FACT CHECK | ಗಡ್ಡಧಾರಿ ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸುವ ವಿಡಿಯೋದಲ್ಲಿರುವ ದೃಶ್ಯ ನೈಜ ಘಟನೆಯಲ್ಲ! ಮತ್ತೇನು?

ಸ್ಕೈ ವಾಕ್ (ಫುಟ್‌ ಓವರ್‌ಬ್ರಿಡ್ಜ್‌ನಲ್ಲಿ) ಮೇಲೆ ಮುಸ್ಲಿಂ ವ್ಯಕ್ತಿಯೊಬ್ಬ ಬುರ್ಖಾ ಧರಿಸಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಆಕೆಯ ದೇಹವನ್ನು ಸ್ಪರ್ಶಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.

ಬಾಂಗ್ಲಾದೇಶದಿಂದ ವರದಿಯಾಗಿರುವ ಗಡ್ಡಧಾರಿ ವ್ಯಕ್ತಿಯೊಬ್ಬ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋ ನೈಜ ಘಟನೆಯನ್ನು ಸೆರೆಹಿಡಿದಿದೆ ಎಂದು ಹೇಳಲಾಗುತ್ತಿದೆ.

ವೈರಲ್ ವಿಡಿಯೋದಲ್ಲಿ ತೀರಾ ಅಶ್ಲೀಲ ಮಾತುಗಳಿದ್ದ ಕಾರಣಕ್ಕೆ ಅದನ್ನು ಮ್ಯೂಟ್‌ ಮಾಡಲಾಗಿದ್ದು, ಇದು ಬಾಂಗ್ಲಾದೇಶದ ವಿಡಿಯೋ. ಮುದುಕನ ವಯಸ್ಸನ್ನು ನೋಡಿ. ಬುರ್ಖಾ ಧರಿಸಿರುವ ಹುಡುಗಿ ಮುದುಕನಿಗೆ ಎರಡು ಬಾರಿ ಕಪಾಳಮೋಕ್ಷ ಮಾಡಿದಾಗ, ಮುದುಕನು ನಾನು ನಡೆದುಕೊಂಡು ಹೋಗುವ ಗಡಿಬಿಡಿಯಲ್ಲಿ ತಿಳಿಯದೇ ತಾಗಿದೆ ಎಂದು ಹೇಳುತ್ತಾನೆ” ಎಂದು ವಿಡಿಯೋವನ್ನು ಎಕ್ಸ್‌ ಖಾತೆಯ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.

ಹಾಗಿದ್ದರೆ ಈ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆಯೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಸೆಪ್ಟೆಂಬರ್ 11, 2024 ರಂದು ಅಝಿಝುಲ್ 2.0 ಎಂಬ ಫೇಸ್‌ಬುಕ್ ಖಾತೆಯಲ್ಲಿ ಇದೇ ವಿಡಿಯೋವನ್ನು ಅಪ್‌ಲೋಡ್ ಮಾಡಿದ ಪೋಸ್ಟ್‌ ಲಭ್ಯವಾಗಿದೆ. ಆದರೆ ಈ ಪೋಸ್ಟ್‌ನಲ್ಲಿ ಯಾವುದೇ ವಿವರಗಳನ್ನು ನಮೂದಿಸಿಲ್ಲ.

12 ಸೆಪ್ಟೆಂಬರ್ 2024 ರಂದು ಪೋಸ್ಟ್ ಮಾಡಿದ ವೈರಲ್ ವಿಡಿಯೋವನ್ನೆ ಹೋಲುವ ಒಂದೇ ರೀತಿಯ ಬಟ್ಟೆಗಳನ್ನು ಧರಿಸಿರುವ ಅದೇ ಗಡ್ಡಧಾರಿ ಮತ್ತು ಬುರ್ಖಾದ ಮಹಿಳೆಯನ್ನು ಒಳಗೊಂಡಿರುವ ಮತ್ತೊಂದು ವಿಡಿಯೋ ಲಭ್ಯವಾಗಿದೆ. ಪೋಸ್ಟ್‌ನ ಶೀರ್ಷಿಕೆಯ ಪ್ರಕಾರ, ಇದು ನಟನೆಯ ವಿಡಿಯೋ ಎಂದು ಬರೆಯಲಾಗಿದೆ.

ವಿಡಿಯೋವನ್ನು ಮತ್ತಷ್ಟು ಪರಿಶೀಲಿಸಿದಾಗ ಈ ವಿಡಿಯೋಗಳನ್ನು ಅಝಿಝುಲ್ ಹಕ್ ಮೊರಾದ್ ಅವರು ರಚಿಸಿದ್ದಾರೆ ಎಂದು ತಿಳಿದುಬಂದಿದೆ, ಅವರು ಬಾಂಗ್ಲಾದೇಶ ಮೂಲದ ವೀಡಿಯೊ ಸೃಷ್ಟಿಕರ್ತ ಎಂದು ಗುರುತಿಸಿಕೊಂಡಿದ್ದಾರೆ. ಮೇಲಿನ ಪುರಾವೆಗಳ ಆಧಾರದ ಮೇಲೆ, ವೈರಲ್ ವೀಡಿಯೊವನ್ನು ಸ್ಕ್ರಿಪ್ಟ್ ಮಾಡಲಾಗಿದೆ ಮತ್ತು ನೈಜ ಘಟನೆಗಳನ್ನು ಚಿತ್ರಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ.

ಖಾತೆಯ ಬಳಕೆದಾರರು ಅಝೀಝುಲ್ ಹಕ್ ಮೊರಾಡ್ ಆಗಿದ್ದು, ಅವರು ಬಾಂಗ್ಲಾದೇಶದಲ್ಲಿ ತಮ್ಮ ಹೆಸರಿನ ಮೂಲಕ ಮತ್ತೊಂದು ಖಾತೆಯನ್ನು ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರ ಖಾತೆಯ ಬಯೋ ಪ್ರಕಾರ, ಅವರು ವಿಡಿಯೋ ರಚನೆಕಾರರಾಗಿದ್ದಾರೆ. ಅದೇ ಗಡ್ಡಧಾರಿ ವ್ಯಕ್ತಿಯನ್ನು ಒಳಗೊಂಡ ಹಲವು ವಿಡಿಯೋಗಳನ್ನು ಈ ಖಾತೆಯಲ್ಲಿ ಪೋಸ್ಟ್ ಮಾಡಿರುವುದನ್ನು ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ನಟನೆಯ (ಸ್ಕ್ರಿಪ್ಟ್ ಮಾಡಿದ ವೀಡಿಯೊವನ್ನು) ವಿಡಿಯೋವನ್ನು, ಮುಸ್ಲಿಂ ಮುದುಕನೊಬ್ಬ ಬುರ್ಖ ಧರಿಸಿದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ಇದು ನೈಜ ಘಟನೆಯಲ್ಲ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ವಕ್ಫ್ ಕಾಯಿದೆಗೆ ತಿದ್ದುಪಡಿಗೆ ಮುಂದಾಗಿರುವ ಕೇಂದ್ರ ಸರ್ಕಾರ ‘ಮಿಸ್ಡ್‌ ಕಾಲ್’ ಅಭಿಯಾನಕ್ಕೆ ಮುಂದಾಗಿದೆಯೇ? ಈ ಸ್ಟೋರಿ ಓದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights