ಹಲವು ಸವಾಲುಗಳನ್ನು ನಾವು ಗೆದ್ದಿದ್ದೇವೆ; ಸಾಧ್ಯವಾದ್ರೆ ಉಪಚುನಾವಣೆಗಳಲ್ಲಿ ಗೆದ್ದು ತೋರಿಸಿ: ಕಾಂಗ್ರೆಸ್‌ಗೆ ಬಿಎಸ್‌ವೈ ಸವಾಲು
ವಿಧಾನ ಸಭೆಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಯಡಿಯೂರಪ್ಪನವರದ್ದು ಸ್ಟಾರ್ಟ್ ಆಗದೇ ಡಕೋಟ ಬಸ್ ನಂತಹ ಸರ್ಕಾರ, ಆ ಬಸ್‌ಗೆ ಯಡಿಯೂರಪ್ಪ ಚಾಲಕರಾಗಿ ಕುಳಿತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದರು. ಈ ಬಗ್ಗೆ ಉತ್ತರಿಸುವ ವೇಳೆ ಪ್ರತಿಕ್ರಿಯೆ ನೀಡುರವ ಸಿಎಂ ಬಿಎಸ್‌ವೈ, ನಾನು ಈಗಾಗಲೇ ಹತ್ತು ಹಲವು ಸವಾಲುಗಳ ವಿರುದ್ದ ಜಯಿಸಿದ್ದೇನೆ, ನಿಮಗೆ ಸಾದ್ಯವಾದರೆ ಮುಂದಿನ ಉಪ-ಚುನಾವಣೆಗಳನ್ನು ಗೆದ್ದುತೋರಿಸಿ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.
ನನ್ನ ಧೈರ್ಯ, ಬದ್ಧತೆ ಹಾಗೂ ತಾಳ್ಮೆ ನನ್ನನ್ನು ಇಂದು ಇಲ್ಲಿಗೆ ತಂದು ಕೂರಿಸಿದೆ. ಅಧಿಕಾರ ಇರುವುದು ಜನರಿಗೆ ಸಹಾಯ ಮಾಡಲು ಆದರೆ ಕೆಲವರಿಗೆ ಇದು ದ್ವೇಷದ ಸಾಧನವಾಗಿದೆ. ನಾನು ನನ್ನ ಅಧಿಕಾರದ ಅವಧಿಯಲ್ಲಿ ದ್ವೇಷದ ರಾಜಕೀಯ ಮಾಡಿಲ್ಲ ಎಂದು ಬಿಎಸ್‌ವೈ ಹೇಳಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವೆ. 15 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ. 2020ರ ಅಂತ್ಯದಲ್ಲಿ ನಡೆದ ಶಿರಾ ಮತ್ತು ಆರ್‌ಆರ್‌ನಗರ ಉಪಚುನಾವಣೆಯಲ್ಲೂ ಗೆದ್ದಿದ್ದೇವೆ. ಮುಂಬರುವ ಉಪಚುನಾವಣೆಗಳಲ್ಲಿಯೂ ಗೆಲ್ಲಲಿದ್ದೇವೆ. ನಿಮಗೆ ಸಾಧ್ಯವಾದ್ರೆ ಗೆದ್ದು ತೋರಿಸಿ ಎಂದು ಕಾಂಗ್ರೆಸ್‌ಗೆ ಸವಾಲು ಹಾಕಿದ್ದಾರೆ.
ನಾವು ರಾಜ್ಯದ ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಿದ್ದೇವೆ. ಆದರೆ, ಆದರೆ ನಿಮ್ಮ ನಾಯಕತ್ವದಲ್ಲಿ ಕಾಂಗ್ರೆಸ್ ಸ್ಥಿತಿ ಹೀನಾಯ ಪರಿಸ್ಥಿತಿ ತಲುಪಿದೆ. ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನಕ್ಕೆ ಕಾಂಗ್ರೆಸ್ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಹಿಂದೆಂದೂ ಕಾಂಗ್ರೆಸ್‌ಗೆ ಇಂತಹ ಸ್ಥಿತಿ ಬಂದಿರಲಿಲ್ಲ. ಏಕೆಂದರೆ ಜನರಿಗೆ ಕಾಂಗ್ರೆಸ್ ಮೇಲೆ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದ್ದಾರೆ. ಮುಂದೆಂದೂ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ. ಆ ರೀತಿ ನಾವು ನೋಡಿಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯನವರ ವಿರುದ್ದ ಸಿಎಂ ಕಿಡಿಕಾರಿದ್ದಾರೆ.
ಮುಂದಿನ ದಿನಗಳಲ್ಲಿ ಮಸ್ಕಿ, ಸಿಂಧಗಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ಮತ್ತು ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು, ಈ ಎಲ್ಲಾ ಕ್ಷೇತ್ರಗಳಲ್ಲಿಯೂ ನಾವು ಗೆಲ್ಲುತ್ತೇವೆ ಎಂದು ಬಿಎಸ್‌ವೈ ಹೇಳಿದ್ದಾರೆ.
ಇದನ್ನೂ ಓದಿ: ತಮ್ಮ ಪಕ್ಷದ ಸಚಿವರನ್ನೇ ಮುಜುಗರಕ್ಕೆ ಸಿಕ್ಕಿಸಿದ ಬಿಜೆಪಿ ಶಾಸಕರು!

