮಾಜಿ ಅಧ್ಯಕ್ಷರೊಬ್ಬರು ಹೀಗೆ ಹೇಳಲು ಸಾಧ್ಯವಾ? ಸದ್ಯ ಪೋಸ್ಟ್‌ರ್‌ನಲ್ಲಿ ಹೇಳಲಾಗಿರುವ ಹೇಳಿಕೆಯ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ರ್‌ನ ಕೀ ವರ್ಡ್ ಬಳಸಿಕೊಂಡು ಗೂಗಲ್ ಕೀ ವರ್ಡ್ ಸರ್ಚ್ ಮಾಡಿದಾಗ ಅಮೆರಿಕಾದ ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮ ಆ ರೀತಿ ಹೇಳಿಕೆ ನೀಡಿರುವ ಯಾವುದೇ ವರದಿಗಳು ಲಭ್ಯವಾಗಿಲ್ಲ. ಒಂದು ವೇಳೆ ಒಬಾಮ ನರೇಂದ್ರ ಮೋದಿಯವರ ಕುರಿತು ಹೇಳಿಕೆ ನೀಡಿದ್ದು ನಿಜವೇ ಆಗಿದ್ದರೆ ಅದು ಅಂತರಾಷ್ಟ್ರೀಯ ಮಟ್ಟದ ಸುದ್ದಿ ಆಗಬೇಕಿತ್ತು. ಆದರೆ ಎಲ್ಲಿಯೂ ವರದಿಯಾದ ಮಾಹಿತಿ ಲಭ್ಯವಾಗಿಲ್ಲ.

2015 ರಲ್ಲಿ ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಗಿನ ಅಮೆರಿಕಾದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಒಬಾಮಾ ಮತ್ತು ಮೋದಿಯವರ ನಡುವೆ ಉತ್ತಮ ಸಂಬಂಧವೂ ಇತ್ತು, ಗುಜರಾತ್ ನರಮೇಧ ಹಿನ್ನಲೆಯಲ್ಲಿ ಆಗ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು  ಯುಎಸ್‌ಎ ವೀಸಾವನ್ನ ನಿರಾಕರಣೆ ಮಾಡಿತ್ತು ನಂತರ ಅವರು ಪ್ರಧಾನಿ ಹುದ್ದೆ ಅಲಂಕರಿಸಿದಾಗ ಅಮೆರಿಕಾ ಪ್ರವಾಸಕ್ಕೆ ಅವಕಾಶ ಕಲ್ಪಿಸಿ ವೀಸಾ ನೀಡಿತ್ತು. ಈ ಸಂದರ್ಭದಲ್ಲಿ ಅಮೆರಿಕಾದ ಅಧ್ಯಕ್ಷರಾಗಿದ್ದದ್ದು ಬರಾಕ್ ಒಬಾಮಾ ಅವರೇ ಎಂಬುದು ಗಮನಾರ್ಹ.

ಆದರೆ 2020ರಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆದಾಗ ಬರಾಕ್ ಒಬಾಮ ಡೆಮಾಕ್ರಟಿಕ್ ಪಕ್ಷದಲ್ಲಿದ್ದರು. ಆ ಸಂದರ್ಭದಲ್ಲಿ ಅಮೆರಿಕಕ್ಕೆ ತೆರಳಿದ್ದ ಮೋದಿಯವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೋಲಾಂಡ್ ಟ್ರಂಪ್ ಪರ ಬಹಿರಂಗವಾಗಿ ಮತ ಯಾಚಿಸಿದ್ದರು. ಅಬ್‌ಕಿ ಬಾರ್ ಟ್ರಂಪ್ ಸರ್ಕಾರ್ ಎಂದು ಘೋಷಣೆ ಕೂಗಿದ್ದರು. ಆದರೂ ಅಲ್ಲಿನ ಜನತೆ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್‌ ರವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ.

ಭಾರತದ ನೆರಯ ರಾಷ್ಟ್ರ ಶ್ರೀಲಂಕಾ ದಿವಾಳಿಯತ್ತ ಸಾಗಿದೆ. ಅಲ್ಲಿನ ಜನತೆ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಭಾರತವೂ ಬೆಲೆ ಏರಿಕೆ, ಹಣದುಬ್ಬರ, ಆರ್ಥಿಕ ಕುಸಿತದಿಂದ ಬಳಲುತ್ತಿದೆ. ಈ ಕುರಿತು ಆರ್ಥಿಕ ತಜ್ಞರು ಎಚ್ಚರಿಸುತ್ತಿದ್ದಾರೆ. ಆದರೆ  ಅಮೆರಿಕಾದ ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮ ಮುಂದಿನ ಚುನಾವಣೆಯಲ್ಲಿ ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದರೆ ಭಾರತ ದಿವಾಳಿಯಾಗುತ್ತದೆ ಎಂಬ ಹೇಳಿಕೆ ನೀಡಿದ್ದಾರೆ ಎಂಬುದು ಸುಳ್ಳು.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಒಂದು ಮರ ಉಳಿಸಲು ಗುತ್ತಿಗೆದಾರ ರಸ್ತೆಯನ್ನೆ ತಿರುಗಿಸಿದ ಘಟನೆ! ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights