FACT CHECK | ಬಾಂಗ್ಲಾದೇಶದ ಮುಸ್ಲಿಮರು ಇಸ್ಕಾನ್ ದೇವಸ್ಥಾನದ ಗೋ ಶಾಲೆಗೆ ನುಗ್ಗಿ ದಾಂಧಲೆ ನಡೆಸಿರುವುದು ನಿಜವೇ?
ಬಾಂಗ್ಲಾದೇಶದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಕ್ಕಾಗಿ ಇಸ್ಕಾನ್ ಪ್ರತಿನಿಧಿ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ನವೆಂಬರ್ 25 ರಂದು ದೇಶದ್ರೋಹ ಪ್ರಕರಣದಲ್ಲಿ ಬಂಧಿಸಲಾಗಿದೆ. ಇದೇ ಕಾರಣವನ್ನು ಇಟ್ಟುಕೊಂಡು ಕೆಲವು ಬಾಂಗ್ಲಾದೇಶದಲ್ಲಿ ಮುಸ್ಲಿಂ ಯುವಕರು ಇಸ್ಕಾನ್ ದೇವಸಸ್ಥಾನದ ಗೋಶಾಲೆಯ ಮೇಲೆ ದಾಳಿ ಮಾಡಿ ಗೋವುಗಳ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ.

ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೋವನ್ನು ಹಂಚಿಕೊಂಡು, ‘‘ಬಾಂಗ್ಲಾದೇಶ ಇಸ್ಕಾನ್ ದೇವಸ್ಥಾನದ ಗೋ ಶಾಲೆಗೆ ನುಗ್ಗಿ ಗೋವು ಗಳ ಮೇಲೆ ದಾಳಿ ಮಾಡಿದ ವಿಡಿಯೋ ಇದು’’ ಎಂದು ಬರೆದುಕೊಂಡಿದ್ದಾರೆ. ಹಾಗೆಯೆ ಮತ್ತೋರ್ವ ಬಳಕೆದಾರ ‘‘ಈ ವಿಡಿಯೋ ಇದೀಗ ಬಾಂಗ್ಲಾದೇಶದಲ್ಲಿರುವ ಜಿಹಾದಿ ಗ್ಯಾಂಗ್ಗಳದ್ದು. ಜಿಹಾದಿ ಗ್ಯಾಂಗ್ ಇಸ್ಕಾನ್ ಗೋಶಾಲೆಗೆ ನುಗ್ಗಿ ಗೋವುಗಳ ಮೇಲೆ ದಾಳಿ ಮಾಡುವ ವಿಡಿಯೋ’’ ಎಂದಿದ್ದಾರೆ.
ಈ ಹಿನ್ನಲೆಯಲ್ಲಿ ಕೆಲ ಯುವಕರು ದೊಣ್ಣೆಯಿಂದ ಹಸುಗಳಿಗೆ ಹೊಡೆಯುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಾಂಗ್ಲಾದೇಶದ ಇಸ್ಕಾನ್ ಗೋಶಾಲಾದಲ್ಲಿ ಜಿಹಾದಿಗಳು ದನಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ಸರ್ಚ್ ನಡೆಸಿದಾಗ, ಈ ಹೇಳಿಕೆಗಳು ಸುಳ್ಳು ಮತ್ತು ಈ ಘಟನೆ ಪಂಜಾಬ್ನ ಜಲಂಧರ್ನಲ್ಲಿ ನಡೆದಿದೆ ಎಂದು ನ್ಯೂಸ್ ಮೀಟರ್ ಫ್ಯಾಕ್ಟ್ಚೆಕ್ ತಂಡ ವರದಿ ಮಾಡಿದೆ.
ವೈರಲ್ ವಿಡಿಯೋದ ಕೀ ಫ್ರೇಮ್ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ನವೆಂಬರ್ 19 ರಂದು ಜರ್ನಲಿಸ್ಟ್ ಫೈಸಲ್ ಎಂಬ ಎಕ್ಸ್ ಬಳಕೆದಾರ ಇದೇ ವೈರಲ್ ವಿಡಿಯೋವನ್ನು ಹಂಚಿಕೊಂಡಿರುವುದು ಕಂಡುಬಂದಿದೆ. ಇದಕ್ಕೆ “ಧ್ವನಿಯಿಲ್ಲದವರನ್ನು ನಿರ್ದಯವಾಗಿ ಹೊಡೆಯಲಾಗುತ್ತದೆ… ಕ್ರೂರ ಮುಖಗಳನ್ನು ಗುರುತಿಸಿ ಮತ್ತು ಶಿಕ್ಷಿಸಿ…” ಎಂದು ಬರೆದಿದ್ದಾರೆ.

ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಪೇಟಾ ಇಂಡಿಯಾ, ‘‘ಭಾರತೀಯ ದಂಡ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 325 ರ ಅಡಿಯಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ (ಪಿಸಿಎ) ಸೆಕ್ಷನ್ 11 ರ ಅಡಿಯಲ್ಲಿ ಸದರ್ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ನಲ್ಲಿ ಗೋಹತ್ಯೆ ತಡೆ ಕಾಯ್ದೆಯ (1955) ನಿಬಂಧನೆಗಳನ್ನು ಸೇರಿಸಲು ಪೊಲೀಸರು (ಡಿಸಿಪಿ) ರೊಂದಿಗೆ ಮಾತನಾಡುತ್ತಿದ್ದೇವೆ’’ ಎಂದು ಹೇಳಿದ್ದಾರೆ.

ಪೇಟಾ ಇಂಡಿಯಾದ ಪ್ರತಿಕ್ರಿಯೆಯನ್ನು ಆಧರಿಸಿ, ಈ ಘಟನೆ ಭಾರತದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಕೀವರ್ಡ್ ಹುಡುಕಾಟದ ಮೂಲಕ, ಈ ಘಟನೆಯ ಬಗ್ಗೆ ಖಬ್ರಿಸ್ತಾನ್ ಪಂಜಾಬಿ ಬರೆದ ಲೇಖನವನ್ನು ನಾವು ಕಂಡುಕೊಂಡಿದ್ದೇವೆ. ಈ ಲೇಖನದ ಪ್ರಕಾರ, ವೈರಲ್ ವೀಡಿಯೊದಲ್ಲಿ ಕಂಡುಬರುವ ಘಟನೆಯು ಪಂಜಾಬ್ನ ಜಲಂಧರ್ನಲ್ಲಿರುವ ಹಾಲಿನ ಸಂಕೀರ್ಣದಲ್ಲಿ ನಡೆದಿದೆ. ಈ ಲೇಖನದಲ್ಲಿ ವೈರಲ್ ವಿಡಿಯೋದಿಂದ ತೆಗೆದ ಸ್ಕ್ರೀನ್ಶಾಟ್ ಲಭ್ಯವಾಗಿದೆ.

ಘಟನೆಯ ಕುರಿತು ದಿ ಟ್ರಿಬ್ಯೂನ್ ನವೆಂಬರ್ 20 ರಂದು ಮಾಡಿರುವ ವರದಿಯ ಪ್ರಕಾರ, “ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವಿಡಿಯೋವನ್ನು ನೋಡಿದ ನಂತರ, ಶ್ರೀಸ್ಟ್ ಬಕ್ಷಿ ನೇತೃತ್ವದ ಅನಿಮಲ್ ಪ್ರೊಟೆಕ್ಷನ್ ಫೌಂಡೇಶನ್, ನಗರದ ನಿವಾಸಿಗಳು ಅಧಿಕಾರಿಗಳಿಂದ ಕ್ರಮಕ್ಕೆ ಒತ್ತಾಯಿಸಿದರು” ಎಂದು ಬರೆಯಲಾಗಿದೆ. ಅವರು ಪಿಪಿಆರ್ ಮಾಲ್ನ ಹೊರಗೆ ಪ್ರತಿಭಟನೆ ನಡೆಸಿದರು ಮತ್ತು ಜಮ್ಶಾರ್ ಪೊಲೀಸ್ ಠಾಣೆಗೆ ಹೋದರು. ಈ ಘಟನೆಗೆ ಕಾರಣರಾದವರು ಹಾಗೂ ಡೈರಿ ಫಾರ್ಮ್ ಮಾಲೀಕರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ ಎಂದು ಟ್ರಿಬ್ಯೂನ್ ಬರೆದಿದೆ.
ಅನಿಮಲ್ ಪ್ರೊಟೆಕ್ಷನ್ ಫೌಂಡೇಶನ್ನ ಫೇಸ್ಬುಕ್ ಪುಟದಲ್ಲಿ ಹಂಚಿಕೊಳ್ಳಲಾದ ಎಫ್ಐಆರ್ನ ಫೋಟೋಗಳನ್ನು ಸಹ ನೋಡಬಹುದು.

ಜಲಂಧರ್ನಲ್ಲಿರುವ ಅನಿಮಲ್ ಪ್ರೊಟೆಕ್ಷನ್ ಫೌಂಡೇಶನ್ನ ಯುವಿ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡಿದರು. “ಪಂಜಾಬ್ನ ಜಲಂಧರ್ನಲ್ಲಿರುವ ಜಮ್ಷರ್ ಡೈರಿ ಕಾಂಪ್ಲೆಕ್ಸ್ನಲ್ಲಿ ಈ ಘಟನೆ ನಡೆದಿದೆ. ಗೂಳಿಗಳನ್ನು ಹೊಡೆದವರು ಬೇರೆ ರಾಜ್ಯಗಳ ವಲಸಿಗರಾಗಿರಬಹುದು. ಇದರಲ್ಲಿ ಯಾವುದೇ ಧಾರ್ಮಿಕ ಆಯಾಮವಿಲ್ಲ. ನಾವು ಪೊಲೀಸರಿಗೆ ದೂರು ನೀಡಿದ್ದೇವೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ನಂತರವಷ್ಟೆ ಆರೋಪಿಗಳನ್ನು ಪತ್ತೆ ಮಾಡಲಾಗುವುದು,’’ ಎಂದರು.
ಒಟ್ಟಾರೆಯಾಗಿ ಹೇಳುವುದಾದದರೆ, ಪಂಜಾಬ್ನ ಜಲಂಧರ್ನಲ್ಲಿ ನಡೆದ ಘಟನೆಯನ್ನು, ಬಾಂಗ್ಲಾದೇಶದಲ್ಲಿ ನಡೆದಿದೆ ಎಂಬ ಸುಳ್ಳು ಮತ್ತು ಕೋಮು ಹೇಳಿಕೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | 76 ವರ್ಷದ ಮುಸ್ಲಿಂ ಮುದುಕ 12 ವರ್ಷದ ಹಿಂದೂ ಹುಡುಗಿಯನ್ನು ಮದುವೆಯಾಗಿದ್ದು ನಿಜವೇ?

