ಫ್ಯಾಕ್ಟ್ಚೆಕ್: RSS ಮೋಹನ್ ಭಾಗವತ್ ಮಾತಿನಲ್ಲಿ ಎಷ್ಟು ನಿಜ? ಎಷ್ಟು ಸುಳ್ಳು ?
RSS ಮುಖ್ಯಸ್ಥ ಮೋಹನ್ ಭಾಗವತ್ ಅವರು ವಾರ್ಷಿಕ ದಸರಾ ಸಮಾರಂಭದಲ್ಲಿ ಮಾಡಿದ ಭಾಷಣದಲ್ಲಿ, ‘ಎಲ್ಲರಿಗೂ ಸಮಾನವಾಗಿ ಅನ್ವಯವಾಗುವ ಜನಸಂಖ್ಯೆ ನಿಯಂತ್ರಣ ಕಾನೂನಿನ’ ಬಗ್ಗೆ ಪ್ರಸ್ತಾಪಿಸಿದ್ದಾರೆ. “ಧರ್ಮ ಆಧಾರಿತ ಅಸಮತೋಲನ ಮತ್ತು ಬಲವಂತದ ಮತಾಂತರ ದೇಶವನ್ನು ಒಡೆಯುತ್ತಿದೆ” ಎಂದು ವಿಷಾದಿಸಿರುವುದಾಗಿ ‘ಎನ್ಡಿಟಿವಿ’ ವರದಿ ಮಾಡಿದೆ.
ಧಾರ್ಮಿಕ ಸಮುದಾಯ ಆಧಾರಿತ ಅಸಮತೋಲನದ ಕಾರಣದಿಂದ ಹೊಸದಾಗಿ ಹುಟ್ಟಿಕೊಂಡ ಪೂರ್ವ ಟಿಮೋರ್, ಕೊಸೊವೊ ಮತ್ತು ದಕ್ಷಿಣ ಸುಡಾನ್ ದೇಶಗಳ ಉದಾಹರಣೆಗಳನ್ನು ಭಾಗವತ್ ಉಲ್ಲೇಖಿಸಿದ್ದಾರೆ.
“ಜನಸಂಖ್ಯೆಯ ನಿಯಂತ್ರಣದ ಜೊತೆಗೆ, ಧಾರ್ಮಿಕ ಆಧಾರದ ಮೇಲೆ ಜನಸಂಖ್ಯೆಯ ಸಮತೋಲನವು ಸಹ ಪ್ರಮುಖ ವಿಷಯವಾಗಿದೆ. ಅದನ್ನು ನಿರ್ಲಕ್ಷಿಸಲಾಗುವುದಿಲ್ಲ” ಎಂದು ಅವರು ಹಿಂದಿಯಲ್ಲಿ ಭಾಷಣ ಮಾಡಿದ್ದಾರೆ.
“ಜನಸಂಖ್ಯೆಗೆ ಸಂಪನ್ಮೂಲಗಳ ಅಗತ್ಯವಿದೆ ಅಥವಾ ಅದು ಹೊರೆಯಾಗುತ್ತದೆ. ಜನಸಂಖ್ಯೆಯು ಒಂದು ಆಸ್ತಿಯಾಗಿರಬಹುದು ಎಂಬ ದೃಷ್ಟಿಕೋನವಿದೆ. ಎರಡೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವು ನೀತಿಯನ್ನು ರೂಪಿಸಬೇಕಾಗಿದೆ” ಎಂದು ತಿಳಿಸಿದ್ದಾರೆ.
ಜನಸಂಖ್ಯೆಯಲ್ಲಿನ ‘ಧರ್ಮ-ಆಧಾರಿತ ಅಸಮತೋಲನ’ದ ಕುರಿತು ಪ್ರಸ್ತಾಪಿಸುತ್ತಾ, “ಜನನ ಪ್ರಮಾಣವೂ ಒಂದು ಕಾರಣವಾಗಿದೆ. ಬಲವಂತದಿಂದ ಆಮಿಷ ಅಥವಾ ದುರಾಶೆಯಿಂದ ಮತಾಂತರ ಆಗುವುದು, ನುಸುಳುಕೋರರು ಬರುವುದು ಇದಕ್ಕೆ ಕಾರಣವಾಗಿದೆ” ಎಂದಿದ್ದಾರೆ.
“ಹೆರಿಗೆ ಮತ್ತು ಜನಸಂಖ್ಯಾ ನಿಯಂತ್ರಣದ ಬಗ್ಗೆ ಆರೆಸ್ಸೆಸ್ ಪ್ರಸ್ತಾಪಿಸುವ ಯಾವುದೇ ನೀತಿಯಲ್ಲಿ ಮಹಿಳೆಯರ ಆರೋಗ್ಯವನ್ನು ಖಂಡಿತವಾಗಿ ನೆನಪಿನಲ್ಲಿಟ್ಟುಕೊಳ್ಳಲಾಗುತ್ತದೆ” ಎಂದು ಆರೆಸ್ಸೆಸ್ ಮುಖ್ಯಸ್ಥರು ಹೇಳಿದ್ದಾರೆ.
ಮೋಹನ್ ಭಾಗವತ್ ಮಾತಿನ ಹಿಂದಿನ ಮರ್ಮ ಹಾಗೂ ವಾಸ್ತವ
ಬಹುದೊಡ್ಡ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರ ಮೇಲೆ ಜನಸಂಖ್ಯಾ ಹೆಚ್ಚಳದ ಆರೋಪ ಹೊರಿಸುವ ಕೆಲಸವನ್ನು ಆರ್ಎಸ್ಎಸ್ ಮತ್ತು ಅದರ ರಾಜಕೀಯ ಮುಖವಾದ ಬಿಜೆಪಿ ಮೊದಲಿನಿಂದಲೂ ಮಾಡುತ್ತಿವೆ. ಅದರ ಮುಂದುವರಿದ ಭಾಗವಾಗಿ ಮೋಹನ್ ಭಾಗವತ್ ಹೇಳಿಕೆ ಹೊರಬಿದ್ದಿದೆ.
ಆದರೆ ವಾಸ್ತವಗಳು ಬೇರೆಯೇ ಕತೆಯನ್ನು ಹೇಳುತ್ತವೆ. ಅಪಾಯಕಾರಿ ಜನಸಂಖ್ಯೆಯ ಹೆಚ್ಚಳದ ಪ್ರತಿಪಾದನೆ ಮತ್ತು ಹಿಂದೂ-ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆಯಲ್ಲಿ ಇರುವ ವಾಸ್ತವ ವ್ಯತ್ಯಾಸಗಳೇನು ಎಂಬುದನ್ನು ಸಾಕ್ಷಿಗಳು ಬಯಲಿಗೆಳೆದಿವೆ.
ಈ ಕುರಿತು ‘ದಿ ವೈರ್’ ಹಿಂದೆಯೇ ವರದಿ ಮಾಡಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (2019-21) ಪ್ರಕಾರ ಹಿಂದೂ ಮತ್ತು ಮುಸ್ಲಿಂ ಫಲವತ್ತತೆಯ ನಡುವಿನ ವ್ಯತ್ಯಾಸವು ಕೇವಲ 0.42ರಷ್ಟಿದೆ ಎಂದು ಹೇಳುತ್ತದೆ. ಪ್ರತಿ ಹಿಂದೂ ಮಹಿಳೆಗೆ 1.94 ಮಕ್ಕಳು, ಪ್ರತಿ ಮುಸ್ಲಿಂ ಮಹಿಳೆಗೆ 2.36 ಮಕ್ಕಳು ಇರುವುದಾಗಿ ಸಮೀಕ್ಷೆ ಉಲ್ಲೇಖಿಸಿದೆ.
ನಾವು ಪಾಯಿಂಟ್ ಅಂದಾಜಿನ ಬದಲಿಗೆ ‘ಟ್ರೆಂಡ್’ ಅನ್ನು ಗಣನೆಗೆ ತೆಗೆದುಕೊಂಡಾಗ ನಿಜವಾದ ಚಿತ್ರಣ ಸಿಗುತ್ತದೆ. ಕಳೆದ ಎರಡು ದಶಕಗಳಲ್ಲಿ ಹಿಂದೂಗಳ ಫಲವತ್ತತೆ 30%, ಮುಸ್ಲಿಮರಲ್ಲಿ 35% ಕುಸಿದಿದೆ ಎಂದು ಕಂಡುಬಂದಿದೆ. ವಾಸ್ತವವಾಗಿ, ಕಳೆದ 20 ವರ್ಷಗಳಲ್ಲಿ ಮುಸ್ಲಿಮರಲ್ಲಿ ಜನಸಂಖ್ಯೆಯ ಬೆಳವಣಿಗೆಯಲ್ಲಿನ ಕುಸಿತದ ಪ್ರಮಾಣವು ಹಿಂದೂಗಳಿಗಿಂತ ಹೆಚ್ಚಾಗಿದೆ. 2030ರ ವೇಳೆಗೆ ಹಿಂದೂ-ಮುಸ್ಲಿಂ ಫಲವತ್ತತೆ ದರಗಳು ಸಂಪೂರ್ಣ ಒಮ್ಮುಖದ ಹಾದಿಯಲ್ಲಿರುತ್ತವೆ ಎಂಬುದನ್ನು ಸಮೀಕ್ಷೆಗಳು ಕಂಡುಕೊಂಡಿವೆ.
ಪ್ಯೂ ರಿಸರ್ಚ್ ಸೆಂಟರ್ನ 2021ರ ವರದಿಯು ಸಹ ಈ ಸಂಶೋಧನೆಗಳನ್ನು ಸಮರ್ಥಿಸುತ್ತದೆ. ಮುಸ್ಲಿಮರಲ್ಲಿ ಫಲವತ್ತತೆ ಪ್ರಮಾಣವು ಈಗ ಬಹುತೇಕ ಹಿಂದೂಗಳಿಗೆ ಸಮಾನವಾಗಿದೆ. 1992 ಮತ್ತು 2015ರ ನಡುವೆ, ಮುಸ್ಲಿಂ ಫಲವತ್ತತೆ ದರವು 4.4 ರಿಂದ 2.6ಕ್ಕೆ ಕುಸಿದಿದ್ದರೆ, ಹಿಂದೂಗಳಲ್ಲಿ 3.3ರಿಂದ 2.1ಕ್ಕೆ ಇಳಿದಿದೆ ಎಂದು ವರದಿ ಹೇಳಿದೆ.
ಈ ಹಿಂದೆ ‘ದಿ ವೈರ್’ ನಡೆಸಿದ ವೀಡಿಯೊ ಸಂದರ್ಶನದಲ್ಲಿ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೈಶಿ ಅವರು ಆರ್ಎಸ್ಎಸ್ ಮುಖ್ಯಸ್ಥ ಭಾಗವತ್ ಅವರನ್ನು ಭೇಟಿಯಾಗಿದ್ದನ್ನು ನೆನಪಿಸಿಕೊಂಡಿದ್ದರು. “ದಿ ಪಾಪ್ಯುಲೇಶನ್ ಮಿಥ್: ಇಸ್ಲಾಂ, ಫ್ಯಾಮಿಲಿ ಪ್ಲಾನಿಂಗ್ ಮತ್ತು ಪಾಲಿಟಿಕ್ಸ್ ಇನ್ ಇಂಡಿಯಾ” ಪುಸ್ತಕವನ್ನು ನೀಡಲು ಭೇಟಿಯಾಗಿದ್ದಾಗಿ ಖುರೈಶಿ ಹೇಳುತ್ತಾರೆ. “ಮುಸ್ಲಿಮರು ಹಿಂದೂಗಳನ್ನು ಸಂಖ್ಯಾಬಲದಲ್ಲಿ ಹಿಂದಿಕ್ಕುತ್ತಾರೆ ಎಂಬುದು ಹಿಂದುತ್ವ ಗುಂಪುಗಳ ಕಡೆಯಿಂದ ಬಂದ ಶುದ್ಧ ಪ್ರೊಪಗಾಂಡ ಎಂದು ಆರ್ಎಸ್ಎಸ್ ಮುಖ್ಯಸ್ಥರಿಗೆ ಹೇಳಿದೆ” ಎಂದು ಖುರೇಷಿ ಹೇಳಿಕೊಳ್ಳುತ್ತಾರೆ. (‘ದಿ ವೈರ್’ ನಡೆಸಿದ ವಿಡಿಯೊ ಸಂದರ್ಶನದಲ್ಲಿ 8 ನಿಮಿಷ 20 ಸೆಕೆಂಡ್ ವೇಳೆಗೆ ಈ ಚರ್ಚೆ ನಡೆಯುವುದನ್ನು ಗಮನಿಸಬಹುದು.)
ಹೈದರಾಬಾದ್ ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿರುವ ಎಐಎಂಐಎಂ ನ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಎರಡು ಮಕ್ಕಳ ನಡುವಿನ ಅಂತರವನ್ನು ಕಾಯ್ದುಕೊಳ್ಳುವುದಕ್ಕೆ ಮುಸ್ಲಿಮರೇ ಹೆಚ್ಚಾಗಿ ಕಾಂಡೋಮ್ ಬಳಕೆ ಮಾಡುತ್ತಿದ್ದಾರೆ. ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿಲ್ಲ, ಈ ವಿಷಯವಾಗಿ ಆತಂಕ ಬೇಡ, ನಮ್ಮ ಜನಸಂಖ್ಯೆ ಕುಗ್ಗುತ್ತಿದೆ. ಇಬ್ಬರು ಮಕ್ಕಳ ಜನನದ ನಡುವಿನ ಅಂತರವನ್ನು ಹೆಚ್ಚು ಯಾರು ಕಾಯ್ದುಕೊಳ್ಳುತ್ತಿದ್ದಾರೆ ಗೊತ್ತೇ? ಅದು ಮುಸ್ಲಿಮರು, ಯಾರು ಹೆಚ್ಚು ಕಾಂಡೋಮ್ ಬಳಕೆ ಮಾಡುತ್ತಾರೆ ಗೊತ್ತೇ? ಮುಸ್ಲಿಮರು, ಇದು ನಿಮಗೆ ಗೊತ್ತಿರಲಿ, ಈ ಬಗ್ಗೆ ಮೋಹನ್ ಭಾಗ್ವತ್ ಮಾತನಾಡುವುದಿಲ್ಲ ಎಂದು ಓವೈಸಿ ಹೇಳಿದ್ದಾರೆ.
#WATCH | On RSS chief Mohan Bhagwat's statement that there's a religious imbalance in India, AIMIM chief Asaduddin Owaisi says, "Don't fret, Muslim population is not increasing, it's rather falling… Who's using condoms the most? We are. Mohan Bhagwat won't speak on this." pic.twitter.com/kcaYLaNm7A
— ANI (@ANI) October 8, 2022
“ಇನ್ನು 1,000 ವರ್ಷಗಳಾದರೂ ಇದು (ಹಿಂದೂಗಳಿಗಿಂತ ಮುಸ್ಲಿಮರು ಹೆಚ್ಚಾಗುತ್ತಾರೆಂಬುದು) ಸಂಭವಿಸುವುದಿಲ್ಲ. ಬಹುಪತ್ನಿತ್ವದ ಪ್ರಶ್ನೆಯು (ಹಿಂದೂಗಳಿಗಿಂತ ಮುಸ್ಲಿಮರು ಹೆಚ್ಚಾಗುತ್ತಿದ್ದಾರೆ ಎಂದು ವಾದಿಸಲು ಬಳಸುವ ವಾದ) ಭಾರತದಲ್ಲಿ ಬರುವುದೇ ಇಲ್ಲ. ಭಾರತದಲ್ಲಿ ಲಿಂಗಾನುಪಾತವು 1,000 ಪುರುಷರಿಗೆ 940 ಮಹಿಳೆಯರು ಎಂಬ ಲೆಕ್ಕದಲ್ಲಿದೆ. ಸಾವಿರದಲ್ಲಿ 60 ಬ್ಯಾಚುಲರ್ಗಳು ತಮ್ಮ ಮೊದಲ ಮದುವೆಯಾಗಲೂ ಹೆಣಗಾಡುತ್ತಿದ್ದಾರೆ ಎಂದು ನಾನು ಅವರಿಗೆ ಹೇಳಿದೆ. ಬಹುಪತ್ನಿತ್ವದ ಪ್ರಶ್ನೆ ಎಲ್ಲಿದೆ ಎಂದು ಕೇಳಿದೆ. ಇದಕ್ಕೆ ಅವರು ಆತ್ಮೀಯ ನಗುವಿನೊಂದಿಗೆ ಪ್ರತಿಕ್ರಿಯಿಸಿದರು. ಅರ್ಥಾತ್, ನಾನು ಏನು ಹೇಳಿದರೂ ಅದನ್ನು ಅವರು ಒಪ್ಪಿಕೊಂಡರು” ಎಂದು ಸಂದರ್ಶನದಲ್ಲಿ ಖುರೇಷಿ ವಿವರಿಸಿದ್ದಾರೆ.
ಜನಸಂಖ್ಯೆ ಸ್ಫೋಟದ ಭೀತಿಯು ಕೂಡ ತಾರ್ಕಿಕವಾಗಿಲ್ಲ. ದತ್ತಾಂಶಗಳು ಬೇರೆಯ ಕತೆಯನ್ನು ಹೇಳುತ್ತವೆ. ಪ್ರಧಾನಿ ನರೇಂದ್ರ ಮೋದಿ ಅವರು 2019ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಜನಸಂಖ್ಯಾ ಹೆಚ್ಚಳದ ಕುರಿತು ಮಾತನಾಡಿದ್ದರು. “ಜನಸಂಖ್ಯಾ ಸ್ಫೋಟದ ಬಗ್ಗೆ ನಾವು ಚಿಂತಿಸಬೇಕಾಗಿದೆ. ಇದು ಭಾರತದ ಅಭಿವೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ” ಎಂದು ಪ್ರಸ್ತಾಪಿಸಿದ್ದರು.
2019-21ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಪ್ರಕಾರ, ಒಟ್ಟು ಫಲವತ್ತತೆ ದರ (ಟಿಎಫ್ಆರ್) 2016ರಲ್ಲಿ 2.2ರಿಂದ 2ಕ್ಕೆ ಇಳಿದಿದೆ. ಟಿಎಫ್ಆರ್ ಮತ್ತು ವಾರ್ಷಿಕ ಜನಸಂಖ್ಯೆಯ ಬೆಳವಣಿಗೆ ದರವನ್ನು ಜನಸಂಖ್ಯೆಯ ಬೆಳವಣಿಗೆಯನ್ನು ಪ್ರಮಾಣೀಕರಿಸಲು ವಿಶ್ವಾದ್ಯಂತ ಬಳಸಲಾಗುತ್ತದೆ. ಅಲ್ಲದೆ, ವಿಶ್ವಬ್ಯಾಂಕ್ ಅಂಕಿಅಂಶಗಳ ಪ್ರಕಾರ ಭಾರತದ ಜನಸಂಖ್ಯೆಯ ಬೆಳವಣಿಗೆ ದರವು 2001ರಲ್ಲಿ 1.73%ರಷ್ಟಿದ್ದು 2018ರಲ್ಲಿ 1.04%ಕ್ಕೆ ಕುಸಿದಿದೆ.

12 ರಾಜ್ಯಗಳಲ್ಲಿ ಜನಸಂಖ್ಯೆಯ ಬೆಳವಣಿಗೆ ದರವು 1%ಕ್ಕಿಂತ ಕಡಿಮೆಯಿತ್ತು. ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಹರಿಯಾಣದಂತಹ ರಾಜ್ಯಗಳು ಹೆಚ್ಚಿನ ಫಲವತ್ತತೆಯ ರಾಜ್ಯಗಳಾಗಿ ಹೊಮ್ಮಿವೆ. ಕಾಲಾನಂತರದಲ್ಲಿ ತಮ್ಮ ಬೆಳವಣಿಗೆಯ ದರದಲ್ಲಿ ಗಮನಾರ್ಹ ಕುಸಿತವನ್ನು ತೋರಿಸಿದೆ.
ತಮ್ಮ ಭಾಷಣದಲ್ಲಿ ಭಾಗವತ್ ‘ಬಲದಿಂದ ಮತಾಂತರ’ ವಿಚಾರವನ್ನೂ ಉಲ್ಲೇಖಿಸಿದ್ದಾರೆ. ಹಿಂದುತ್ವ ಗುಂಪುಗಳು ‘ಬಲವಂತದ ಮತಾಂತರಗಳ ಹುನ್ನಾರ’ವನ್ನು ಪ್ರಸ್ತಾಪಿಸುತ್ತಿರುತ್ತವೆ. ವಿಶೇಷವಾಗಿ ಕ್ರಿಶ್ಚಿಯನ್ ಧರ್ಮವು ಹಿಂದೂಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿದೆ ಎಂದು ವಾದಿಸುತ್ತಾರೆ. ಈ ಹಿಂದೆ ‘ದಿ ವೈರ್’ ನಡೆಸಿದ ವರದಿಯ ಪ್ರಕಾರ, “ಹಿಂದುತ್ವ ಗುಂಪುಗಳು ಈ ಪ್ರತಿಪಾದನೆಗೂ ಯಾವುದೇ ಪುರಾವೆ ಇಲ್ಲ.”
ಜನಗಣತಿಯಿಂದ ಲಭ್ಯವಿರುವ ಮಾಹಿತಿಯನ್ನು ಅವಲೋಕಿಸಿದರೆ ದೇಶದ ಜನಸಂಖ್ಯೆಯಲ್ಲಿ ಕ್ರಿಶ್ಚಿಯನ್ ಸಮುದಾಯದ ಪ್ರಮಾಣ ಸ್ಥಿರವಾಗಿದೆ ಅಥವಾ 1971ರಿಂದ ಇಳಿಮುಖವಾಗಿದೆ. 1971ರ ಜನಗಣತಿಯು ಭಾರತದ ಜನಸಂಖ್ಯೆಯಲ್ಲಿ 2.6%ರಷ್ಟು ಕ್ರಿಶ್ಚಿಯನ್ನರಿದ್ದಾರೆಂದು ಅಂದಾಜಿಸಿದೆ. 2001ರ ಹೊತ್ತಿಗೆ, ಈ ಅಂಕಿ ಅಂಶವು 2.3% ಕ್ಕೆ ಇಳಿಯಿತು. 2011ರ ಜನಗಣತಿಯ ಅಂಕಿಅಂಶಗಳ ಧಾರ್ಮಿಕ ಸಂಗತಿಗಳು ಎಂದಿಗೂ ಬಿಡುಗಡೆಯಾಗಿಲ್ಲ. ಸೋರಿಕೆಯಾದ ಮಾಹಿತಿಯ ಪ್ರಕಾರ ಸಮುದಾಯದ ಪ್ರಮಾಣದಲ್ಲಿ ಮತ್ತಷ್ಟು ಕುಸಿತ ಕಂಡುಬಂದಿದೆ.

ಧಾರ್ಮಿಕ ಮತಾಂತರದ ವಿವಾದಾತ್ಮಕ ವಿಷಯದ ಕುರಿತು ಜೂನ್ 2021ರಲ್ಲಿ ಪ್ಯೂ ಸಂಶೋಧನಾ ವರದಿಯು ಮತ್ತಷ್ಟು ಬೆಳಕು ಚೆಲ್ಲಿತ್ತು. ಭಾರತದಲ್ಲಿ ಯಾರಾದರೂ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಬದಲಾಯಿಸುವುದು ‘ಅಪರೂಪ’ ಎಂದು ವರದಿ ಗಮನ ಸೆಳೆದಿತ್ತು.
ಕೃಪೆ: ದಿ ವೈರ್ ಮತ್ತು ದಿ ಲಾಜಿಕಲ್ ಇಂಡಿಯನ್
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಸೂಪರ್ ಮಾರ್ಕೆಟ್ನಲ್ಲಿ ಬೆಂಕಿ – ಮುಸ್ಲಿಮರು ಕಾರಣ ಎಂದು ಸುಳ್ಳು ಹಂಚಿಕೆ

