ಫ್ಯಾಕ್ಟ್‌ಚೆಕ್ : ಬೇಸಿಗೆಯಲ್ಲಿ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕ್ಸಿದ್ರೆ ವಾಹನ ಸ್ಪೋಟಗೊಳ್ಳುವುದೇ?

ಮುಂದಿನ ದಿನಗಳಲ್ಲಿ ತಾಪಮಾನವು ಹೆಚ್ಚಾಗಲಿದೆ ಆದ್ದರಿಂದ ಬೇಸಿಗೆಯ ಕಾಲದಲ್ಲಿ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದರೆ ನಿಮ್ಮ ವಾಹನ ಸ್ಪೋಟಗೊಳ್ಳುತ್ತದೆ ಎಂಬ ಪೋಸ್ಟ್‌ರ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬೇಸಿಗೆ ಕಾಲ ಇರುವುದರಿಂದ ನಿಮ್ಮ ವಾಹನಗಳಿಗೆ ಫುಲ್ ಟ್ಯಾಂಕ್ ಇಂಧನವನ್ನು ತುಂಬಿಸಬೇಡಿ ಎಂದು ಇಂಡಿಯನ್ ಆಯಿಲ್ ಸಂಸ್ಥೆಯು ತನ್ನ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ರ್‌ವೊಂದು ವೈರಲ್ ಆಗುತ್ತಿದೆ.

ನಿಮ್ಮ ವಾಹನಗಳಿಗೆ ಇಂಧನ ತುಂಬಿಸುವಾಗ ಫುಲ್ ಟ್ಯಾಂಕ್ ಮಾಡಿಸಬೇಡಿ, ಒಂದು ವೇಳೆ ನೀವು ಗರಿಷ್ಠ ಮಿತಿಗೆ ಇಂಧನವನ್ನು ಭರ್ತಿ ಮಾಡಿಸಿದರೆ ಟ್ಯಾಂಕ್‌ನಲ್ಲಿ ಒತ್ತಡ ಉಂಟಾಗಿ ಗಾಳಿಯಾಡದೆ ನಿಮ್ಮ ವಾಹನ ಸ್ಪೋಟವಾಗುವ ಸಾಧ್ಯತೆ ಇರುತ್ತದೆ, ಇದೆ ರೀತಿ ಫುಲ್ ಟ್ಯಾಂಕ್ ಮಾಡಿದ 5 ವಾಹನಗಳು ಸ್ಫೋಟಗೊಂಡ ವರದಿಗಳಿವೆ ಎಂದು ಪೋಸ್ಟ್‌ರ್‌ನಲ್ಲಿ ಬರೆಯಲಾಗಿದೆ.

ಮುಂದುವರೆದು ಪೆಟ್ರೋಲ್ ಟ್ಯಾಂಕ್‌ನ ಮುಚ್ಚಳವನ್ನು ದಿನಕ್ಕೆ ಒಮ್ಮೆಯಾದರೂ ತೆರೆಯಿರಿ ಆಗ ನಿಮ್ಮ ವಾಹನದ ಟ್ಯಾಂಕ್‌ನಲ್ಲಿ ಇರುವ ಒತ್ತಡ ಕಡಿಮೆಯಾಗುತ್ತದೆ ಎಂದು ಹೇಳುತ್ತಾ, ಈ ಸಂದೇಶವನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ತಲುಪಿಸಿ ಇದರಿಂದ ಜನರು ಈ ಅಪಘಾತವನ್ನು ತಪ್ಪಿಸಬಹುದು ಎಂದು ತಿಳಿಸಿದೆ.

ಹಾಗಿದ್ದರೆ ಬೇಸಿಗೆಯಲ್ಲಿ ಫುಲ್ ಟ್ಯಾಂಕ್ ಇಂಧನ ಹಾಕಿಸಿದರೆ ವಾಹನಗಳು ಸ್ಫೋಟಗೊಳ್ಳುತ್ತದೆ ಎಂಬುದು ನಿಜವೆ? ಇಂಡಿಯನ್ ಆಯಿಲ್ ಕಂಪನಿಯ ಪ್ರಕಟಣೆಯಲ್ಲಿ ತಿಳಿಸಿರುವಂತೆ ಫುಲ್ ಟ್ಯಾಂಕ್ ಇಂಧನ ತುಂಬಿಸುವುದು ಅಪಾಯವೇ? ಪೋಸ್ಟ್‌ರ್‌ನ ಸತ್ಯಾಸತ್ಯೆತೆಗಳನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: 

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಯು ನಿಜವಾಗಿಯೂ ಈ ಸುದ್ದಿಯನ್ನು ಪ್ರಕಟಿಸಿದೆ ಎಂದು ತಿಳಿಯಲು ಅದರ ವೆಬ್‌ಸೈಟ್‌ಅನ್ನು ಸರ್ಚ್ ಮಾಡಲಾಯಿತು. ಪ್ರಕಟಣೆಯಲ್ಲಿ ಇರುವಂತೆ ವೆಬ್‌ಸೈಟ್‌ನಲ್ಲಿ ವೈರಲ್ ಪೋಸ್ಟರ್ ರೀತಿಯ ಹೇಳಿಕೆಗಳಿರುವ ಯಾವ ಪ್ರಕಟಣೆಯನ್ನು ಇಂಡಿಯನ್ ಆಯಿಲ್ ಸಂಸ್ಥೆಯು ಪ್ರಕಟಿಸಿಲ್ಲ.

ಆದರೆ 2019ರಲ್ಲಿಯೂ ಇದೇ ರೀತಿಯ ಸುದ್ದಿ ಹರಿದಾಡಿದಾಗ ಇಂಡಿಯನ್ ಆಯಿಲ್ ಕಂಪನಿ “ಯಾವುದೇ ಸಮಯದಲ್ಲಾದರೂ ಸರಿಯೇ ಫುಲ್ ಟ್ಯಾಂಕ್ ಮಾಡಿಸುವುದರಿಂದ ಯಾವುದೇ ತೊಂದರೆಯಿಲ್ಲ. ತಯಾರಕರ ಪ್ರಕಾರ ಸಂಪೂರ್ಣ ಸುರಕ್ಷಿತವಾಗಿರುತ್ತದೆ” ಎಂದು ಸ್ಪಷ್ಟನೆ ನೀಡಿದೆ.

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ದಾಖಲಿಸಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ, ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದು ಇಂಡಿಯನ್ ಆಯಿಲ್ ಸ್ಪಷ್ಟಪಡಿಸಿದೆ. ಇಂಡಿಯನ್ ಆಯಿಲ್ ಈ ಹೇಳಿಕೆಯನ್ನು ನಿರಾಕರಿಸುತ್ತದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಟ್ವೀಟ್ ಮಾಡಿದೆ.

“ಆಟೋಮೊಬೈಲ್ ತಯಾರಕರು ತಮ್ಮ ವಾಹನಗಳ ಅಗತ್ಯತೆಗಳು ಮತ್ತು ಸಮಸ್ಯೆಗಳು ಎಲ್ಲಾ ಅಂಶಗಳನ್ನು ಸುರಕ್ಷತಾ ಅಂಶಗಳೊಂದಿಗೆ ಪರಿಗಣಿಸಿ ವಿನ್ಯಾಸಗೊಳಿಸುತ್ತಾರೆ. ಜೊತೆಗೆ ವಾಹನಗಳನ್ನು ಪೆಟ್ರೋಲ್/ಡೀಸೆಲ್ ಟ್ಯಾಂಕ್‌ನಲ್ಲಿ ಎಷ್ಟು ತುಂಬಿಸಬೇಕು ಎನ್ನುವ ವಿಚಾರವೂ ಇದಕ್ಕೆ ಹೊರತಾಗಿಲ್ಲ. ತಯಾರಕರು ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಾಹನ ತಯಾರಿಸಿರುತ್ತಾರೆ ಹೀಗಾಗಿ ಇಂಧನವನ್ನು ತುಂಬಲು ಇದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಚಳಿಗಾಲ ಅಥವಾ ಬೇಸಿಗೆಯನ್ನು ಲೆಕ್ಕಿಸಿಯೇ ತಯಾರಕರು ಪೆಟ್ರೋಲ್ ಡೀಸೆಲ್ ಸಾಮಾರ್ಥ್ಯವನ್ನು ನಿರ್ದಿಷ್ಟಪಡಿಸಿರುತ್ತಾರೆ ಎಂದು ಇಂಡಿಯನ್ ಆಯಿಲ್ ತಿಳಿಸಿದೆ.

“ವೈರಲ್ ಪೋಸ್ಟ್‌ರ್‌ಗೆ ಸಂಬಂಧಿಸಿದಂತೆ ಇಂಡಿಯನ್ ಆಯಿಲ್ ಸಂಸ್ಥೆಯಿಂದ ಆ ರೀತಿಯ ಘೋಷಣೆಯನ್ನು ಮಾಡಿಲ್ಲ, ಒಂದು ವೇಳೆ ಆ ರೀತಿ ಘೋಷಣೆಯನ್ನು ಮಾಡಿದ್ದಲ್ಲಿ ಅದರ ನೋಟಿಫಿಕೇಶನ್ ಅನ್ನು ನಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತೇವೆ ಆದರೆ ಅಂತಹ ಪ್ರಕಟಣೆಯನ್ನು ನಾವು ಮಾಡಿಲ್ಲ ನಮ್ಮ ಲೋಗೋ ಬಳಸಿಕೊಂಡು ಕೆಲವರು ಈ ರೀತಿ ಮಾಡಿದ್ದಾರೆ” ಎಂದು ತಿಳಿಸಿದರು.

ಮೋಟರ್ ಬೈಕು, ಕಾರು, ಬಸ್ಸು, ಗೂಡ್ಸ್ ವಾಹನ ಮತ್ತಿತರ ಯಾವುದೇ ವಾಹನಗಳನ್ನು ಉತ್ಪಾದನೆ ಮಾಡುವ ಕಂಪನಿಗಳು ವಾಹನಗಳ ಸಂರಚನೆ ಮತ್ತು ಸಾಮರ್ಥ್ಯವನ್ನು ಇಂಧನಗಳ ಪ್ರಮಾಣವನ್ನು ಅನುಸರಿಸಿ ತಯಾರಿಸಲ್ಪಟ್ಟಿರುತ್ತವೆ. ಟ್ಯಾಂಕ್ ಭರ್ತಿ ಇಂಧನವನ್ನು ತುಂಬಿಸಿದರೆ ಸ್ಫೋಟಗೊಳ್ಳುವಂತಿದ್ದರೆ ಅಂತಹ ವಾಹನಗಳನ್ನು ಖರೀದಿಸಲು ಯಾವುದೇ ಗ್ರಾಹಕ ಮುಂದೆ ಬರವುದಿಲ್ಲ, ಒಂದು ವೇಳೆ ಬೇಸಿಗೆ ಕಾಲದಲ್ಲಿ ಈ ರೀತಿ ಅವಘಡ ಸಂಭವಿಸುವ ಲಕ್ಷಣಗಳಿದ್ದರೆ ಕಂಪನಿ ತನ್ನ ಗ್ರಾಹಕನಿಗೆ ಮೊದಲೇ ಇದರ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ ಎಂದರು.

ಬಂಕ್ ಮಾಲೀಕರ ಪ್ರತಿಕ್ರಿಯೆ

ಇಂಧನವನ್ನು ಫುಲ್ ಟ್ಯಾಂಕ್ ಮಾಡಿಸಿದರೆ ವಾಹನ ಸ್ಪೋಟಗೊಳ್ಳುತ್ತದೆ ಎಂಬ ಸುದ್ದಿ ಕುರಿತು ಫ್ಯಾಕ್ಟ್‌ಚೆಕ್ ಮಾಡುವ ಸಲುವಾಗಿ ensuddi.com ತಂಡ ಕೆಲವು ಪೆಟ್ರೋಲ್ ಬಂಕ್ ಮಾಲೀಕರು ಮತ್ತು ಬಂಕ್‌ನ ಉಸ್ತವಾರಿ ನೋಡಿಕೊಳ್ಳುವ ಮ್ಯಾನೇಜರ್‌ಗಳನ್ನು ಸಂಪರ್ಕಿಸಿದಾಗ, “ನಾವು ರೀಟೇಲ್ ಮಾರಾಟಗಾರರು. ನಮಗೆ ಇಲ್ಲಿಯವರೆಗೆ ಬೇಸಿಗೆ ಕಾಲದಲ್ಲಿ ಫುಲ್ ಟ್ಯಾಂಕ್ ಇಂಧನ ತುಂಬಿಸಿದರೆ ವಾಹನ ಸ್ಪೋಟಗೊಳ್ಳುತ್ತವೆ ಹಾಗಾಗಿ ಗ್ರಾಹಕರಿಗೆ ಫುಲ್ ಟ್ಯಾಂಕ್ ಮಾಡಬೇಡಿ ಎಂದು ಕಂಪನಿಗಳಿಂದ  ಅಧಿಕೃತ ಮಾಹಿತಿ ಬಂದಿಲ್ಲ. ಗ್ರಾಹಕರು ಟ್ಯಾಂಕ್ ಫುಲ್ ಮಾಡಿ ಎಂದರೆ ನಾವು ಮಾಡಲೇಬೇಕು, ಇದನ್ನು ಬೇಕಂತಲೇ ಯಾರೋ ಸುಳ್ಳು ಸುದ್ದಿ ಹಬ್ಬಿಸಲು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರಬಹುದು” ಎಂದು ಹೇಳಿದರು.

ಗ್ರಾಹಕರು( ವಾಹಸ ಸವಾರರು) ಏನಂತಾರೆ?

ಗ್ರಾಹಕರನ್ನು ಈ ಬಗ್ಗೆ ವಿಚಾರಿಸಿದಾಗ “ನಾನೊಬ್ಬ ಶಾಲಾ ಶಿಕ್ಷಕ ಬೆಂಗಳೂರಿನಿಂದ ನೆಲಮಂಗಲಕ್ಕೆ ಪ್ರತಿದಿನ ಹೋಗಿ ಬರುತ್ತೇನೆ ಎಲ್ಲದಕೂ ದ್ವಿಚಕ್ರ ವಾಹನವನ್ನೆ ಅವಲಂಬಿಸಿರುವುದರಿಂದ ಪೆಟ್ರೋಲ್ ಖಾಲಿಯಾಗಿ ಮದ್ಯದಲ್ಲಿ ತೊಂದರೆಯಾಗಬಹುದು ಎನ್ನುವ ಕಾರಣಕ್ಕೆ ಯಾವಾಗ ಪೆಟ್ರೋಲ್ ಹಾಕಿಸಿದರೂ ಫುಲ್ ಟ್ಯಾಂಕ್ ಮಾಡಿಸುತ್ತೇನೆ. ಆದರೆ ಇಲ್ಲಿಯವರೆಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ, ಒಂದು ವೇಳೆ ಎಲ್ಲಾದರೂ ಸ್ಪೋಟಗೊಂಡು ಅಪಘಾತ ಸಂಭವಿಸಿದ್ದರೆ ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು ಎನ್ನುತ್ತಾರೆ  ಶಿಕ್ಷಕರಾದ ಶಂಕರಪ್ಪ.

ತಮ್ಮಣ್ಣ ಎನ್ನುವ ದ್ವಿಚಕ್ರ ವಾಹನ ಸವಾರರೊಬ್ಬರನ್ನು ವಿಚಾರಿಸಿದಾಗ ಸರ್ ಪೆಟ್ರೋಲ್ ಬೆಲೆ ಹೆಚ್ಚಿರುವುದರಿಂದ ನಾನು ಫುಲ್ ಟ್ಯಾಂಕ್ ಪೆಟ್ರೋಲ್ ಹಾಕ್ಸೋದು ಕಡಿಮೆ? ಪ್ರತಿ ದಿನ 150 ರಿಂದ 200 ರೂಪಾಯಿ ಖರ್ಚು ಮಾಡಿ ಪೆಟ್ರೋಲ್ ಹಾಕಿಸುತ್ತೇನೆ, ಹಾಗಾಗಿ ಫುಲ್ ಟ್ಯಾಂಕ್ ಹಾಕ್ಸಿದ್ರೆ ಗಾಡಿ ಸ್ಪೋಟ ಆಗತ್ತೆ ಅನ್ನೋದರ ಬಗ್ಗೆ ಅಷ್ಟು ಮಾಹಿತಿ ಇಲ್ಲ ಎನ್ನುತ್ತಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಬೇಸಿಗೆ ಕಾಲದಲ್ಲಿ ಫುಲ್ ಟ್ಯಾಂಕ್ ಇಂಧನವನ್ನು ವಾಹನಗಳಿಗೆ ತುಂಬಿಸಿದರೆ  ವಾಹನ ಸ್ಪೋಟಗೊಳ್ಳುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಮತ್ತು ಇದನ್ನು ಇಂಡಿಯನ್ ಆಯಿಲ್ ಕಂಪನಿಯು ಅಧಿಕೃತವಾಗಿ ಹೇಳಿಲ್ಲ. ಇಂಡಿಯನ್ ಆಯಿಲ್ ಕಂಪನಿಯ ಹೆಸರಿನಲ್ಲಿ ಪೋಸ್ಟ್‌ರ್ ಮಾಡಿ ಸುಳ್ಳು ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಂತಹ ಸುದ್ದಿಗಳನ್ನು ನಂಬುವ ಮೊದಲು ಸುದ್ದಿಯು ವಿಶ್ವಾಸಾರ್ಹವೇ ಎಂದು ಪರೀಕ್ಷಿಸಿ.

ಈ ಸುಳ್ಳು ಸುದ್ದಿ ಕಳೆದ ವರ್ಷ ಬೇಸಿಗೆಯಲ್ಲೂ ವೈರಲ್ ಆಗಿತ್ತು. ಆಗಲೂ ನಮ್ಮ ಏನ್‌ಸುದ್ದಿ.ಕಾಂ ತಂಡ ಇದನ್ನು ಫ್ಯಾಕ್ಟ್‌ಚೆಕ್ ಮಾಡುವ ಮೂಲಕ ಇದು ಫೇಕ್‌ ನ್ಯೂಸ್‌ ಎಂದು ತಿಳಿಸಲಾಗಿತ್ತು.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಕಂದಾಯ ಸಚಿವ R.ಅಶೋಕ ಹೆಸರಿನ ಫೇಸ್‌ಬುಕ್ ಖಾತೆಯಿಂದ ಸುಳ್ಳು ಪೋಸ್ಟ್‌ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights