ಫ್ಯಾಕ್ಟ್‌ಚೆಕ್ : ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ತಮ್ಮ ಪತ್ನಿ ಒಡೆತನದ ಖಾಸಗಿ ನಿವಾಸಕ್ಕೆ ಸರ್ಕಾರದಿಂದ ಬಾಡಿಗೆ ಭತ್ಯೆ ಪಡೆದರೆ?

ಮಾಜಿ ಹಣಕಾಸು ಸಚಿವ ಮತ್ತು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ತಮ್ಮ ಪತ್ನಿಯ ಒಡೆತನದ ಮನೆಯಲ್ಲಿ ವಾಸವಿದ್ದು, 10 ವರ್ಷಗಳಿಂದ ಸರ್ಕಾರದಿಂದ ಮಾಸಿಕ 2 ಲಕ್ಷ ಬಾಡಿಗೆ ಭತ್ಯೆ ಪಡೆದಿದ್ದಾರೆ. ಇದು ಲೂಟಿ ಮಾಡುವ ಕಾಂಗ್ರೆಸ್‌ನ ಇನ್ನೊಂದು ಮುಖ’ ಎಂಬ ಬರಹದೊಂದಿಗೆ ಪೋಸ್ಟ್‌ಅನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ನಮ್ಮ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ತಮ್ಮ ಪತ್ನಿಯ ಒಡೆತನದ ಮನೆಯಲ್ಲಿ ತಮ್ಮ ಪತ್ನಿಯೊಂದಿಗೆ ವಾಸವಾಗಿದ್ದರು ಮತ್ತು  ಅದರ ಬಾಡಿಗೆಯನ್ನು ಪ್ರತಿ ತಿಂಗಳು 20ಲಕ್ಷದಂತೆ  10 ವರ್ಷಗಳ ಕಾಲ ಸರ್ಕಾರದಿಂದ ಪಡೆದಿರುವುದು ನಿಮಗೆ ತಿಳಿದಿದೆಯೇ? ಎಂದು ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಮುಂದುವರೆದು

ನವದೆಹಲಿಯಲ್ಲಿ 975 ಕೋಟಿ ಅಂದಾಜು ವೆಚ್ಚದಲ್ಲಿ ‘ವಿಸ್ಟಾ’ ಎಂಬ ಹೊಸ ಸಚಿವಾಲಯವನ್ನು ಏಕೆ ನಿರ್ಮಿಸಲಾಗುತ್ತಿದೆ ಎಂದು ನಿಮಗೆ ತಿಳಿದಿದೆಯೇ? ನವದೆಹಲಿಯಲ್ಲಿ 30 ರಿಂದ 40  ಸಚಿವಾಲಯಗಳು ವಿವಿಧ ಸಚಿವರಿಗೆ ಸೇರಿವೆ. ಇವರೆಲ್ಲರೂ ಬಾಡಿಗೆ ವಸತಿಗಳಲ್ಲಿ ನೆಲೆಸಿದ್ದಾರೆ.

ಪ್ರತಿ ಸೆಕ್ರೆಟರಿಯೇಟ್‌ನ ಬಾಡಿಗೆ ಮೌಲ್ಯವು 20-25 ಕೋಟಿಗಳಷ್ಟಿದೆ!! ಮತ್ತು ಈ ಕಟ್ಟಡಗಳಲ್ಲಿ ಹೆಚ್ಚಿನವು ಕಾಂಗ್ರೆಸ್ ನಾಯಕರು ಅಥವಾ ಕಮ್ಯುನಿಸ್ಟ್ ಕಾಮ್ರೇಡ್‌ಗಳ ಒಡೆತನದಲ್ಲಿದೆ. ಈ ‘ಮಾಲೀಕರಿಗೆ’ ನಿಯಮಿತವಾಗಿ ಪಾವತಿಸುವ ಈ ಎಲ್ಲಾ ಕಟ್ಟಡಗಳ ಒಟ್ಟು ಬಾಡಿಗೆಯನ್ನು ನೀವು ಲೆಕ್ಕ ಹಾಕಬಹುದು, ಹೀಗೆ ಪ್ರತಿ ವರ್ಷ ಸುಮಾರು 500 ಕೋಟಿಗಳು ಬರಿದಾಗುತ್ತವೆ!!!!

ಇದು ನಿಖರವಾಗಿ, ಕೇಂದ್ರ ಸರ್ಕಾರವು ಈ ಎಲ್ಲಾ ಸಚಿವಾಲಯಗಳನ್ನು ವಿಸ್ಟಾ ಎಂಬ ಬೃಹತ್ ಸಂಕೀರ್ಣಕ್ಕೆ ಸ್ಥಳಾಂತರಿಸಲು ಯೋಜಿಸುತ್ತಿದೆ. ಬೊಕ್ಕಸಕ್ಕೆ ದೊಡ್ಡ ಬಾಡಿಗೆ ವೆಚ್ಚವನ್ನು ಉಳಿಸುವುದರ ಜೊತೆಗೆ, ಕರ್ತವ್ಯದ ಮೇಲೆ ಒಂದು ಸೆಕ್ರೆಟರಿಯೇಟ್‌ನಿಂದ ಇನ್ನೊಂದಕ್ಕೆ ಹೋಗಲು ಫೈಲ್‌ಗಳು ಮತ್ತು ಸಿಬ್ಬಂದಿಗೆ ಲಾಜಿಸ್ಟಿಕ್ಸ್‌ನಲ್ಲಿ ಉಳಿತಾಯವಾಗುತ್ತದೆ. ಓಡಾಟದ ಸಮಯವನ್ನು ಸಹ ಉಳಿಸುತ್ತದೆ.

ನೀವು ನೋಡುವಂತೆ ಹೊಸ ವಿಸ್ಟಾ ಕಾಂಪ್ಲೆಕ್ಸ್ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಕೇವಲ ಎರಡು ವರ್ಷಗಳ ಅವಧಿಯಲ್ಲಿ ಮರುಪಡೆಯಲಾಗುವುದು.

ಪ್ರಸ್ತಾವಿತ ಸಂಕೀರ್ಣವನ್ನು ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ನಾಯಕರು ಬಲವಾಗಿ ವಿರೋಧಿಸಿದ್ದಾರೆ ಏಕೆಂದರೆ ಅವರು ಕೇಂದ್ರ ಸರ್ಕಾರವು ಬಾಡಿಗೆಗೆ ಪಾವತಿಸುತ್ತಿದ್ದ ಸುಲಭ ಹಣವನ್ನು ಕಳೆದುಕೊಳ್ಳುತ್ತಾರೆ. ಆದ್ದರಿಂದ ಅವರು ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಿದರು .

ಆದರೆ ಸುಪ್ರೀಂ ಕೋರ್ಟ್‌ಗೆ ಸತ್ಯವನ್ನು ಅರ್ಥವಾಗಿದೆ ಮತ್ತು ಮೇಲ್ಮನವಿ ಅರ್ಜಿಯನ್ನು ಅತಿರೇಕ ಮತ್ತು ಸಮರ್ಥನೀಯವಲ್ಲ ಎಂದು ವಜಾಗೊಳಿಸಿತು, ಅವರಿಗೆ ಒಂದು ಲಕ್ಷ ರೂಪಾಯಿ ದಂಡವನ್ನು ವಿಧಿಸಿತು ಮತ್ತು ಅಂತಹ ಅತಿರೇಕದ ಅರ್ಜಿಗಳನ್ನು ಸಲ್ಲಿಸುವವರಿಗೆ ಎಚ್ಚರಿಕೆ ನೀಡಿತು. ಈಗ ನಿರ್ಮಾಣ ಹಂತದಲ್ಲಿರುವ ಕೇಂದ್ರೀಕೃತ ಸೆಕ್ರೆಟರಿಯೇಟ್ ವಿಸ್ಟಾದ ಅಗತ್ಯವನ್ನು ನಾವು ಪ್ರಶಂಸಿಸಬಹುದು. ಎಂಬ ಸಂದೇಶವಿರುವ ವಿವರಣೆಯನ್ನು ವಾಟ್ಸಾಪ್ ಗ್ರೂಪ್‌ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಮುಖ್ಯವಾಗಿ ವಾಟ್ಸಾಪ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ ಸಂದೇಶವನ್ನು ಪರಿಶೀಲಿಸಿದಾಗ, ಇದನ್ನು ಕಳೆದ ಎರಡು ಮೂರು ವರ್ಷಗಳಿಂದ ಸೊಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಸಂದೇಶವನ್ನು ಎರಡು ಭಾಗಗಳನ್ನಾಗಿ ನೋಡಬೇಕಾಗುತ್ತದೆ ಮೊದಲನೆಯದು ಮಾಜಿ ಹಣಕಾಸು ಸಚಿವರಾದ ಪಿ.ಚಿದಂಬರಂ ಅವರು ತನ್ನ ಪತ್ನಿಗೆ ಸೇರಿದ ಮನೆಯಲ್ಲಿ ಇದ್ದು ಸಕಾರದಿಂದ ಪ್ರತಿ ತಿಂಗಳು 20ಲಕ್ಷ ರೂ ಬಾಡಿಗೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ವಾಸ್ತವವಾಗಿ ಇದು ಸುಳ್ಳು ಎಂದು ಫ್ಯಾಕ್ಟ್‌ಲಿ ಈ ಹಿಂದೆಯೇ ಫ್ಯಾಕ್ಟ್‌ಚೆಕ್ ವರದಿಯನ್ನು ಪ್ರಕಟಿಸಿದೆ.

ಸಾಮಾನ್ಯವಾಗಿ, ಸಂಸತ್ತಿನ ಸದಸ್ಯರು ದೆಹಲಿಯಲ್ಲಿ ಬಂಗಲೆಗಳು, ಫ್ಲಾಟ್, ವಸತಿ ಸಮುಚ್ಛಯ  ರೂಪದ ಬಾಡಿಗೆ-ಮುಕ್ತ ವಸತಿ ಸೌಕರ್ಯಗಳಿಗೆ ಅರ್ಹರಾಗಿರುತ್ತಾರೆ. ಆದರೆ, ಸಂಸತ್ತಿನ ಸದಸ್ಯರು ಖಾಸಗಿ ಮನೆಯಲ್ಲಿ ವಾಸಿಸಲು ನಿರ್ಧರಿಸಿದರೆ, ಸದಸ್ಯರೇ ಬಾಡಿಗೆ ವೆಚ್ಚವನ್ನು ಭರಿಸಬೇಕಾಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರ ಹಣ ಪಾವತಿಸುವುದಿಲ್ಲ.

ರಾಜ್ಯಸಭಾ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಮೇಲ್ಮನೆಯ ಸದಸ್ಯರಾಗಿರುವ ಪಿ.ಚಿದಂಬರಂ ಅವರು ದೆಹಲಿಯಲ್ಲಿ ಸರ್ಕಾರವು ನಿಗದಿಪಡಿಸಿದ ವಸತಿಗೃಹದಲ್ಲಿ ವಾಸಿಸುತ್ತಿದ್ದಾರೆ. ಅಂದರೆ ಅವರ ಖಾಸಗಿ ನಿವಾಸಕ್ಕೆ ಕೇಂದ್ರ ಸರ್ಕಾರ ಯಾವುದೇ ವೆಚ್ಚ ಭರಿಸುತ್ತಿಲ್ಲ.

ರಾಜ್ಯಸಭಾ ವೆಬ್‌ಸೈಟ್‌ನಲ್ಲಿ ಪ್ರತಿ ತಿಂಗಳು ಸದಸ್ಯರ ವೇತನ ಮತ್ತು ಭತ್ಯೆಗಳ ಮೇಲೆ ಮಾಡುವ ವೆಚ್ಚಕ್ಕೆ ಸಂಬಂಧಿಸಿದ ಮಾಹಿತಿಯಿಂದಲೂ ಇದು ಸ್ಪಷ್ಟವಾಗಿದೆ. ಪ್ರತಿಯೊಬ್ಬ ಸದಸ್ಯರಿಗೆ ದೊರೆಯುವಂತೆಯೇ ಕ್ಷೇತ್ರದ ಭತ್ಯೆ ಮತ್ತು ಕಚೇರಿ ವೆಚ್ಚ ಭತ್ಯೆಯನ್ನು ಹೊರತುಪಡಿಸಿ, ಚಿದಂಬರಂ ಅವರಿಗೆ ಸರ್ಕಾರದಿಂದ ಬೇರೆ ಯಾವುದೇ ಭತ್ಯೆ ನೀಡಿರುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಇನ್ನು ವೈರಲ್ ಸಂದೇಶದಲ್ಲಿ ಇರುವ ಎರಡನೇ ಅಂಶದ ಪ್ರಕಾರ, ವಿವಿಧ ಸಚಿವಾಲಯಗಳ ಹೆಚ್ಚಿನ ಕಾರ್ಯದರ್ಶಿಗಳು ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ನಾಯಕರ ಒಡೆತನದ ಬಾಡಿಗೆ ವಸತಿಗಳಲ್ಲಿ ಕೆಲಸ ಮಾಡುತ್ತಿವೆ ಎಂದು ಪೋಸ್ಟ್ ಹೇಳುತ್ತದೆ. ಆದರೆ, ಇದನ್ನು ದೃಢಪಡಿಸುವ ಯಾವುದೇ ಅಧಿಕೃತ ಮಾಹಿತಿ ಅಥವಾ ಸುದ್ದಿ ವರದಿಗಳಿಲ್ಲ.

ಇದಲ್ಲದೆ, ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ಈಗಾಗಲೇ ಲೋಕಸಭೆಗೆ ಮಾಹಿತಿ ನೀಡಿದ್ದು, ‘ದಿಲ್ಲಿಯಲ್ಲಿ ಕಚೇರಿ ಸ್ಥಳವನ್ನು ಬಾಡಿಗೆಗೆ ನೀಡಲು ವಿವಿಧ ಸರ್ಕಾರಿ ಸಂಸ್ಥೆಗಳು ಖರ್ಚು ಮಾಡಿದ ಮೊತ್ತದ ನಿರ್ವಹಣೆ ಕುರಿತಾದ ಕೇಂದ್ರಿಕೃತ ಡೇಟಾ ಲಭ್ಯವಿಲ್ಲ’ ಎಂದು ನಮೂದಿಸಿರುವುದು ಗಮನಾರ್ಹವಾಗಿದೆ. ಈ ಸುದ್ದಿ ಲೇಖನಗಳ ಪ್ರಕಾರ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಸಮರ್ಥಿಸಿಕೊಂಡಿದ್ದು, ಯೋಜನೆಯು ಸೆಕ್ರೆಟರಿಯೇಟ್‌ಗಳ ವಾರ್ಷಿಕ ಬಾಡಿಗೆ ವೆಚ್ಚ 1000 ಕೋಟಿಗಳನ್ನು ಉಳಿಸುತ್ತದೆ ಎಂದು ಪ್ರತಿಪಾದಿಸಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿರುವ ಸಂದೇಶದಲ್ಲಿ ಪ್ರತಿಪಾದಿಸಿದಂತೆ, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ತಮ್ಮ ಪತ್ನಿ ಒಡೆತನದ ಖಾಸಗಿ ನಿವಾಸಕ್ಕೆ ಸರ್ಕಾರದಿಂದ ಬಾಡಿಗೆ ಭತ್ಯೆಯನ್ನು ಪಡೆದಿಲ್ಲ. ಮತ್ತು ಕೇಂದ್ರ ಸರ್ಕಾರದಿಂದ ಬರುತ್ತಿರುವ ಬಾಡಿಗೆಯ ಹಣ ಇನ್ನು ಮುಂದೆ ಕೈ ತಪ್ಪುತ್ತದೆ ಎನ್ನುವ ಕಾರಣಕ್ಕೆ ಹೊಸ ವಿಸ್ಟಾವನ್ನು ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ವಿರೋಧಿಸುತ್ತಿದ್ದಾರೆ ಎಂಬುದು ಆಧಾರ ರಹಿತವಾಗಿದೆ. ಹಾಗಾಗಿ ಈ ಸಂದೇಶದಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದಂತೆ ಹಲವು ಬಲಪಂಥೀಯ ಪ್ರತಿಪಾದಕ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇಂತಹ ಆಧಾರ ರಹಿತವಾದ ಸುಳ್ಳು ಸಂದೇಶಗಳು ಮತ್ತು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಂತಹ ಸುಳ್ಳು ಸಂದೇಶಗಳನ್ನು ಪಾರ್ವಡ್ ಮಾಡುವ ಮುನ್ನ ಎಚ್ಚರವಿರಲಿ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ವಿಧಾನಸಭೆಯಲ್ಲಿ ನಮಾಜ್ ಮಾಡಲು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಶಿಫಾರಸ್ಸು ಮಾಡಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights