FACT CHECK | ಶಾಲಾ ಮಕ್ಕಳೊಂದಿಗೆ ಪ್ರಧಾನಿ ಮೋದಿ ಮಾತನಾಡುತ್ತಿರುವ ವಿಡಿಯೋ ದೆಹಲಿಯದ್ದಲ್ಲ

ಶಾಲೆಯೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ತರಗತಿಯೊಂದರಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿರುವ ವಿಡಿಯೋದಲ್ಲಿ ಮೋದಿಯವರು ಮಕ್ಕಳೊಂದಿಗೆ ಬೆರೆತು ಹಾಡು ಹಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕೆಲವು ಮಕ್ಕಳೊಂದಿಗೆ ಇರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಹಂಚಿಕೊಳ್ಳುವಾಗ ಬಳಕೆದಾರರು, “ನಾಲ್ಕನೇ ತರಗತಿ ಫೇಲ್ ಆದವರು ಕೇಜ್ರಿವಾಲ್ ನಿರ್ಮಿಸಿದ ಶಾಲೆಗಳಲ್ಲಿ ರೀಲ್ ಮಾಡಲು ಹೋಗಿದ್ದಾರೆ. ಅಂದಹಾಗೆ, ಈ ಮಕ್ಕಳು ಈ ನಾಲ್ಕನೇ ತರಗತಿ ಫೇಲ್‌ ಆದವರಿಗಿಂತ ಹೆಚ್ಚು ಬುದ್ಧಿವಂತರು. ಇವರು ಮಕ್ಕಳಿಗೆ ವಿವರಿಸುವ ಅಗತ್ಯವಿಲ್ಲ” ಎಂದು ಬರೆದು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವೈರಲ್‌ ವಿಡಿಯೋದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 2023ರ ಡಿಸೆಂಬರ್ 18ರಂದು ಪ್ರಧಾನಿ ಮೋದಿಯವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋ ಲಭ್ಯವಾಗಿದೆ. “ವಾರಣಾಸಿಯ ಶಾಲಾ ಮಕ್ಕಳೊಂದಿಗೆ ಸಂವಹನ ನಡೆಸುವುದು ನನಗೆ ಹೊಸ ಚೈತನ್ಯವನ್ನು ತಂದಿದೆ. ಶಾಲೆಯಲ್ಲಿ ಹೆಚ್ಚುತ್ತಿರುವ ಸೌಲಭ್ಯಗಳಿಂದಾಗಿ ಅವರು ಈಗ ತಮ್ಮ ಅಧ್ಯಯನವನ್ನು ಹೇಗೆ ಆನಂದಿಸುತ್ತಿದ್ದಾರೆಂದು ಈ ಮುದ್ದಾದ ಮಕ್ಕಳು ನನಗೆ ಹೇಳಿದರು” ಎಂದು ಮೋದಿಯವರು ತಮ್ಮ ಅನುಭವವನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಅದೇ ವಿಡಿಯೋವನ್ನು ಪ್ರಧಾನ ಮಂತ್ರಿಯವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿಯೂ ಹಂಚಿಕೊಳ್ಳಲಾಗಿದೆ.

ವೈರಲ್‌ ವಿಡಿಯೋದ ಕುರಿತು ಮತ್ತಷ್ಟು ಹುಡುಕಾಟ ನಡೆಸಿದಾಗ,  NDTV ಯಂತಹ ಮಾಧ್ಯಮ ವರದಿಗಳು ಲಭ್ಯವಾಗಿವೆ. ಈ ವರದಿಗಳಲ್ಲಿ ವಾರಣಾಸಿಯ ಶಾಲೆಯಲ್ಲಿ ವೈರಲ್ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಮೋದಿಯವರು ವಾರಣಾಸಿಗೆ ಭೇಟಿ ನೀಡಿದ ಸಮಯದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಅವರು ತಮ್ಮ ಬಗ್ಗೆ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಿ ಮುಗ್ಧ ಮನಸ್ಸುಗಳಿಂದ ಉತ್ತರ ಪಡೆದುಕೊಂಡು ಆಕ್ಷನ್‌ ಮೂಲಕ ಹಾಡನ್ನು ಹಾಡಿದರು.

2023ರ ಡಿಸೆಂಬರ್ 17 ಮತ್ತು 18ರಂದು ಮೋದಿಯವರು ಎರಡು ದಿನಗಳ ಕಾಲ ಕಾಶಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಶಾಲಾ ಮಕ್ಕಳೊಂದಿಗೆ ಬೆರೆತು ಸಂವಾದ ನಡೆಸಿದ್ದರು. ಮೋದಿಯವರು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ವಿಧಾನಸಭಾ ಚುನಾವಣೆಯ ವಿಜಯದ ನಂತರ ಸಂಸದೀಯ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಮೋದಿಯವರು ಈ ಭೇಟಿಯ ಸಮಯದಲ್ಲಿ ನಮೋ ಘಾಟ್‌ನಲ್ಲಿ ನಡೆದ ಕಾಶಿ-ತಮಿಳು ಸಂಗಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಉಪಸ್ಥಿತರಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ಮೋದಿಯವರು ವಾರಣಾಸಿಯ ಶಾಲಾ ಮಕ್ಕಳೊಂದಿಗೆ ಸಂವಹನ ನಡೆಸಿರುವ ವಿಡಿಯೋವನ್ನು ದೆಹಲಿಯದ್ದು ಎಂದು ಸುಳ್ಳು ಹೇಳಿಕೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಲಾಸ್‌ ಏಂಜಲೀಸ್‌ನಲ್ಲಿ ಸಂಭವಿಸಿದ ಕಾಳ್ಗಿಚ್ಚಿನ ದೃಶ್ಯ ಎಂದು AI ಚಿತ್ರ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights