ಫ್ಯಾಕ್ಟ್‌ಚೆಕ್: ಆಪ್ ಅಭಿವೃದ್ದಿಪಡಿಸಿದ ದೆಹಲಿಯ ಸರ್ಕಾರಿ ಶಾಲೆ ಬಗ್ಗೆ ಸುಳ್ಳು ಹೇಳಿದ BJP ವಕ್ತಾರ

ದೆಹಲಿಯ ಆಪ್ ಸರ್ಕಾರವು ಸಾರ್ವಜಿನಿಕ ಶಿಕ್ಷಣ ಮತ್ತು ಆರೋಗ್ಯದ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದೆ ಎಂದು ಶ್ಲಾಘಿಸಿ ಅಮೆರಿಕ ನ್ಯೂಯಾರ್ಕ್ ಟೈಮ್ಸ್ ಮತ್ತು ಖಲೀಜ ಟೈಮ್ಸ್‌ ನಂತಹ ದೈತ್ಯ ಪತ್ರಿಕೆಗಳು ವರದಿ ಮಾಡಿವೆ. ಆದರೆ ‘ದೆಹಲಿಯಲ್ಲಿ AAP ಸರ್ಕಾರವು ಖಾಸಗಿ ಶಾಲೆಯ ಫೋಟೋವನ್ನು ಪತ್ರಿಕೆಗಳಿಗೆ ಕಳಿಸಿ ಸರ್ಕಾರಿ ಶಾಲೆಯದ್ದೆಂದು ಹೇಳಿಕೊಳ್ಳುತ್ತಿದೆ. ದೆಹಲಿಯ ಮದರ್ ಮೇರಿಸ್ ಖಾಸಗಿ ಶಾಲೆಯ ಚಿತ್ರವನ್ನು ನ್ಯೂಯಾರ್ಕ್‌ ಟೈಮ್ಸ್‌ ಮತ್ತು ಖಲೀಜ್ ಟೈಮ್ಸ್‌ನ ಲೇಖನದಲ್ಲಿ ಸರ್ಕಾರಿ ಶಾಲೆಯೆಂದು ಬಳಸಲಾಗಿದೆ. ಅರವಿಂದ ಕೇಜ್ರಿವಾಲ್‌ ಮತ್ತು ಮನೀಷ್‌ ಸಿಸೋಡಿಯಾ ಇಂತಹ ಸುಳ್ಳನ್ನು ದೇಶ ಮತ್ತು ವಿದೇಶದಲ್ಲೂ ಮಾರಾಟಕ್ಕಿಟ್ಟಿದ್ದಾರೆ’ ಎಂದು BJP ನಾಯಕ ಕಪಿಲ್ ಮಿಶ್ರಾ ಟ್ವೀಟ್ ಮಾಡಿದ್ದಾರೆ. ಜತೆಗೆ, ದೆಹಲಿಯ ಮಯೂರ್ ವಿಹಾರ್‌ನಲ್ಲಿರುವ ಮದರ್‌ ಮೇರಿಸ್‌ ಶಾಲೆಯ ವಿದ್ಯಾರ್ಥಿನಿಯರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಬಿಜೆಪಿಯ ಹಲವು ನಾಯಕರು ಇದನ್ನು ಮರುಟ್ವೀಟ್‌ ಮಾಡಿದ್ದಾರೆ ಮತ್ತು ಎಎಪಿ ಸರ್ಕಾರವನ್ನು ಟೀಕಿಸಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ದೆಹಲಿಯ AAP ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಹೇಳಿರುವ ಕಪಿಲ್ ಮಿಶ್ರಾ ಅವರು ಉಲ್ಲೇಖಿಸಿದ ಮದರ್ ಮೇರಿ ಶಾಲೆಯ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪರಿಶೀಲಿಸಲಾಗಿದ್ದು, ಶಾಲೆಯು ದೆಹಲಿಯ ಮಯೂರ್ ವಿಹಾರ್‌ನಲ್ಲಿದೆ. ಇದು ವಿದ್ಯಾರ್ಥಿನಿಯರ ಶಾಲೆಯಾಗಿದ್ದು, ಇಲ್ಲು ಗಂಡು ಮಕ್ಕಳ ಪ್ರವೇಶಕ್ಕೆ ಅವಕಾಶವಿಲ್ಲದಿರುವುದು ಸ್ಪಷ್ಟವಾಗಿದೆ. ಆದರೆ ಖಲೀಜ ಟೈಮ್ಸ್‌ನಲ್ಲಿ ಪ್ರಕಟವಾದ ಚಿತ್ರದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರೂ ತರಗತಿಯಲ್ಲಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಅಲ್ಲದೆ ಕಪಿಲ್ ಮಿಶ್ರಾ ಹಂಚಿಕೊಂಡಿರುವ ಪೋಟೋದಲ್ಲಿ ವಿದ್ಯಾರ್ಥಿನಿಯರು ಧರಿಸಿರುವ ಸಮವಸ್ತ್ರದ ಬಣ್ಣದಲ್ಲಿ ಬದಲಾವಣೆಗಳಿವೆ ಎಂಬುದು ತಿಳಿಯುತ್ತದೆ.

ಕಪಿಲ್ ಮಿಶ್ರಾ ಹೇಳಿದ್ದು ಸುಳ್ಳು ಸುದ್ದಿ ಎಂದು ಆಲ್ಟ್‌ ನ್ಯೂಸ್‌ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ಮದರ್ ಮೇರಿಸ್ ಶಾಲೆಯು ಬಾಲಕಿಯರ ಶಾಲೆ. ಆದರೆ ನ್ಯೂಯಾರ್ಕ್‌ ಟೈಮ್ಸ್‌ ಮತ್ತು ಖಲೀಜ್‌ ಟೈಮ್ಸ್‌ನಲ್ಲಿ ಪ್ರಕಟವಾಗಿರುವ ಚಿತ್ರದಲ್ಲಿ ವಿದ್ಯಾರ್ಥಿನಿಯರ ಜತೆ ವಿದ್ಯಾರ್ಥಿಗಳೂ ಇದ್ದಾರೆ. ಅಲ್ಲದೆ, ಮದರ್ ಮೇರಿಸ್ ಶಾಲೆಯ ವಿದ್ಯಾರ್ಥಿನಿಯರ ಸಮವಸ್ತ್ರದ ಕಾಲರ್‌ ಕಡು ನೇರಳೆ ಬಣ್ಣದ್ದು. ಆದರೆ, ಪತ್ರಿಕೆಗಳಲ್ಲಿ ಪ್ರಕಟವಾದ ಚಿತ್ರದಲ್ಲಿ ವಿದ್ಯಾರ್ಥಿನಿಯರು ಧರಿಸಿರುವ ಸಮವಸ್ತ್ರದ ಕಾಲರ್ ತಿಳಿ ನೇರಳೆ ಬಣ್ಣದ್ದು. ಬಿಜೆಪಿ ನಾಯಕರು ಬೇರೆ ಶಾಲೆಯ ಚಿತ್ರಗಳನ್ನು ಬಳಸಿಕೊಂಡು, ಸುಳ್ಳು ಮಾಹಿತಿ ಹಂಚಿಕೊಂಡಿದ್ದಾರೆ’ ಎಂದು ಆಲ್ಟ್‌ ನ್ಯೂಸ್‌ ವಿವರಿಸಿದೆ.

 

ಈ ಚಿತ್ರವನ್ನು ಸೆರೆಹಿಡಿದ ಫೋಟೋ ಜರ್ನಲಿಸ್ಟ್ ಸೌಮ್ಯಾ ಖಂಡೇಲ್ವಾಲ್, ಖಲೀಜ್ ಟೈಮ್ಸ್‌ನಲ್ಲಿ ಪ್ರಕಟವಾದ ಫೋಟೋ ದೆಹಲಿಯ ಕಕ್ರೋಲಾದಲ್ಲಿರುವ ಸರ್ವೋದಯ ವಿದ್ಯಾಲಯದದ್ದು ಎಂದು ಖಚಿತಪಡಿಸಿದ್ದಾರೆ. ಜುಲೈ 5 ರಂದು ನ್ಯೂಯಾರ್ಕ್ ಟೈಮ್ಸ್ ನಿಯೋಜನೆಯಲ್ಲಿದ್ದಾಗ ಅವರು ಚಿತ್ರವನ್ನು ಕ್ಲಿಕ್ಕಿಸಿದ್ದರು. ಈ ಚಿತ್ರವನ್ನು ಈಗ ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ ಬಳಸಲಾಗಿದೆ. ಇದರೊಂದಿಗೆ ಸೌಮ್ಯಾ ಈ ಚಿತ್ರದ ಮೆಟಾಡೇಟಾವನ್ನು ದಿ ಲಾಲಂಟಾಪ್ ಜೊತೆ ಹಂಚಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಖಲೀಜ್ ಟೈಮ್ಸ್‌ನಲ್ಲಿ ಪ್ರಕಟವಾದ ದೆಹಲಿಯ ಸರ್ಕಾರಿ ಶಾಲೆಯ ಚಿತ್ರವನ್ನು ಮಯೂರ್ ವಿಹಾರ್‌ನಲ್ಲಿರುವ ಖಾಸಗಿ ಶಾಲೆಯಾದ ಮದರ್ ಮೇರಿ ಶಾಲೆ ಎಂದು ಬಿಜೆಪಿ ನಾಯಕರು ಸುಳ್ಳು ಹೇಳಿದ್ದಾರೆ. ಆದರೆ ಅದು ದೆಹಲಿ ಸರ್ಕಾರ ಅಭಿವೃದ್ದಿಪಡಿಸಿದ ಸರ್ಕಾರಿ ಶಾಲೆಯಾಗಿದೆ. ಇದಲ್ಲದೆ, ಮದರ್ ಮೇರಿಸ್ ವಿದ್ಯಾರ್ಥಿನಿಯರ ಶಾಲೆ. ಆದರೆ ಖಲೀಜ್ ಟೈಮ್ಸ್ ವರದಿಯಲ್ಲಿರುವ ಚಿತ್ರದಲ್ಲಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ತರಗತಿಯಲ್ಲಿ ಕುಳಿತಿರುವುದನ್ನು ಕಾಣಬಹುದು, ಈ ಎಲ್ಲ ಆಧಾರಗಳು ಬಿಜೆಪಿ ನಾಯಕರ ಹೇಳಿಕೆಯನ್ನು ತಳ್ಳಿಹಾಕುತ್ತದೆ. ಹಾಗಾಗಿ ಪೋಸ್ಟ್‌ನಲ್ಲಿ BJP ಯವರು AAP ಸರ್ಕಾರದ ವಿರುದ್ದ ಮಾಡಿರುವ ಆಪಾಧನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಪಾಕ್‌ನಲ್ಲಿ ಪ್ರವಾಹ ಎಂದು, ಜಪಾನ್‌ನ ಹಳೆಯ ವಿಡಿಯೊ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights