ಫ್ಯಾಕ್ಟ್‌ಚೆಕ್: ಒಮ್ಮೆಲೆ 15 ಚಿತ್ರಗಳನ್ನು ಬಿಡಿಸಿ ಗಿನ್ನೀಸ್ ದಾಖಲೆ ನಿರ್ಮಿಸಿದ್ದು ನಿಜವೇ?

ಕಳೆದೆರಡು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಈ ವಿಡಿಯೋವನ್ನು ವೀಕ್ಷಿಸಿತ್ತಿರುವ ಪ್ರತಿಯೊಬ್ಬರು ಇದು ಸಾಧ್ಯವೆ ಎಂದು ಬೆರಗಿನಿಂದ ನೋಡುತ್ತಿದ್ದಾರೆ. ವಿಡಿಯೋದಲ್ಲಿರುವ ದೃಶ್ಯಾವಳಿಯೂ ನೋಡಿದ ಪ್ರತಿಯೊಬ್ಬರನ್ನು ಬೆರಗುಗೊಳಿಸುವಂತೆಯೇ ಇದೆ.

ಮಹಾತ್ಮಾ ಗಾಂಧಿ, ಡಾ ಬಿ ಆರ್ ಅಂಬೇಡ್ಕರ್, ಭಗತ್ ಸಿಂಗ್, ಡಾ ರಾಜೇಂದ್ರ ಪ್ರಸಾದ್ ಮತ್ತು ಸುಭಾಷ್ ಚಂದ್ರ ಬೋಸ್ ಸೇರಿದಂತೆ ದೇಶಪ್ರೇಮಿ ನಾಯಕರ 15 ಭಾವಚಿತ್ರಗಳನ್ನು ಏಕಕಾಲದಲ್ಲಿ ರಚಿಸುವ ವಿಡಿಯೋ ಅದಾಗಿದೆ. ಸದ್ಯ ಈ ವಿಡಿಯೋ  ವೈರಲ್ ಆಗಿದ್ದು, ಏನ್‌ಸುದ್ದಿ.ಕಾಂನ ಹಲವು ಓದುಗರು ವಿಡಿಯೋವನ್ನು ಪರಿಶೀಲಿಸುವಂತೆ ವಿನಂತಿಸಿದ್ದಾರೆ.

ಹಾಗಿದ್ದರೆ 15 ಬೇರೆ ಬೇರೆ ಚಿತ್ರಗಳನ್ನು ಏಕಕಾಲಕ್ಕೆ ರಚಿಸಲು ಸಾಧ್ಯವೆ?  ವೈರಲ್ ವಿಡಿಯೋದಲ್ಲಿರುವ ದೃಶ್ಯಾವಳಿಗಳು ವಿಶ್ವಾಸಾರ್ಹವೇ ಎಂದು ಪರಿಶೀಲಿಸೋಣ.

ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್:

ಸಾಮಾನ್ಯವಾಗಿ ಒಂದು ನಿಗದಿತ ಸಮಯದಲ್ಲಿ ಒಂದು ವಿಷಯದ ಬಗ್ಗೆ ಗಮನಹರಿಸುವುದೇ ಕಷ್ಟವಾಗಿರುವಾಗ, ಒಮ್ಮೆಲೆ 15 ವಿಭಿನ್ನ ಚಿತ್ರಗಳನ್ನು ರಚಿಸುತ್ತಾರೆ ಎಂದರೆ ಬಾಯಲ್ಲಿ ಹೇಳಿದಷ್ಟು ಸುಲಭವೇನಲ್ಲ. ಈ ಕುರಿತು ವಿವರವಾಗಿ ನೋಡೋಣ.

ವಿಡಿಯೋವನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ ಇಂಡಿಯನ್ ಎಕ್ಸ್‌ಪ್ರೆಸ್, ಮಿಂಟ್, ಟೈಮ್ಸ್‌ನೌ  ಸುದ್ದಿ ಮಾಧ್ಯಮಗಳು ವರದಿಗಳನ್ನು ಪ್ರಕಟಿಸಿವೆ. ಮಹೀಂದ್ರಾ ಗ್ರೂಪ್‌ನ ಚೇರ್‌ಮೆನ್ ಆಗಿರುವ ಆನಂದ್ ಮಹೀಂದ್ರಾರವರು ಟ್ವೀಟ್ ಮಾಡಿದ್ದು “ಇದು ಹೇಗೆ ಸಾಧ್ಯ?? ನಿಜವಾಗಿಯೂ ಆಕೆ ಪ್ರತಿಭಾವಂತ ಕಲಾವಿದೆ. ಆದರೆ ಒಂದೇ ಬಾರಿಗೆ 15 ಭಾವಚಿತ್ರಗಳನ್ನು ರಚಿಸುವುದು ಕಲೆಗಿಂತ ಹೆಚ್ಚು – ಇದು ಒಂದು ಪವಾಡ! ಆಕೆಯ ಬಳಿ ಇರುವ ಯಾರಾದರೂ ಈ ಸಾಧನೆಯನ್ನು ದೃಢೀಕರಿಸಬಹುದೇ? ನಿಜವಾಗಿದ್ದರೆ, ಆಕೆಯನ್ನು ಪ್ರೋತ್ಸಾಹಿಸಬೇಕು ಮತ್ತು ವಿದ್ಯಾರ್ಥಿವೇತನ ಮತ್ತು ಇತರ ರೀತಿಯ ಬೆಂಬಲವನ್ನು ಒದಗಿಸಲು ನಾನು ಸಂತೋಷಪಡುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಸಾಮಾನ್ಯವಾಗಿ ಈ ರೀತಿ ಚಿತ್ರಗಳನ್ನು ರಚಿಸಲು ಸಾಧ್ಯವಾಗುವುದು ಗಣಕಯಂತ್ರಕ್ಕೆ ಮತ್ತು ಪ್ರೋಗ್ರಾಮ್ ಮಾಡಬಹುದಾದ ರೋಬಾಟ್‌ಗೆ ಮಾತ್ರ ಸಾಧ್ಯ ಎಂದು ಹಲವು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ನೂರ್ ಜಹಾನ್ ತನ್ನ ಸ್ಥಾನವನ್ನು ಪಡೆದುಕೊಂಡಿದ್ದಾಳೆ ಎಂದು ವಿಡಿಯೋಗಳಲ್ಲಿ ಹೇಳಿಕೆಗಳು ಇದ್ದರೂ, ಅದರ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. “ನಾನು ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ಈ ಹೆಸರನ್ನು ಕ್ರಾಸ್-ಚೆಕ್ ಮಾಡಿದ್ದೇನೆ ಆದರೆ ಅಂತಹ ಹೆಸರು ಕಂಡುಬಂದಿಲ್ಲ” ಎಂದು ಯೂಟ್ಯೂಬ್ ಬಳಕೆದಾರರು ಕಮೆಂಟ್ ಮಾಡಿದ್ದಾರೆ.

ಕಲಾವಿದರು ಏಕಕಾಲದಲ್ಲಿ 15 ಚಿತ್ರಗಳನ್ನು ಬಿಡಿಸುವ ವೀಡಿಯೊದ ಸತ್ಯಾಸತ್ಯತೆಯನ್ನು ಪ್ರಶ್ನಿಸುವ ಜನರಿದ್ದಾರೆ. ಹಾಗೆಯೇ ಇದು ನಿಜವೆಂದು ನಂಬುವ ಜನರ ಸಂಖ್ಯೆ ಇನ್ನು ಹೆಚ್ಚಿದೆ ಎಂದು ಬಳಕೆದಾರರೊಬ್ಬರು ಬರೆದಿದ್ದಾನೆ. “ವಾಹ್ ವಾಟ್ ಎ ಎಡಿಟಿಂಗ್ ” ಎಂದು ಮತ್ತೊಬ್ಬರು ಬರೆದಿದ್ದಾರೆ.

“ಇದು ಪ್ರತಿಭೆ ಅಲ್ಲ. ಇದು ವಂಚನೆ. ಭೌತಿಕವಾಗಿ ಸಾಧ್ಯವಿಲ್ಲದ್ದನ್ನು ಯಾರಿಂದಲೂ ಸಾಧಿಸಲು ಸಾಧ್ಯವಿಲ್ಲ. ಈಗಾಗಲೇ ರಚಿತವಾಗಿರುವ ಅತ್ಯುತ್ತಮವಾದ ಚಿತ್ರಗಳನ್ನು ತಾನೇ ರಚಿಸಿರುವಂತೆ ವಿಡಿಯೋ ಮಾಡಿ ಬಹಿರಂಗಪಡಿಸುತ್ತಿದ್ದಾಳೆ” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.

ಕನ್ನಡದ ಹಿರಿಯ ಪತ್ರಕರ್ತರು ಚಿಂತಕರು ಆಗಿರುವ ರಾಜಾರಾಮ್ ತಲ್ಲೂರ್ ವೈರಲ್ ವಿಡಿಯೋ ಬಗ್ಗೆ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು ರಾಜಾರಾಮ್ ಅವರು ಹೇಳುವಂತೆ ” ಇಲ್ಲಿ ವೀಡಿಯೋದಲ್ಲಿ ಹುಡುಗಿಯೊಬ್ಬಾಕೆ ಬೆತ್ತದ ಚೌಕಟ್ಟಿಗೆ ಲಂಬವಾಗಿ ಬಾಲ್ ಪಾಯಿಂಟ್ ಪೆನ್‌ಗಳನ್ನು ಕಟ್ಟಿ, ಅದರಲ್ಲಿ ಏಕಕಾಲಕ್ಕೆ ಹದಿನೈದು ವಿಭಿನ್ನ ಚಿತ್ರಗಳನ್ನು ರಚಿಸಿದ್ದಾಳೆ ಎಂದು ಕ್ಲೇಮ್ ಮಾಡಲಾಗಿದೆ, ಜೊತೆಗೆ ಇದಕ್ಕೆ ಅದೇನೋ ಗಿನ್ನೆಸ್ ರೆಕಾರ್ಡ್ ಕೂಡ ಆಗಿದೆ ಅಂತೆ! ಕಿಲೋಮೀಟರ್ ಗಟ್ಟಲೆ ಪೆನ್ನಲ್ಲಿ ಬರೆದಿರುವ ಸುಶಿಕ್ಷಿತರಿಗೆ, ಹೀಗೆ ಪೆನ್ನುಗಳನ್ನು ಕಟ್ಟಿಕೊಂಡಾಗ ಅಬ್ಬಬ್ಬಾ ಎಂದರೆ ಒಂದೇ ಚಿತ್ರವನ್ನು (ಅದೂ ಕೂಡ ಹಗ್ಗದಲ್ಲಿ ಕಟ್ಟಿದರೆ ಅಸಂಭವ!) ಹದಿನೈದು ಪ್ರತಿ ಮಾಡಬಹುದೇ ಹೊರತು ಹದಿನೈದು ಬೇರೆ ಬೇರೆ ಚಿತ್ರಗಳನ್ನಲ್ಲ ಎಂಬುದು ಯಾಕೆ ತಲೆಗೆ ಹೋಗಲಿಲ್ಲ? ಬಾಲ್ ಪಾಯಿಂಟ್ ಪೆನ್ನಿನ ಮೊನೋಟೋನಿನಲ್ಲಿ ಶೇಡ್ ಗಳನ್ನು ರಚಿಸಲು ಸಾಧ್ಯವಿಲ್ಲ ಎಂದು ಯಾಕೆ ಅರ್ಥ ಆಗಲಿಲ್ಲ? ಈಗ ವೀಡಿಯೊ ಎಡಿಟಿಂಗ್ ಗಳು ಸಾಧ್ಯ ಇರುವಾಗ ಇಂತಹ ಕಣ್ಕಟ್ಟು ಏನು ಬೇಕಾದರೂ ಮಾಡಬಹುದು ಎಂಬ ಸಾಧ್ಯತೆ ಯಾಕೆ ತಲೆಗೆ ಹೊಳೆಯಲಿಲ್ಲ? ಎಂದು  ವೈರಲ್ ವಿಡಿಯೋ ಕುರಿತಾಗಿ ಪ್ರಶ್ನೆಯನ್ನು ಎತ್ತಿದ್ದಾರೆ.

ವೈರಲ್ ವಿಡಿಯೋದ ಕೊನೆಯಲ್ಲಿ ಮೊಬೈಲ್ ಸಂಖ್ಯೆಯೊಂದನ್ನು ತೋರಿಸಲಾಗಿದ್ದು,  ಏನ್‌ಸುದ್ದಿ.ಕಾಂನಿಂದ ವಿಡಿಯೋದಲ್ಲಿ ತೋರಿಸಲಾದ ಸಂಖ್ಯೆಗೆ ಕರೆ ಮಾಡಿ ನೂರ್‌ಜಹಾನ್‌ ಬಗ್ಗೆ ಕೇಳಿದಾಗ ಕರೆಯನ್ನು ಸ್ವೀಕರಿಸಿದ ಮಹಿಳೆ ತಾನು ಆಕೆಯ ಸಹೋದರಿ ನೂರ್‌ಜಹಾನ್ ಸಂಪರ್ಕಿಸಲು ಸಂಜೆಗೆ ಕರೆ ಮಾಡಿ ಎಂದು ತಿಳಿಸಿದ್ದರು. ಪುನಃ 27 ಅಕ್ಟೋಬರ್ 2022ರ ಸಂಜೆ ಏನ್‌ಸುದ್ದಿ.ಕಾಂ ನಿಂದ ಸಂಪರ್ಕಿಸಿ ವಿಡಿಯೋ ವೈರಲ್ ಆಗುತ್ತಿರುವ ಬಗ್ಗೆ ವಿಚಾರಿಸಿ ಮಾಹಿತಿ ಕೇಳಿದಾಗ ನೂರ್‌ಜಹಾನ್ ವಿಡಿಯೋ ನಿಜವೆಂದು ತಿಳಿಸಿದ್ದಾರೆ.

ಆದರೆ ಹಲವರು ಈ ವಿಡಿಯೋ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ, ಒಮ್ಮೆಲೆ 15 ಬೇರೆ ಬೇರೆ ಚಿತ್ರಗಳನ್ನು ಬಿಡಿಸಲು ಹೇಗೆ ಸಾಧ್ಯ ಎಂದು ಕರೆ ಮಾಡಿ ಕೇಳಿದಾಗ, ನಿರಂತರ ಅಭ್ಯಾಸದಿಂದ ಈ ರೀತಿ ಚಿತ್ರ ಬಿಡಿಸಲು ಸಾಧ್ಯವಾಗಿದೆ. ಈ ವಿಡಿಯೋ ಫೇಕ್ ಅಲ್ಲ ಎಂದು ತಿಳಿಸಿದ್ದಾರೆ. ಮುಂದುವರೆದು ಒಂದು ಲೈವ್ ಮೂಲಕ ಇದೇ ಚಿತ್ರವನ್ನು ರಚಿಸಲು ಸಾಧ್ಯವೆ ಎಂದು ಕೇಳಿದಾಗ ಅದಕ್ಕೆ ಸರಿಯಾಗಿ ಪ್ರತಿಕ್ರಿಯಿಸದ ನೂರ್‌ಜಹಾನ್ , ಲೈವ್ ವಿಡಿಯೋ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಹಾಗಾಗಿ ಈ ವಿಡಿಯೋದ ದೃಶ್ಯಾವಳಿಗಳು ನಂಬಲು ವಿಶ್ವಾಸಾರ್ಹವಲ್ಲ.

ನೂರ್‌ಜಹಾನ್ ಅವರ ಹೆಸರಿನಲ್ಲಿ ಯಾವುದೇ ಗಿನ್ನಿಸ್ ದಾಖಲೆ ಇಲ್ಲ. ವೈರಲ್ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ  ಪೋಸ್ಟ್ ಮಾಡಿರುವ ಅಜಯ್ ಮೀನಾ ಅವರು ತಮ್ಮ ಹೆಸರಿನಲ್ಲಿ ಯಾವುದೇ ಗಿನ್ನೆಸ್ ವಿಶ್ವ ದಾಖಲೆ ಇಲ್ಲ ಎಂದು FACTLY ಗೆ ಸ್ಪಷ್ಟಪಡಿಸಿದ್ದಾರೆ ಎಂದು ವರದಿ ಮಾಡಿದೆ.

ಆದರೆ ನೂರ್‌ಜಹಾನ್ ನಿಜವಾಗಿಯೂ ಒಂದೇ ಕೈಯಿಂದ 15 ಭಾವಚಿತ್ರಗಳನ್ನು ಏಕಕಾಲದಲ್ಲಿ ಚಿತ್ರಿಸಿದ್ದಾರೆ ಎಂದು ಹೇಳುವ ಅಜಯ್ ಮೀನಾ, ಇದು ಒಂದು ದಿನದಲ್ಲಿ ರಚಿಸಿದ ಚಿತ್ರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ನೂರ್ ಜಹಾನ್ ಪ್ರತಿನಿತ್ಯ ಕೆಲವು ಗಂಟೆಗಳ ಕಾಲ ಚಿತ್ರ ರಚನೆ ಮಾಡುವ ಮೂಲಕ ಒಂದು ತಿಂಗಳ ಅವಧಿಯಲ್ಲಿ ಭಾವಚಿತ್ರಗಳನ್ನು ಬಿಡಿಸಿದ್ದಾರೆ ಎಂದಿದ್ದಾರೆ.

ಆದರೆ, ಇಂತಹ ಸಾಧನೆಯ ಸಾಧ್ಯತೆಯ ಬಗ್ಗೆ ಅನುಮಾನಗಳಿವೆ ಮತ್ತು ವಾಸ್ತವವಾಗಿ ವೀಡಿಯೊದ ದೃಢೀಕರಣವನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ. ಆಕೆಯ ಹೆಸರಿನಲ್ಲಿ ಯಾವುದೇ ಗಿನ್ನೆಸ್ ವಿಶ್ವ ದಾಖಲೆ ಇಲ್ಲದ ಕಾರಣ, ಪೋಸ್ಟ್‌ನಲ್ಲಿ ಮಾಡಿದ ಹೇಳಿಕೆಯು ತಪ್ಪುದಾರಿಗೆಳೆಯುವಂತಿದೆ ಎಂದು ಫ್ಯಾಕ್ಟ್‌ಲಿ ವರದಿ ಮಾಡಿದೆ.

ಇದು ಹಂತ ಹಂತವಾಗಿ ಬಿಡಿಸಿದ ಚಿತ್ರವನ್ನು ಎಡಿಟ್ ಮಾಡಿ ಹರಿಯಬಿಡಲಾಗಿದೆ ಎಂಬು ಮೇಲ್ನೋಟಕ್ಕೆ ಕಂಡುಬಂದಿದೆ. ಅಲ್ಲದೆ ಫೇಸ್‌ಬುಕ್ ಲೈವ್ ಮೂಲಕ ವಿಡಿಯೋ ಮಾಡಲು ನೂರ್ ಜಹಾನ್ ನಿರಾಕರಿಸಿದ್ದಾರೆ. ಹಾಗಾಗಿ ಏಕಕಾಲದಲ್ಲಿ 15 ಚಿತ್ರಗಳನ್ನು ಬಿಡಿಸಿರುವುದಕ್ಕೆ ದಾಖಲೆಗಳಿಲ್ಲ ಎಂದು ಹೇಳಬಹುದಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಫ್ಯಾಕ್ಟ್‌ಚೆಕ್: ಒಮ್ಮೆಲೆ 15 ಚಿತ್ರಗಳನ್ನು ಬಿಡಿಸಿ ಗಿನ್ನೀಸ್ ದಾಖಲೆ ನಿರ್ಮಿಸಿದ್ದು ನಿಜವೇ?

  • November 1, 2022 at 9:47 am
    Permalink

    ನೂರ್ ಜಹಾನ್ ಬಿಡಿಸಿದ ಚಿತ್ರಗಳ ನೋಡಿ ನಾನು ದಂಗುಬಡಿದು ಹೋದೆ! ಆಶ್ಚರ್ಯ ಆಯ್ತು ಆದರೆ ಅನುಮಾನಿಸದೆ ಲೈಕ್ ಕೊಟ್ಟೆ! ಈಗ ಫ್ಯಾಕ್ಟ್ ಚೆಕ್ ಲೇಖನ ನೋಡಿ, ನಾನೆಷ್ಟು ಬುದ್ಧಿಹೀನ ಎನಿಸಿತು. ಪೋಸ್ಟ್ ಗಳನ್ನು ಹರಿಬಿಡುವ ಮತ್ತು ಫಾರ್ವರ್ಡ್ ಮಾಡುವವರಿಗೆ, ಒಂದು ನೀತಿ ಸಂಹಿತೆ ಇಲ್ಲದಿದ್ದರೆ, ಸಾರ್ವಜನಿಕ ವೇದಿಕೆಗಳು ಹೀಗೆ ದುರುಪಯೋಗ ಆಗುತ್ತವೆ. ಹರಿಬಿಟ್ಟ ಪೋಸ್ಟ್, ಗಂಭೀರ ವಿಷಯ ಒಳಗೊಂಡಿದ್ದರೆ, ಪರಿಣಾಮ ಅತ್ಯಂತ ಕ್ರೂರವೂ ಆಗಬಹುದು. ಸುಳ್ಳು, ತಪ್ಪು ಮಾಹಿತಿ ಮತ್ತು ಸಂದೇಶ ಕೊಡುವ ಇಂತಹ ಪೋಸ್ಟ್ ಗಳನ್ನು ಹಾಕುವವರಿಗೆ, ದಂಡ ವಿಧಿಸುವಂತಾಗಬೇಕು. ಆಗಲಾದರೂ, ವಿವೇಚನಾರಹಿತ ಪೋಸ್ಟ್ ಗಳು ಕಡಿಮೆ ಆಗಬಹುದು.

    Reply

Leave a Reply

Your email address will not be published.

Verified by MonsterInsights