FACT CHECK | ಲುಲು ಮಾಲ್ಗಳನ್ನು ಗುರಿಯಾಗಿಸಿಕೊಂಡು ಲವ್ ಜಿಹಾದ್ ಎಂದು ಸುಳ್ಳು ಪೋಸ್ಟ್ ಹಂಚಿಕೆ
ಲುಲು ಮಾಲ್ಗಳಲ್ಲಿ ಲವ್ ಜಿಹಾದ್ ನಡೆಯುತ್ತಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಇದೇ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಶೇರ್ ಮಾಡುತ್ತಿದ್ದಾರೆ. ಹಾಗಿದ್ದರೆ ಈ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕೀ ವರ್ಡ್ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ವೈರಲ್ ವಿಡಿಯೋದಲ್ಲಿ ಮೊದಲು ಹೇಳಿದಂತೆ ಕಣ್ಣೂರು ಕಾಸರಗೋಡು ಕೋಝಿಕ್ಕೋಡ್, ಮಣಪುರಂನಲ್ಲಿ ಲುಲು ಮಾಲ್ ಇಲ್ಲವೇ ಎಂಬುದನ್ನು ಪರಿಶೀಲನೆ ನಡೆಸಲಾಯಿತು ಆಗ ಲುಲು ಮಾಲ್ನ ಶಾಖೆ ಕೋಝಿಕ್ಕೋಡ್ನಲ್ಲಿ ಇರುವುದು ಪತ್ತೆಯಾಗಿದೆ ಹಾಗಾಗಿ ವೈರಲ್ ವಿಡಿಯೋದ ಮೊದಲ ಪ್ರತಿಪಾದನೆ ಸುಳ್ಳಾಗಿದೆ. ಮತ್ತು ಕೋಝಿಕ್ಕೋಡ್ನಲ್ಲಿ ಕೂಡ ಹಿಂದೂಗಳ ಜನಸಂಖ್ಯೆ ಹೆಚ್ಚಿದೆ.
ಇನ್ನು ವಿಡಿಯೋದಲ್ಲಿನ ಎರಡನೇ ಆಪಾದನೆ ಎಂದರೆ ಅದು ಲುಲು ಮಾಲ್ ಶಾಖೆ ನಿರ್ಮಾಣವಾದ ಬಳಿಕ ಹಿಂದೂ ವ್ಯಾಪಾರಸ್ಥರು ಸಂಕಷ್ಟಕ್ಕೆ ಈಡಾಗಿದ್ದಾರೆ, ಹಲವು ಹಿಂದುಗಳು ವ್ಯಾಪಾರ ನಡೆಸಲಾಗದೆ ತಮ್ಮ ವ್ಯಾಪರ-ವ್ಯವಹಾರಗಳನ್ನೇ ನಿಲ್ಲಿಸುವಂತಾಗಿದೆ ಎಂಬುದು. ಒಂದು ವೇಳೆ ಈ ಆಪಾದನೆ ನಿಜವಾಗಿದ್ದರೆ ಹಿಂದೂ ವರ್ತಕರಿಂದ ಕೇರಳದಲ್ಲಿ ಅಥವಾ ಲುಲು ಮಾಲ್ ಶಾಖೆ ಇರುವಲ್ಲಿ ಪ್ರತಿಭಟನೆಗಳು ನಡೆಯಬೇಕಿತ್ತು ಅಥವಾ ಹಿಂದೂ ವರ್ತಕರ ಒಕ್ಕೂಟ ಲುಲು ಮಾಲ್ ಸ್ಥಾಪನೆಯ ವಿರುದ್ಧ ಹೇಳಿಕೆಗಳನ್ನು ನೀಡಬೇಕಾಗಿತ್ತು. ಹೀಗಾಗಿ ಈ ಬಗ್ಗೆ ಯಾವುದಾದರೂ ವರದಿಗಳು ಪ್ರಕಟವಾಗಿವೆಯೇ ಎಂದು ಪರಿಶೀಲನೆ ನಡೆಸಲಾಯಿತು. ಆದರೆ ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ಅಧಿಕೃತ ಮಾಧ್ಯಮ ವರದಿಗಳು ಕಂಡುಬಂದಿಲ್ಲ. ಇನ್ನು ವಿಡಿಯೋದಲ್ಲಿ ಹೇಳಿದಂತೆ ಲುಲು ಮಾಲ್ ಇರುವ ಹಲವು ಕಡೆ ಹಿಂದುಗಳ ಜನಸಂಖ್ಯೆ ಹೆಚ್ಚಿರುವುದು ನಿಜ ಆದರೆ ಇದರಿಂದ ಹಿಂದೂ ವರ್ತಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂಬ ಹೇಳಿಕೆಗೆ ಯಾವುದೇ ಪುರಾವೆಗಳು ನಂಬಲು ಅರ್ಹವಾದ ಸಾಕ್ಷಿಗಳು ಲಭ್ಯವಿಲ್ಲ ಎಂದು ಕನ್ನಡ ಫ್ಯಾಕ್ಟ್ಚೆಕ್ ವರದಿ ಮಾಡಿದೆ.
ವಿಡಿಯೋದಲ್ಲಿರುವ ಮೂರನೇ ಆಪಾದನೆ ಲುಲು ಮಾಲ್ನಲ್ಲಿ ಕೆಲಸ ಮಾಡುವ 20,000 ನೌಕರರಲ್ಲಿ 15,000 ಪುರುಷರು ಇದ್ದು, ಇವರು ಮುಸಲ್ಮಾನ ಸಮುದಾಯಕ್ಕೆ ಸೇರಿದವರಾಗಿದ್ದಾರೆ, ಇನ್ನುಳಿದ 5000 ನೌಕರರು ಮಹಿಳೆಯರಾಗಿದ್ದು, ಇವರು ಹಿಂದುಗಳಾಗಿದ್ದಾರೆ ಎಂಬುದು. ಇದರ ಜೊತೆಗೆ ಈ 5000 ಹಿಂದೂ ಮಹಿಳೆಯರನ್ನು ಲವ್ ಜಿಹಾದ್ಗೆ ದೂಡಲು ಮುಸ್ಲಿಂ ಯುವಕರನ್ನು ನೇಮಿಸಲಾಗಿದೆ ಎಂದು ಹಂಚಿಕೊಳ್ಳಲಾಗಿದೆ. ಈ ರೀತಿಯ ಆಪಾದನೆ ಕಳೆದ ಎರಡು ವರ್ಷಗಳಿಂದಲೂ ಲುಲು ಮಾಲ್ನ ಮೇಲೆ ಇದೆ. ಹೀಗಾಗಿ ಈ ಕುರಿತು ಪರಿಶೀಲನೆ ನಡೆಸಲು ಕೆಲವೊಂದು ಕೀವರ್ಡ್ಗಳನ್ನು ಬಳಸಿ ಗೂಗಲ್ನಲ್ಲಿ ಸರ್ಚ್ ಮಾಡಲಾಯಿತು. ಈ ವೇಳೆ 19 ಜುಲೈ 2022 ರಂದು ದ ಇಂಡಿಯನ್ ಎಕ್ಸ್ಪ್ರೆಸ್ ವರದಿಯಲ್ಲಿ ಲುಲು ಮಾಲ್ನಲ್ಲಿ “ಶೇ. 80ರಷ್ಟು ಸಿಬ್ಬಂದಿ ಹಿಂದೂ ನೌಕರರಿದ್ದಾರೆ ಮತ್ತು ಉಳಿದವರು ಮುಸಲ್ಮಾನರು, ಕ್ರಿಶ್ಚನರು ಹಾಗೂ ಇತರೆ ಸಮುದಾಯಕ್ಕೆ ಸೇರದ್ದವರಾಗಿದ್ದಾರೆ ಎಂದು ಲುಲು ಮಾಲ್ನ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ,
ಇನ್ನು ಲುಲು ಮಾಲ್ ನಲ್ಲಿ ಮುಸ್ಲಿಂ ಸಿಬ್ಬಂದಿಗಳೇ ಹೆಚ್ಚಿದ್ದಾರೆ ಎಂದು ಈ ಹಿಂದೆ ಉತ್ತರ ಪ್ರದೇಶದಲ್ಲಿ ವಿವಾದ ಸೃಷ್ಟಿಯಾದಾಗ, ಅಲ್ಲಿನ ಬಿಜೆಪಿ ಸರ್ಕಾರದ ಮೂಲಸೌಕರ್ಯ ಮತ್ತು ಕೈಗಾರಿಕಾ ಅಭಿವೃದ್ಧಿ ಸಚಿವ ನಂದಗೋಪಾಲ್ ಗುಪ್ತ ಅವರು ಇದು ಲುಲು ಮಾಲ್ ಬಗ್ಗೆ ಹರಡಿರುವ ಸುಳ್ಳು ಸುದ್ದಿಯಾಗಿದೆ. ಇದು ಸಮಾಜ ವಿರೋಧಿಗಳ ಕೆಲಸವಾಗಿದೆ ಎಂದು ಹೇಳಿಕೆ ನೀಡಿರುವುದನ್ನು ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವಂತೆ ಲುಲು ಮಾಲ್ಗಳಲ್ಲಿ ಲವ್ ಜಿಹಾದ್ಗೆ ಪ್ರೇರಪಣೆ ನೀಡಲಾಗುತ್ತಿದೆ. ಹಿಂದೂ ವ್ಯಾಪಾರಿಗಳನ್ನು ಮಟ್ಟ ಹಾಕುವ ಉದ್ದೇಶದಿಂದ ಲುಲು ಮಾಲ್ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಸೇನೆ ವಾಪಸ್ಸಾತಿ ವೇಳೆ ಭಾರತ-ಚೀನಾ ಸೈನಿಕರು ಒಟ್ಟಿಗೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದು ನಿಜವೇ?