ಫ್ಯಾಕ್ಟ್ಚೆಕ್ : ಮುಸ್ಲಿಮರು ರಸ್ತೆಗಳಲ್ಲಿ ನಮಾಜ್ ಮಾಡುತ್ತಿರುವ ಚಿತ್ರ ಪ್ಯಾರಿಸ್ನದಲ್ಲ
ಫ್ರಾನ್ಸ್ ದೇಶ ಹೊತ್ತಿ ಉರಿಯುತ್ತಿದೆ. ಪೊಲೀಸರ ಗುಂಡಿಗೆ ಮುಸ್ಲಿಂ ಬಾಲಕನೊಬ್ಬ ಬಲಿಯಾದ ವಿಚಾರ, ಇಡೀ ಫ್ರಾನ್ಸ್ ದೇಶದ ತುಂಬಾ ಅರಾಜಕತೆಯನ್ನೇ ಸೃಷ್ಟಿಸಿದೆ. ಈ ಹಿನ್ನಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ವೊಂದು ವೈರಲ್ ಆಗುತ್ತಿದೆ. ಫ್ರಾನ್ಸ್ನ ಬೀದಿಗಳಲ್ಲಿ ಸಾವಿರಾರು ಮುಸ್ಲಿಮರು ನಮಾಜ್ ಮಾಡುವ ಇತ್ತೀಚಿನ ದೃಶ್ಯಗಳು ಎಂಬ ಹೇಳಿಕೆಯಿಂದ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ನೂರಾರು ಮಂದಿ ಮುಸ್ಲಿಮರು ರಸ್ತೆಯಲ್ಲಿ ನಮಾಜ್ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರ ಜತೆಯಲ್ಲಿ, ‘ನೋಡಿ. ಇದು ಪ್ಯಾರಿಸ್ನ ದೃಶ್ಯ. ಪ್ರತಿ ಶುಕ್ರವಾರದಂದು ಪ್ಯಾರಿಸ್ ಈ ರೀತಿ ಬದಲಾಗುತ್ತದೆ. ಇಂದು ಪ್ಯಾರಿಸ್ಗೆ ಆಗಿರುವ ಸ್ಥಿತಿ, ನಾಳೆ ಭಾರತಕ್ಕೆ ಆಗುತ್ತದೆ. ಎಚ್ಚೆತ್ತುಕೊಳ್ಳಲು ಇದು ನಮಗೆ ಕೊನೆಯ ಅವಕಾಶ. ಇದರಿಂದ ನೀವು ಬಚಾವಾಗುತ್ತೀರಾ? ಬಚಾವಾಗದಿದ್ದರೆ, ಕಾಶ್ಮೀರದಿಂದ ಪಂಡಿತರು ಓಡಿಹೋದಂತೆ ಓಡಿಹೋಗಲು ನೀವು ಸಿದ್ಧತೆ ಮಾಡಿಕೊಳ್ಳಿ’ ಎಂಬ ಸಂದೇಶವನ್ನೂ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಇದೇ ವಿಡಿಯೊವನ್ನು ಪತ್ರಕರ್ತ ಮತ್ತು ಅಲ್-ವಾಹಾ ಮ್ಯಾಗಜೀನ್ನ ಮುಖ್ಯ ಸಂಪಾದಕರಾದ ಹಮ್ಮೌದ್ ಅಲ್-ತುಕಿ ಅವರು 03 ಮೇ 2022 ರಂದು ಟ್ವೀಟ್ ಮಾಡಿರುವುದು ಕಂಡುಬಂದಿದೆ. ವೀಡಿಯೊವನ್ನು ಹಂಚಿಕೊಳ್ಳುವ ಈ ಸುದ್ದಿ ವೆಬ್ಸೈಟ್ಗಳು ಮಾಸ್ಕೋದ ಬೀದಿಗಳಲ್ಲಿ ಸಾವಿರಾರು ಮುಸ್ಲಿಮರು ಈದ್ ಪ್ರಾರ್ಥನೆಗಳನ್ನು ಸಲ್ಲಿಸುತ್ತಿರುವ ದೃಶ್ಯಗಳು ಎಂದು ವರದಿ ಮಾಡಿದೆ.

2015ರಲ್ಲಿ ಈದ್ ಉಲ್ ಫಿತರ್ ದಿನದಂದು ಮಾಸ್ಕೋದ ಕೆಥೆಡ್ರಲ್ ಮಸೀದಿ ಎದುರು ಸಾವಿರಾರು ಮುಸ್ಲಿಮರು ನಮಾಜ್ ಮಾಡಿದ ಚಿತ್ರ ಎಂದು ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಇದು ಪ್ಯಾರಿಸ್ನ ಚಿತ್ರವಲ್ಲ. ಬದಲಿಗೆ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿನ ಚಿತ್ರ. ಆ ಕಾರ್ಯಕ್ರಮದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಹ ಭಾಗಿಯಾಗಿದ್ದರು. ಮುಸ್ಲಿಂ ಸಮುದಾಯದ ಜನರಿಗೆ ಶುಭಾಶಯ ಕೋರಿದ್ದರು. ಹಲವು ಮಾಧ್ಯಮಗಳು ಆ ಬಗ್ಗೆ ಸುದ್ದಿ ಪ್ರಕಟಿಸಿದ್ದವು.

ಆದರೆ, ಆ ವಿಡಿಯೊವನ್ನು ಬಳಸಿಕೊಂಡು ಈಗ ಸುಳ್ಳು ಸುದ್ದಿ ಸೃಷ್ಟಿಸಲಾಗಿದೆ. ಇದು ಪ್ಯಾರಿಸ್ನ ಸ್ಥಿತಿ, ಇದೇ ಸ್ಥಿತಿ ಭಾರತಕ್ಕೂ ಬರಲಿದೆ ಎಂಬ ಆತಂಕವನ್ನು ಸೃಷ್ಟಿಸಲು ಈ ವಿಡಿಯೊ ಬಳಸಿಕೊಳ್ಳಲಾಗಿದೆ. ಈ ಘಟನೆಯ ಬಗ್ಗೆ ಹಲವು ಫ್ಯಾಕ್ಟ್ಚೆಕ್ ಸುದ್ದಿ ತಾಣ ಇಂಡಿಯಾ ಟುಡೇ ಫ್ಯಾಕ್ಟ್ಚೆಕ್ ಪ್ರಕಟಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪೋಸ್ಟ್ನಲ್ಲಿ ಹಂಚಿಕೊಳ್ಳಲಾದ ವಿಡಿಯೋ ರಷ್ಯಾದ ಮಾಸ್ಕೋ ಕ್ಯಾಥೆಡ್ರಲ್ ಮಸೀದಿಯ ಹೊರಗೆ ಸಾವಿರಾರು ಮುಸ್ಲಿಮರು ನಮಾಜ್ ಮಾಡುವುದನ್ನು ತೋರಿಸುತ್ತದೆ. ಪ್ರತಿ ವರ್ಷ, ಮಾಸ್ಕೋದಲ್ಲಿ ಮುಸ್ಲಿಮರು ರಂಜಾನ್ ತಿಂಗಳಲ್ಲಿ ಕ್ಯಾಥೆಡ್ರಲ್ ಮಸೀದಿಯ ಹೊರಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ವಿಡಿಯೋಗೂ ಫ್ರಾನ್ಸ್ಗೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಪೊಲೀಸರನ್ನು ಬೆನ್ನಟ್ಟಿರುವ ಮಹಿಳೆ ಈ ದೃಶ್ಯಗಳು ಮಣಿಪುರದಲ್ಲ!

