ಫ್ಯಾಕ್ಟ್‌ಚೆಕ್: ಸಹೋದರಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದಕ್ಕೆ ಹಿಂದೂ ಬಾಲಕನನ್ನು ಮುಸ್ಲಿಮರು ಹತ್ಯೆ ಮಾಡಿದರೆ?

“ತನ್ನ ತಂಗಿಗೆ ಕಿರುಕುಳ ನೀಡುತ್ತಿದ್ದ ಮುಸ್ಲಿಂ ಗೂಂಡಾಗಳ ವಿರುದ್ಧ ತಿರುಗಿಬಿದ್ದ ಕಾರಣಕ್ಕೆ ಉತ್ತರಾಖಂಡದ 15 ವರ್ಷದ ಮನೋಜ್ ನೇಗಿಯನ್ನು ದೆಹಲಿಯಲ್ಲಿ ಚಾಕುವಿನಿಂದ ಇರಿದು ಕೊಂದಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ರಾಜಸ್ಥಾನ BJP ಯುವ ಮೋರ್ಚಾದ ಉಸ್ತುವಾರಿ ನೇಹಾ ಜೋಶಿ ಅವರು ಟ್ವೀಟ್ ಮಾಡಿದ್ದಾರೆ.

ಓಣಿಯೊಂದರ ಕಿರಿದಾದ ಜಾಗದಲ್ಲಿ ವ್ಯಕ್ತಿಯೊಬ್ಬನಿಗೆ ಚೂರಿಯಿಂದ ಇರಿಯುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆರೋಪಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವನೆಂದು ಹೇಳಲಾಗುತ್ತಿದೆ.

 

ಹಲವು ಸಾಮಾಜಿಕ ಮಾಧ್ಯಮದ ಬಳಕೆದಾರರು ಇದೇ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಹತ್ಯೆಗೀಡಾದ ವ್ಯಕ್ತಿ ಮನೋಜ್ ಹಿಂದೂ ಹುಡುಗ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಸುದರ್ಶನ್ ನ್ಯೂಸ್ ಮಾಡಿದ ಟ್ವೀಟ್ ಪ್ರಕಾರ, 15 ವರ್ಷದ ಮನೋಜ್ ನೇಗಿ ತನ್ನ ಸಹೋದರಿಗೆ ತೊಂದರೆ ನೀಡುತ್ತಿದ್ದ ಯುವಕರಿಗೆ ಎಚ್ಚರಿಕೆ ನೀಡಿದ್ದಾನೆ, ಇದರಿಂದ ಕೆರಳಿದ ಪುಂಡರು ಮನೋಜ್‌ನನ್ನು ಚಾಕುವಿನಿಂದ ಇರಿದು ಕೊಂದಿದ್ದಾರೆ. ಟ್ವೀಟ್‌ನಲ್ಲಿ, ಸುದ್ದಿವಾಹಿನಿಯು ಈ ಘಟನೆಯನ್ನು ಬಜರಂಗದಳದ ನಾಯಕ ನಿತೇಶ್ ಚೌಧರಿ ಹತ್ಯೆಯೊಂದಿಗೆ ಜೋಡಿಸಿದೆ, ಅಲ್ಲಿ ಆರೋಪಿಗಳು ಮುಸ್ಲಿಮರಾಗಿದ್ದರು ಎಂದು ಕೆಲವು ವರದಿಗಳು ತಿಳಿಸಿವೆ. ಸುದರ್ಶನ್ ನ್ಯೂಸ್  ಜಿಹಾದಿ ಎಂಬ ಪದವನ್ನು ಬಳಸಿದೆ.

ಸುದರ್ಶನ್ ನ್ಯೂಸ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಸಂಪಾದಕ ಸುರೇಶ್ ಚವ್ಹಾಂಕೆ ಅವರು ಅದೇ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ  NDTV ಮಾಡಿದ ವರದಿಯೊಂದು ಶೀರ್ಷಿಕೆಯೊಂದಿಗೆ ಲಭ್ಯವಾಗಿದೆ. ಲೇಖನದ ಪ್ರಕಾರ, ದೆಹಲಿಯಲ್ಲಿ ತನ್ನ ಸಹೋದರಿಗೆ ಕಿರುಕುಳ ನೀಡುತ್ತಿದ್ದ ಪುಂಡರನ್ನು ಪ್ರಶ್ನಿಸಿದ್ದಕ್ಕೆ  ಇಬ್ಬರು ಅಪ್ರಾಪ್ತರು ಇರಿದು ಕೊಂದಿದ್ದಾರೆ. ಸಂತ್ರಸ್ತೆ ಕಂಪ್ಯೂಟರ್ ತರಗತಿ ಮುಗಿಸಿ ಹಿಂತಿರುಗುತ್ತಿದ್ದಾಗ ಆತನ ಮನೆಯ ಬಳಿ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದ್ದು,  ಆರೋಪಿಗಳಾದ ಅಪ್ರಾಪ್ತರನ್ನು ಬಂಧಿಸಲಾಗಿದೆ. NDTV ವರದಿಯಲ್ಲಿ ಆರೋಪಿಗಳು ಮುಸ್ಲಿಮರು ಎಂಬ ಉಲ್ಲೇಖವಿಲ್ಲ ಎಂಬುದನ್ನು ಗಮನಿಸಬೇಕಾಗಿದೆ.

ಸಹೋದರಿಗೆ  ಕಿರುಕುಳ ನೀಡುತ್ತಿದ್ದಿದ್ದನ್ನು ಪ್ರಶ್ನಿಸಿದ್ದಕ್ಕೆ  ಬಾಲಕನನ್ನು ಕೊಂದ 2 ಯುವಕರು ಪೊಲೀಸರ ವಶಕ್ಕೆ ಎಂಬ ಶೀರ್ಷಿಕೆಯೊಂದಿಗೆ, ಘಟನೆಯ ಕುರಿತು ಝೀ ನ್ಯೂಸ್ ಲೇಖನವನ್ನು ಪ್ರಕಟಿಸಿದೆ.. ಝೀ ನ್ಯೂಸ್‌ಗೆ ಪೊಲೀಸರು ನೀಡಿರುವ ಹೇಳಿಕೆ ಪ್ರಕಾರ, “ಹತ್ಯೆಯಾದ ಯುವಕನ ಸಹೋದರಿಯನ್ನು ಹೀಯಾಳಿಸಿದ್ದಾರೆ, ಕೆಲ ದಿನಗಳ ಹಿಂದೆ ಮೃತ ಮನೋಜ್  ಸಹೋದರಿಯಿಂದ ದೂರ ಇರುವಂತೆ ಎಚ್ಚರಿಸಿ ಕಪಾಳಕ್ಕೆ ಹೊಡೆದಿದ್ದಾನೆ. ಸೇಡು ತೀರಿಸಿಕೊಳ್ಳಲು ಇಬ್ಬರೂ ಮನೋಜ್‌ನನ್ನು ಹಿಡಿದು ಚಾಕುವಿನಿಂದ ಇರಿದು ಸಾಯಿಸಿದ್ದಾರೆ ಎಂದು ತನಿಖೆಯ ಸಮಯದಲ್ಲಿ ಇಬ್ಬರೂ ಬಾಲಾಪರಾಧಿಗಳು ಒಪ್ಪಿಕೊಂಡಿದ್ದಾರೆ.

ಹತ್ಯೆ ಮಾಡಿದ ಇಬ್ಬರು ಆರೋಪಿಗಳ ಹಿನ್ನಲೆಯನ್ನು ಪೊಲೀಸ್ ಅಧಿಕಾರಿಗಳು ಆಲ್ಟ್‌ ನ್ಯೂಸ್‌ಗೆ ಮಾಹಿತಿ ನೀಡಿದ್ದು, ಪೊಲೀಸರ ಹೇಳಿಕೆಯ ಪ್ರಕಾರ ಆರೋಪಿಗಳಿಬ್ಬರು  ಹಿಂದೂ ಸಮುದಾಯಕ್ಕೆ ಸೇರಿದ್ದು, ಪ್ರಕರಣದಲ್ಲಿ ಯಾವುದೇ ಕೋಮು ಆಯಾಮವಾಗಲಿ ಕೋಮು ದ್ವೇಷವಾಗಲಿ ಇಲ್ಲ ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ತನ್ನ ಸಹೋದರಿಯನ್ನು ಹೀಯಾಳಿಸಿ ಕಿರುಕುಳ ನೀಡುತ್ತಿದ್ದ ಯುವರಿಗೆ ಎಚ್ಚರಿಕೆ ನೀಡಿದ ಕಾರಣಕ್ಕೆ ಆತನನ್ನು ಹತ್ಯೆ ಮಾಡಲಾಗಿದೆ. ಇಲ್ಲಿ ಆರೋಪಿಗಳಿಬ್ಬರು ಹಿಂದೂ ಸಮುದಯಕ್ಕೆ ಸೇರಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಿಗಳನ್ನು ಮುಸ್ಲಿಮರು ಎಂದು ತಪ್ಪಾಗಿ ಆರೋಪಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದ್ದು, ಕೋಮು ದ್ವೇಷವನ್ನು ಪ್ರಚೋದಿಸಿ ಹಿಂದೂ ಮುಸ್ಲಿಂ ಎಂಬ ಕೋಮು ಹಿನ್ನಲೆ ಬರುವಂತೆ ಚಿತ್ರಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಆಲ್ಟ್‌ ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಒಮ್ಮೆಲೆ 15 ಚಿತ್ರಗಳನ್ನು ಬಿಡಿಸಿ ಗಿನ್ನೀಸ್ ದಾಖಲೆ ನಿರ್ಮಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights