FACT CHECK | ಮುಸ್ಲಿಮರಿಂದ ಹಿಂದೂ ಮನೆಗಳಿಗೆ ಬೆಂಕಿ ಎಂಬ ವಿಡಿಯೋದ ಅಸಲೀಯತ್ತೇನು ಗೊತ್ತೇ?

ಬಾಂಗ್ಲಾದೇಶದಲ್ಲಿ ಮುಸ್ಲಿಮರು ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಪ್ರಸಾರವಾಗುತ್ತಿದೆ. ಬಾಂಗ್ಲಾದೇಶದಲ್ಲಿ

ಡಿಸೆಂಬರ್ 21, 2024 ರಂದು ಫೇಸ್​ಬುಕ್ ಬಳಕೆದಾರರೊಬ್ಬರು, ‘‘ಬಾಂಗ್ಲಾದೇಶ:- ಬೋಗ್ರಾ ಜಿಲ್ಲೆಯ ಉಪಗ್ರಾಮ ಯೂನಿಯನ್‌ನಲ್ಲಿ ಮುಸ್ಲಿಮರು ಖಿದ್ರಾಗಾಮದಲ್ಲಿ ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಇನ್ನು ಏನೇನ್ ಕಾದಿದಿಯೋ ಹಿಂದುಗಳಿಗೆ’’ ಎಂದು ಬರೆದುಕೊಂಡಿದ್ದಾರೆ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ.

ವೈರಲ್ ವಿಡಿಯೋದಲ್ಲಿ ಬೆಂಕಿಯಿಂದ ಮನೆಯೊಂದು ಹೊತ್ತಿ ಉರಿಯುತ್ತಿರುವುದನ್ನು ಕಾಣಬಹುದು. ಅನೇಕರು ಇಲ್ಲಿ ಸಹಾಯಕ್ಕೆ ಬಂದಿದ್ದು, ನೀರು ಎರಚಿ ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೂ ಕೆಲವರು ಘಟನೆಯ ದೃಶ್ಯಗಳನ್ನು ಚಿತ್ರೀಕರಿಸುತ್ತಿರುವುದನ್ನು ಕಾಣಬಹುದು. ಇದೇ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 7 ಡಿಸೆಂಬರ್ 2024 ರಂದು ಬಾಂಗ್ಲಾದ ಸ್ಥಳೀಯ ಸುದ್ದಿ ಮಾಧ್ಯಮ BDPost News ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೋ ಲಭ್ಯವಾಗಿದೆ. ಇದಕ್ಕೆ ‘‘ಬೋಗ್ರಾ ಸದರ್ ಉಪಗ್ರಾಮದ ಕ್ಷೀರಧಾಮ್ ಪ್ರದೇಶದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಎರಡು ಮನೆಗಳಿಗೆ ಬೆಂಕಿ ಹೊತ್ತಿಕೊಂಡಿದೆ’’ ಎಂಬ ಶೀರ್ಷಿಕೆ ನೀಡಲಾಗಿದೆ. ಇದೇ ವೀಡಿಯೊವನ್ನು BDPostಫೇಸ್​ಬುಕ್ ಪುಟದಲ್ಲೂ ಇದೆ.

ಇದೇ ವೇಳೆ ಬಾಂಗ್ಲಾದೇಶದ ಬೋಗ್ರಾ ನಿವಾಸಿಯೊಬ್ಬರ ಫೇಸ್​ಬುಕ್ ಖಾತೆಯಲ್ಲಿ (ಬಯೋದಲ್ಲಿರುವ ಮಾಹಿತಿಯ ಪ್ರಕಾರ) ಇದೇ ವಿಡಿಯೋವನ್ನು 7 ಡಿಸೆಂಬರ್ 2024 ರಂದು ಹಂಚಿಕೊಂಡಿದ್ದು, ಅವರು ‘‘ಬೋಗ್ರಾ ಸದರ್‌ನ ಉಪಗ್ರಾಮ ಒಕ್ಕೂಟದ ಕ್ಷಿದ್ರಧಾಮ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ’’ ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ಖಚಿತ ಮಾಹಿತಿಗಾಗಿ ನಾವು BDPost News ಹಂಚಿಕೊಂಡ ವಿಡಿಯೋದಲ್ಲಿ ನೀಡಿದ್ದ ಶೀರ್ಷಿಕೆಯನ್ನು ಬಳಸಿಕೊಂಡು ಗೂಗಲ್​ನಲ್ಲಿಸರ್ಚ್ ಮಾಡಿದಾಗ, Daily Karatoa ಡಿಸೆಂಬರ್ 27, 2024 ರಂದು ಪ್ರಕಟಿಸಿದ ವರದಿ ಲಭ್ಯವಾಗಿದೆ. “ಬೋಗ್ರಾ ಸದರ್‌ನ ಕ್ಷೀರಧಾಮ್ ಮಧ್ಯಪಾರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು 7 ಕುಟುಂಬಗಳು ನಿರ್ಗತಿಕವಾಗಿವೆ ” ಎಂಬ ಶೀರ್ಷಿಕೆ ನೀಡಲಾಗಿದೆ.

ಇದರಲ್ಲಿರುವ ವರದಿಯ ಪ್ರಕಾರ, ‘‘ಬೋಗ್ರಾ ಸದರ್‌ನ ಕ್ಷೀರಧಾಮ್ ಮಧ್ಯಪಾರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿಯಲ್ಲಿ 7 ಕುಟುಂಬದ ಎಲ್ಲರೂ ಸುಟ್ಟುಹೋಗಿದ್ದಾರೆ. ಬೋಗ್ರಾ ಅಗ್ನಿಶಾಮಕ ಸೇವಾ ಕಚೇರಿ ಮೂಲಗಳ ಪ್ರಕಾರ, ಇಂದು ಶನಿವಾರ (ಡಿಸೆಂಬರ್ 7) ಮಧ್ಯಾಹ್ನ 5 ಗಂಟೆ ಸುಮಾರಿಗೆ ಆ ಪ್ರದೇಶದ ಅಬು ಬಕ್ಕರ್ ಮತ್ತು ಫಜಲುರ್ ರೆಹಮಾನ್ ಅವರ ಮನೆಯ ಮೇಲೆ ಹಾದು ಹೋಗಿರುವ ಗ್ರಾಮೀಣ ವಿದ್ಯುತ್ ಕಂಬದಲ್ಲಿ ವಿದ್ಯುತ್ ಕಿಡಿ ಕಾಣಿಸಿಕೊಂಡಿದೆ.’’

ಸ್ಥಳೀಯರೊಬ್ಬರು ಮಾತನಾಡಿರುವುದನ್ನು Daily Karatoa ಬರೆದುಕೊಂಡಿದ್ದು, ‘ಡಿ. 7 ರಂದು ಬೆಂಕಿ ತಗುಲಿದೆ. ಸೊಹೈಲ್ ಮನೆಗೆ ಮೊದಲು ಬೆಂಕಿ ಹೊತ್ತಿಕೊಂಡಿದ್ದು ನಂತರ ಬೆಂಕಿ ವ್ಯಾಪಿಸಿದೆ. ಇಸ್ಲಾಂ ಸೊಹೆಲ್ ಮನೆಯಲ್ಲಿ ವಿದ್ಯುತ್ ಕಂಬವಿತ್ತು. ಅಲ್ಲಿಂದ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ’.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಬೋಗ್ರಾ ಸದರ್ ಪ್ರದೇಶದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಾಣಿಸಿಕೊಂಡ ಬೆಂಕಿ ಅವಘಡವನ್ನು, ಮುಸ್ಲಿಮರು ಹಿಂದೂಗಳ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂಬ ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಸಂವಿಧಾನ ರಚನೆ ಮಾಡುವಾಗ ಅಂಬೇಡ್ಕರ್ ಮದ್ಯ ಕುಡಿದಿದ್ದರು ಎಂದು ಹೇಳಿದ್ರಾ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights