FACT CHECK | ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್‌ನನ್ನು ನಟ ಸಲ್ಮಾನ್ ಖಾನ್ ಭೇಟಿಯಾಗಿದ್ದು ನಿಜವೇ?
ಸಲ್ಮಾನ್ ಖಾನ್ ಮತ್ತು ಲಾರೆನ್ಸ್ ಬಿಷ್ಣೋಯ್ ಹೆಸರು ಕಳೆದ ಕೆಲವು ದಿನಗಳಿಂದ ಭಾರಿ ಸದ್ದು ಮಾಡುತ್ತಿದೆ. ಸಲ್ಮಾನ್ ಖಾನ್ ತಮ್ಮ ಆರಾಧ್ಯ ದೈವ ಕೃಷ್ಣಮೃಗವನ್ನು ಕೊಂದಿದ್ದಾರೆ ಎನ್ನುವುದು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನ ಆರೋಪ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ಸಾಬೀತಾಗಿದ್ದೇ ಈ ಬೆದರಿಕೆಗೆ ಕಾರಣ. ಈ ಪ್ರಕರಣದಲ್ಲಿ ಸಲ್ಮಾನ್ ಸದ್ಯ ಜಾಮೀನಿನ ಮೇಲೆ ಇದ್ದರೂ, ಬಿಷ್ಣೋಯ್ ಸಮುದಾಯವರು ಮಾತ್ರ ನಟನ ಬೆನ್ನ ಬಿದ್ದಿದ್ದಾರೆ.
ಇದರ ನಡುವೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಸಲ್ಮಾನ್ ಖಾನ್ ಅಂಗರಕ್ಷಕ ಶೇರಾ ಅವರು ಜೈಲಿನ ಹೊರಗೆ ನಿಂತಿರುವುದು ಕಾಣಿಸುತ್ತದೆ. ಜೊತೆಗೆ ವಿಡಿಯೋದಲ್ಲಿ ಇನ್ನೂ ಅನೇಕ ಜನರು ಕಾಣಿಸಿಕೊಂಡಿದ್ದಾರೆ. ಇದೀಗ ಕೆಲವರು ಈ ವಿಡಿಯೋವನ್ನು ಶೇರ್ ಮಾಡಿದ್ದು, ಲಾರೆನ್ಸ್ ಬಿಷ್ಣೋಯ್ ಅವರನ್ನು ಭೇಟಿ ಮಾಡಲು ಸಲ್ಮಾನ್ ಖಾನ್ ಜೈಲಿಗೆ ಹೋಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅನೇಕ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
ನಟ ಸಲ್ಮಾನ್ ಖಾನ್, ಜೈಲಿನಲ್ಲಿ ಇರುವ ಲಾರೆನ್ಸ್ ಬಿಷ್ಣೋಯಿಯನ್ನು ಭೇಟಿಯಾಗಿ ಕ್ಷಮೆ ಕೋರಿ ವಾಪಸ್ ಬರುತ್ತಿದ್ದಾರೆ ಎನ್ನುವ ಶೀರ್ಷಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ. ಇದನ್ನು ಹಲವರು ರೀ ಶೇರ್ ಮಾಡಿಕೊಂಡಿದ್ದು, ಕೊನೆಗೂ ಸಲ್ಲು ಭಾಯಿಗೆ ಬುದ್ಧಿ ಬಂತು, ಅಷ್ಟೇ ಸಾಕು ಎನ್ನುತ್ತಿದ್ದಾರೆ. ಮತ್ತೆ ಕೆಲವರು ಜೈ ಲಾರೆನ್ಸ್ ಬಿಷ್ಣೋಯಿ ಎನ್ನುತ್ತಿದ್ದರೆ, ಕ್ಷಮೆಯೇ ಕೇಳಲ್ಲ ಎಂದಿದ್ದ ಸಲ್ಮಾನ್ ಜೀವ ಬೆದರಿಕೆಗೆ ಕೊನೆಗೂ ಸೋಲನ್ನು ಒಪ್ಪಿಕೊಂಡ್ರಾ ಎನ್ನುತ್ತಿದ್ದಾರೆ. ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವಂತೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು, ಸಲ್ಮಾನ್ ಖಾನ್ ಲಾರೆನ್ಸ್ ಬಿಷ್ಣೋಯಿಯನ್ನು ಮೀಟ್ ಮಾಡಲು ಜೈಲಿಗೆ ತಲುಪಿದ್ದಾರೆ ಮತ್ತು ಅವರ ಅಂಗರಕ್ಷಕ ಶೇರಾ ಬೇರೆ ಯಾರಾದರೂ ಇದನ್ನು ನೋಡುತ್ತಿದ್ದಾರೆಯೇ ಎಂದು ಪದೇ ಪದೇ ತಿರುಗಿ ಗಮನಿಸುತ್ತಿದ್ದಾರೆ ಎಂದೂ ಹೇಳಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ANI ಸುದ್ದಿ ಸಂಸ್ಥೆ ಏಪ್ರಿಲ್ 7, 2018 ರಂದು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಇದೇ ಕ್ಲಿಪ್ನ ದೀರ್ಘ ವಿಡಿಯೋ ಆವೃತ್ತಿ ಲಭ್ಯವಾಗಿದೆ.
ವರದಿಯ ಪ್ರಕಾರ, 1998ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್‌ಗೆ ಜೋಧ್‌ಪುರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿದ ಸಮಯದ ವಿಡಿಯೋ ಎಂದು ತಿಳಿಸಲಾಗಿದೆ.
ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜಾಮೀನು ಸಿಕ್ಕ ಸಂದರ್ಭದಲ್ಲಿ, ಜೈಲಿನಿಂದ ಹೊರಕ್ಕೆ ಬರುತ್ತಿರುವ ವಿಡಿಯೋ ಇದಾಗಿದೆ. ಜೋಧ್‌ಪುರ ಸೆಂಟ್ರಲ್ ಜೈಲಿನಲ್ಲಿದ್ದ ಸಲ್ಮಾನ್ ಖಾನ್ 2018 ರಲ್ಲಿ ರಿಲೀಸ್ ಆಗಿದ್ದರು. ಅದರ ವಿಡಿಯೋ ಈಗ ಶೇರ್ ಮಾಡಲಾಗುತ್ತಿದೆ.
ಸಲ್ಮಾನ್ ಖಾನ್ ಎರಡು ರಾತ್ರಿಗಳನ್ನು ಕಳೆದ ನಂತರ ಜೋಧ್‌ಪುರ ಜೈಲಿನಿಂದ ಹೊರಬಂದಿದ್ದಾರೆ. ಏಪ್ರಿಲ್ 5, 2018 ರಂದು ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ದೋಷಿ ಎಂದು ಘೋಷಿಸಲಾಯಿತು ಮತ್ತು ಏಪ್ರಿಲ್ 7 ರಂದು ಜಾಮೀನು ನೀಡಲಾಯಿತು. ಲಾರೆನ್ಸ್ ಬಿಷ್ಣೋಯ್ ಅವರು ಪ್ರಸ್ತುತ ಗುಜರಾತ್‌ನ ಸಬರಮತಿ ಜೈಲಿನಲ್ಲಿದ್ದಾರೆ ಮತ್ತು ಸಲ್ಮಾನ್ ಖಾನ್ ಅವರ ವೈರಲ್ ವಿಡಿಯೋ ಜೋಧ್‌ಪುರ ಜೈಲಿನಿಂದ ಬಂದಿದ್ದಾಗಿದೆ. ಹೀಗಾಗಿ ಜನರು ಸುಳ್ಳು ಹೇಳಿಕೆಗಳೊಂದಿಗೆ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 2018ರ ಸಲ್ಮಾನ್‌ಖಾನ್‌ಗೆ ಸಂಬಂಧಿಸಿದ ಹಳೆಯ ವಿಡಿಯೋವನ್ನು ಪ್ರಸ್ತುತ ಲಾರೆನ್ಸ್ ಬಿಷ್ಣೋಯ್ ಮತ್ತು ನಟ ಸಲ್ಮಾನ್ ಖಾನ್ ನಡುವೆ ನಡೆಯುತ್ತಿರುವ ವಿದ್ಯಮಾನಗಳಿಗೆ ಸಂಬಂಧಿಸಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಎಂಬ ವಾಟ್ಸಾಪ್ ಸಂದೇಶದ ಬಗ್ಗೆ ಇರಲಿ ಎಚ್ಚರ

