ಫ್ಯಾಕ್ಟ್‌ಚೆಕ್ : ಡಿ.ಕೆ. ಶಿವಕುಮಾರ್ ಅವರ ಹಳೆಯ ವಿಡಿಯೋವನ್ನು ಚುನಾವಣಾ ಪ್ರಚಾರದ್ದು ಎಂದು ತಪ್ಪಾಗಿ ಹಂಚಿಕೆ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಿಎಂ ಆಕಾಂಕ್ಷಿ ಡಿ.ಕೆ.ಶಿವಕುಮಾರ್ (D.K. Shivakumar) ಚುನಾವಣೆಗೂ ಮೊದಲೆ ಹೀಗೆ ಫುಲ್ ಟೈಟ್ ಆಗಿ ಮನೆ ಪ್ರಚಾರ ಮಾಡುತ್ತಿದ್ದಾರೆ, ಇನ್ನು ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಹೇಗಿರತ್ತೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

https://twitter.com/NandiniVenkate3/status/1652567303354195971

ಚುನಾವಣಾ ಕ್ಯಾಂಪೇನ್ ಸಂದರ್ಭದಲ್ಲಿ ಪಾನಮತ್ತರಾಗಿ ನಡೆಯಲು ಆಗದೇ, ವಾಲಾಡುತ್ತ ಬರುತ್ತಿರುವ ಡಿ.ಕೆ. ಶಿವಕುಮಾರ್ ಕೂಡ ಮುಂದಿನ ಸಿಎಂ ಆಕಾಂಕ್ಷಿ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಹಾಗಿದ್ದರೆ ಡಿ.ಕೆ. ಶಿವಕುಮಾರ್ ಮನೆ ಮನೆ ಪ್ರಚಾರದ ಸಮಯದಲ್ಲಿ ಮದ್ಯದ ಅಮಲಿನಲ್ಲಿರುವುದು ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ವನ್ನು ಪರಿಶೀಲಿಸಿದಾಗ, ವಿಡಿಯೋ ಪ್ರಸ್ತುತ ನಡೆಉತ್ತಿರುವ 2023ರ ವಿಧಾನಸಭಾ ಚುನಾವಣಾ ಪ್ರಚಾರದಲ್ಲ ಎಂದು ತಿಳಿದುಬಂದಿದೆ. ವೈರಲ್ ವಿಡಿಯೊದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ನಡೆದು ಬರುತ್ತಿರುವ ಡಿಕೆ ಶಿವಕುಮಾರ್ ಅವರನ್ನು ಕಾಣಬಹುದು. ಸುಸ್ತಾಗಿ ಹೆಜ್ಜೆ ಇಡಲು ಸಾಧ್ಯವಾಗದೇ ಇರುವ ಪರಿಸ್ಥಿತಿಯಲ್ಲಿ ಅವರು ಇದ್ದಾರೆ. ಡಿಕೆಶಿಯವರ ಈ ವೈರಲ್ ವಿಡಿಯೊ ಕರ್ನಾಟಕ ಚುನಾವಣೆಯ ಪ್ರಚಾರಕ್ಕೆ ಸಂಬಂಧಿಸಿದ್ದಲ್ಲ ಎಂದು ದಿ ಕ್ವಿಂಟ್ ವರದಿ ಮಾಡಿದೆ.

ಕೀ ಫ್ರೇಮ್‌ಗಳನ್ನು ಬಳಸಿ ಯೂಟ್ಯೂಬ್‌ನಲ್ಲಿ ಚೆಕ್ ಮಾಡಿದಾಗ, ಜನವರಿ 9, 2022ರಂದು ಈ ವಿಡಿಯೊವನ್ನು ನ್ಯೂಸ್‌ಫಸ್ಟ್ ‘ ಸುಸ್ತಾಗಿ ತಟ್ಟಾಡಿದ ಡಿಕೆಶಿ’ ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ.

ಮೇಕೆದಾಟು ಜಲಾಶಯದ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಕೋವಿಡ್-19 ನಿರ್ಬಂಧಗಳನ್ನು ಕಡೆಗಣಿಸಿ  ಮೇಕೆದಾಟು ಪಾದಯಾತ್ರೆಯನ್ನು ಜನವರಿ 2022 ರಲ್ಲಿ ಆರಂಭಿಸಿತು. ವರದಿಗಳ ಪ್ರಕಾರ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮೇಕೆದಾಟು ಪಾದಯಾತ್ರೆಯಲ್ಲಿ ಡಿಕೆಶಿ ಸುಸ್ತಾಗಿ ವಾಲುತ್ತಾ ನಡೆಯುತ್ತಿರುವ ವಿಡಿಯೊ ಎಂದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕಾಂಗ್ರೆಸ್‌ನಲ್ಲಿ ಹಲವರು ಸಿಎಂ ಆಕಾಂಕ್ಷಿಗಳಿದ್ದು ಅದರಲ್ಲಿ ಡಿ.ಕೆ.ಶಿವಕುಮಾರ್ ಕೂಡ ಒಬ್ಬರು. ಮುಖ್ಯವಾಗಿ ಕರ್ನಾಟಕದ 2023ರ ಚುನಾವಣೆಯ ಸಂದರ್ಭದಲ್ಲಿ ಬಂದಿರುವ ಕೆಲವು ಸಮೀಕ್ಷೆಗಳು ಕಾಂಗ್ರೆಸ್‌ಗೆ ಬಹುಮತ ಬರುತ್ತದೆ ಎಂದು ಹೇಳಲಾಗಿದೆ. ಇದನ್ನೆ ಗುರಿಯಾಗಿಸಿಕೊಂಡು ಕಾಂಗ್ರೆಸ್‌ಅನ್ನು ಟೀಕಿಸುವ ಉದ್ದೇಶದಿಂದ ಜನವರಿ 2022ರ ಹಳೆಯ ವಿಡಿಯೋವನ್ನು ಪ್ರಸಾರ ಮಾಡುತ್ತ ಶಿವಕುಮಾರ್ ಅವರು ಮದ್ಯಪಾನ ಮಾಡಿ ಮನೆ ಮನೆ ಪ್ರಚಾರ ಮಾಡುತ್ತಿದ್ದಾರೆ ಎಂದು ವಿಡಿಯೋವನ್ನು ತಪ್ಪಾಗಿ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ದಿ ಕ್ವಿಂಟ್ ಮತ್ತು ಬೂಮ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ರಾಹುಲ್ ಗಾಂಧಿ ಜಿಂದಾಬಾದ್ ಎಂದಿದ್ದಕ್ಕೆ ವಿರಾಟ್ ಕೊಹ್ಲಿ ಮೇಲೆ ಗರಮ್ಮಾದರೆ ಗೌತಮ್ ಗಂಭೀರ್?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights