FACT CHECK | ರಂಜಾನ್ ಆಚರಣೆಗಾಗಿ ಸರ್ಕಾರಿ ಶಾಲೆಯ ಸಮಯವನ್ನೇ ಬದಲಾವಣೆ ಮಾಡಲಾಗಿದೆಯೇ?
“ಮುಸ್ಲಿಮರ ಪವಿತ್ರ ರಂಜಾನ್ ಆಚರಣೆ ಕಾರಣಕ್ಕಾಗಿ ಸರ್ಕಾರಿ ಶಾಲೆ ಸಮಯ ಬದಲಾವಣೆ ಮಾಡಲಾಗಿದೆ, ರಂಜಾನ್ ತಿಂಗಳ ಆರಂಭದಿಂದ ಏಪ್ರಿಲ್ ಹತ್ತರವರೆಗೆ ಅನ್ವಯವಾಗುವಂತೆ ಮುಸ್ಲಿಂ ವಿದ್ಯಾರ್ಥಿಗಳ ಅನುಕೂಲಕ್ಕೆ ಶಾಲೆ ಸಮಯವನ್ನು ಬದಲಾವಣೆ ಮಾಡಲಾಗಿದೆ ಎಂಬ ಸುದ್ದಿಯೊದು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಕನ್ನಡದ ಸುದ್ದಿ ಮಾಧ್ಯಮಗಳಾದ ಟಿವಿ9 ಕನ್ನಡ, ಸೇರಿದಂತೆ ಹಲವು ದೃಶ್ಯ ಮಾಧ್ಯಮಗಳು ಕೂಡ ಇದೇ ಸುದ್ದಿಯನ್ನು ಬಿತ್ತರಿಸುವೆ” ಎಂಬ ಸ್ಕ್ರೀನ್ಶಾಟ್ ಸಾಮಾಜಿಕ ಮಾಧ್ಯಮಗಳಲ್ಲೂ ಪ್ರಸಾರವಾಗುತ್ತಿದೆ.

ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದನ್ನೆ ಪೋಸ್ಟ್ ಮೂಲಕ ಹಂಚಿಕೊಂಡಿದ್ದು, ರಂಜಾನ್ ಹಬ್ಬದ ಪ್ರಯುಕ್ತ ಸರ್ಕಾರಿ ಶಾಲೆಗಳ ಸಮಯ ಮತ್ತು ವೇಳಾಪಟ್ಟಿಯನ್ನು ಬದಲಾಯಿಸಲು ರಾಜ್ಯ ಸರ್ಕಾರ ಆದೇಶಿಸಿದೆ ಎಂದು ಪ್ರಸಾರ ಮಾಡಲಾಗುತ್ತಿದೆ.

ಫ್ಯಾಕ್ಟ್ಚೆಕ್ :
ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವಂತೆ ರಂಜಾನ್ ಹಬ್ಬದ ಪ್ರಯುಕ್ತ ಸರ್ಕಾರಿ ಶಾಲಾ ಸಮಯವನ್ನು ಬದಲಾಯಿಸಿದೆಯೇ ಎಂದು ಖಚಿತಪಡಿಸಲು, ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ ಆಯುಕ್ತರ ಕಚೇರಿಯಿಂದ ಹೊರಡಿಸಲಾದ ಸುತ್ತೋಲೆಯನ್ನು ಪರಿಶೀಲಿಸಿದಾಗ, ಈ ಸುತ್ತೋಲೆಯ ಆರಂಭದಲ್ಲಿಯೇ ರಂಜಾನ್ ಮಾಹೆಯಲ್ಲಿ ರಾಜ್ಯದ ಉರ್ದು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಾಲಾ ಅವಧಿ ಬದಲಾವಣೆ ಮಾಡುವ ಬಗ್ಗೆ ಎಂಬ ಸ್ಪಷ್ಟ ಉಲ್ಲೇಖ ಮಾಡಲಾಗಿದೆ.

ಇನ್ನು ಪ್ರಸ್ತಾವನೆಯಲ್ಲಿ ಕೂಡ ಎರಡನೇ ಪ್ಯಾರದಲ್ಲಿ “ಉಲ್ಲೇಖಿತ 2ರ ಸರ್ಕಾರದ ಪತ್ರದಲ್ಲಿ ರಂಜಾನ್ ಮಾಸದ ಪ್ರಯುಕ್ತ ರಾಜ್ಯದಲ್ಲಿನ ಉರ್ದು ಮಾಧ್ಯಮದ ಕಿರಿಯ ಹಿರಿಯ ಮತ್ತು ಪ್ರೌಢ ಶಾಲೆಗಳನ್ನು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12:45 ರವರೆಗೆ ರಂಜಾನ್ ತಿಂಗಳು ಪ್ರಾರಂಭವಾದ ದಿನಾಂಕದಿಂದ ಒಂದು ತಿಂಗಳವರೆಗೆ ಮಾತ್ರ ನಡೆಸಲು ಈ ಹಿಂದೆ ದಿನಾಂಕ 31 10 2002 ಹೊರಡಿಸಲಾಗಿದ್ದ ಸ್ಟ್ಯಾಂಡಿಂಗ್ ಆರ್ಡರ್ ಅನ್ನು ಯತಾವತ್ತು ಹೊರಡಿಸಲು ಸ್ವೀಕೃತವಾದ ಮನವಿಗಳನ್ನು ನಿಯಮನುಸಾರ ಪರಿಶೀಲಿಸಿ ಅಗತ್ಯ ಕ್ರಮ ವಹಿಸುವಂತೆ ಸೂಚಿಸಲಾಗಿದೆ.”ಎನ್ನುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಈ ಒಂದು ಸುತ್ತೋಲೆ ಕೇವಲ ರಾಜ್ಯದ ಉರ್ದು ಮಾಧ್ಯಮದ ಕಿರಿಯ ಹಿರಿಯ ಮತ್ತು ಪ್ರೌಢ ಶಾಲೆಗಳಿಗೆ ಮಾತ್ರ ಅನ್ವಯಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಸರ್ಕಾರಿ ಶಾಲೆಗಳ ಎಲ್ಲಾ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ ಎಂಬುದನ್ನು ಗಮನಿಸಬೇಕು. ಇದರ ಜೊತೆಗೆ ಈ ಸುತ್ತೋಲೆಯನ್ನ ಹೊರಡಿಸಿರುವುದು ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಲಯ ಹೊರತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ರಾಜ್ಯದ ಉರ್ದು ಮಾಧ್ಯಮದ ಕಿರಿಯ ಹಿರಿಯ ಮತ್ತು ಪ್ರೌಢ ಶಾಲೆಗಳಿಗೆ ಅನ್ವತಯವಾಗುವಂತೆ ರಂಜಾನ್ ಪ್ರಯುಕ್ತ ಶಾಲಾ ಸಮಯವನ್ನು ಬದಲಾಯಿಸಿ ಹೊರಡಿಸಲಾದ ಆದೇಶವನ್ನು, ಕನ್ನಡದ ಕೆಲವೊಂದು ದೃಶ್ಯ ಮಾಧ್ಯಮಗಳು ಎಲ್ಲಾ ಸರ್ಕಾರಿ ಪ್ರೌಢ ಶಾಲೆಗಳಿಗೂ ಎಂದು ಸುಳ್ಳು ಮತ್ತು ತಪ್ಪಾದ ಪ್ರತಿಪಾದನೆಯೊಂದಿಗೆ ಸುದ್ದಿಯನ್ನು ಬಿತ್ತರಿಸಿವೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ರಾಮೇಶ್ವರಂ ಕೆಫೆ ಬಾಂಬರ್ನನ್ನು ಬಂಧಿಸಲಾಗಿದೆ ಎಂದು ಸುಳ್ಳು ಫೋಸ್ಟ್ ಹಂಚಿಕೆ

