FACT CHECK | BJP ನಾಯಕರನ್ನು ದೇಶ ದ್ರೋಹಿಗಳು ಎಂದ BJP ಕಾರ್ಯಕರ್ತೆಯ ವೈರಲ್ ವಿಡಿಯೋದ ಅಸಲೀಯತ್ತೇನು ಗೊತ್ತೇ?
ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಮೂರು ವಿಧಾನಸಭೆ ಉಪ ಚುನಾವಣೆಯಲ್ಲಿನ ಎನ್ಡಿಎ ಸೋಲಿಗೆ ಕಾರಣವೇನು ಎಂದು, BJP ಹಾಗೂ ಜೆಡಿಎಸ್ ಪಕ್ಷಗಳು ಚರ್ಚಿಸುತ್ತಿವೆ. ಕರ್ನಾಟಕದ ಶಿಗ್ಗಾವಿ, ಸಂಡೂರು ಹಾಗೂ ಚನ್ನಪಟ್ಟಣ ವಿಧಾನಸಭೆ ಚುನಾವಣೆಲ್ಲಿ BJP – ಜೆಡಿಎಸ್ ಪಕ್ಷಗಳು ಮಕಾಡೆ ಮಲಗಿವೆ. BJP ಕೈಯಲ್ಲಿದ್ದ ಶಿಗ್ಗಾಂವಿ ಹಾಗೂ ಜೆಡಿಎಸ್ ಕೈಯಲ್ಲಿದ್ದ ಚನ್ನಪಟ್ಟಣ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದ್ದು, ತನ್ನದೇ ಕೈಯಲ್ಲಿದ್ದ ಸಂಡೂರು ಕ್ಷೇತ್ರವನ್ನೂ ಕಾಂಗ್ರೆಸ್ ಗೆದ್ದುಕೊಂಡಿದೆ.
ಮೈತ್ರಿ ಪಕ್ಷದ ನಾಯಕರು ಈ ಸೋಲಿನಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಈ ಹೀನಾಯ ಸೋಲಿನ ಬೆನ್ನಲ್ಲೇ BJP ನಾಯಕರಿಗೆ ಅದೇ ಪಕ್ಷದ ಕಾರ್ಯಕರ್ತೆಯೊಬ್ಬರು ಆಕ್ರೋಶದ ಧ್ವನಿಯಲ್ಲಿ ಪ್ರಶ್ನೆ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಮಾತು ಎಂದರೆ ಇದು…
BJP ಕರ್ನಾಟಕ ದ ನಾಯಕರಿಗೆ ಇದು ಎಚ್ಚರಿಕೆಯ ಗಂಟೆ…
ಕರ್ನಾಟಕ ಬಿಜೆಪಿ ನಾಯಕರ ಬಗ್ಗೆ ನನಗೆ ಅಸಹ್ಯ ಉಂಟಾಗಿದೆ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದ
ಒಬ್ಬ ಬಿಜೆಪಿ ಸಾಮಾನ್ಯ ಕಾರ್ಯಕರ್ತೆಯರು… pic.twitter.com/KtgBZhiR1o— Rsiddu (@RsidduR1) December 2, 2024
ಇದನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಬಳಕೆದಾರರೊಬ್ಬರು, “ಮಾತು ಎಂದರೆ ಇದು. ಬಿಜೆಪಿ ಕರ್ನಾಟಕದ ನಾಯಕರಿಗೆ ಇದು ಎಚ್ಚರಿಕೆಯ ಗಂಟೆ. ಕರ್ನಾಟಕ ಬಿಜೆಪಿ ನಾಯಕರ ಬಗ್ಗೆ ನನಗೆ ಅಸಹ್ಯ ಉಂಟಾಗಿದೆ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದ ಒಬ್ಬ ಬಿಜೆಪಿ ಸಾಮಾನ್ಯ ಕಾರ್ಯಕರ್ತೆಯರು…,” ಎಂದು ಬರೆದುಕೊಂಡಿದ್ದಾರೆ.
“ವೈರಲ್ ವಿಡಿಯೋದಲ್ಲಿ ಮೈಕ್ ಹಿಡಿದು ಆಕ್ರೋಶದ ಭರಿತರಾಗಿ ಮಾತನಾಡುವ ಮಹಿಳೆ , ವೇದಿಕೆಯಲ್ಲಿ ಕುಳಿತವರು ಆತ್ಮಸಾಕ್ಷಿಯಾಗಿ ಹೇಳಿ ನೀವು ದೇಶ ಭಕ್ತರಾ ಇಲ್ಲ ವಿರೋಧಿಗಳಾ ಅಂತಾ? ವೇದಿಕೆ ಮೇಲೆ ಕುಳಿತವರು ಕೈಎತ್ತಿ ಹೇಳಿ ನೀವು ಭಾರತೀಯರಾ ಅಥವಾ ಪಾಕಿಸ್ತಾನಿಯರಾ ಅಂತ? ನಿಮ್ಮನ್ನು ನೀವೇ ಸೋಲಿಸ್ತಿದ್ದೀರಲ್ಲ, ಇವತ್ತು ನಿಮ್ಮಿಂದನೇ ಸೋತ್ವು, ನಿಮ್ಮಿಂದನೇ ಸೋಲಾಗಿರೋದು, ನೀವು ಭಾರತೀಯರೇ ಅಲ್ಲ. ನೀವು ದೇಶದ್ರೋಹಿಗಳು. ನಮಗೆ ಹೊಟ್ಟೆ ಉರಿತಿದೆ,” ಎಂದು ಆಕ್ರೋಶದ ಧ್ವನಿಯಲ್ಲಿ ಕಾರ್ಯಕರ್ತೆಯೊಬ್ಬರು ಪ್ರಶ್ನೆ ಮಾಡುತ್ತಿರುವುದು ಈ ವಿಡಿಯೋದಲ್ಲಿ ನೋಡಬಹುದು.
ಈ ವಿಡಿಯೋವನ್ನು 316ಕ್ಕೂ ಹೆಚ್ಚು ಬಳಕೆದಾರರು ಹಂಚಿಕೊಂಡಿದ್ದು, 1,349ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಹಾಗಿದ್ದರೆ ಈ ವಿಡಿಯೋ ಇತ್ತೀಚೆಗೆ ನಡೆದ ಉಪಚುನವಣೆಯಲ್ಲಿ ಸೋಲು ಅನುಭವಿಸಿದ BJP ಯನ್ನು ಉದ್ದೇಶಿಸಿ ಹೇಳಲಾಗಿದೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಹೀನಾಯ ಸೋಲು ಕಂಡ ಪರಿಣಾಮ ಬಿಜೆಪಿ ಕಾರ್ಯಕರ್ತೆ ನೊಂದು ಮಾನಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕಳ್ಳಲಾಗಿದ್ದು ಇದನ್ನು ಪರಿಶಿಲಿಸಿದಾಗ, ಈ ವಿಡಿಯೋ ಇತ್ತೀಚಿನದಲ್ಲ ಎಂದು ವಿಜಯ ಕರ್ನಾಟಕ ವೆಬ್ತಾಣದಲ್ಲಿ ಫ್ಯಾಕ್ಟ್ಚೆಕ್ ವರದಿಯನ್ನು ಪ್ರಕಟಿಸಿದೆ.
ವಿಡಿಯೋದ ಅಂಶಗಳನ್ನೇ ಇಟ್ಟುಕೊಂಡು ‘ಬ್ಯಾಟರಾಯನಪುರ ಬಿಜೆಪಿ ಕಾರ್ಯಕರ್ತೆ ವಿಡಿಯೋ’ ಎಂದು ಗೂಗಲ್ನಲ್ಲಿ ಕೀ ವರ್ಡ್ ಸರ್ಚ್ ಮಾಡಿದಾಗ ಇದರ ಮೂಲ ವಿಡಿಯೋ ಲಭ್ಯವಾಗಿದೆ. ಈ ವಿಡಿಯೋವನ್ನು ಕನ್ನಡದ ಪತ್ರಿಕೆ ವಿಜಯವಾಣಿ ಫೇಸ್ಬುಕ್ ಹಾಗೂ ಯೂಟ್ಯೂಬ್ನಲ್ಲಿ ಪ್ರಕಟಿಸಿದೆ. ಮೇ 20, 2023ರಂದು ಈ ವಿಡಿಯೋಗಳನ್ನು ಪತ್ರಿಕೆ ಪಬ್ಲಿಷ್ ಮಾಡಿದೆ.

ಈ ಬಗ್ಗೆ ‘ಬ್ಯಾಟರಾಯನಪುರ ಬಿಜೆಪಿ ನಾಯಕರಿಗೆ ದೇಶದ್ರೋಹಿಗಳು ಎಂದ ಕಾರ್ಯಕರ್ತೆ!’ ಶೀರ್ಷಿಕೆಯಲ್ಲಿ ವಾರ್ತಾ ಭಾರತಿ ಪತ್ರಿಕೆಯೂ ವರದಿ ಪ್ರಕಟಿಸಿದೆ. ಮೇ 21, 2023ರಂದು ಈ ವರದಿ ಪ್ರಕಟವಾಗಿದೆ.
ಈ ಮೂಲಕ ವೈರಲ್ ವಿಡಿಯೋ ಒಂದು ವರ್ಷ ಹಳೆಯದ್ದು ಎಂದು ತಿಳಿದು ಬಂದಿದೆ. 2023ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆದಿತ್ತು. ಮೇ 13ರಂದು ಫಲಿತಾಂಶ ಹೊರಬಿದ್ದಿತ್ತು. ಇದರಲ್ಲಿ ಕರ್ನಾಟಕ ಬಿಜೆಪಿ ಹೀನಾಯ ಸೋಲು ಕಂಡಿತ್ತು. ಇದರ ಬಳಿಕ ನಡೆದ ಬಿಜೆಪಿ ಸಭೆಯಲ್ಲಿ ಬ್ಯಾಟರಾಯನಪುರದ ಪಕ್ಷದ ಕಾರ್ಯಕರ್ತೆ ಡಾ. ವಿಶಾಲಾಕ್ಷಿ ಅವರು ಈ ಪರಿಯ ಆಕ್ರೋಶವನ್ನು ಹೊರಹಾಕಿದ್ದರು.
ಒಟ್ಟಾರೆಯಾಗಿ ಹೇಳುವುದಾದರೆ, 2023 ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತ ನಂತರ ನಡೆದ ಬಿಜೆಪಿ ಕಾರ್ಯಕರ್ತರ ವಿಡಿಯೋ ಇದೀಗ ಮತ್ತೆ ವೈರಲ್ ಆಗಿದ್ದು, ಉಪಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಪ್ರದರ್ಶನದ ಹಿನ್ನೆಲೆಯಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಆದರೆ ಇದು ಹಳೆಯ ವಿಡಿಯೋ ಆಗಿದೆ. ಹಾಗಾಗಿ ಈ ವಿಡಿಯೋ ಒಂದು ವರ್ಷದ ಹಿಂದಿನದ್ದು ಎಂಬುದು ಸ್ಪಷ್ಟವಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ವಕ್ಫ್ ಬೋರ್ಡ್ಅನ್ನು ರದ್ದು ಮಾಡ್ತಾ ಆಂಧ್ರ ಪ್ರದೇಶದ ಸರ್ಕಾರ ?

