ಫ್ಯಾಕ್ಟ್‌ಚೆಕ್ : ವರದಕ್ಷಿಣೆ ಕಿರುಕುಳದ ಘಟನೆಯನ್ನು ಲವ್ ಜಿಹಾದ್ ಎಂದು ತಪ್ಪಾಗಿ ಹಂಚಿಕೆ

ವ್ಯಕ್ತಿಯೊಬ್ಬ ಮಹಿಳೆಗೆ ಮನಸೋಇಚ್ಚೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಮಹಿಳೆಯ ತಲೆಕೂದಲನ್ನು ಹಿಡಿದು ಎಳೆದಾಡಿ, ಕೋಲಿನಿಂದ ಒಡೆಯುತ್ತಿರುವ ದೃಶ್ಯಗಳು ಮನಕಲಕುವಂತಿದೆ.

ಹಿಂದೂ ಹುಡುಗಿಯರು ಮುಸ್ಲಿಂ ಜಿಹಾದಿಗಳನ್ನು ಮದುವೆಯಾದರೆ ಇದೇ ರೀತಿ ಸೆಕ್ಯುಲರಿಸಂ ಅನ್ನು ಆನಂದಿಸಬೇಕಾಗುತ್ತದೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

“ನೀನು ಹಿಂದೂ-ಮುಸ್ಲಿಂ ದ್ವೇಷಿ, ಆದರೆ ನನ್ನ ಅಬ್ದುಲ್ ಹಾಗಲ್ಲ ಎನ್ನುತ್ತಿದ್ದಳು, ಈಗ ಆಕೆ ತನ್ನ ಅಬ್ದುಲ್‌ನೊಂದಿಗೆ ಜಾತ್ಯತೀತತೆಯನ್ನು ಅನುಭವಿಸುತ್ತಿದ್ದಾಳೆ ಎಂಬ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಕೀವರ್ಡ್ ಮೂಲಕ ಸರ್ಚ್ ಮಾಡಿದಾಗ, 5 ಜೂನ್ 2023 ರಂದು, ಇಂಡಿಯಾ ನ್ಯೂಸ್ ಹೆಸರಿನ ಯೂಟ್ಯೂಬ್ ಚಾನಲ್‌ವೊಂದು ಅಪ್‌ಲೋಡ್ ಮಾಡಿದ ವಿಡಿಯೋ ಲಭ್ಯವಾಗಿದೆ. ವರದಿಯ ಪ್ರಕಾರ, ಈ ಘಟನೆಯು ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದಿದೆ ಎಂದು ಹೇಳಲಾಗಿದೆ.

MSS NEWS ನ ವೀಡಿಯೊ ವರದಿಯಲ್ಲಿ ಸಂತ್ರಸ್ತೆ ಜ್ಯೋತಿ ಯಾದವ್ ಅವರ ಹೇಳಿಕೆಯನ್ನು ಸಹ ಒಳಗೊಂಡಿದೆ. ವರದಕ್ಷಿಣೆ ಕಾರಣದಿಂದ ನನ್ನ ಗಂಡ ನನಗೆ ಥಳಿಸಿದ್ದಾನೆ ಎಂದು ಜ್ಯೋತಿ ವರದಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಆಕೆಯ ಪತಿಗೆ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿತ್ತು ಎಂದು ಹೇಳಿದ್ದಾರೆ. ಜ್ಯೋತಿಯ ಗಂಡ ಆಕೆಯನ್ನು ಥಳಿಸಿದ ಬಳಿಕ ರೈಲ್ವೇ ಗೇಟ್ ಬಳಿ ಕರೆದೊಯ್ದು ಯಾರಾದರು ಕೇಳಿದರೆ ತಾನು ಹೇಳಿದಂತೆಯೇ ಹೇಳಬೇಕು ಎಂದು ಬೆದರಿಕೆ ಹಾಕಿದ್ದಾನೆ ಎಂದು ಜ್ಯೋತಿ ತಿಳಿಸಿದ್ದಾರೆ.

ಘಟನೆಯ ನಂತರ ಶಿವಂ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಬಿಟ್ಟು ಪರಾರಿಯಾಗಿದ್ದಾನೆ. ಸಂತ್ರಸ್ತೆ ಜ್ಯೋತಿ ಗಂಭೀರ ಸ್ಥಿತಿಯಲ್ಲಿ ಪೊಲೀಸ್ ಠಾಣೆ ತಲುಪಿದ್ದಾಳೆ. ಮಹಿಳೆಯ ಸ್ಥಿತಿ ನೋಡಿ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೇ ವೇಳೆ ಸಂತ್ರಸ್ತೆಯ ತಾಯಿ ಶಿವಂ ಮತ್ತು ಆತನ ಪೋಷಕರ ವಿರುದ್ಧ ಬಕ್ವೆರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಝೀ ಸಲಾಮ್ ಮತ್ತು ಎಬಿಪಿ ಲೈವ್ ಕೂಡ ಈ ಘಟನೆಯ ಬಗ್ಗೆ ವರದಿಗಳನ್ನು ಪ್ರಕಟಿಸಿತ್ತು.

ಈ ಎಲ್ಲಾ ಮಾಹಿತಿ ಆದಾರದಲ್ಲಿ ಮತ್ತಷ್ಟು ಸರ್ಚ್ ಮಾಡಿದಾಗ, ಅಮರ್ ಉಜಾಲಾ ಮಾಡಿರುವ ವರದಿ ಲಭ್ಯವಾಗಿದೆ. ಬಕ್ವಾರ್ ಪ್ರದೇಶದ ನಹರಿಯಾ ಗ್ರಾಮದಲ್ಲಿ ಶಿವಂ ಯಾದವ್ ತನ್ನ ಪತ್ನಿ ಜ್ಯೋತಿಯನ್ನು ಬರ್ಬರವಾಗಿ ಥಳಿಸಿದ್ದಾರೆ ಎಂದು ಈ ಲೇಖನದಲ್ಲಿ ಹೇಳಲಾಗಿದೆ. ವರದಕ್ಷಿಣೆ ಬೇಡಿಕೆ ಈಡೇರಿಸದಿರುವುದೇ ಹಲ್ಲೆಗೆ ಕಾರಣ ಎನ್ನಲಾಗಿದೆ. ವರದಿಯಲ್ಲಿ, ಸಂತ್ರಸ್ತೆಯ ತಾಯಿ ಮುನ್ನಿದೇವಿಯನ್ನು ಉಲ್ಲೇಖಿಸಿ, 5 ವರ್ಷಗಳ ಹಿಂದೆ ತನ್ನ ಮಗಳನ್ನು ಶಿವಂ ಎಂಬುವವನಿಗೆ ಮದುವೆ ಮಾಡಿದ್ದಳು ಎಂದು ಬರೆಯಲಾಗಿದೆ. ವರದಕ್ಷಿಣೆಗಾಗಿ ಈ ಹಿಂದೆ ಹಲವು ಬಾರಿ ಚಾಲಕ ಶಿವಂ ಜ್ಯೋತಿ ಅವರನ್ನು ಥಳಿಸಿದ್ದಾನೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ಪೋಸ್ಟ್‌ನಲ್ಲಿ ಹಿಂದೂ ಹುಡುಗಿಯರು ಮುಸ್ಲಿಂ ಮದುವೆಯಾಗಿ ಬರ್ಬರವಾಗಿ ಥಳಿಸುತ್ತಿದ್ದಾರೆ ಎಂದು ಹಂಚಿಕೊಂಡಿರುವುದು ತಪ್ಪಾಗಿದೆ. ವಾಸ್ತವವಾಗಿ ಇಬ್ಬರೂ ಹಿಂದೂ ಸಮುದಾಯದವರಾಗಿದ್ದಾರೆ ಎಂದು ಆಲ್ಟ್‌ನ್ಯೂಸ್ ಫ್ಯಾಕ್‌ಚೆಕ್ ವರದಿಯನ್ನು ಪ್ರಟಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: 1st PUC ಯಲ್ಲೇ ಫೇಲ್ ಆಗಿದ್ರಾ ಪ್ರಯಾಂಕ್ ಖರ್ಗೆ? ಇಲ್ಲಿದೆ ಫುಲ್ ಡೀಟೇಲ್ಸ್!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights