FACT CHECK | ರಾತ್ರಿಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಪೊಲೀಸರೇ ಮೆನೆಗೆ ತಲುಪಿಸುವ ಯೋಜನೆ ಜಾರಿಯಾಗಿದೆ ಎಂಬುದು ಸುಳ್ಳು
ರಾತ್ರಿಪಾಳಿಯಲ್ಲಿ ಕೆಲಸ ಮಾಡುವ ಉದ್ಯೋಗಸ್ಥ ಮಹಿಳೆಯರನ್ನು ಮನೆಗೆ ಕರೆದೊಯ್ದು ಸುರಕ್ಷಿತವಾಗಿ ತಲುಪಿಸುವ ಯೋಜನೆಯೊಂದನ್ನು ನಗರ ಪೊಲೀಸರು ಜಾರಿಗೆ ತಂದಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಯಾವುದೇ ಮಹಿಳೆ ಮನೆಗೆ ಹೋಗಲು ವಾಹನ ಸಿಗದಿದ್ದರೆ ಪೊಲೀಸ್ ಸಹಾಯವಾಣಿ ಸಂಖ್ಯೆ 1091 ಮತ್ತು 7837018555 ಗೆ ಕರೆ ಮಾಡಬಹುದು. ಪೊಲೀಸ್ ವಾಹನವು ಮಹಿಳೆಯನ್ನು ಸುರಕ್ಷಿತವಾಗಿ ಅವರ ಮನೆಗೆ ಕರೆದೊಯ್ಯುತ್ತದೆ. ಮಹಿಳೆಯರು ಈ ಸಹಾಯವಾಣಿ ಸಂಖ್ಯೆಗಳಿಗೆ 24X7 ಕರೆ ಮಾಡಬಹುದು. ದೇಶದಲ್ಲಿ ಎಲ್ಲ ಭಾಗಗಳಲ್ಲಿ ಈ ಸೇವೆಯನ್ನು ಜಾರಿಗೊಳಿಸಲಾಗಿದೆ ಎಂದು ಪೋಸ್ಟ್ನಲ್ಲಿ ಹೇಳಿಕೊಳ್ಳಲಾಗುತ್ತಿದೆ.
ಇದೇ ರೀತಿಯ ಹಲವು ಪೋಸ್ಟ್ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು ವಾಟ್ಸಾಪ್ನಲ್ಲಿಯೂ ಇದೇ ಸಂದೇಶವನ್ನು ಬಹುತೇಕರು ವಾಟ್ಸಾಪ್ ಬಳಕೆದಾರರು ಶೇರ್ ಮಾಡುತ್ತಿದ್ದಾರೆ. ಹಾಗಿದ್ದರೆ ಈ ಸಂದೇಶದ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಡಿಸೆಂಬರ್ 1, 2019 ರಂದು ಹಿಂದೂಸ್ತಾನ್ ಟೈಮ್ಸ್ ಮಾಡಿದ ವರದಿಯೊಂದು ಲಭ್ಯವಾಗಿದೆ. ವರದಿಯ ಪ್ರಕಾರ ಪಂಜಾಬ್ ಪ್ರಾಂತ್ಯದ ಲುಧಿಯಾನದಲ್ಲಿ‘ಮಹಿಳೆಯರ ವಿರುದ್ಧದ ಅಪರಾಧಗಳನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲು ಈ ಯೋಜನೆ ಜಾರಿಗೆ ತರಲಾಗಿದೆ ಎಂದು ವರದಿಯಾಗಿದೆ.
‘ಮಹಿಳೆಯರ ವಿರುದ್ಧದ ಅಪರಾಧಗಳನ್ನು ತಡೆಗಟ್ಟಲು, ಲುಧಿಯಾನ ಪೊಲೀಸರು ಸಂಜೆ ತಡವಾ ಗಿ ಅಥವಾ ರಾತ್ರಿಯಲ್ಲಿ ಕ್ಯಾಬ್ ಪಡೆಯಲು ಸಾಧ್ಯವಾಗದ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸಿದ್ದಾರೆ. ಮಹಿಳೆಯರು ಪೊಲೀಸ್ ಸಹಾಯವಾಣಿ ಸಂಖ್ಯೆ 1091 ಮತ್ತು 7837018555 ಗೆ ಕರೆ ಮಾಡುವ ಮೂಲಕ ವಾಹನಕ್ಕಾಗಿ ವಿನಂತಿಸಬಹುದು. ಪೊಲೀಸ್ ವಾಹನವು ಅವರನ್ನು ಉಚಿತವಾಗಿ ಡ್ರಾಪ್ ಮಾಡುತ್ತದೆ ಎಂದು ಪೊಲೀಸ್ ಆಯುಕ್ತ ರಾಕೇಶ್ ಅಗರ್ವಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.’ ಎಂದು ವರದಿಯಲ್ಲಿದೆ.
ದಿ ಟ್ರಿಬ್ಯೂನ್ ಮತ್ತು ನ್ಯೂಸ್ 18 ನ ವೆಬ್ಸೈಟ್ಗಳಲ್ಲಿ ಕೂಡ ಇದಕ್ಕೆ ಸಂಬಂಧಿಸಿದ ಸುದ್ದಿಗಳನ್ನು ನಾವು ಕಂಡುಕೊಂಡಿದ್ದೇವೆ. 2 ಡಿಸೆಂಬರ್ 2019 ರಂದು ಪ್ರಕಟವಾದ ವರದಿಗಳ ಪ್ರಕಾರ, ಲುಧಿಯಾನ ಪೊಲೀಸರು ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯನ್ನು ಪ್ರಾರಂಭಿಸಿದ್ದರು. ಆದರೆ, ಈಗ ಲುಧಿಯಾದ ಪೊಲೀಸರು ಈ ಸೇವೆಯನ್ನು ನಿಲ್ಲಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸುತ್ತವೆ.
ALERT!! The message circulating about free travel for women from 10 PM to 6 AM is FAKE. Please rely only on official sources. In any emergency, dial #Namma112 for immediate help.#WeServeWeProtect
ಎಚ್ಚರವಾಗಿರಿ!! ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನಿಯಂತ್ರಣ ಕೊಠಡಿಗೆ ಕರೆ… pic.twitter.com/jKtCa3A93F
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) August 22, 2024
ಹಾಗೆಯೆ ಈ ಸುಳ್ಳು ಸುದ್ದಿಯ ಬಗ್ಗೆ ಬೆಂಗಳೂರು ನಗರ ಪೊಲೀಸ್ ಕೂಡ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಆಗಸ್ಟ್ 22, 2024 ರಂದು ಎಚ್ಚರಿಕೆಯ ಪೋಸ್ಟ್ಅನ್ನು ಹಂಚಿಕೊಂಡಿದೆ. ‘ಎಚ್ಚರವಾಗಿರಿ!! ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನಿಯಂತ್ರಣ ಕೊಠಡಿಗೆ ಕರೆ ಮಾಡಿದಲ್ಲಿ, ಮಹಿಳೆಯರಿಗೆ ಉಚಿತ ಪ್ರಯಾಣ ಎಂಬ ಮೆಸೇಜ್ ಹರಿದಾಡುತ್ತಿದ್ದು, ಇದು ಸುಳ್ಳು. ಇಂತಹ ಸುಳ್ಳು ಮೆಸೇಜ್ ನಂಬಬೇಡಿ. ತುರ್ತು ಪರಿಸ್ಥಿತಿಯಲ್ಲಿ ನಮ್ಮ 112 ಸಹಾಯವಾಣಿಗೆ ಕರೆಮಾಡಿ ನೆರವು ಪಡೆಯಿರಿ.’ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನಿಯಂತ್ರಣ ಕೊಠಡಿಗೆ ಕರೆ ಮಾಡಿದಲ್ಲಿ, ಮಹಿಳೆಯರಿಗೆ ಉಚಿತ ಪ್ರಯಾಣ ಎಂಬ ಯೋಜನೆಯನ್ನು ಪೊಲೀಸ್ ಇಲಾಖೆ ಜಾರಿಗೆ ತಂದಿರುವುದಿಲ್ಲ ಯಾವುದೇ ಉಚಿತ ಪ್ರಯಾಣದ ಸ್ಕೀಂ ಜಾರಿಯಾಗಿಲ್ಲ. ಇದೆಲ್ಲಾ ಫೇಕ್ ನ್ಯೂಸ್. ನಾಗರಿಕರು ತುರ್ತು ಸಂದರ್ಭದಲ್ಲಿ 112ಗೆ ಕರೆ ಮಾಡಿ ಎಂದು ನಗರ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮೋದಿ ಆಡಳಿತದಲ್ಲಿ ಭಾರತದ ರಸ್ತೆ ಎಂದು ಬಲ್ಗೇರಿಯಾದ ಫೋಟೊ ಹಂಚಿಕೆ

