ಫ್ಯಾಕ್ಟ್ಚೆಕ್ : ಮಣಿಪುರದ ಘಟನೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ
ಇದು ಸಿನಿಮಾ ಸೀನ್ ಅಲ್ಲ, ಮಣಿಪುರದಲ್ಲಿ ನಡೆಯುತ್ತಿರುವ ಘರ್ಷಣೆಯಲ್ಲಿ ಪ್ರತಿಭಟನಾಕಾರರು ಮೆಷಿನ್ ಗನ್ಗಳಿಂದ ಗುಂಡು ಹಾರಿಸುತ್ತಿರು ನೈಜ ದೃಶ್ಯ ಎಂದು ಪ್ರತಿಪಾದಿಸಿ ವಿಡಿಯೋವನ್ನು ಪ್ರಸಾರ ಮಾಡಲಾಗುತ್ತಿದೆ. ಮಣಿಪುರದಲ್ಲಿ ಮೋದಿಯವರ ಡಬಲ್ ಎಂಜಿನ್ ಸರ್ಕಾರ ಇದೆ. ವಿಶ್ವಗುರು ಉಕ್ರೇನ್ ಮತ್ತು ರಷ್ಯಾ ನಡುವೆ ನಡೆದ ಯುದ್ಧ ನಿಲ್ಲಿಸಬಹುದು ಆದರೆ ಚುನಾವಣಾ ಬ್ಯುಸಿ ಕಾರಣ ತಮ್ಮದೇ ದೇಶದ ಮಣಿಪುರದಲ್ಲಿ ನಡೆಯುತ್ತಿರುವ ಯುದ್ಧ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂಬ ಹೇಳಿಕೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ.
ಮಣಿಪುರದಲ್ಲಿ ನಡೆಯುತ್ತಿರುವ ಭೀಕರ ಘಟನಾವಳಿಗೆ ಈ ದೃಶ್ಯಗಳೇ ಸಾಕ್ಷಿ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋವನ್ನು ಪರಿಶೀಲಿಸು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಜುಲೈ 5, 2020 ರಿಂದ ಅದೇ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿಪ್ರಸಾರವಾಗುತ್ತಿದೆ ಎಂದು ಫ್ಯಾಕ್ಟ್ಲಿ ವರದಿ ಮಾಡಿದೆ.
ಈ ವಿಡಿಯೊದಲ್ಲಿರುವ ಇಬ್ಬರು ವ್ಯಕ್ತಿಗಳು ಟ್ರೇಸರ್ ರೌಂಡ್ಸ್ ಹಾರಿಸುತ್ತಿದ್ದಾರೆ ಎಂದು ಫ್ಯಾಕ್ಟ್ಲಿ ಹೇಳಿದೆ. ಟ್ರೇಸರ್ ಬುಲೆಟ್ಗಳು ಪೈರೋಟೆಕ್ನಿಕ್ ರಾಸಾಯನಿಕವನನ್ನು ಹೊಂದಿದ್ದು ಗುಂಡು ಹಾರಿಸಿದಾಗ ಬೆಳಕು ಕೂಡಾ ಕಾಣಿಸುತ್ತದೆ. ಗನ್ ಬಗ್ಗೆ ಪೋಸ್ಟ್ ಮಾಡುವ ಟ್ವಿಟರ್ ಖಾತೆಯಲ್ಲಿಯೂ ಈ ವಿಡಿಯೊ ಟ್ವೀಟ್ ಆಗಿದೆ.

ಇನ್ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ಈ ವ್ಯಕ್ತಿಯನ್ನು ವಿಡಿಯೊ ಕ್ರಿಯೇಟರ್ ಎಂದು ನಮೂದಿಸಲಾಗಿದೆ. ಥ್ರೆಟ್ಟಿ ಹೆಸರಿನ ಗೇಮಿಂಗ್ ಯೂಟ್ಯೂಬ್ ಚಾನಲ್ಗೆ ಲಿಂಕ್ ಅನ್ನು ಅದರ ಬಯೋದಲ್ಲಿ ಕೊಡಲಾಗಿದೆ. ಈ ಚಾನೆಲ್ ನಲ್ಲಿ ಹಲವು ಗೇಮಿಂಗ್ ವಿಡಿಯೊಗಳನ್ನು ಅಪ್ಲೋಡ್ ಮಾಡಿರುವುದು ಕಂಡುಬಂದಿದೆ.
ಕ್ಲಿಪ್ ನಿಜವಾದ ತುಣುಕನ್ನು ತೋರಿಸುತ್ತದೆಯೇ ಅಥವಾ ಅದು ವೀಡಿಯೊ ಗೇಮ್ನ ಭಾಗವಾಗಿದೆಯೇ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ. ಆದರೆ, ಈ ವೈರಲ್ ವಿಡಿಯೊ ಹಳೆಯದಾಗಿದ್ದು, ಇದಕ್ಕೂ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂಬುದಂತೂ ಸ್ಪಷ್ಟ.
ಮಣಿಪುರದಲ್ಲಿ ಘರ್ಷಣೆಗೆ ಕಾರಣವೇನು?
ರಾಜ್ಯದಲ್ಲಿ ಸುಮಾರು ಶೇ 53ರಷ್ಟಿರುವ ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು ಎಂಬ ಬೇಡಿಕೆ ಇತ್ತು. ಈ ಕುರಿತು ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳಲ್ಲಿ ಶಿಫಾರಸು ಕಳುಹಿ ಸುವಂತೆ ರಾಜ್ಯ ಸರ್ಕಾರಕ್ಕೆ ಮಣಿಪುರ ಹೈಕೋರ್ಟ್ ಇತ್ತೀಚೆಗೆ ಸೂಚಿಸಿತ್ತು.
ಆದರೆ, ಶೇ 40ರಷ್ಟಿರುವ ಬುಡಕಟ್ಟು ಸಮುದಾಯಗಳಿಂದ ಈ ಬೇಡಿಕೆಗೆ ತೀವ್ರ ಆಕ್ಷೇಪವಿತ್ತು. ಅಖಿಲ ಭಾರತ ಮಣಿಪುರ ವಿದ್ಯಾರ್ಥಿ ಸಂಘಟನೆ (ಎಟಿಎಸ್ಯುಎಂ) ನೇತೃತ್ವದಲ್ಲಿ ನಾಗಾ ಮತ್ತು ಕುಕಿ ಬುಡಕಟ್ಟು ಸಮುದಾಯದವರು ಪ್ರತಿಭಟನೆ ಹಾಗೂ ‘ಬುಡಕಟ್ಟು ಜನರ ಏಕತಾ ಜಾಥಾ’ವನ್ನು ಬುಧವಾರ ಆಯೋಜಿಸಿದ್ದರು.

ಜಾಥಾ ನಡೆಯುವಾಗಲೇ ಚುರ್ಚಾಂದ್ಪುರ ಜಿಲ್ಲೆಯ ತೊರ್ಬುಂಗ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ಗುಂಪೊಂದು ಮೈತೇಯಿ ಸಮುದಾಯಕ್ಕೆ ಸೇರಿದ ಕೆಲವರ ಮೇಲೆ ಹಲ್ಲೆ ನಡೆಸಿತ್ತು. ಇದು ದ್ವೇಷದ ಕಿಡಿಯನ್ನು ಹೊತ್ತಿಸಿತು. ಇದಕ್ಕೆ ಪ್ರತೀಕಾರವಾಗಿ ಎಂಟು ಜಿಲ್ಲೆಗಳಲ್ಲಿ ಹಲ್ಲೆ ಘಟನೆಗಳು ನಡೆದವು. ಹಿಂಸೆ ಹೆಚ್ಚಿದಂತೆ ಸೇನೆ, ಅಸ್ಸಾಂ ರೈಫಲ್ಗೆ ಸೇರಿದ ಹಲವು ತುಕಡಿಗಳನ್ನು ರಾತ್ರಿಯೇ ಕರೆಸಿಕೊಳ್ಳಲಾಯಿತು. ಸೇನೆ, ಅಸ್ಸಾಂ ರೈಫಲ್ ತುಕಡಿಗಳ ನಿಯೋಜನೆಯಾದ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಸೇನೆ ವಕ್ತಾರರು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವಿಡಿಯೋದಲ್ಲಿ ಮೆಷಿನ್ ಗನ್ ಹಿಡಿದು ಗುಂಡು ಹಾರಿಸುತ್ತಿರುವ ದೃಶ್ಯಾವಳಿಗಳು ಹಳೆಯದು ಮತ್ತು ವಿಡಿಯೋ ಗೇಮಿಗೆ ಸಂಬಂಧಿಸಿದ್ದು, ಮಣಿಪುರದಲ್ಲಿ ನಡೆಯುತ್ತಿರುವ ಘರ್ಷಣೆಗೂ ಇದಕ್ಕೂ ಸಂಬಂಧವಿಲ್ಲ ಎಂದು ಫ್ಯಾಕ್ಟ್ಲಿ ವರದಿ ಮಾಡಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಕರ್ನಾಟಕದ ಚುನಾವಣಾ ಪ್ರಚಾರದ ನಡುವೆ ಪೆಟ್ಟಿಗೆ ಅಂಗಡಿಯಲ್ಲಿ ಟೀ ಸೇವಿಸಿದರೆ ಮೋದಿ?

