ಫ್ಯಾಕ್ಟ್ಚೆಕ್: ಹಿಂದೂ ಸಮಾಧಿಗಳ ಮೇಲೆ SDPI ಎಂದು ಬರೆಯಲಾಗಿದೆ ಎಂಬ ಸುಳ್ಳು ಸುದ್ದಿ ಪ್ರಸಾರ ಮಾಡಿದ ಪಬ್ಲಿಕ್ ಟಿವಿ
ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಗಣಿಗುಂಟೆಪಾಳ್ಯದಲ್ಲಿ ಇರುವ ಬಲಿಜಿಗ ಸಮುದಾಯದ ಸ್ಮಶಾನದಲ್ಲಿ ಸಮಾಧಿ ಮತ್ತು ನಾಮಫಲಕಗಳನ್ನು ವಿರೂಪಗೊಳಿಸಲಾಗಿದ್ದು, ಕೆಲವು ಸಮಾಧಿಗಳ ಮೇಲೆ SDPI ಎಂದು ಬರೆಯಲಾಗಿದೆ ಪಬ್ಲಿಕ್ ಟಿವಿ ಎಂದು ಸೇರಿದಂತೆ ಕೆಲವು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಸ್ಮಶಾನದಲ್ಲಿ 200 ಕ್ಕೂ ಹೆಚ್ಚು ಸಮಾಧಿಗಳಿದ್ದು, ಈ ಪೈಕಿ 30 ಕ್ಕೂ ಹೆಚ್ಚು ಸಮಾಧಿಗಳ ನಾಮಫಲಕ ಹಾಗೂ ಭಾವಚಿತ್ರಗಳ ಮೇಲೆ ಕಿಡಿಗೇಡಿಗಳು SDPI ಎಂದು ಬರೆದು ವಿಕೃತಿ ಮೆರೆದಿದ್ದಾರೆ. ಸಮಾಧಿಗಳನ್ನು ವಿರೂಪಗೊಳಿಸಿ, ಪೂರ್ವಜರಿಗೆ ಅಗೌರವ ತೋರಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಮುಖ್ಯವಾಹಿನಿ ಹಾಗೂ ವೆಬ್ ಪೋರ್ಟಲ್ಗಳು ವರದಿ ಮಾಡಿವೆ.
ಈ ವರದಿಗಳ ಆಧಾರದ ಮೇಲೆ ಸಮಾಧಿಗಳನ್ನು ವಿರೂಪಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ “ಶ್ರೀರಾಮ ಯುವಕ ರೈತ ಸಂಘ” ಮುಳಬಾಗಿಲು, ನಗರ ಠಾಣೆಯ ಪೊಲೀಸ್ ಸಬ್ಇನ್ಸ್ಪೆಕ್ಟರ್ ಅವರಿಗೆ ದೂರು ನೀಡಿದ್ದು, ಸಮಾಧಿಗಳ ಮೇಲೆ SDPI ಎಂದು ಬರೆದಿರುವ ಕಿಡಿಗೇಡಿಗಳನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ಕ್ರಮ ಜರುಗಿಬೇಕೆಂದು ದೂರು ದಾಖಲಿಸಿದ್ದಾರೆ.

ಪಬ್ಲಿಕ್ ಟಿವಿ ಡಿಜಿಟಲ್ ಪೋರ್ಟಲ್ ಮಾಡಿರುವ ಸುದ್ದಿಯನ್ನು ಕೆಲವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ರಾಜ್ಯದ ರಾಜಕೀಯ ಪಕ್ಷಗಳಲ್ಲಿ ಒಂದಾಗ SDPI ಕಾರ್ಯಕರ್ತರು ಹೀಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮಾಧ್ಯಮಗಳು ಸಹ SDPI ಅನ್ನು ಗುರಿಯಾಗಿಟ್ಟುಕೊಂಡು ಕಾರ್ಯಕ್ರಮ ಪ್ರಸಾರ ಮಾಡಿವೆ. ಅವನ್ನು ಇಲ್ಲಿ ನೋಡಬಹುದು. ಮುಳಬಾಗಿಲು ನಗರದ ಗಣಿಗುಂಟೆಪಾಳ್ಯದ ಹಿಂದೂ ರುದ್ರಭೂಮಿಯ ಸಮಾಧಿಗಳನ್ನು ವಿರೂಪಗೊಳಿಸಿ SDPI ಎಂದು ಬರೆದಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ವರದಿ ಮಾಡುವಂತೆ ಏನ್ಸುದ್ದಿ.ಕಾಂಗೆ ಹಲವು ಮನವಿಗಳು ಬಂದಿದ್ದವು.
ಫ್ಯಾಕ್ಟ್ಚೆಕ್ :
ಘಟನೆ ಬಗ್ಗೆ ಸ್ಥಳಿಯರಿಂದ ಮಾಹಿತಿ
ಮುಳಬಾಗಿಲಿನ ಸ್ಮಶಾನದಲ್ಲಿ ಸಮಾಧಿಗಳನ್ನು ವಿರೂಪಗೊಳಿಸಿದ್ದಾರೆ ಎಂಬ ಮಾಧ್ಯಮಗಳಲ್ಲಿ ಬಂದ ವರದಿಗಳು ಮತ್ತು ಸಂಘಟನೆ ನೀಡಿರುವ ದೂರನ್ನು ಆಧರಿಸಿ ಫ್ಯಾಕ್ಟ್ಚೆಕ್ ಮಾಡುವ ಸಲುವಾಗಿ Ensuddi.com ಮುಳಬಾಗಿಲಿನಲ್ಲಿ ಹಲವು ವರ್ಷಗಳಿಂದ ವಾಸವಾಗಿರುವ ನಾಗರಾಜ್ ಎಂಬುವವರನ್ನು ಸಂಪರ್ಕಿಸಿತು. ಅವರು ಖುದ್ದು ಗಣಿಗುಂಟೆಪಾಳ್ಯದ ಹಿಂದೂ ರುದ್ರಭೂಮಿಗೆ ಭೇಟಿ ನೀಡಿದ್ದಾರೆ. ನಂತರ ಏನ್ ಸುದ್ದಿ ಜೊತೆ ಮಾತನಾಡಿ “ಪತ್ರಿಕೆಗಳಲ್ಲಿ ಸುದ್ದಿ ಪ್ರಸಾರ ಆಗಿರುವಂತೆ ಸ್ಮಶಾನದಲ್ಲಿ ಕೆಲವು ಸಮಾಧಿಗಳ ಮೇಲೆ ಬಣ್ಣ ಬಳಿದಿರುವುದು ನಿಜ, ಆದರೆ SDPI ಎಂದು ಬರೆದಿಲ್ಲ ಬದಲಿಗೆ SDP ಎಂದು ಬರೆಯಲಾಗಿದೆ. ಸುದ್ದಿಯನ್ನು ವರದಿ ಮಾಡಿರುವ ಮೀಡಿಯಾಗಳು ಯಾಕೆ ಅದನ್ನು SDPI ಎಂದು ಬರೆಯಲಾಗಿದೆ ಎಂಬ ವರದಿ ಮಾಡಿವೆ ? ಎಂಬುದು ಗೊತ್ತಿಲ್ಲ ಎಂದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ” ಶ್ರೀರಾಮ ಯುವಕ ರೈತ ಸಂಘ” ದ ಸದಸ್ಯರು ನೀಡಿರುವ ದೂರಿನಲ್ಲೂ SDPI ಎಂದು ಬರೆದಿದ್ದಾರೆ ಎಂಬ ಉಲ್ಲೇಖ ಇರುವ ಬಗ್ಗೆ ವಿಚಾರಿಸಿದಾಗ, ಸಂಘದ ಬಗ್ಗೆ ನನಗೆ ಮಾಹಿತಿ ಇಲ್ಲ, ಆದರೆ ಸಮಾಧಿಗಳ ಮೇಲೆ ಎಲ್ಲಿಯೂ SDPI ಎಂದು ಬರೆದಿಲ್ಲ. ಕೇವಲ SDP ಎಂದಷ್ಟೆ ಬರೆಯಲಾಗಿದೆ, ಅದಕ್ಕೆ ಏನು ಅರ್ಥ ಸಹ ಗೊತ್ತಿಲ್ಲ ಎಂದರು.
ಈ ಸಂಘದವರು ಇಂತಹ ವಿಚಾರಗಳಿಗೆ ಹೆಚ್ಚು ಮಹತ್ವ ಕೊಡದೆ, ಹಿಂದೂ ರುದ್ರಭೂಮಿಯ ಸುತ್ತಲು ಬೆಳೆದು ನಿಂತಿರುವ ಬೇಲಿ, ಗಿಡ ಗುಂಟೆಗಳನ್ನು ತೆಗೆದು ಸ್ವಚ್ಚಮಾಡುವ ಕೆಲಸಕ್ಕೆ ಮುಂದಾಗಲಿ. ಸಮಾಧಿಗಳ ಮೇಲೆ ಬಳಿದಿರುವ ಬಣ್ಣ ಮತ್ತು SDP ಯನ್ನು ನೋಡಿದವರಿಗೆ, ಸ್ಮಶಾನದ ಸುತ್ತಲು ಬೆಳೆದಿರುವ ಕಳೆ, ಬೇಲಿಗಿಡಗಳು, ಅನಗತ್ಯ ವಸ್ತುಗಳು ಕಾಣಲಿಲ್ಲವೆ? ಎನ್ನುತ್ತಾರೆ. ಹಲವು ವರ್ಷಗಳಿಂದ ನಾನು ಮುಳಬಾಗಿಲಿನಲ್ಲಿ ವಾಸವಾಗಿದ್ದೇನೆ ಯಾವಾಗಲೂ ಈ ರೀತಿ ಘಟನೆ ನಡೆದಿಲ್ಲ. ಇಲ್ಲಿ ಎಲ್ಲಾ ಧರ್ಮದವರು ಸಾಮರಸ್ಯದಿಂದ ಪರಸ್ಪರ ಅಣ್ಣತಮ್ಮಂದಿರಂತೆ ಇದ್ದೇವೆ ಎನ್ನುತ್ತಾರೆ ನಾಗರಾಜ್.
ಯುವಕ ರೈತ ಸಂಘ ನೀಡಿರುವ ದೂರಿನಲ್ಲಿ ದೂರುದಾರರ ಸಹಿ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿದ್ದು M.ನಾಗೇಶ್ ನಗರಸಭಾ ಸದಸ್ಯರು ಎಂದು ಬರೆಯಲಾಗಿದೆ. ಮತ್ತಷ್ಟು ಮಾಹಿತಿ ಪಡೆಯಲು ನಗರಸಭಾ ಸದಸ್ಯರಾದ ನಾಗೇಶ್ ಎಂಬುವವರಿಗೆ ಕರೆ ಮಾಡಿ ಮಾತನಾಡಲು ಪ್ರಯತ್ನಿಸಿದರೂ ನಾಗೇಶ್ ಎಂಬುವವರು ಕರೆಯನ್ನು ಸ್ವೀಕರಿಸಲಿಲ್ಲ.

ಕೋಲಾರ ನಗರದ ಹೃದಯ ಭಾಗದಲ್ಲಿರುವ ಕ್ಲಾಕ್ ಟವರ್ ವಿಚಾರವಾಗಿ ಸಂಸದರಾದ ಮುನಿಸ್ವಾಮಿಯವರು ನಡೆದುಕೊಂಡ ರೀತಿ ಸಾರ್ವಜನಿಕ ವಲಯದಲ್ಲಿ ಹೆಚ್ಚು ಟೀಕೆಗೆ ಒಳಗಾಗಿತ್ತು, 90ರ ದಶಕದಲ್ಲಿ ಕೋಮುಸಂಘರ್ಷದ ಘಟನೆಗಳು ನಡೆದಿದ್ದು ಹೊರತುಪಡಿಸಿ ಎಲ್ಲರೂ ಅನ್ಯೂನ್ಯವಾಗಿ ಇದ್ದೇವೆ. ಆದರೆ ಸಂಸದರಾದ ಮುನಿಸ್ವಾಮಿ ಹಿಂದೂ ಮುಸ್ಲಿಂ ಸಮುದಾಯಗಳ ಸೂಕ್ಷ್ಮ ವಿಚಾರಗಳನ್ನು ಮುನ್ನಲೆಗೆ ತಂದು ರಾಜಕೀಯ ಮಾಡುತ್ತಿದ್ದಾರೆ, ಮುಳಬಾಗಿಲ ಗಣಿಗುಂಟೆಪಾಳ್ಯದಲ್ಲಿ ಸಮಾಧಿಗಳನ್ನು ವಿರೂಪಗುಳಿಸಿರುವ ಘಟನೆಯು ಕೂಡ ಕೋಮುಪ್ರಚೋದನೆಯ ಭಾಗವೇ ಇರಬೇಕು ಎನ್ನುತ್ತಾರೆ ಕೋಲಾರದ ಜನಪರ ಚಳುವಳಿಯಲ್ಲಿ ತೊಡಗಿಸಿಕೊಂಡಿರುವ ಅಂಬರೀಶ್.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಳಬಾಗಿಲು ನಗರ ಪೊಲೀಸ್ ಠಾಣೆಯ ಅಧಿಕಾರಿಗಳನ್ನುಸಂಪರ್ಕಿಸಿದಾಗ, “ಘಟನೆಗೆ ಸಂಬಂಧಿಸಿದಂತೆ ದೂರು ಬಂದಿರುವುದು ನಿಜ. ಆದರೆ ಸಮಾಧಿಗಳ ಮೇಲೆ SDPI ಎಂದು ಬರೆದಿಲ್ಲ. ಕೇವಲ SDP ಎಂದು ಮಾತ್ರ ಬರೆಯಲಾಗಿದೆ, ಇದೊಂದು ಸೂಕ್ಷ್ಮ ವಿಚಾರವಾಗಿರುವುದರಿಂದ ದೂರು ನೀಡಿದ್ದ ಸಂಘದ ಸದಸ್ಯರು ಮತ್ತು ಸ್ಥಳೀಯರೊಂದಿಗೆ ಮಾತನಾಡಿ ಎಲ್ಲರನ್ನು ಸಮಾಧಾನಪಡಿಸಿ ಇದಕ್ಕೆ ಹೆಚ್ಚಿನ ಮಹತ್ವ ಕೊಡಬೇಡಿ ಎಂದು ಹೇಳಲಾಗಿದೆ” ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ ಮುಳಬಾಗಿಲು ನಗರದ ಗಣಿಗುಂಟೆ ಪಾಳ್ಯದಲ್ಲಿ ಹಿಂದೂ ಸ್ಮಶಾನದಲ್ಲಿ ಸಮಾಧಿಗಳಿಗೆ ಬಣ್ಣ ಬಳಿದು ವಿರೂಪಗೊಳಿಸುವುದರ ಜೊತೆಗೆ SDPI ಎಂದು ಬರೆಯಲಾಗಿದೆ ಎಂಬುದು ಅರ್ಧ ಸತ್ಯ, ಸಮಾಧಿಗಳ ಮೇಲೆ SDP ಎಂದಷ್ಟೆ ಬರೆಯಲಾಗಿದೆ. ಅಲ್ಲದೆ ಘಟನೆಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ದೂರು ನೀಡಿದ್ದ ಸಂಘದವರಿಗೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಮಾಧಾನ ಹೇಳಿ ಕಳುಹಿಸಲಾಗಿದೆ. ಹಾಗಾಗಿ ಪ್ರಕರಣದಲ್ಲಿ ಯಾವದೇ ಕೋಮು ದ್ವೇಷದ ಹಿನ್ನಲೆ ಇಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ ಕೆಲ ಕನ್ನಡ ವಾಹಿನಿಗಳು ಪೂರ್ವಾಗ್ರಹದಿಂದ ತಪ್ಪು ವರಿದಿ ಮಾಡಿವೆ.
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಪಶ್ಚಿಮ ಬಂಗಾಳದ 2010ರ ನಕ್ಸಲ್ ಹತ್ಯೆಯ ಘಟನೆಯನ್ನು ಛತ್ತೀಸ್ಘಢದ ಇತ್ತೀಚಿನದ್ದು ಎಂದು ಹಂಚಿಕೆ

