ಫ್ಯಾಕ್ಟ್‌ಚೆಕ್: 2018 ಚಿತ್ರವನ್ನು ಪ್ರಸ್ತುತ ಜೋಶಿಮಠದ ಭೂಕುಸಿತ ಎಂದು ತಪ್ಪಾಗಿ ಹಂಚಿಕೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ರಾಷ್ಟ್ರೀಯ ದೂರಸಂವೇದಿ ಕೇಂದ್ರ ಜೋಶಿಮಠದ ಉಪಗ್ರಹ ಚಿತ್ರಗಳನ್ನು ಮತ್ತು ಭೂ ಕುಸಿತದ ಪ್ರಾಥಮಿಕ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಈ ಚಿತ್ರದ ಮೂಲಕ ಇನ್ನು ಕೆಲವೇ ದಿನಗಳಲ್ಲಿ ಇಡೀ ಜೋಶಿಮಠ ಮುಳುಗುವ ಎಚ್ಚರಿಕೆಯನ್ನು ನೀಡಿದೆ.

ಇತ್ತ ಸಾಮಾಜಿಕ ಮಾಧ್ಯಮಗಳಲ್ಲಿ ಭೂಕುಸಿತ್ ಫೋಟೊಗಳು ಎಂದು ಹೇಳಿಕೊಂಡು, , “ಮುಳುಗುತ್ತಿರುವ ಜೋಶಿಮಠ” ದಿಂದ 600 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರು ಚಿತ್ರ ಜೋಶಿಮಠದಲ್ಲಿ ಉಂಟಾಗಿರುವ ಭೂಕುಸಿತಕ್ಕೆ ಸಂಬಂಧಿಸಿದೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಚಿತ್ರ ಜೋಶಿಮಠದ್ದಲ್ಲ ಎಂದು ತಿಳಿದುಬಂದಿದೆ. ವೈರಲ್ ಫೋಟೋಕ್ಕೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ. ಅದರ ಬಗ್ಗೆ ತನಿಖೆ ನಡೆಸಿದಾಗ ಅದು ಪೆರುವಿನಿಂದ ಬಂದದ್ದು ಎಂದು ತಿಳಿದುಬಂದಿದೆ.

ಅಲ್ಲಿನ ರಕ್ಷಣಾ ಸಚಿವಾಲಯವು ಮಾರ್ಚ್ 16, 2018 ರಂದು ಫೋಟೋವನ್ನು ಹಂಚಿಕೊಂಡಿದೆ. ಆ ಸಮಯದಲ್ಲಿ ಲುಸ್ಕೋ ಜಿಲ್ಲೆಯಲ್ಲಿ ಭಾರಿ ಭೂಕುಸಿತ ಸಂಭವಿಸಿತ್ತು. ಇದು ಹೆಚ್ಚಿನ ಜನಸಂಖ್ಯೆ ಮೇಲೆ ಪರಿಣಾಮ ಬೀರಿತ್ತು. ಯೂಟ್ಯೂಬ್‌ನಲ್ಲಿ ವಿಡಿಯೊವನ್ನು ಸಹ ಅಪ್‌ಲೋಡ್ ಮಾಡಲಾಗಿದೆ. ಅದರಲ್ಲಿ 5 ಪ್ರಮುಖ ಭೂಕುಸಿತಗಳು ಕಂಡು ಬಂದಿವೆ. ಇದು ಪೆರುವಿನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಲಾಗಿದೆ. ಹೀಗಿರುವಾಗ ಅದು ಉತ್ತರಾಖಂಡ ಅಥವಾ ಭಾರತದಿಂದಲ್ಲ ಎಂಬುದು ಸ್ಪಷ್ಟ.

ಜೋಶಿಮಠದಲ್ಲಿ ಏನಾಗಿದೆ?

ಜೋಶಿಮಠದಲ್ಲಿ 700 ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕುಗಳು ಕಂಡು ಬಂದಿವೆ. ಆದರೆ ಯಾವುದೇ ದೊಡ್ಡ ಭೂಕುಸಿತ ಸಂಭವಿಸಿಲ್ಲ. ಇದರ ಬೆನ್ನಲ್ಲೆ ಅಲ್ಲಿ ವಾಸಿಸುವ ಎಲ್ಲ ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಇದರೊಂದಿಗೆ ಜನರಿಗೆ ಪರಿಹಾರ ನೀಡಲಾಗುತ್ತಿದೆ.

ಚಿತ್ರಗಳನ್ನು ಕಾರ್ಟೊಸ್ಯಾಟ್-2ಎಸ್ ಉಪಗ್ರಹದಿಂದ ತೆಗೆಯಲಾಗಿದೆ. ಹೈದರಾಬಾದ್ ಮೂಲದ ಎನ್ಆರ್’ಎಸ್’ಸಿ ಮುಳುಗುತ್ತಿರುವ ಪ್ರದೇಶಗಳ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಇಸ್ರೋದ ಪ್ರಾಥಮಿಕ ವರದಿಯ ಆಧಾರದ ಮೇಲೆ, ಉತ್ತರಾಖಂಡ ಸರ್ಕಾರವು ಅಪಾಯ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಹೆಚ್ಚಿಸಿದೆ ಈ ಪ್ರದೇಶಗಳಲ್ಲಿರುವ ಜನರನ್ನು ಆದ್ಯತೆಯ ಮೇಲೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಪ್ರಯತ್ನವನ್ನು ಮಾಡುತ್ತಿದೆ.

ವರದಿಯ ಪ್ರಕಾರ, 2022ರ ಏಪ್ರಿಲ್ ಮತ್ತು ನವೆಂಬರ್ ನಡುವೆ ಭೂಮಿಯ ಕುಸಿತವು ನಿಧಾನವಾಗಿತ್ತು. ಈ ಸಮಯದಲ್ಲಿ ಜೋಶಿಮಠವು 8.9 ಸೆಂ.ಮೀ ಕುಸಿದಿದೆ. ಆದರೆ 2022ರ ಡಿಸೆಂಬರ್ 27ರಿಂದ 2023 ಜನವರಿ 8ರ ನಡುವೆ, ಭೂಮಿಯ ಕುಸಿತದ ತೀವ್ರತೆ ಹೆಚ್ಚಾಗಿದೆ. ಈ 12 ದಿನಗಳ ಅಂತರದಲ್ಲಿ ಪಟ್ಟಣ 5.4 ಸೆಂ.ಮೀ ನಷ್ಟು ಕುಸಿದಿದೆ ಎಂದು ತಿಳಿಸಿದೆ.

ಭೂ ಕುಸಿತದಿಂದ ಜೋಶಿಮಠ-ಔಲಿ ರಸ್ತೆಯೂ ನಾಶವಾಗಲಿದೆ ಎಂದು ಇಸ್ರೋ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಪಟ್ಟಣದಲ್ಲಿ ಭೂಮಿ ಕುಸಿದ ನಂತರ ಮನೆ, ರಸ್ತೆಗಳಲ್ಲಿ ಕಾಣಿಸಿಕೊಂಡ ಬಿರುಕುಗಳ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದರೂ ಇಸ್ರೋದ ಪ್ರಾಥಮಿಕ ವರದಿಯಲ್ಲಿ ಕಂಡು ಬಂದಿರುವುದು ಭಯ ಹುಟ್ಟಿಸುವಂತಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಜೋಶಿಮಠದ ಭೂಕುಸಿತ್ ಫೋಟೊ ಎಂದು ಹಂಚಿಕೊಳ್ಳಲಾಗಿರುವ ಫೋಟೋ ಜೋಶಿಮಠದಲ್ಲ. ಅದು 2018ರಲ್ಲಿ ಪೆರುವಿನಲ್ಲಿ ಉಂಟಾದ ಭೂಕುಸಿತದ ಚಿತ್ರ. ಹಾಗಾಗಿ ಫೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ದಿ ಕ್ವಿಂಟ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ‘ದಿ ಕಾಶ್ಮೀರ್ ಫೈಲ್ಸ್‌’ ಚಿತ್ರ ಆಸ್ಕರ್ ಪಟ್ಟಿಗೆ ಸೇರಿದೆ ಎಂದು ಸುಳ್ಳು ಹೇಳಿದ ನಿರ್ದೇಶಕ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights