ಫ್ಯಾಕ್ಟ್‌ಚೆಕ್ : ಸೋಂಕಿತ ಪ್ರಾಣಿಯ ಹಾಲು ಮತ್ತು ಮಾಂಸ ಸೇವಿಸಿದರೆ ಮನುಷ್ಯನಿಗೆ ಸೋಂಕು ಹರಡುವುದೆ ? ಈ ಸ್ಟೋರಿ ಓದಿ
ಕೊವೀಡ್ ಭೀತಿಯಿಂದ ಕಂಗಾಲಾಗಿದ್ದ ಜನ, ಈಗ ಜಾನುವಾರುಗಳಿಗೆ ತಗುಲಿರುವ ಮಾರಕ ಖಾಯಿಲೆಯ ಹಿನ್ನೆಲೆ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ದೇಶದಲ್ಲಿ ಜಾನುವಾರುಗಳನ್ನು ಕಾಡುತ್ತಿರುವ ಈ ಚರ್ಮ ರೋಗ ಮನುಷ್ಯರನ್ನು ಬಿಡದಂತೆ ಕಾಡುತ್ತಿದೆ.
ಹಲವು ಪ್ರಾಣಿ ಮತ್ತು ಪಕ್ಷಿಗಳಲ್ಲಿ ಚರ್ಮ ರೋಗದಂತಹ ಕಾಯಿಲೆ ಕಾಣಿಸಿಕೊಂಡಿದ್ದು, ಸೋಂಕಿತ ಪ್ರಾಣಿಗಳ ಹಾಲು/ಮಾಂಸವನ್ನು ಸೇವಿಸಿದ ನಂತರ ಜನರು ಭಯಾನಕ ಚರ್ಮದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಫೋಟೋಗಳು ಲಂಪಿ ಸ್ಕಿನ್ ಡಿಸೀಸ್ ಗೆ ಸಂಬಂಧಿಸಿದ ಬೇರೆ ಬೇರೆ ಫೋಟೋಗಳನ್ನು ಕೊಲಾಜ್ ಮಾಡಿ ಪೋಸ್ಟ್ ಮಾಡಲಾಗಿದೆ. ಹಾಗಿದ್ದರೆ ಈ ರೋಗಕ್ಕೆ ತುತ್ತಾದ ಸೋಂಕಿತ ಪ್ರಾಣಿಗಳ ಹಾಲು ಅಥವಾ ಮಾಂಸ ಸೇವಿಸಿದರೆ ಸೋಂಕು ಹರಡುತ್ತದೆಯೇ ? ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
FAO ಪ್ರಕಾರ, ಲಂಪಿ ಸ್ಕಿನ್ ಡಿಸೀಸ್ (LSD) ಝೂನೋಟಿಕ್ ಅಲ್ಲದ ಕಾಯಿಲೆಯಾಗಿದೆ, ಅಂದರೆ ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದಿಲ್ಲ. ಆದರೂ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಚರ್ಮದ ಸೋಂಕಿನ ವ್ಯಕ್ತಿಯ ವೈರಲ್ ಫೋಟೋ ಪಾಕಿಸ್ತಾನಕ್ಕೆ ಸೇರಿದೆ.
ಚರ್ಮದ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಯ ವೈರಲ್ ಚಿತ್ರಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಅದೇ ಫೋಟೋ ಮೇ 2022 ರಂದು ‘ಲಾಹೋರ್‌ನ ಜಿನ್ನಾ ಆಸ್ಪತ್ರೆಯಲ್ಲಿ ಮಂಕಿ ಪಾಕ್ಸ್ ಪ್ರಕರಣಗಳ’ ಹೆಸರಿನಲ್ಲಿ ದಾಖಲಾದ ವ್ಯಕ್ತಿಯೊಬ್ಬರ ಫೋಟೋ ಎಂದು ಟ್ವಿಟರ್ ಪೋಸ್ಟ್‌ನಲ್ಲಿ ಹೇಳಲಾಗಿದೆ.
⚠️ VISUALS
First two cases of #Monkeypox virus (MPV) detected in #Pakistan at the Jinnah Hospital in #Lahore; 100 plus cases detected Worldwide pic.twitter.com/ISHHr3vYQd
— DR. AMIT MANOHAR (@dramitmanohar) May 24, 2022
ಪೆಮ್ಫಿಗಸ್ ವಲ್ಗ್ಯಾರಿಸ್ ಮತ್ತು ಹರ್ಪಿಸ್ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಯ ಚಿತ್ರವಾಗಿದ್ದು, ಒಂದು ವಾರಗಳ ಕಾಲ ಅವರಿಗೆ ಚಿಕಿತ್ಸೆ ನೀಡಿ ನಂತರ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.

ಇದು ಲಂಪಿನು ಅಲ್ಲ ಮಂಕಿನೂ ಅಲ್ಲ :
ಈ ಪ್ರಕರಣಕ್ಕೆ ಸಂಬಂಧಿಸಿದ ವರದಿಗಳಿಗಾಗಿ ಸರ್ಚ್ ಮಾಡಿದಾಗ, ಮೇ 2022 ರಲ್ಲಿ ಜಿನ್ನಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರೊಂದಿಗೆ ಮಾಡಲಾದ ಸಂದರ್ಶನವೊಂದು ಲಭ್ಯವಾಗಿದೆ. ಈ ಸಂದರ್ಶನದ ಪ್ರಕಾರ, ರಂಜಾನ್‌ನ ಕೊನೆಯ ವಾರದಲ್ಲಿ ಪೆಮ್ಫಿಗಸ್ ವಲ್ಗ್ಯಾರಿಸ್ ಮತ್ತು ಹರ್ಪಿಸ್ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಯನ್ನು ಅವರ ಆಸ್ಪತ್ರೆಗೆ ದಾಖಲಿಸಲಾಯಿತು. ಒಂದು ವಾರದ ನಂತರ ಅವರಿಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ. ಪರೀಕ್ಷಾ ವರದಿಗಳಲ್ಲಿಯೂ ಮಂಗನ ಕಾಯಿಲೆಗೆ ಯಾವುದೇ ಸಂಬಂಧವಿಲ್ಲ. ಅಂದಿನಿಂದ, ಈ ಚಿತ್ರಗಳನ್ನು ಮಂಕಿ ಪಾಕ್ಸ್‌ನಿಂದ ಬಳಲುತ್ತಿರುವ ವ್ಯಕ್ತಿ ಎಂದು ಹಂಚಿಕೊಳ್ಳಲಾಗುತ್ತಿದೆ ಮತ್ತು ಈಗ LSD ಗೆ ಲಿಂಕ್ ಮಾಡಲಾಗಿದೆ. ಪಾಕಿಸ್ತಾನದ ಕೆಲ ವೈದ್ಯರು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾದ ಈ ತಪ್ಪು ಮಾಹಿತಿಯನ್ನು ನಿರಾಕರಿಸಿದ್ದಾರೆ.
2021 ರಲ್ಲಿ ಥೈಲ್ಯಾಂಡ್‌ನಲ್ಲಿ ಎಲ್‌ಎಸ್‌ಡಿ ಸೋಂಕಿತ ಮಾಂಸವನ್ನು ಸೇವಿಸಿದ ನಂತರ ಜನರು ಸಾಯುವ ಬಗ್ಗೆ ಇದೇ ರೀತಿಯ ವದಂತಿಗಳು ವೈರಲ್ ಆದಾಗ, ಆರೋಗ್ಯ ಅಧಿಕಾರಿಗಳು ಅಂತಹ ಪ್ರತಿಪಾದನೆ ಆಧಾರರಹಿತವೆಂದು ತಳ್ಳಿಹಾಕಿದರು. ಅಲ್ಲದೆ, LSD ಯಲ್ಲಿನ FAO ಕೈಪಿಡಿಯ ಪ್ರಕಾರ, LSD ಮನುಷ್ಯರ ಮೇಲೆ ಪರಿಣಾಮ ಬೀರುವುದಿಲ್ಲ ಏಕೆಂದರೆ ಅದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದಿಲ್ಲ. ಭಾರತದಲ್ಲಿಯೂ ಸಹ, ಮಾನವರಲ್ಲಿ LSD ಯ ಅಂತಹ ಯಾವುದೇ ಪ್ರಕರಣ ವರದಿಯಾಗಿಲ್ಲ.
ಚರ್ಮಗಂಟು (ಲಂಪಿ ಸ್ಕಿನ್ ಡಿಸಿಸ್) ಕಾಯಿಲೆ ಎಂದರೇನು?
ಈ ರೋಗವು ಕ್ಯಾಪ್ರಿಪಾಕ್ಸ್ ವೈರಸ್ ನಿಂದ ಉಂಟಾಗುತ್ತದೆ ಮತ್ತು ಇದು ಜನರ ಮೇಲೆ ಪರಿಣಾಮ ಬೀರುವುದಿಲ್ಲ. ಇದು ನೊಣಗಳು, ಸೊಳ್ಳೆಗಳು, ಹೇನುಗಳು ಮತ್ತು ಕಣಜಗಳ ಮೂಲಕ ಜಾನುವಾರುಗಳಲ್ಲಿ ಹರಡುತ್ತದೆ, ಇದರಿಂದ ಚರ್ಮದ ಮೇಲೆ ಗಂಟುಗಳು ರೂಪುಗೊಳ್ಳುತ್ತವೆ. ಹೆಚ್ಚಿನ ಜ್ವರ, ಕಡಿಮೆ ಹಾಲು ಉತ್ಪಾದನೆ, ಚರ್ಮದ ಗಂಟುಗಳು, ಹಸಿವಾಗದಿರುವುದು, ಹೆಚ್ಚಿದ ಮೂಗಿನ ಸ್ರಾವ ಮತ್ತು ನೀರಿನಿಂದ ಕೂಡಿದ ಕಣ್ಣುಗಳು ರೋಗಲಕ್ಷಣಗಳಲ್ಲಿ ಸೇರಿವೆ.


ಜಾನುವಾರುಗಳ ಹಾಲು ಸೇವಿಸುವುದು ಸುರಕ್ಷಿತವೇ?
ವೈರಸ್ ಹರಡುವಿಕೆಯು ಹಾಲಿನ ಸೇವನೆಯ ಬಗ್ಗೆ ಕಳವಳವನ್ನು ಉಂಟುಮಾಡಿದೆ. ಆದಾಗ್ಯೂ, ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ (ಐವಿಆರ್‌ಐ) ಹಿರಿಯ ಅಧಿಕಾರಿಯೊಬ್ಬರು, ಚರ್ಮ ಗಂಟು ಪ್ರಾಣಿಜನ್ಯವಲ್ಲದ ಸೋಂಕು ಮತ್ತು ಪ್ರಾಣಿಗಳಿಂದ ಮಾನವರಿಗೆ ಹರಡುವುದಿಲ್ಲ ಎಂದು ಹೇಳಿದ್ದಾರೆ.

“ಸೋಂಕಿತ ಜಾನುವಾರುಗಳಿಂದ ಹಾಲು ಸೇವಿಸುವುದು ಸುರಕ್ಷಿತವಾಗಿದೆ. ಕುದಿಸಿದ ನಂತರ ಅಥವಾ ಕುದಿಸದೆ ನೀವು ಹಾಲನ್ನು ಕುಡಿದರೂ ಸಹ ಯಾವುದೇ ಸಮಸ್ಯೆಯಿಲ್ಲ” ಎಂದು ಐವಿಆರ್‌ಐ ಜಂಟಿ ನಿರ್ದೇಶಕ ಅಶೋಕ್ ಕುಮಾರ್ ಮೊಹಾಂತಿ ಈ ತಿಂಗಳ ಆರಂಭದಲ್ಲಿ ಸುದ್ದಿ ಸಂಸ್ಥೆಗೆ ತಿಳಿಸಿದರು. ಜಾನುವಾರುಗಳಿಗೆ ಸರಿಯಾದ ಸಮಯಕ್ಕೆ ಲಸಿಕೆ ಹಾಕಿಸಿದರೆ ರೋಗ ಮತ್ತು ಹಾಲಿನ ಉತ್ಪಾದನೆಯ ಮೇಲೆ ಅದರ ಪರಿಣಾಮವನ್ನು ತಡೆಯಬಹುದು. ಜಾನುವಾರುಗಳಿಗೆ ಮೊದಲ ಬಾರಿಗೆ ಸೋಂಕು ತಗುಲಿದರೆ ಮತ್ತು ಲಸಿಕೆ ಹಾಕಿಸದಿದ್ದರೆ, ಹಾಲಿನ ಉತ್ಪಾದನೆ ಶೇಕಡಾ 40 ರಿಂದ 50 ರಷ್ಟು ಕಡಿಮೆಯಾಗುತ್ತದೆ ಎಂದು ಅವರು ಹೇಳಿದ್ದಾರೆ. ಸೆಪ್ಟೆಂಬರ್ 2020 ರಲ್ಲಿ ಭಾರತದಲ್ಲಿ ಮೊದಲ ಚರ್ಮ ಗಂಟು ರೋಗದ ಪ್ರಕರಣಗಳು ವರದಿಯಾಗಿದ್ದವು.
ಒಟ್ಟಾರೆಯಾಗಿ ಹೇಳುವುದಾದರೆ, ಸೋಂಕಿತ ಪ್ರಾಣಿಗಳ ಹಾಲು ಮತ್ತು ಮಾಂಸವನ್ನು ಸೇವಿಸಿದರೆ ಮನುಷ್ಯರಲ್ಲೂ ಸೋಂಕು ತಗುಲಿ ಭಯಾನಕ ಖಾಯಿಲೆಗೆ ತುತ್ತಾಗುತ್ತಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದ್ದು ಇದು ಆಧಾರ ರಹಿತವಾದ ಫೋಸ್ಟ್ ಎಂಬುದಾಗಿ ತಿಳಿದು ಬಂದಿದ್ದು, ಇದರಿಂದ ಜನರು ಆತಂಕಕ್ಕೀಡಾಗುವ ಪ್ರಮೇಯವಿಲ್ಲ ಎಂದು ತಜ್ಞರು ಹೇಳಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: Parle-G ಬಿಸ್ಕೆಟ್‌ನ ಕವರ್ ಫೋಟೋದಲ್ಲಿರುವ ಮಗು ಚಿತ್ರ ಸುಧಾಮೂರ್ತಿಯವರದ್ದೇ?


ಒಳ್ಳೋಳ್ಳೆ ಮಾಹಿತಿಗಳನ್ನ ನೀಡುತ್ತಿರುವುದಕ್ಕೆ ಧನ್ಯವಾದಗಳು. ನಮ್ಮ ಕುಟುಂಬ ಕರೋನಾದಂತ ಸುಳ್ಳಿನ ಜಗತ್ತಿನಲ್ಲಿ ದೈರ್ಯವಾಗಿ ಬದುಕಿದ್ದು ನಿಮ್ಮ ಸುದ್ದಿಯಿಂದ ಅದು ನೀಡುವ ವೈಜ್ಞಾನಿಕ ಮಾಹಿತಿ ಯಿಂದ.
thanks for your chanel