ಫ್ಯಾಕ್ಟ್‌ಚೆಕ್: ಅದಾನಿ ಸಂಸ್ಥೆಯೊಂದಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ಗೆ ಅಕ್ರಮ ಸಂಬಂಧ ಇದೆಯೇ?
ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹ ಸಂಸ್ಥೆಗಳ ಷೇರುಗಳಿಗೆ ಹಾಗೂ ಹಣಕಾಸಿಗೆ ಸಂಬಂಧಿಸಿದಂತೆ ಭಾರೀ ಅವ್ಯವಹಾರ ನಡೆದಿದೆ ಎಂದು ಅಮೆರಿಕ ಮೂಲದ ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆ ಆರೋಪ ಹೊರಿಸಿರುವುದು ಭಾರೀ ಸಂಚಲನ ಮೂಡಿಸಿದೆ. ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.
https://twitter.com/madhumaiya/status/1624274805817241600
ಅದಾನಿ ಸಂಸ್ಥೆಯ ವಂಚನೆ ಆರೋಪದ ಹಿನ್ನಲೆಯಲ್ಲಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಟೀಕಾ ಪ್ರಹಾರ ನಡೆಸಿದ ಬೆನ್ನಲ್ಲೆ, ರಾಜಕೀಯ ತಿರುಚಾಟ ನಡೆಯುತ್ತಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಗುಜರಾತ್ ಮೂಲದ ಅದಾನಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಅದಾನಿ ಅವರೊಂದಿಗೆ ಇರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
“ಗುಜರಾತ್ ಮೂಲದ ಅದಾನಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಅದಾನಿ ಅವರನ್ನು ತಮ್ಮ ಮನೆಗೆ ಕರೆಸಿಕೊಂಡು ‘ಮಹತ್ವದ ಮಾತುಕತೆ’ ನಡೆಸಿದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ” ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮೋದಿ ಮತ್ತು ಅದಾನಿ ಜೊತೆಗಿನ ಫೋಟೊವನ್ನು ಸಂಸತ್‌ನಲ್ಲಿ ಪ್ರದರ್ಶಿಸಿದ್ದರು. ಆ ಚಿತ್ರಕ್ಕೆ ಪ್ರತಿಯಾಗಿ ಪೋಸ್ಟ್‌ಕಾರ್ಡ್ ಕನ್ನಡ ಎಂಬ ಬಲಪಂಥೀಯ ಪ್ರೊಪಗಾಂಡ ಫೇಸ್‌ಬುಕ್ ಪೇಜ್‌ನಲ್ಲಿ ಪೋಟೊವನ್ನು ಹರಿಬಿಡಲಾಗಿದೆ. “ಕರ್ನಾಟಕ ಕಾಂಗ್ರೆಸ್ ಅದಾನಿ ಸಮೂಹ ಸಂಸ್ಥೆಯೊಂದಿಗೆ ಕಳ್ಳವ್ಯವಹಾರ ಮಾಡಿದೆ” ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಪೋಸ್ಟ್‌ಕಾರ್ಡ್ ಹಂಚಿಕೊಂಡಿದೆ.
ಸಿದ್ದರಾಮಯ್ಯ ಮತ್ತು ಅದಾನಿ ಕಂಪನಿಯ MD ರಾಜೇಶ್ ಅದಾನಿ ಇರುವ ವೈರಲ್ ಫೋಟೊವನ್ನು ಏನ್‌ಸುದ್ದಿ.ಕಾಂ ವಾಟ್ಸಾಪ್‌ಗೆ ಕಳುಹಿಸುವ ಮೂಲಕ ಇದರ ಸತ್ಯಾಸತ್ಯತೆಗಳನ್ನು ಪರಿಶೀಲಿಸುವಂತೆ ಹಲವು ಸಾಮಾಜಿಕ ಮಾಧ್ಯಮದ ಬಳಕೆದಾರರು ವಿನಂತಿಸಿದ್ದಾರೆ. ಹಾಗಿದ್ದರೆ ಈ ವೈರಲ್ ಪೋಟೊದ ಹಿನ್ನಲೆ ಏನೆಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಅದಾನಿ ಗ್ರೂಪ್ ಜೊತೆಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವ್ಯವಹಾರವನ್ನು ಹೊಂದಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ಅನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, 2015ರ ಡೆಕ್ಕನ್ ಕ್ರಾನಿಕಲ್ ಮಾಡಿರುವ ವರದಿಯೊಂದು ಲಭ್ಯವಾಯಿತು.
ಕರ್ನಾಟಕದಲ್ಲಿ ಉಂಟಾಗಿದ್ದ ವಿದ್ಯುತ್ ಅಭಾವವನ್ನು ಪರಿಹರಿಸುವುದಾಗಿ ಅದಾನಿ ಪವರ್ ಲಿಮಿಟೆಡ್, 2015 ರ ಏಪ್ರಿಲ್‌ನಲ್ಲಿ ಹೈದರಾಬಾದ್ ಮೂಲದ ಪವರ್ ಕಂಪನಿ ಲ್ಯಾಂಕೋ ಇನ್‌ಫ್ರಾಟೆಕ್‌ನಿಂದ ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ (UPCL) ಅನ್ನು 6,300 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡಿತು. ಈ ಹಿನ್ನಲೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರೊಂದಿಗೆ ರಾಜೇಶ್ ಅದಾನಿ ಅವರು ಸಭೆ ನಡೆಸಿದರು ಎಂದು ಡೆಕ್ಕನ್ ಕ್ರಾನಿಕಲ್‌ನ ವರದಿ ತಿಳಿಸಿದೆ.
“ವಿದ್ಯುತ್ ಖರೀದಿಯ ವಿವರಗಳನ್ನು ಅಂತಿಮಗೊಳಿಸಲು ರಾಜ್ಯ ಇಂಧನ ಇಲಾಖೆಯೊಂದಿಗೆ ಎರಡನೇ ಸಭೆ ನಡೆಸಲಾಗುವುದು, ಎರಡು ವರ್ಷಗಳಲ್ಲಿ ಕರ್ನಾಟಕವು ವಿದ್ಯುತ್ ಸ್ವಾವಲಂಬಿಯಾಗಲಿದೆ. ಮುಖ್ಯಮಂತ್ರಿಯವರು ಮತ್ತು ಅದಾನಿ ಉಡುಪಿ ಜಿಲ್ಲೆಯ ನಡಿಕೂರಿನ ಮೀನುಗಾರಿಕಾ ಹಳ್ಳಿಯ ಪುನರ್ವಸತಿ ಬಗ್ಗೆ ಚರ್ಚಿಸಿದ್ದಾರೆ” ಎಂದು ವರದಿಯಾಗಿದೆ.
2015ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಸರ್ಕಾರವಿತ್ತು. ಆ ಅವಧಿಯಲ್ಲಿ ನಡೆದ ಸಭೆಯ ಪೋಟೊದ ನಿಜಸ್ವರೂಪವನ್ನು ಮುಚ್ಚಿಟ್ಟು “ಅದಾನಿ ಸಂಸ್ಥೆಯೊಂದಿಗೆ ಕಳ್ಳವ್ಯವಹಾರ” ಎಂದು ತಪ್ಪಾಗಿ ಹಂಚಿಕೊಂಡಿರುವುದು ಸ್ಪಷ್ಟವಾಗಿದೆ.
ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಪ್ರಶ್ನೆ:
ಅದಾನಿ ಸಂಸ್ಥೆಯ ವಿರುದ್ದದ ವಂಚನೆ ಆರೋಪ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಈಗ ಅದಾನಿ ಗ್ರೂಪ್ ಕಾನೂನು ಹೋರಾಟಕ್ಕೆ ಮುಂದಾಗಿದೆ. ಅಮೆರಿಕದ ಖ್ಯಾತ ಕಾನೂನು ಸಂಸ್ಥೆ ವಾಚೆಲ್, ಲಿಪ್ಟನ್, ರೋಸೆನ್ & ಕಾಟ್ಝ್ ಅನ್ನು ಗೊತ್ತುಪಡಿಸಿದೆ.
ಈ ಎಲ್ಲಾ ಬೆಳವಣೆಗೆಯ ಹಿನ್ನೆಯಲ್ಲಿ ಅದಾನಿ ಸಂಸ್ಥೆಯ ವಂಚನೆ ಬಗ್ಗೆ ಕರ್ನಾಟಕ ರಾಜ್ಯದಲ್ಲೂ ಭಾರೀ ಚರ್ಚೆಯಾಗುತ್ತಿದೆ. ಉದ್ಯಮಿ ಅದಾನಿ ಬಗ್ಗೆ ತನಿಖೆ ಮಾಡಲು ಸರ್ಕಾರ ಹಿಂಜರಿಯುತ್ತಿರುವುದೇಕೆ? ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಈ ಕುರಿತಾಗಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿಮ್ಮ ಖಾಸಾ ಸ್ನೇಹಿತರಾದ ಗೌತಮ್ ಅದಾನಿ ಉದ್ಯಮ ಸಾಮ್ರಾಜ್ಯದ ಕಳ್ಳಾಟಗಳನ್ನು ಹಿಂಡನ್ ಬರ್ಗ್ ವರದಿ ಬೆತ್ತಲೆ ಮಾಡಿದೆ. ಈ ಕಳ್ಳಾಟದಿಂದ ಭಾರತದ ಆರ್ಥಿಕತೆ ಕುಸಿದುಹೋಗುವ ಅಪಾಯ ಎದುರಿಸುತ್ತಿದೆ ಎಂದಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ಸುದ್ದಿಯಾಗಿ ಭಾರತದ ಮಾನ ಹರಜಾಗುತ್ತಿದೆ, ಬ್ಯಾಂಕುಗಳಲ್ಲಿ ಠೇವಣಿ ಇಟ್ಟವರು, ಎಲ್ ಐಸಿಯಲ್ಲಿ ಪಾಲಿಸಿ ಖರೀದಿಸಿದವರು ಆತಂಕದಲ್ಲಿದ್ದಾರೆ. ವಿರೋಧ ಪಕ್ಷಗಳ ನಾಯಕರು ಕೂತರೂ ನಿಂತರೂ ಸುಳ್ಳು ಆರೋಪಗಳನ್ನು ಹೊರಿಸಿ ಜೈಲಿಗಟ್ಟುತ್ತಿರುವ ಕೇಂದ್ರ ಸರ್ಕಾರ ಉದ್ಯಮಿ ಅದಾನಿ ಬಗ್ಗೆ ತನಿಖೆ ಮಾಡಲು ಹಿಂಜರಿಯುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.
ಈ ಎಲ್ಲ ವರದಿಗಳ ಆಧಾರದಲ್ಲಿ ಸಿದ್ದರಾಮಯ್ಯ ಮತ್ತು ಅದಾನಿ ಗ್ರೂಪ್ ನಡುವೆ ಕಳ್ಳ ವ್ಯವಹಾರ ನಡೆದಿದೆ ಎಂದು ಮಾಡಲಾಗಿರುವ ಆರೋಪ ಸುಳ್ಳು . 2015ರಲ್ಲಿ ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ (UPCL) ಅನ್ನು ಅದಾನಿ ಪವರ್ ಲಿಮಿಟೆಡ್ (APL ) ಗೆ ಸ್ವಾಧೀನಕ್ಕೆ ನೀಡುವ ಪ್ರಕ್ರಿಯೆಯ ಸಭೆಯ ಚಿತ್ರವನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: 1956ರಲ್ಲಿ ನೆಹರು ಇಂಗ್ಲೆಂಡ್ ಪೌರತ್ವ ಪಡೆದಿದ್ದು ನಿಜವೇ?
ಆ ತರಹ ಗುರುತರ ಅಪಾದನೆ ಮತ್ತು ಸಾಕ್ಷ್ಯ ಇದ್ದರೆ ನಿಮ್ಮ ಮಾಧ್ಯಮದ ಮೂಲಕ ಸಾರ್ವಜನಿಕರಿಗೆ ತಿಳಿಸಿ ಮತ್ತು cbi, ED, income tax ಸಂಸ್ಥೆಗಳಿಗೆ ಸಹ ಮಾಹಿತಿ ಒದಗಿಸಿ ಯಾರು ತಪ್ಪು ಮಾಡಿದರು ಅದು ತಪ್ಪೇ ,ಅದನ್ನ ಬಿಟ್ಟು ತೌಡು ತಿನ್ನುವ ಕೆಲಸವೇಕೆ? ಗೋದಿ ಮಾದ್ಯಮಗಳೇ?