ಫ್ಯಾಕ್ಟ್ಚೆಕ್ : ಹಿಂದೂ ಅರ್ಚಕನಿಗೆ ಬ್ಯಾಟ್ನಿಂದ ಹೊಡೆಯುತ್ತಿರುವ ಯುವಕ ಮುಸ್ಲಿಂ ಅಲ್ಲ! ಮತ್ಯಾರು?
ಆತ್ಮೀಯ ಹಿಂದೂಗಳೇ ಇದು ರಾಜಸ್ಥಾನದ ಸ್ಥಿತಿ, ನೀವು ಇನ್ನೂ ಕಾಂಗ್ರೆಸ್ಗೆ ಮತ ಹಾಕುತ್ತೀರಾ? ಹಿಂದೂ ದೇವಾಲಯದ ಅರ್ಚಕನಿಗೆ ಮತಾಂಧ ಮುಸಲ್ಮಾನನೊಬ್ಬ ಥಳಿಸುತ್ತಿರುವ ವಿಡಿಯೋವನ್ನು ನಿಮ್ಮ ಎಲ್ಲಾ ವಾಟ್ಸಾಪ್ ಗ್ರೂಪ್ಗಳಲ್ಲಿ ಶೇರ್ ಮಾಡಿ ತಪ್ಪಿತಸ್ಥನನ್ನು ಗುರುತಿಸಿ ಆತನನ್ನು ಬಂಧಿಸಲು ದಯವಿಟ್ಟು ಈ ವಿಡಿಯೋವನ್ನು ಶೇರ್ ಮಾಡಿ ಎಂಬ ಪ್ರತಿಪಾದನೆಯೊಂದಿಗೆ ಬಲಪಂಥೀಯ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
“ಅಣ್ಣ ಹೊಡಿಬೇಡಿ ಎಂದು ಪರಿ ಪರಿಯಾಗಿ ಬೇಡಿಕೊಳ್ಳುತ್ತಿರುವ ವ್ಯಕ್ತಿಗೆ ಮತ್ತೊಬ್ಬ ವ್ಯಕ್ತಿ ಕ್ರಿಕೆಟ್ ಬ್ಯಾಟ್ನಿಂದ ಹೊಡೆಯುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬಾಗಿಲಿನ ಮೂಲೆಯೊಂದರಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿ ನಿರ್ದಯವಾಗಿ ಹೊಡೆಯುತ್ತಿರುವ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಹೊಡೆಯುತ್ತಿರುವ ವ್ಯಕ್ತಿ ಮುಸ್ಲಿಂ ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ವಿಡಿಯೋ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಘಟನೆಗೆ ಸಂಬಂಧಿಸಿದ ವರದಿಗಳು ಲಭ್ಯವಾವೆ. 2020 ರಲ್ಲಿ ಹರಿಯಾಣದ ಫತಾಹಾಬಾದ್ ಜಿಲ್ಲೆಯ ಭಾಟ್ಟು ಕಲಾನ್ ಗ್ರಾಮದಲ್ಲಿ ನಡೆದ ಘಟನೆ ಎಂದು ಧೈನಿಕ್ ಭಾಸ್ಕರ್ ವರದಿ ಮಾಡಿದೆ. ಅಂದರೆ ಈ ವಿಡಿಯೋ ರಾಜಸ್ಥಾನಕ್ಕೆ ಸಂಬಂಧಪಟ್ಟ ಘಟನೆಯಲ್ಲ ಎಂದು ಸ್ಪಷ್ಟವಾಗಿದೆ.
ಹಾಗಾಯೆ ಮುಸ್ಲಿಂ ವ್ಯಕ್ತಿ ಈ ಅರ್ಚಕನಿಗೆ ಹೀಗೆ ತಳಿಸಲು ಕಾರಣವೇನು ? ಎಂದು ಪರಿಶೀಲಿಸಿದಾಗ, ದೇವಸ್ಥಾನದ ಪಕ್ಕದಲ್ಲಿ ಇದ್ದ ಮೈದಾನದಲ್ಲಿ ಆಟಆಡುತ್ತಿದ್ದ ಯುವಕರ ಗುಂಪು ಆಟದ ಸಾಮಗ್ರಿಗಳನ್ನು ದೇವಸ್ಥಾನದಲ್ಲಿ ಇರಿಸಲು ಮುಂದಾಗಿದ್ದಾರೆ ಆದರೆ ಇದಕ್ಕೆ ದೇವಸ್ಥಾನದ ಪೂಜಾರಿ ನಿರಾಕರಿಸಿದ್ದಾರೆ. ಇದೇ ವಿಚಾರಕ್ಕೆ ಕೋಪಗೊಂಡ ಅಮೀತ್, ಕೃಷ್ಣ, ಪ್ರದೀಪ್ ಮತ್ತು ರಾಖೇಶ್ ಎಂಬುವವರು ಅರ್ಚಕನಿಗೆ ಮನಸ್ಸೋಯಿಚ್ಚೆ ಥಳಿಸಿದ್ದಾರೆ ಎಂದು ಜಾಗರಣ್ ಪತ್ರಿಕೆ ವರದಿ ಮಾಡಿದೆ.
ಅಂದರೆ ಅರ್ಚಕನ ಮೇಲೆ ಹಲ್ಲೆ ನಡೆಸಿದ ಪುಂಡರು ಮುಸ್ಲಿಮರಲ್ಲ ಎಂದು ವರದಿಗಳು ದೃಢಪಡಿಸಿವೆ. ಹಾಗೆಯೇ ಪೊಲೀಸ್ ವರದಿಗಳ ಪ್ರಕಾರ ಅರ್ಚಕನ ಮೇಲೆ ಹಲ್ಲೆ ನಡೆಸಿದ ಯುವಕರು ಹಿಂದೂ ಸಮುದಾಯದವರಾಗಿದ್ದು ಕ್ರಿಕೆಟ್ ಬ್ಯಾಟ್ ಇಡಲು ಅವಕಾಶ ನೀಡದ ಕಾರಣ ದೇವಸ್ಥಾನದ ಅರ್ಚಕನಿಗೆ ಥಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಕೆಲವು ವರದಿಗಳ ಪ್ರಕಾರ ದೇವಸ್ಥಾನದ ಅರ್ಚಕ ಮಹಿಳೆಒಬ್ಬರಿಗೆ ಕರೆ ಮಾಡಿ ತೊಂದರೆ ನೀಡುತ್ತಿದ್ದ ಕಾರಣ ಆತನನ್ನು ಯುವಕರು ಥಳಿಸಿದ್ದಾರೆ ಎಂದೂ ಕೂಡ ಹೇಳಲಾಗುತ್ತಿದೆ. ಆದರೆ ಈ ಯಾವ ವರದಿಗಳಲ್ಲಿ ಥಳಿಸಿದ ಹುಡುಗರು ಮುಸ್ಲಿಮರು ಎಂದು ಎಲ್ಲಿಯೂ ಉಲ್ಲೇಖವಾಗಿಲ್ಲ. ಹಾಗಾಗಿ ಈ ಘಟನೆಯಗೆ ಯಾವುದೇ ಕೋಮು ಆಯಾಮವಿಲ್ಲ ಎಂದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2020ರಲ್ಲಿ ವ್ಯಕ್ತಿಒಬ್ಬ ದೇವಸ್ಥಾನದ ಪೂಜಾರಿಗೆ ಥಳಿಸಿದ ಹಳೆಯ ಘಟನೆಯ ವಿಡಿಯೋವನ್ನು ಮುಸ್ಲಿಂ ವ್ಯಕ್ತಿ ಹಿಂದೂ ಅರ್ಚಕನಿಗೆ ಥಳಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಪ್ರತಿಪಾದೆನಯೊಂದಿಗೆ ಕೋಮು ಹಿನ್ನಲೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಮೈಸೂರು-ಬೆಂಗಳೂರು ಪ್ರಯಾಣ ದರದಲ್ಲಿ ಏರಿಕೆ ಇಲ್ಲ

