FACT CHECK | ಪಾರ್ಟಿಶನ್ ಆಫ್ ಇಂಡಿಯಾ ಎಂಬ ಕೃತಿಯಲ್ಲಿ ಮುಸ್ಲಿಮರು ಭಾರತದಲ್ಲಿ ಇರಬಾರದೆಂದು ಅಂಬೇಡ್ಕರ್ ಹೇಳಿದ್ದಾರೆಯೇ?

ಸಂವಿಧಾನ ಶಿಲ್ಪಿ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು, ಅಂಬೇಡ್ಕರ್ ಅವರ ‘ಪಾಕಿಸ್ತಾನ್ ಆರ್ ಪಾರ್ಟಿಶನ್ ಆಫ್ ಇಂಡಿಯಾ ಎಂಬ ಕೃತಿಯಲ್ಲಿ ಮುಸ್ಲಿಮರನ್ನು ಕುರಿತು ಅಂಬೇಡ್ಕರ್‌ ಹೇಳಿದ್ದಾರೆ ಎನ್ನಲಾದ ಕೆಲವು ಗಂಭೀರ ವಿಷಯಗಳನ್ನು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಈ ರೀತಿ ಬರೆಯಲಾಗಿದೆ. ಪುಸ್ತಕದ ಹೆಸರು : “ಪಾಕಿಸ್ತಾನ ಮತ್ತು ಭಾರತ ವಿಭಜನೆ”
ಲೇಖಕರ ಹೆಸರು : “ಡಾ. ಬಾಬಾಸಾಹೇಬ್ ರಾಮಜಿ ಅಂಬೇಡ್ಕರ್”
ಪುಟ ಸಂಖ್ಯೆ 123 :ಮುಸ್ಲಿಮರು ಭಾರತದಲ್ಲಿ ಇರಲೇಬಾರದು.
ಪುಟ ಸಂಖ್ಯೆ 125: ಮುಸ್ಲಿಮರು ಭಾರತಕ್ಕೆ ಅಪಾಯಕಾರಿಯಾಗಿ ಉಳಿಯುತ್ತಾರೆ ಮತ್ತು ಭಾರತದಲ್ಲಿ ನಿರಂತರ ಕೋಮುಗಲಭೆಗಳನ್ನು ಸೃಷ್ಟಿಸುತ್ತಾರೆ.
ಪುಟ ಸಂಖ್ಯೆ 231: ಬುರ್ಖಾ ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ, ಇದು ಹೆಚ್ಚು ಮಕ್ಕಳು ಜನನವಾಗಲು ಕಾರಣವಾಗುತ್ತದೆ.
ಪುಟಗಳು 233, 234: ಮುಸ್ಲಿಮರು ಸಮಾಜ ಸುಧಾರಣೆ ಮತ್ತು ವಿಜ್ಞಾನದ ಅಭಿವೃದ್ಧಿಯ ಪ್ರಬಲ ವಿರೋಧಿಗಳು.
ಪುಟ ಸಂಖ್ಯೆ 294: ಮುಸ್ಲಿಮರು ತಮ್ಮ ಷರಿಯಾ ಕಾನೂನನ್ನು ಭಾರತದ ಸಂವಿಧಾನಕ್ಕಿಂತಲೂ ಮೇಲೆಂದು ಪರಿಗಣಿಸುತ್ತಾರೆ.
ಪುಟ ಸಂಖ್ಯೆ 297: ಮುಸ್ಲಿಮರು ಭಾರತದಲ್ಲಿ ಅಶಾಂತಿ ಸೃಷ್ಟಿಸಲು, ಅರಾಜಕತೆ ಉಂಟುಮಾಡಲು ಕೋಮುಗಲಭೆಗಳನ್ನು ಸೃಷ್ಟಿಸುತ್ತಲೇ ಇರುತ್ತಾರೆ.
ಪುಟ ಸಂಖ್ಯೆ303: ಮುಸ್ಲಿಮರು ಭಾರತದಲ್ಲಿ ಹಿಂದೂಗಳ ಸರ್ಕಾರವನ್ನು ಎಂದಿಗೂ ಒಪ್ಪುವುದಿಲ್ಲ.
ಪುಟ ಸಂಖ್ಯೆ 332: ಮುಸ್ಲಿಮರು ಎಂದಿಗೂ ದೇಶಭಕ್ತರಾಗಲು ಸಾಧ್ಯವಿಲ್ಲ. ಖಟಾ ಖಟ್ ಈ ಸತ್ಯಸಂಗತಿಯನ್ನು ಶೇರ್ ಮಾಡಿ ಎಲ್ಲರಿಗೂ ತಿಳಿಸಿ.

ಇದೇ ರೀತಿಯ ಬರಹದೊಂದಿಗೆ ಹಂಚಿಕೊಂಡ ಪೋಸ್ಟ್‌ಅನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆಯಂತೆ, ಭಾರತ ವಿಭಜನೆ ಬಗ್ಗೆ ಬರೆದಿರುವ ಪುಸ್ತಕದ ಪ್ರಸ್ತಾವನೆಯಲ್ಲಿ ಡಾ. ಅಂಬೇಡ್ಕರ್ ಅವರು ಮುಸ್ಲಿಮರ ಬಗ್ಗೆ ನಿಜವಾಗಿಯೂ ಮೇಲಿನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವಂತೆ ಪಾಕಿಸ್ತಾನ ಅಥವಾ ಭಾರತದ ವಿಭಜನೆ(Pakistan Or Partition Of India) ಕೃತಿಯಲ್ಲಿ ಪೋಸ್ಟ್‌ನಲ್ಲಿ ಪ್ರಸ್ತಾಪವಾಗಿರುವ ವಿಚಾರಗಳನ್ನು ನಿಜವಾಗಿಯೂ ಹೇಳಿದ್ದಾರೆಯೇ ಎಂದು ಪರಿಶೀಲಿಸೋಣ.

ಅಂಬೇಡ್ಕರ್ ಅವರ ‘ಪಾಕಿಸ್ತಾನ್ ಆರ್ ಪಾರ್ಟಿಶನ್ ಆಫ್ ಇಂಡಿಯಾ’ ಕೃತಿಯು ಹಿಂದೂ – ಮುಸ್ಲಿಂ ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳು, ಆ ಎರಡೂ ಧಾರ್ಮಿಕ ಸಮುದಾಯಗಳ ಸಣ್ಣತನಗಳು ಮತ್ತು ಸ್ವತಂತ್ರ ಪೂರ್ವದಲ್ಲಿ ಪಾಕಿಸ್ತಾನ ಬೇಡಿಕೆಯ ಬಗ್ಗೆ ಮಾಡಿರುವ ಸುದೀರ್ಘ ಪಾಂಡಿತ್ಯಪೂರ್ಣ ಅಧ್ಯಯನವಾಗಿದೆ. ಈ ಪುಸ್ತಕದ ಕೆಲವು ಅಧ್ಯಾಯಗಳ ಕೆಲ ಮಾತುಗಳನ್ನು ಮಾತ್ರ ಹೆಕ್ಕಿ ಜನರಿಗೆ ದಾರಿತಪ್ಪಿಸುವ ಕೆಲಸವನ್ನು ಮಾಡಲಾಗುತ್ತಿದೆ.

ಅಂಬೇಡ್ಕರ್‌ರವರು ಪುಸ್ತಕಗಳನ್ನು ಸಂಗ್ರಹಿಸಿ ಪ್ರಕಟಿಸಲಾಗಿದೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸಮಗ್ರ ಬರೆಹಗಳು ಮತ್ತು‌ ಭಾಷಣಗಳು.‌ ಸಂಪುಟ-6. ಪುಟ ಸಂಖ್ಯೆ: 748ಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. ಅದರಲ್ಲಿ ಅವರು ಜನತೆಯ ವರ್ಗಾವಣೆ ಕಡ್ಡಾಯವಾಗಿರಬೇಕೆ ಅಥವಾ ಇಚ್ಛಾಪೂರ್ವಕವಾಗಿರಬೇಕೆ? ಎಂಬುದನ್ನು ಈ ಕೆಳಗಿನಂತೆ ಉತ್ತರಿಸಿದ್ದಾರೆ.

“ಈ ಪ್ರಶ್ನೆಗೆ ಸಂಬಂಧಿಸಿದಂತೆ ಎರಡೂ ಸಾಧ್ಯ: ಎರಡೂ ಅನುಷ್ಠಾನಗೊಂಡ ದೃಷ್ಟಾಂತಗಳಿವೆ. ಗ್ರೀಸ್ ಮತ್ತು ಬಲ್ಗೇರಿಯಾ ದೇಶಗಳ ಮಧ್ಯೆ ಜನತೆಯ ವರ್ಗಾವಣೆ ಸ್ವಪ್ರೇರಣೆಯ ಆಧಾರದ ಮೇಲೆ ನಡೆಯಿತು. ಆದರೆ ಗ್ರೀಸ್ ಮತ್ತು ಟರ್ಕಿಗಳ ನಡುವೆ ಕಡ್ಡಾಯದ ಆಧಾರದ ಮೇಲೆ ನಡೆಯಿತು. ಕಡ್ಡಾಯ ವರ್ಗಾವಣೆ ಮೇಲುನೋಟಕ್ಕೆ ತಪ್ಪು ಎಂದು ಯಾರಿಗಾದರೂ ಅನ್ನಿಸುತ್ತದೆ. ಒಬ್ಬನಿಗೆ ಇಷ್ಟವಿಲ್ಲದಿದ್ದಾಗ ಅವನ ಅನುವಂಶೀಯ ನೆಲೆಯನ್ನು ಬದಲಾಯಿಸು ಎಂದು ಬಲಾತ್ಕರಿಸುವುದು ಸರಿಯಾದದ್ದಲ್ಲ. ಅಲ್ಲಿನ ಅವನ ವಾಸದ ಮುಂದುವರಿಕೆಯಿಂದಾಗಿ ದೇಶದ ಶಾಂತಿಸುಸ್ಥಿತಿಗಳು ವಿಪತ್ತಿಗೊಳಗಾಗುವ ಸಂಭವ ಇದ್ದ ಹೊರತು ಅಥವಾ ಅವನ ಹಿತದ ದೃಷ್ಟಿಯಿಂದಲೇ ವರ್ಗಾವಣೆ ಅಗತ್ಯ ಎನ್ನಿಸಿದ ಹೊರತು, ವರ್ಗಾವಣೆ ಮಾಡುವವರು ಅದನ್ನು ಅಡಚಣೆ ಮತ್ತು ನಷ್ಟಗಳು ಉಂಟಾಗದ ಹಾಗೆ ಮಾಡಬೇಕಾಗಿದೆ. ಆದ್ದರಿಂದ ವರ್ಗಾವಣೆಯನ್ನು ಬಲಾತ್ಕರಿಸಬಾರದು ಎಂಬುದು ನನ್ನ ಅಭಿಪ್ರಾಯ. ವರ್ಗಾವಣೆಗೆ ಇಚ್ಛೆ ವ್ಯಕ್ತಪಡಿಸಿದವರಿಗೂ ಅದು ಮುಕ್ತವಾಗಿರಬೇಕು”.

(ಮಾಹಿತಿ ಮೂಲ: ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸಮಗ್ರ ಬರೆಹಗಳು ಮತ್ತು‌ ಭಾಷಣಗಳು.‌ಸಂಪುಟ-6. ಪುಟ ಸಂಖ್ಯೆ: 748)

ಇದು ಅಂಬೇಡ್ಕರ್ ಅವರ ಸ್ಪಷ್ಟ ಅಭಿಪ್ರಾಯವಾಗಿತ್ತು.

ಅಂಬೇಡ್ಕರರವರ ನೈಜ ವಿಚಾರಗಳ ಬಗ್ಗೆ ಇದುವರೆಗೆ ಇರುವ ಅಧಿಕೃತ ಮಾಹಿತಿ ಎಂದರೆ ಅಂಬೇಡ್ಕರರ ಪರಿನಿಬ್ಬಾಣದ ನಂತರ ಅವರ ಕುಟುಂಬ 1991 ರಲ್ಲಿ ನೀಡಿದ್ದ ಬರಹಗಳು ಮತ್ತು ಭಾಷಣಗಳಾಗಿವೆ ಹಾಗೂ ಅಂಬೇಡ್ಕರ್ ಅವರು ಸ್ಥಾಪಿಸಿದ ಪತ್ರಿಕೆಗಳಾಗಿವೆ. ಈಗ ಅವೆಲ್ಲವೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಎಂಬ ಶೀರ್ಷಿಕೆಯಲ್ಲಿ 22 ಸಂಪುಟ ಗಳಲ್ಲಿ ಲಭ್ಯವಿದೆ. ಕರ್ನಾಟಕ ಸರ್ಕಾರವೂ ಸಹ ಆ ಎಲ್ಲಾ ಸಂಪುಟಗಳನ್ನು ಕನ್ನಡಕ್ಕೆ ಭಾಷಾಂತರಿಸಿದೆ. ಈ 22 ಸಂಪುಟಗಳಲ್ಲಿಯೂ ಸಹ ನಮಗೆ ಅಂಬೇಡ್ಕರ್ ಅವರು “ದೇಶದಲ್ಲಿ ಗಲಭೆ, ಘರ್ಷಣೆಗಳು ನಡೆಯಬಾರದು ಎಂಬ ಕಾರಣಕ್ಕೆ ದೇಶ ವಿಭಜನೆಯ ವೇಳೆ ಭಾರತದಲ್ಲಿದ್ದ ಮುಸ್ಲಿಮರನ್ನು ಪಾಕಿಸ್ತಾನಕ್ಕೆ, ಅಲ್ಲಿದ್ದ ಹಿಂದೂಗಳನ್ನು ಭಾರತಕ್ಕೆ ಸ್ಥಳಾಂತರಿಸುವಂತೆ” ಹೇಳಿರುವ ಯಾವುದೇ ಆಧಾರಗಳಾಗಲಿ ಪುರಾವೆಗಳಾಗಲಿ ಇಲ್ಲ.

ಯಾವುದೇ ಫೋಟೋ ವಿವರಣೆ ಲಭ್ಯವಿಲ್ಲ.

ಬದಲಿಗೆ ಅವರು ಹಿಂದೂ ಮಹಾಸಭಾ, ಆರ್ ಎಸ್ ಎಸ್, ಹಿಂದೂ ರಾಷ್ಟ್ರವಾದಿಗಳನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿರುವುದು ಕಂಡುಬರುತ್ತದೆ ಹಾಗಾಗಿ ಅಂಬೇಡ್ಕರ್ ಅವರು ಆರ್ ಎಸ್ ಎಸ್ ಕ್ಯಾಂಪಿಗೆ ಭೇಟಿ ನೀಡಿದ್ದರು ಎಂಬ ವಾದವಾಗಲಿ ಅಥವಾ ಮುಸ್ಲಿಮರು ಪಾಕಿಸ್ತಾನಕ್ಕೆ ಹೊಗಲಿ ಎಂದಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಿ ಪುರಾವೆಗಳಿಲ್ಲ. ಇದೆಲ್ಲ ಆರ್.ಎಸ್.ಎಸ್ ನ ಕಪೋಲಕಲ್ಪಿತ ಕಟ್ಟುಕತೆಯಾಗಿದೆ.

RSS ಶಿಬಿರದಲ್ಲಿ ಅಂಬೇಡ್ಕರ್ ಭಾಷಣ ಎಂಬ ಕಾಲ್ಪನಿಕ ಚಿತ್ರ
RSS ಶಿಬಿರದಲ್ಲಿ ಅಂಬೇಡ್ಕರ್ ಭಾಷಣ ಎಂಬ ಕಾಲ್ಪನಿಕ ಚಿತ್ರ
 

ಪುಟ 123ವೈರಲ್ ಸಂದೇಶದಲ್ಲಿ ಪುಟ ಸಂಖ್ಯೆ 123 ಮುಸ್ಲಿಮರು ಭಾರತದಲ್ಲಿ ವಾಸಿಸಬಾರದು ಎಂದು ಅಂಬೇಡ್ಕರ್ ಹೇಳಿದ್ದಾರೆ ಎಂದು ಹೇಳಲಾಗಿದೆ. ನಾವು ಡಾ. ಅಂಬೇಡ್ಕರ್ ಅವರ ಪಾಕಿಸ್ತಾನ ಅಥವಾ ಭಾರತದ ವಿಭಜನೆ ಪುಸ್ತಕಕ್ಕಾಗಿ ಹುಡುಕಿದಾಗ. ಇಂಟರ್ನೆಟ್‌ ಆರ್ಕೈವ್‌ನಲ್ಲಿ ಸಂಪೂರ್ಣ ಕೃತಿ ಲಭ್ಯವಾಗಿದೆ. ಮತ್ತು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಡಾ. ಬಿ.ಆರ್ ಅಂಬೇಡ್ಕರ್ ಅವರ ಕೃತಿಗಳ ಆರ್ಕೈವ್ ನಲ್ಲಿ ಈ ಕೃತಿ ಲಭ್ಯವಾಗಿದೆ. 

ಈ ಕೆಳಗೆ ಇಂಟರ್ನೆಟ್ ಆರ್ಕೈವ್ ಮತ್ತು MEA (Ministry of External Affairs)ಆರ್ಕೈವ್‌ ಎರಡರಲ್ಲಿಯೂ ಪಾಕಿಸ್ತಾನ ಅಥವಾ ಭಾರತದ ವಿಭಜನೆ ಪುಸ್ತಕದ 123 ಪುಟವನ್ನು ನೀಡಲಾಗಿದೆ.

123 ನೇ ಪುಟವನ್ನು ಸಂಪೂರ್ಣವಾಗಿ ಓದಿದಾಗ ಎಲ್ಲಿಯೂ ಅಂಬೇಡ್ಕರ್ ಅವರು “ಮುಸ್ಲಿಮರು ಭಾರತದಲ್ಲಿ ವಾಸಿಸಬಾರದು” ಎಂದು ಹೇಳಿರುವ ಉಲ್ಲೇಖವೇ ಇಲ್ಲ. ಬದಲಾಗಿ ಅವರು ಇಂಟರ್ನೆಟ್ ಆರ್ಕೈವ್ ನ 123 ಪುಟದಲ್ಲಿ ಹಿಂದು ಮಹಾಸಭಾದ ಬಗ್ಗೆ ಚರ್ಚಿಸಿದ್ದಾರೆ.

ಇನ್ನೂ MEA  ಆರ್ಕೈವ್ ನಲ್ಲಿ ಅಂಬೇಡ್ಕರ್ ಅವರು ಹಿಂದು ಧರ್ಮದ ಮೇಲ್ಜಾತಿ ಅಥವಾ ಪ್ರಭಾವಿ ಜಾತಿಯ ಜನರ ಕುರಿತು “ಈ ಏಕಸ್ವಾಮ್ಯವನ್ನು(monopoly) ತಮ್ಮಲ್ಲಿಯೇ ಉಳಿಸಿಕೊಳ್ಳುವುದು ಅವರ ಜೀವನದ ಮಹತ್ವಾಕಾಂಕ್ಷೆ ಮತ್ತು ಗುರಿಯಾಗಿದೆ. ವರ್ಗ ಪ್ರಾಬಲ್ಯದ ಈ ಸ್ವಾರ್ಥದ ಕಲ್ಪನೆಯೊಂದಿಗೆ ಅವರು ಕೆಳವರ್ಗದ ಹಿಂದೂಗಳನ್ನು ಸಂಪತ್ತು, ಶಿಕ್ಷಣ ಮತ್ತು ಅಧಿಕಾರದಿಂದ ಹೊರಗಿಡಲು ಪ್ರತಿಯೊಂದು ನಡೆಯನ್ನೂ ತೆಗೆದುಕೊಳ್ಳುತ್ತಾರೆ, ಇದಕ್ಕಾಗಿ ಅತ್ಯಂತ ಖಚಿತವಾದ ಮತ್ತು ಅತ್ಯಂತ ಪರಿಣಾಮಕಾರಿಯಾದ ಧರ್ಮಗ್ರಂಥಗಳನ್ನು ಸಿದ್ಧಪಡಿಸುತ್ತಾರೆ, ಮತ್ತು ಅವರ ಮನಸ್ಸಿನ ಮೇಲೆ ತುಂಬುತ್ತಾರೆ.  ಕೆಳವರ್ಗದ ಹಿಂದೂಗಳ ಜೀವನದಲ್ಲಿ ಕರ್ತವ್ಯವನ್ನು ಕಲಿಸುತ್ತಾರೆ ಅದು ಉನ್ನತ ವರ್ಗದವರಿಗೆ ಸೇವೆ ಸಲ್ಲಿಸಲು ಮಾತ್ರ.” ಎಂದು ಹೇಳುತ್ತಾರೆ.

ಇನ್ನೂ ಮುಸ್ಲಿಮರ ಕುರಿತು ಕೊನೆಯ ನಾಲ್ಕು ಸಾಲಿನಲ್ಲಿ ಉಲ್ಲೇಖಿಸಿದ್ದಾರೆ. “ಹಿಂದೂಗಳು ಕೆಳವರ್ಗದ ಹಿಂದೂಗಳೊಂದಿಗೆ ತಮ್ಮ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ, ಅವರನ್ನು ಮುಸ್ಲಿಮರಿಗೆ ವಿಸ್ತರಿಸಲು ಪ್ರಯತ್ನಿಸಲಾಗುತ್ತದೆ. ಅವರು ಕೆಳವರ್ಗದ ಹಿಂದೂಗಳಿಗೆ ಮಾಡಿದಂತೆ ಮುಸ್ಲಿಮರನ್ನು ಸ್ಥಳ ಮತ್ತು ಅಧಿಕಾರದಿಂದ ಹೊರಗಿಡಲು ಬಯಸುತ್ತಾರೆ. ಉನ್ನತ ಜಾತಿಯ ಹಿಂದೂಗಳ ಈ ಲಕ್ಷಣವು ಅವರ ರಾಜಕೀಯವನ್ನು ಅರ್ಥಮಾಡಿಕೊಳ್ಳಲು ಪ್ರಮುಖವಾಗಿದೆ.” ಎಂದು ಹೇಳುತ್ತಾರೆ. ಈ ಮೂಲಕ ಮುಂದೆ ಮೇಲ್ಜಾತಿ ಹಿಂದುಗಳು ಹಿಂದೆ ಕೆಳವರ್ಗಗಳನ್ನು ನಡೆಸಿಕೊಂಡಂತೆ ಭವಿಷ್ಯದಲ್ಲಿ ಮುಸ್ಲಿಮರನ್ನು ನಡೆಸಿಕೊಳ್ಳಲು ಮುಂದಾಗುತ್ತಾರೆ ಎಂದು ಬರೆದಿದ್ದಾರೆ.

ಪುಟ ಸಂಖ್ಯೆ 125:

ವೈರಲ್ ಸಂದೇಶದಲ್ಲಿ ಪುಟ ಸಂಖ್ಯೆ 125ರಲ್ಲಿ “ಮುಸ್ಲಿಮರು ಭಾರತಕ್ಕೆ ಬೆದರಿಕೆಯಾಗಿ ಉಳಿಯುತ್ತಾರೆ ಮತ್ತು ಭಾರತದಲ್ಲಿ ಕೋಮುಗಲಭೆಗಳನ್ನು ಸೃಷ್ಟಿಸುತ್ತಾರೆ.” ಎಂದು ಹೇಳಿದ್ದಾರೆ ಎನ್ನಲಾಗಿದೆ.

ಇಂಟರ್ನೆಟ್‌ ಆರ್ಕೈವ್‌ನ 125 ನೇ ಪುಟದಲ್ಲಿ ಅಂಬೇಡ್ಕರ್ ಅವರು ಸಾವರ್ಕರ್ ಕೇಳಿದ ಎರಡು ಪ್ರಶ್ನೆಗಳನ್ನು ಉತ್ತರಿಸಿದ್ದಾರೆ. ಮೊದಲನೆಯದು ಭಾರತಕ್ಕೆ “ಹಿಂದುಸ್ತಾನ” ಎಂಬ ಹೆಸರನ್ನು ಇಡುವ ಕುರಿತು ಮತ್ತು ಸಂಸ್ಕೃತವನ್ನು ಪವಿತ್ರ ಭಾಷೆ, ಹಿಂದಿಯನ್ನು ರಾಷ್ಟ್ರ ಭಾಷೆ ಮತ್ತು ನಾಗರಿಯನ್ನು ಹಿಂದುಸ್ತಾನದ ಲಿಪಿಯನ್ನಾಗಿ ಅಳವಡಿಸಿಕೊಳ್ಳುವ ಕುರಿತು ಪ್ರತಿಕ್ರಯಿಸುತ್ತಾ, “ಪ್ಯಾಲೆಸ್ಟೈನ್ ಮತ್ತು ಹಂಗೇರಿ ಮತ್ತು ಪೋಲೆಂಡ್ ಸಹ ತಮ್ಮ ದೇಶದಲ್ಲಿ ಸಾವಿರಾರು ಮುಸ್ಲಿಮರನ್ನು ಹೊಂದಿದ್ದಾರೆ. ಆದರೆ ಕೇವಲ ಅಲ್ಪಸಂಖ್ಯಾತ ಸಮುದಾಯವಾಗಿರುವುದರಿಂದ, ಈ ದೇಶಗಳಲ್ಲಿ ಅವರ ಅಸ್ತಿತ್ವವು ಈ ದೇಶಗಳ ಪ್ರಾಚೀನ ಹೆಸರುಗಳನ್ನು ಬದಲಾಯಿಸುವ ನೆಲೆಯಾಗಿ ಎಂದಿಗೂ ಮುಂದುವರೆದಿಲ್ಲ, ಇದು ಬಹುಪಾಲು ಭೂಮಿಯನ್ನು ಹೊಂದಿರುವ ಜನಾಂಗಗಳ ವಾಸಸ್ಥಾನಗಳನ್ನು ಸೂಚಿಸುತ್ತದೆ.”

ಮುಸಲ್ಮಾನರು ಹೇಗೆ ಇತರ ದೇಶದಲ್ಲಿ ಇದ್ದರೂ ದೇಶದ ಹೆಸರು ಗುರುತಿಸುವಾಗ ಅವರ ಪ್ರಭಾವ ಬೀರಿಲ್ಲ ಎಂದು ಹೇಳಿದ್ದಾರೆ. ಈ ಕಾರಣಕ್ಕಾಗಿ ಮುಸ್ಲಿಮರು ತಮ್ಮನ್ನು ಪೋಲೇಂಡ್‌ ಮುಸಲ್ಮಾನರು, ಗ್ರೀಸ್‌ ಮುಸಲ್ಮಾನರು ಅಥವಾ ಚೀನಿ ಮುಸಲ್ಮಾನರು ಎಂಬ ಗುರುತು ಉಳಿಸಿಕೊಳ್ಳುತ್ತಾರೆ ಆದರೆ ಭಾರತಕ್ಕೆ ಬಂದ ಮುಸಲ್ಮಾನರು ತಮ್ಮನ್ನು “ಹಿಂದುಸ್ಥಾನಿಗಳು(ಭಾರತೀಯರು)” ಎಂದು ಕರೆದುಕೊಳ್ಳುತ್ತಾರೆ ಎಂದಿದ್ದಾರೆ.

“ಧ್ರುವಗಳ ದೇಶವು ಪೋಲೆಂಡ್ ಮತ್ತು ಗ್ರೀಸಿಯನ್ನರು ಗ್ರೀಸ್ ಆಗಿ ಮುಂದುವರಿಯುತ್ತದೆ. ಅಲ್ಲಿನ ಮುಸ್ಲಿಮರು ಅವರನ್ನು ವಿರೂಪಗೊಳಿಸದಿರಲು ಧೈರ್ಯ ಮಾಡಲಿಲ್ಲ, ಆದರೆ ಸಂದರ್ಭ ಬಂದಾಗ ತಮ್ಮನ್ನು ಪೋಲಿಷ್ ಮುಸ್ಲಿಮರು ಅಥವಾ ಗ್ರೀಸಿಯನ್ ಮುಸ್ಲಿಮರು ಅಥವಾ ಚೀನೀ ಮುಸ್ಲಿಮರು ಎಂದು ಗುರುತಿಸಲು ಸಾಕಷ್ಟು ತೃಪ್ತಿ ಹೊಂದಿದ್ದಾರೆ. ಹಾಗೆಯೇ ನಮ್ಮ ಮುಸ್ಲಿಮ್ ದೇಶವಾಸಿಗಳು ತಮಗೆ ಬೇಕಾದಾಗ ರಾಷ್ಟ್ರೀಯ ಅಥವಾ ಪ್ರಾದೇಶಿಕವಾಗಿ ತಮ್ಮನ್ನು ತಾವು ಗುರುತಿಸಿಕೊಳ್ಳಬಹುದು, ಧಾರ್ಮಿಕ ಅಥವಾ ಸಾಂಸ್ಕೃತಿಕ ಘಟಕವಾಗಿ ತಮ್ಮ ಪ್ರತ್ಯೇಕತೆಯನ್ನು ಕನಿಷ್ಠ ರಾಜಿ ಮಾಡಿಕೊಳ್ಳದೆ “ಹಿಂದೂಸ್ತಾನಿ ಮುಸ್ಲಿಮರು” ಎಂದು. ಇಲ್ಲ, ಮುಸಲ್ಮಾನರು ತಮ್ಮ ಸ್ವಂತ ಇಚ್ಛೆಯಿಂದ ಭಾರತಕ್ಕೆ ಬಂದಂದಿನಿಂದ ತಮ್ಮನ್ನು “ಹಿಂದೂಸ್ಥಾನಿಗಳು” ಎಂದು ಕರೆದುಕೊಳ್ಳುತ್ತಿದ್ದಾರೆ.” ಎಂದಿದ್ದಾರೆ.

ಇನ್ನೂ MEA ಆರ್ಕೈವ್‌ನ 125ನೇ ಪುಟದಲ್ಲಿ. ಮುಸ್ಲಿಂ ಪ್ರಾಭಲ್ಯವಿರುವ ಸ್ಥಳಗಳಲ್ಲಿ ಹಿಂದುಗಳ ಪರಿಸ್ಥಿತಿ ಹೇಗಿರಬಹುದು ಎಂದು ಬರೆಯುತ್ತಾರೆ. ಮೇಲ್ಜಾತಿ ಹಿಂದುಗಳು ಕೆಳವರ್ಗದ ಹಿಂದುಗಳನ್ನು ಮುಂದೆ ರಾಷ್ಟ್ರೀಯತೆಯ ಹೆಸರಿನಲ್ಲಿ ಮೋಸ ಮಾಡಬಹುದು. ಆದರೆ ಮುಸ್ಲಿಮರನ್ನು ಮೋಸ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.

“ಅವರು ರಾಷ್ಟ್ರೀಯತೆಯ ಹೆಸರಿನಲ್ಲಿ ಹಿಂದೂಗಳ ಕೆಳವರ್ಗದವರಿಗೆ ಮೋಸ ಮಾಡಬಹುದು, ಆದರೆ ಅವರು ಮುಸ್ಲಿಂ ಪ್ರಾಂತ್ಯಗಳಲ್ಲಿ ಮುಸ್ಲಿಂ ಬಹುಸಂಖ್ಯಾತರನ್ನು ವಂಚಿಸಲು ಸಾಧ್ಯವಿಲ್ಲ ಮತ್ತು ಅವರ ಸ್ಥಾನ ಮತ್ತು ಅಧಿಕಾರದ ಏಕಸ್ವಾಮ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಹಿಂದೂಗಳ ನಿರ್ಣಯವು-ಪಾಕಿಸ್ತಾನದ ವಿರುದ್ಧದ ಅವರ ಕೂಗನ್ನು ಮುಸ್ಲಿಂ ಬಹುಸಂಖ್ಯಾತರ ಅಡಿಯಲ್ಲಿ ಬದುಕಲು ಮತ್ತು ಸ್ವಯಂ ನಿರ್ಣಯವನ್ನು ವಿರೋಧಿಸಲು ಪರಿಗಣಿಸಬಹುದಾದರೆ ಅದು ತುಂಬಾ ಧೈರ್ಯಶಾಲಿ ವಿಷಯವಾಗಿದೆ. ಆದರೆ ಹಿಂದೂಗಳು ಮುಸಲ್ಮಾನರನ್ನು ಮೂರ್ಖರನ್ನಾಗಿಸಿ ತಮ್ಮ ಸ್ಥಾನ ಮತ್ತು ಅಧಿಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನಂಬಿದರೆ ಅದು ತುಂಬಾ ಬುದ್ಧಿವಂತ ವಿಷಯವಲ್ಲ.” ಎಂದಿದ್ದಾರೆ.

ಪುಟ ಸಂಖ್ಯೆ 231 :

ವೈರಲ್ ಸಂದೇಶದಲ್ಲಿ “ಪುಟ ಸಂಖ್ಯೆ 231 ರಲ್ಲಿ  ಬುರ್ಖಾದ ಕಾರಣದಿಂದಾಗಿ, ಲೈಂಗಿಕ ಬಯಕೆ ಹೆಚ್ಚಾಗುತ್ತದೆ, ಇದು ಹೆಚ್ಚು ಮಕ್ಕಳನ್ನು  ಹಡೆಯಲು ಕಾರಣವಾಗುತ್ತದೆ.” ಎಂದಿದ್ದಾರೆ ಎಂದು ಪ್ರತಿಪಾದಿಸಲಾಗಿದೆ. ಈ ರೀತಿಯ ಹೇಳಿಕೆಯನ್ನು ಡಾ. ಅಂಬೇಡ್ಕರ್ ಅವರು ನೀಡಿದ್ದಾರೆಯೇ ಎಂದು ಹುಡುಕಿದಾಗ. ಪುಟ ಸಂಖ್ಯೆ 230 ಮತ್ತು 231ರಲ್ಲಿಡಾ. ಅಂಬೇಡ್ಕರ್ ಅವರು ಮುಸ್ಲಿಂ ಧರ್ಮದಲ್ಲಿ ಮಹಿಳೆಯರ ಸ್ಥಾನಮಾನಗಳನ್ನು ವಿವರಿಸುತ್ತಾ ಹೇಗೆ ಪರ್ದಾ (ಬುರ್ಖಾ) ಪದ್ಧತಿಯು ಮಹಿಳೆಯ ಸ್ವತಂತ್ರ್ಯವನ್ನು ಕಿತ್ತು ಕೊಂಡಿದೆ ಮತ್ತು ಅದರಿಂದಾಗಿ ಮುಸ್ಲಿಂ ಮಹಿಳೆಯರು ಎದುರಿಸುತ್ತಿರುವ ದೈಹಿಕ ಮತ್ತು ಸಾಮಾಜಿಕ ಸಮಸ್ಯೆಯ ಕುರಿತು ಚರ್ಚಿಸಿದ್ದಾರೆ. ಆದರೆ ವೈರಲ್ ಹೇಳಿಕೆಯಲ್ಲಿ ಉಲ್ಲೇಖಿಸಿರುವಂತಹ ಬಾಲೀಷ ಹೇಳಿಕೆಯನ್ನು ಡಾ. ಅಂಬೇಡ್ಕರ್ ಅವರು ನೀಡಿಲ್ಲ. 

“ಪರ್ದಾ ಮುಸ್ಲಿಂ ಮಹಿಳೆಯರನ್ನು ಮಾನಸಿಕ ಮತ್ತು ನೈತಿಕ ಪೋಷಣೆಯಿಂದ ವಂಚಿತಗೊಳಿಸುತ್ತದೆ. ಆರೋಗ್ಯಕರ ಸಾಮಾಜಿಕ ಜೀವನದಿಂದ ವಂಚಿತರಾಗಿ, ನೈತಿಕ ಅಧಃಪತನದ ಪ್ರಕ್ರಿಯೆಯು ಪ್ರಾರಂಭವಾಗಬೇಕು. ಹೊರಗಿನ ಪ್ರಪಂಚದಿಂದ ಸಂಪೂರ್ಣವಾಗಿ ಏಕಾಂತವಾಗಿ, ಅವರು ತಮ್ಮ ಮನಸ್ಸನ್ನು ಸಣ್ಣ ಕೌಟುಂಬಿಕ ಕಲಹಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಮತ್ತು ಪರಿಣಾಮವಾಗಿ ಅವರು ತಮ್ಮ ದೃಷ್ಟಿಕೋನದಲ್ಲಿ ಸಂಕುಚಿತರಾಗುತ್ತಾರೆ ಮತ್ತು ನಿರ್ಬಂಧಿತರಾಗುತ್ತಾರೆ.” ಎಂದಿದ್ದಾರೆ. 

ಪುಟ ಸಂಖ್ಯೆ 297 :

ವೈರಲ್ ಸಂದೇಶದಲ್ಲಿ “ಪುಟ ಸಂಖ್ಯೆ 297, ಭಾರತದಲ್ಲಿ ಅಶಾಂತಿಗಾಗಿ ಮುಸ್ಲಿಮರು ಕೋಮುಗಲಭೆಗಳನ್ನು ಮಾಡುತ್ತಲೇ ಇರುತ್ತಾರೆ.” ಎಂದು ಹೇಳಿದ್ದಾರೆ, ಎನ್ನಲಾಗಿದೆ. ಈ ಕುರಿತು ಹುಡುಕಿದಾಗ, ಈ ರೀತಿಯ ಯಾವುದೇ ಹೇಳಿಕೆಯನ್ನು ಅಂಬೇಡ್ಕರ್ ಅವರು ನೀಡಿರುವುದು ಕಂಡು ಬಂದಿಲ್ಲ. ಬದಲಾಗಿ ಡಾ. ಅಂಬೇಡ್ಕರ್ ಅವರು ಇಸ್ಲಾಂ ಮತ್ತು ಕುರಾನ್ ಕುರಿತು ಮುಸ್ಲಿಂ ನಾಯಕರು ಕೋರ್ಟಿನಲ್ಲಿ ಮಂಡಿಸಿರುವ ವಾದವನ್ನು ಉಲ್ಲೇಖಿಸಿದ್ದಾರೆ.

ಪುಟ ಸಂಖ್ಯೆ 303:

ವೈರಲ್ ಸಂದೇಶದಲ್ಲಿ, “ಪುಟ ಸಂಖ್ಯೆ 303ರಲ್ಲಿ ಭಾರತದಲ್ಲಿ ಹಿಂದೂಗಳ ಸರ್ಕಾರವನ್ನು ಮುಸ್ಲಿಮರು ಎಂದಿಗೂ ಒಪ್ಪಿಕೊಳ್ಳುವುದಿಲ್ಲ.” ಎಂದಿದ್ದಾರೆ ಎನ್ನಲಾಗಿದೆ. ಈ ಕುರಿತು ಹುಡುಕಿದಾಗ, ಡಾ. ಅಂಬೇಡ್ಕರ್ ಅವರು ಹೇಗೆ ಮಹಮ್ಮದ್ ಅಲಿ ಜಿನ್ನಾ ಮಹತ್ಮಾ ಗಾಂಧೀಜಿಯವರ ಕುರಿತು ಅವಹೇಳನಕಾರಿ ಭಾಷಣಗಳನ್ನು ಅಲಿಗರ್ ಮತ್ತು ಅಜ್ಮೀರ್ ನಲ್ಲಿ ಮಾಡಿದ್ದರು ಎಂದು ಉಲ್ಲೇಖಿಸುತ್ತಾರೆ. ನಂತರ 1928 ರಲ್ಲಿ ಖ್ವಾಜಾ ಹಸನ್ ನಿಜಾಮಿ ಎಂಬುವವರು. “ಮುಸ್ಲಿಮರು ಮತ್ತು  ಹಿಂದುಗಳು ಬೇರೆ ಬೇರೆ. ನಾವು ಭಾರತವನ್ನು ಯುದ್ಧಮಾಡಿ ಗೆದ್ದಿದ್ದೇವೆ. ನಮ್ಮಿಂದ ಬ್ರಿಟೀಷರು ಪಡೆದಿದ್ದಾರೆ. ಹಾಗಾಗಿ ನಾವು ಭಾರತವನ್ನು ಆಳಲು ಹಕ್ಕು ಹೊಂದಿದ್ದೇವೆ. ಹಿಂದುಗಳಿಗೆ ಸ್ವಯಂ ಆಡಳಿತ ಬರುವುದಿಲ್ಲ.” ಎಂದು ಹೇಳಿರುವುದನ್ನು ಉಲ್ಲೇಖಿಸುತ್ತಾ. 1761ರ ಪಾಣಿಪತ್ ಯುದ್ಧದಲ್ಲಿ ಏನಾಯಿತು? ಹೇಗೆ ಅಹ್ಮದ್ ಶಾ ಅಬ್ದಾಲಿಯನ್ನು ಮರಾಠ ಸೈನ್ಯ ಸೋಲಿಸಿತು ಎಂದು ವಿವರಿಸಿದ್ದಾರೆ. ಈ ಯುದ್ಧದ ವಿವರಗಳನ್ನು ಪಂಡಿತ್ ಮದನ್ ಮೋಹನ್ ಮಾಳವೀಯ ಅವರು ತಿರುಚಲು ನೋಡಿದಾಗ ನಜೀಬಾಬಾದ್‌ನ ಮೌಲಾನಾ ಅಕ್ಬರ್ ಷಾ ಖಾನ್ ಅವರು ಮದನ್ ಮೋಹನ್ ಮಾಳವೀಯ ಅವರಿಗೆ ಬರೆದ ಪತ್ರವನ್ನು ಉಲ್ಲೇಖಿಸಿದ್ದಾರೆ.

ಪುಟ ಸಂಖ್ಯೆ 332 :

ವೈರಲ್ ಸಂದೇಶದಲ್ಲಿ “ಪುಟ ಸಂಖ್ಯೆ 332 ರಲ್ಲಿ ಮುಸ್ಲಿಮರು ಎಂದಿಗೂ ದೇಶಭಕ್ತರಾಗಲು ಸಾಧ್ಯವಿಲ್ಲ” ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ ಎನ್ನಲಾಗಿದೆ. ಈ ಕುರಿತು ನಾವು ಹುಡುಕಿದಾಗ, 1923ರಲ್ಲಿ ಭಾರತ ಸರ್ಕಾರ ಆಡಳಿತದ ಮೇಲೆ ವರದಿ ಮಾಡಲು ಸರ್ ಡೆನ್ನಿಸ್ ಬ್ರೇ ಅವರ ಅಧ್ಯಕ್ಷತೆ N.-W.F ನ ನೆಲೆಗೊಂಡ ಜಿಲ್ಲೆಗಳ ನಡುವಿನ ಸಂಬಂಧ ಪ್ರಾಂತ್ಯ ಮತ್ತು ಬುಡಕಟ್ಟು ಪ್ರದೇಶ ಮತ್ತು ನೆಲೆಗೊಂಡವರ ವಿಲೀನದ ಮೇಲೆ ಪಂಜಾಬ್ ಹೊಂದಿರುವ ಜಿಲ್ಲೆಗಳ ಕುರಿತು ತನ್ನ ಅಲ್ಪಸಂಖ್ಯಾತರ ವರದಿಯ ಮೂಲಕ ಗಮನ ಸೆಳೆದ ಒಬ್ಬ ಸದಸ್ಯರಾದ ಶ್ರೀ ಎನ್.ಎಂ.ಸಮರ್ಥ್ ಅವರ ವರದಿಯನ್ನು ಉಲ್ಲೇಖಿಸುವ ಪ್ರಶ್ನಾವಳಿಗಳನ್ನು 331 ಮತ್ತು 332 ಪುಟದಲ್ಲಿ ನೀಡಿದ್ದಾರೆ. ಇಲ್ಲಿ ಎಲ್ಲಿಯೂ ಮುಸಲ್ಮಾನರು ದೇಶಭಕ್ತರಾಗಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಅವರು ಹೇಳಿಲ್ಲ.

ಅಂಬೇಡ್ಕರ್ ಅವರು ಪಾಕಿಸ್ತಾನ ಅಥವಾ ಭಾರತದ ವಿಭಜನೆ ಕೃತಿಯಲ್ಲಿ ಮುಸ್ಲಿಂ ಮತ್ತು ಹಿಂದುಗಳ ಧರ್ಮ, ರಾಜಕಾರಣ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಎಲ್ಲವುಗಳ ಕುರಿತು ಮುಕ್ತವಾಗಿ, ನಿಷ್ಠುರತೆಯಿಂದ ಚರ್ಚಿಸಿದ್ದಾರೆ ಮತ್ತು ಭಾರತದ ಮುಂದೆ ಎದುರಿಸಬೇಕಾದ ಹಿಂದು ಮುಸ್ಲಿಂ ಕಲಹಗಳು ಮತ್ತು ಅವುಗಳನ್ನು ಗ್ರಹಿಸುವ ಕ್ರಮಗಳ ಕುರಿತು ಸಹ ಸುಧೀರ್ಘವಾಗಿ ಚರ್ಚಿಸಿದ್ದಾರೆ.

ಅಂಬೇಡ್ಕರ್ 1940 ರಲ್ಲಿ ಪಾಕಿಸ್ತಾನ ಅಥವಾ ಭಾರತದ ವಿಭಜನೆ ಅನ್ನುವ 400 ಪುಟಗಳನ್ನು ಮೀರಿದ ಒಂದು ಪುಸ್ತಕ ಬರೆಯುತ್ತಾರೆ. ಈ ಪುಸ್ತಕವನ್ನು ಗಾಂಧಿ ಮತ್ತು ಜಿನ್ನಾ ಇಬ್ಬರು ಇದೊಂದು ಪರಾಮರ್ಶೆ ಮಾಡಬಹುದಾದ ಒಂದು ಅಧಿಕಾರಾತ್ಮಕ ಪುಸ್ತಕ ಅಂತ ಒಪ್ಪಿಕೊಳ್ಳುತ್ತಾರೆ. ಭಾರತ ವಿಭಜನೆ ಆಗುವ ಏಳು ವರ್ಷಗಳ ಮುಂಚೆಯೇ ಅಂಬೇಡ್ಕರ್ ಈ ವಿಚಾರವಾಗಿ ದೀರ್ಘವಾಗಿ ಬರೆದಿದ್ದರು.

1945 ರ ಈ ಪುಸ್ತಕದ ಎರಡನೇ ಮುದ್ರಣದಲ್ಲಿ ಅಂಬೇಡ್ಕರ್ ಹೇಳುತ್ತಾರೆ ” ಹಿಂದೂ ಮತ್ತು ಮುಸ್ಲಿಂ ಇಬ್ಬರು ಈ ಪುಸ್ತಕವನ್ನು ಒಪ್ಪಿಕೊಂಡಿಲ್ಲ ಆದರೆ ಈ ಪುಸ್ತಕದ ವಿಚಾರಗಳನ್ನು ತಮ್ಮ ರಾಜಕೀಯ ಹಿತಾಸಕ್ತಿಗೆ ಬೇಕು ಅಂದಾಗ ಯಾವುದೇ ನಾಚಿಕೆ ಇಲ್ಲದೆ ಲೂಟಿ ಮಾಡಿದ್ದಾರೆ ಎಂದು. ಅಂಬೇಡ್ಕರ್ ದೊಡ್ಡತನ ತಮ್ಮ ಪುಸ್ತಕದಿಂದ ವಿಚಾರ ಕದ್ದರು ಅವರು ಇದರ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳುವುದಿಲ್ಲ.

ಇತ್ತೀಚೆಗೆ RSS ಮತ್ತು ಬಿಜೆಪಿ ಅಂಬೇಡ್ಕರ್ ರವರನ್ನು ತಮ್ಮ ಪಕ್ಷದ ವಿಚಾರಗಳಿಗೆ ಹೊಂದಿಸಿಕೊಳ್ಳಲು ಪ್ರಯತ್ನ ಪಡುತ್ತಿದೆ. ಈ ದಿಸೆಯಲ್ಲಿ ಅವರುಗಳು ಈ ಪುಸ್ತಕದ ಪ್ರಸ್ತಾವವನ್ನು ಮಾಡುತ್ತಲೇ ಬರುತ್ತಿದ್ದಾರೆ.

ಈ ಪುಸ್ತಕದಲ್ಲಿ ಅಂಬೇಡ್ಕರ್ ಇಸ್ಲಾಂ ಧರ್ಮವನ್ನು ಕಟುವಾದ ವಿಶ್ಲೇಷಣೆಗೆ ಒಳಪಡಿಸಿರುವ ಭಾಗಗಳನ್ನು ವಾಟ್ಸಪ್ ಯೂನಿವರ್ಸಿಟಿಯಲ್ಲಿ ಹಂಚುತ್ತಿದ್ದಾರೆ. ಅಂಬೇಡ್ಕರ್ ಕೂಡ ಇಸ್ಲಾಂ ಅನ್ನು ದ್ವೇಷಿಸುತ್ತಿದ್ದರು ಅನ್ನುವ ಭಾವನೆಯನ್ನು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇವರುಗಳು ಮರೆಮಾಚುತ್ತಿರುವುದು ಇದೇ ಪುಸ್ತಕದಲ್ಲಿ ಅಂಬೇಡ್ಕರ್ ಹಿಂದೂ ಧರ್ಮವನ್ನು ಮತ್ತು ಸಾವರ್ಕರ್ ಹಿಂದೂತ್ವ ವನ್ನು ಕಟುವಾದ ವಿಶ್ಲೇಷಣೆಗೆ ಒಳಪಡಿಸಿದ್ದಾರೆ ಅನ್ನುವುದನ್ನು.

ಒಟ್ಟಾರೆಯಾಗಿ ಹೇಳುವುದಾದದರೆ, ಈ ಬಲಪಂಥೀಯ ಪ್ರತಿಪಾದಕರು ಎಷ್ಟು ಅಪಾಯ ಎಂದರೆ ಅವರಿಗೆ ಬೇಕೆಂದಾಗೆಲ್ಲಾ ಇತಿಹಾಸವನ್ನು ತಿರುಚಿ ಅವರಿಗೆ ಬೇಕಾದ ಹಾಗೆ ಬರೆಯುವ ವಿಕಾರ ಪ್ರವೃತ್ತಿಯನ್ನು ಬೆಳಸಿಕೊಂಡಿದ್ದಾರೆ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನ.

ಕೃಪೆ : ಕನ್ನಡ ಫ್ಯಾಕ್ಟ್‌ಚೆಕ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಸಂಭಾಲ್ ಮಸೀದಿ ಸಮೀಕ್ಷೆ ವೇಳೆ ಹಿಂದೂ ದೇವರ ಪ್ರತಿಮೆಗಳು ಪತ್ತೆಯಾಗಿವೆಯೇ?


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights