ಫ್ಯಾಕ್ಟ್ಚೆಕ್: ಸಲ್ಮಾನ್ ರಶ್ದಿ ಇಸ್ಲಾಂ ವಿರೋಧಿ ಹೇಳಿಕೆ ನೀಡಿದ್ದರೆ?
ಭಾರತೀಯ ಮೂಲದ ಬ್ರಿಟಿಷ್-ಅಮೆರಿಕನ್ ಪ್ರಖ್ಯಾತ ಕಾದಂಬರಿಕಾರ ಸಲ್ಮಾನ್ ರಶ್ದಿ ಅವರ ಉಲ್ಲೇಖ ಹೊಂದಿರುವ ಪೋಸ್ಟ್ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು ಇಸ್ಲಾಂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಟ್ವಿಟರ್ನಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ.
— Lokākāśa (@Lokakas) February 6, 2023
“ಎಲ್ಲ ಧರ್ಮಗಳು ಹಾಗೂ ಸಂಸ್ಕೃತಿ ನಾಶವಾಗುವವರೆಗೆ ಅಥವಾ ಎಲ್ಲರೂ ಮತಾಂತರ ಆಗುವವರೆಗೆ ಇಸ್ಲಾಂ ವಿರಮಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ಇಡೀ ಜಗತ್ತಿಗೆ ನೀಡಲು ಬಯಸುತ್ತೇನೆ’ ಎಂಬುದಾಗಿ ರಶ್ದಿ ಹೇಳಿದ್ದಾರೆ ಎನ್ನಲಾಗಿದೆ. ಫೆಬ್ರುವರಿ 7 ರಂದು ಟ್ವಿಟರ್ ಬಳಕೆದಾರರಾದ @Lokakas ಎಂಬುವವರು ಕಾದಂಬರಿಕಾರ ಸಲ್ಮಾನ್ ರಶ್ದಿಯವರ ಚಿತ್ರದೊಂದಿಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಹೇಳಿಕೆಯನ್ನು ಸಲ್ಮಾನ್ ರಶ್ದಿ ನೀಡಿದ್ದಾರೆಯೇ ಎಂದು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್ಅನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಸಲ್ಮಾನ್ ರಶ್ದಿ ಅವರು ಇಸ್ಲಾಂ ವಿರೋಧಿ ಹೇಳಿಕೆ ನೀಡಿಲ್ಲ ಎಂದು ‘PTI’ ಸುದ್ದಿಸಂಸ್ಥೆಯು ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.
ರಶ್ದಿ ಅವರು ಸ್ವತಃ ಟ್ವೀಟ್ ಮಾಡಿದ್ದು, ‘ನಾನು ಈ ಹೇಳಿಕೆ ನೀಡಿಲ್ಲ, ಇದು ನನ್ನದಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. ರಶ್ದಿ ಅವರು ಇಸ್ಲಾಂ ವಿರೋಧಿ ಹೇಳಿಕೆ ನೀಡಿರುವ ಯಾವ ಮಾಹಿತಿಯೂ ಗೂಗಲ್ನಲ್ಲಿ ಸಿಗಲಿಲ್ಲ ಎಂದು PTI ತಿಳಿಸಿದೆ. ರಶ್ದಿ ಅವರು ಕಳೆದ ಆಗಸ್ಟ್ನಲ್ಲಿ ನ್ಯೂಯಾರ್ಕ್ನಲ್ಲಿ ಭಾಷಣ ಮಾಡುವ ವೇಳೆ ವ್ಯಕ್ತಿಯೊಬ್ಬರು ಅನೇಕ ಬಾರಿ ಇರಿದಿದ್ದರು. ದಾಳಿಯಲ್ಲಿ 75 ವರ್ಷದ ರಶ್ದಿ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರು. ಎಡಗೈಗೆ ತೀವ್ರ ಪೆಟ್ಟಾಗಿತ್ತು
Fake quote. Not said by me, https://t.co/TzaZq158aJ
— Salman Rushdie (@SalmanRushdie) February 7, 2023
ಒಟ್ಟಾರೆಯಾಗಿ ಹೇಳುವುದಾದರೆ, ಕಾದಂಬರಿಕಾರ ರಶ್ದಿಯವರು ಇಸ್ಲಾಂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಪ್ರತಿಪಾದಿಸಿ ಮಾಡಿದ್ದಾರೆ ಎನ್ನಲಾದ ಪೋಸ್ಟ್ ಸುಳ್ಳು ಮತ್ತು ರಶ್ದಿ ಎಂದಿಗೂ ಅಂತಹ ಯಾವುದೇ ಹೇಳಿಕೆಯನ್ನು ಮಾಡಿಲ್ಲ ಎಂದು PTI ವರದಿ ಮಾಡಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಅದಾನಿ ಸಂಸ್ಥೆಯೊಂದಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ಗೆ ಅಕ್ರಮ ಸಂಬಂಧ ಇದೆಯೇ?

