ಫ್ಯಾಕ್ಟ್ಚೆಕ್ : ಆಸ್ಟ್ರೇಲಿಯಾ ಕಡಲ ತೀರದಲ್ಲಿ ಪತ್ತೆಯಾಗಿರುವ ಬೃಹತ್ ಗಾತ್ರದ ವಸ್ತು ಚಂದ್ರಯಾನ-3 ರಾಕೇಟ್ನದ್ದೇ?
ಆಸ್ಟ್ರೀಲಿಯಾದ ಸಮುದ್ರ ತೀರದಲ್ಲಿ ಲೋಹದಿಂದ ಕೂಡಿದ ಬೃಹತ್ ವಸ್ತುವೊಂದು ಪತ್ತೆಯಾಗಿದ್ದು, ವಸ್ತುವನ್ನು ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಇದರಿಂದ ದೂರ ಇರುವಂತೆ ಅಲ್ಲಿನ ಪೊಲೀಸರು ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ. ಈ ವಸ್ತುವಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಭಿನ್ನ ಭಿನ್ನ ಹೇಳಿಕೆಗಳ ಮೂಲಕ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
View this post on Instagram
ಆಸ್ಟ್ರೇಲಿಯಾದ ಸಮುದ್ರ ತೀರದಲ್ಲಿ ಬೃಹತ್ ಗಾತ್ರದ ಸಿಲಿಂಡರ್ ಮಾದರಿಯ ವಸ್ತುವೊಂದು ಪತ್ತೆಯಾಗಿದ್ದು, ಇದು ಪೋಲಾರ್ ಸ್ಯಾಟ್ಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್ವಿ) ರಾಕೆಟ್ನ ಭಾಗ ಎಂದು ಇಸ್ರೋ ಹೇಳಿದೆ ಎಂದು ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈಗ ಪತ್ತೆಯಾಗಿರುವ ವಸ್ತು ಚಂದ್ರಯಾನ 3 ರ ರಾಕೇಟ್ಗೆ ಸಂಬಂಧಿಸಿವೆ ಎಂಬುದು ನಿಜವೇ ಎಂದು ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ಗೆ ಸಂಬಂಧಿಸಿದಂತೆ, ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವ್ಯಕ್ತಪಡಿಸಿರುವ ಹೇಳಿಕೆಗಳು ವ್ಯಕ್ತಿರಿಕ್ತವಾಗಿವೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧಿಕೃತ ವೆಬ್ಸೈಟ್ ಪ್ರಕಾರ, ಚಂದ್ರಯಾನ-1 (2008) ನಲ್ಲಿ ಬಳಸಲಾದ ಉಡಾವಣಾ ವಾಹನವು PSLV-C11 ಆಗಿತ್ತು. ಮತ್ತೊಂದೆಡೆ, ಚಂದ್ರಯಾನ-2 (2019) ಮತ್ತು ಚಂದ್ರಯಾನ-3 (2023) ಮಿಷನ್ಗಳು GSLV Mk III (LVM3) ಉಡಾವಣಾ ರಾಕೇಟ್ಅನ್ನು ಬಳಸಿಕೊಂಡಿವೆ.
ವೈರಲ್ ಪೋಸ್ಟ್ನಲ್ಲಿ ಹಂಚಿಕೊಂಡಿರುವ ವಸ್ತುವಿನ ಚಿತ್ರದ ಕುರಿತು, ಆಸ್ಟ್ರೇಲಿಯಾದ ಮಾಧ್ಯಮಗಳು ಪರ್ತ್ನಿಂದ 250 ಕಿಮೀ ಉತ್ತರದಲ್ಲಿರುವ ಗ್ರೀನ್ ಹೆಡ್ನ ಬೀಚ್ನಲ್ಲಿ 16 ಜುಲೈ 2023 ರಂದು ದೊಡ್ಡ ಗಾತ್ರದ ವಸ್ತುವೊಂದು ಪತ್ತೆ ಮಾಡಿದೆ ಎಂದು ವರದಿ ಮಾಡಿದೆ. ನಂತರ, ಆಸ್ಟ್ರೇಲಿಯನ್ ಬಾಹ್ಯಾಕಾಶ ಸಂಸ್ಥೆ (ASA) ಟ್ವೀಟ್ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೋದ ಹಿರಿಯ ವಿಜ್ಞಾನಿಯೋರ್ವರು, “ನಾವು ಈ ಬೃಹತ್ ವಸ್ತುವನ್ನು ಖುದ್ದಾಗಿ ನೋಡದೆ ಅಥವಾ ಪರಿಶೀಲನೆ ಮಾಡದೇ ಇದರ ಬಗ್ಗೆ ಏನನ್ನೂ ಖಚಿತಪಡಿಸಲು ಅಥವಾ ನಿರಾಕರಿಸಲು ಸಾಧ್ಯವಿಲ್ಲ” ಎಂದರು. “ಮೊದಲು ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ಈ ವಸ್ತುವಿನ ವಿಡಿಯೋವನ್ನು ನಮಗೆ ಕಳುಹಿಸಬೇಕು. ಅದರ ಮೇಲೆ ಯಾವುದಾದರೂ ಗುರುತುಗಳಿವೆಯೇ ಎಂಬುದನ್ನು ನಾವು ಪರಿಶೀಲಿಸಬೇಕು. ಇದಕ್ಕೂ ಮೊದಲು ಈ ವಸ್ತುವನ್ನು ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆ ಬೇರೆಡೆಗೆ ಸ್ಥಳಾಂತರಿಸಬೇಕು. ಇನ್ನೂ ಅಗತ್ಯವಿದ್ದರೆ, ಅದು ಭಾರತೀಯ ರಾಕೆಟ್ಗೆ ಸಂಬಂಧಿಸಿದ ವಸ್ತುವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಇಸ್ರೋ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಬಹುದು” ಎಂದು ಅವರು ಹೇಳಿದರು.
ಸಮುದ್ರ ತೀರದಲ್ಲಿ ಪತ್ತೆಯಾಗಿರುವ ಈ ಬೃಹತ್ ಲೋಹೀಯ ವಸ್ತುವನ್ನು ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಇದರಿಂದ ದೂರ ಇರುವಂತೆ ಅಲ್ಲಿನ ಪೊಲೀಸರು ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ. ಈ ವಸ್ತುವು ಬಹಳ ಹಿಂದಿನ ಭಾರತದ ಪಿಎಸ್ಎಲ್ವಿ ರಾಕೆಟ್ನ ಭಾಗವೇ ಎಂಬ ಬಗ್ಗೆ ಬಾಹ್ಯಾಕಾಶ ವಿಜ್ಞಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ಬಾಹ್ಯಾಕಾಶ ವಿಜ್ಞಾನಿಗಳು ಈ ಕುರಿತು ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು ಸಂಪರ್ಕಿಸಿದ್ದಾರೆ ಎಂದು ಇಸ್ರೋ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಟ್ವೀಟ್ ಮಾಡಿರುವ ಆಸ್ಟ್ರೇಲಿಯನ್ ಸ್ಪೇಸ್ ಏಜೆನ್ಸಿ, “ನಾವು ಸದ್ಯ ಪಶ್ಚಿಮ ಆಸ್ಟ್ರೇಲಿಯಾದ ಜುರಿಯನ್ ಕೊಲ್ಲಿಯ ಸಮುದ್ರ ತೀರದಲ್ಲಿ ಪತ್ತೆಯಾಗಿರುವ ಭಾರಿ ಗಾತ್ರದ ಲೋಹೀಯ ವಸ್ತುವಿನ ಬಗ್ಗೆ ವಿವಿಧೆಡೆ ವಿಚಾರಣೆ ನಡೆಸುತ್ತಿದ್ದೇವೆ. ಈ ವಸ್ತುವು ವಿದೇಶಿ ಬಾಹ್ಯಾಕಾಶ ಉಡಾವಣಾ ವಾಹನದಿಂದ ಬಂದಿರಬಹುದು. ಹೆಚ್ಚಿನ ಮಾಹಿತಿಯನ್ನು ಪಡೆಯಲು ವಿವಿಧ ಜಾಗತಿಕ ಸಂಸ್ಥೆಯೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ” ಎಂದು ಹೇಳಿದೆ.
*UPDATE*
We have determined the object is most likely a solid rocket motor casing.
We're continuing the process of identifying the type of rocket & its origin through ongoing engagement with our global counterparts. @WA_Police have coordinated the object's removal & storage. https://t.co/04ZHjLBJ8Y
— Australian Space Agency (@AusSpaceAgency) July 19, 2023
ವಸ್ತುವಿನ ಮೂಲ ತಿಳಿದಿಲ್ಲವಾದ್ದರಿಂದ, ಸಾರ್ವಜನಿಕರ ಇದರ ಬಳಿ ತೆರಳುವುದಾಗಲಿ ಅಥವಾ ಅದನ್ನು ಸರಿಸಲು ಪ್ರಯತ್ನಿಸುವುದಾಗಲಿ ಮಾಡಬಾರದು. ಬೇರೆಡೆ ಇಂತಹ ಯಾವುದೇ ಅವಶೇಷಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಜೊತೆಗೆ [email protected] ಮೂಲಕ ಆಸ್ಟ್ರೇಲಿಯನ್ ಬಾಹ್ಯಾಕಾಶ ಸಂಸ್ಥೆಗೆ ತಿಳಿಸುವಂತೆ ಮನವಿ ಮಾಡಿದ್ದಾರೆ.
ಲೋಹದಂತಹ ವಸ್ತುವನ್ನು ಹತ್ತಿರದಿಂದ ನೋಡಿದಾಗ ಇದರ ಮೇಲೆ ಸಾಕಷ್ಟು ಪಾಚಿ ಕಟ್ಟಿರುವಂತೆ ಕಾಣುತ್ತದೆ. ಆದ್ದರಿಂದ ಇದು ತುಂಬಾ ಹಳೆಯ ವಸ್ತುವಾಗಿರಬೇಕು ಎಂದು ಅಂದಾಜಿಸಲಾಗಿದೆ. ಅಲ್ಲದೆ ಇದು ಜುಲೈ 14ರಂದು ಉಡಾವಣೆಗೊಂಡ ಚಂದ್ರಯಾನ-3ನ ಎಲ್ವಿಎಂ 3 ಸೇರಿದಂತೆ ಇತ್ತೀಚೆಗೆ ಉಡಾವಣೆಯಾದ ಯಾವುದೇ ರಾಕೆಟ್ನ ಭಾಗವಲ್ಲ ಎಂಬುದು ಖಚಿತವಾಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಆಸ್ಟ್ರೇಲಿಯಾದ ಕಡಲತೀರದಲ್ಲಿ ಪತ್ತೆಯಾದ ರಾಕೆಟ್ ಅವಶೇಷಗಳು ಇತ್ತೀಚೆಗೆ ಉಡಾವಣೆಯಾದ ಚಂದ್ರಯಾನ-3 ಗೆ ಸೇರಿದ್ದು ಎಂದು ಭಾರತೀಯ ಅಥವಾ ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆಗಳು ಖಚಿತಪಡಿಸಿಲ್ಲ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ವಿಮಾನದಿಂದ ಸರೆಯಾದ ಚಂದ್ರಯಾನ 3 ರ ದೃಶ್ಯಗಳು ಎಂದು ಹಳೆಯ ವಿಡಿಯೋ ಹಂಚಿಕೆ