FACT CHECK | ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಹೆಸರಿನಲ್ಲಿ ನಕಲಿ ಪೋಸ್ಟ್ ಹಂಚಿಕೆ
ಪಿಎಂ ಇಂಟರ್ನ್‌ಶಿಪ್ ಯೋಜನೆಯ ಹೆಸರಿನಲ್ಲಿ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆಯಡಿ ಪ್ರತಿ ತಿಂಗಳು 5,000 ರೂ.ಗಳನ್ನು ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಈ ಯೋಜನೆಯ ಪ್ರಯೋಜನವನ್ನು ಪಡೆಯಲು, ಬಯೋದಲ್ಲಿ ನೀಡಲಾದ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಫಾರ್ಮ್ ಅನ್ನು ಭರ್ತಿ ಮಾಡಲು ಮನವಿ ಮಾಡಲಾಗುತ್ತಿದೆ. ಹೀಗೆ ನೀಡಲಾದ ಲಿಂಕ್ jobsyojana.in ಆಗಿದೆ. ಇದೇ ಲಿಂಕ್ ಅನ್ನು ಹಲವರು ಹಂಚಿಕೊಳ್ಳುತ್ತಿದ್ದಾರೆ.

ಈ ಲಿಂಕ್ ಕ್ಲಿಕ್ ಮಾಡಿದಾಗ ಇದರಲ್ಲಿ ತೆರೆದುಕೊಳ್ಳುವ ಪುಟದಲ್ಲಿ ಹಲವು ಸರ್ಕಾರ ಹುದ್ದೆಗಳು, ಪಿಂಚಣಿ, ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಹಲವು ಯೋಜನೆಗಳ ಮಾಹಿತಿ ಇದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪಿಎಂ ಇಂಟರ್ನ್‌ಶಿಪ್ ಯೋಜನೆಯ ಹೆಸರಿನ ಲಿಂಕ್ ಬಗ್ಗೆ ಪರಿಶೀಲಿಸಲು ವೈರಲ್ ಲಿಂಕ್ ಡೊಮೆನ್ ಹೆಸರನ್ನು ಗಮನಿಸಿದಾಗ ಇದರಲ್ಲಿ ಕೇವಲ jobsyojana.in ಎಂಬುದರಲ್ಲಿ .in ಎಂದು ಇರುವುದು ಕಂಡು ಬಂದಿದೆ. ಒಂದು ವೇಳೆ ಇದು ಸರ್ಕಾರಿ ವೆಬ್‌ಸೈಟ್ ಆಗಿದ್ದರೆ Gov.in ಎಂದು ಇರಬೇಕಾಗಿತ್ತು. ಹೀಗಾಗಿ ಇದು ನಕಲಿ ಲಿಂಕ್ ಎಂಬುದು ತಿಳಿದು ಬಂದಿತ್ತು.

ಈ ಬಗೆಗಿನ ಇನ್ನಷ್ಟು ಮಾಹಿತಿಗಾಗಿ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿಕೊಂಡು ಸರ್ಚ್ ಮಾಡಿದಾಗ, ಡಿಸೆಂಬರ್ 4, 2024 ರಂದು ಜಾಗರಣ್ ಜೋಶ್ ನಲ್ಲಿ ಪ್ರಕಟವಾದ ವರದಿಯೊಂದು ಕಂಡು ಬಂದಿದೆ. ಇದರ ಪ್ರಕಾರ ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆ 2024 ಅಡಿಯಲ್ಲಿ ಅರ್ಜಿಗಳು ಅಕ್ಟೋಬರ್ 12, 2024 ರಿಂದ ಪ್ರಾರಂಭವಾಗಿವೆ. ಇದರ ಅಡಿಯಲ್ಲಿ, ಯುವಕರಿಗೆ ಉನ್ನತ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಮಾಡಲು ಅವಕಾಶ ಸಿಗುತ್ತದೆ. ಈ ಅವಧಿಯಲ್ಲಿ, ಯುವಕರಿಗೆ 12 ತಿಂಗಳವರೆಗೆ ಪ್ರತಿ ತಿಂಗಳು 5,000 ರೂ. ಸಿಗಲಿದೆ. ಇದಕ್ಕಾಗಿ ಶೈಕ್ಷಣಿಕ ಅರ್ಹತೆ 12ನೇ ತರಗತಿ, ಐಟಿಐ ಪ್ರಮಾಣಪತ್ರ, ಪಾಲಿಟೆಕ್ನಿಕ್ ಡಿಪ್ಲೊಮಾ ಅಥವಾ ಪದವಿ ಆಗಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 21 ರಿಂದ 24 ವರ್ಷಗಳ ನಡುವೆ ಇರಬೇಕು ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.

ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು, ಅಧಿಕೃತ ವೆಬ್‌ಸೈಟ್ https://pminternship.mca.gov.in/ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬೇಕು . ವೆಬ್‌ಸೈಟ್‌ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಈ ಯೋಜನೆಯಡಿಯಲ್ಲಿ, ಆಕಸ್ಮಿಕ ವೆಚ್ಚಗಳಿಗಾಗಿ 6,000 ರೂ.ಗಳ ಏಕ ಮೊತ್ತವನ್ನು ಸಹ ನೀಡಲಾಗುವುದು. ಅಭ್ಯರ್ಥಿಯ ಕುಟುಂಬದ ಯಾವುದೇ ಸದಸ್ಯರ ಆದಾಯ 8 ಲಕ್ಷ ರೂ. ಮೀರಬಾರದು ಮತ್ತು ಯಾರೂ ಸರ್ಕಾರಿ ಉದ್ಯೋಗದಲ್ಲಿರಬಾರದು. ಇದರಲ್ಲಿ, ಫಲಾನುಭವಿಗೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿಯಲ್ಲಿ ವಿಮೆ ಮಾಡಲಾಗುವುದು. ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಅಲ್ಲಿ ಅಧಿಕೃತ ವೆಬ್‌ಸೈಟ್‌ನ ಮಾಹಿತಿ ಕೂಡ ಲಭ್ಯವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವ ಪೋಸ್ಟ್‌ನಲ್ಲಿ ಪಿಎಂ ಇಂಟರ್ನ್‌ಶಿಪ್ ಯೋಜನೆಯ ಹೆಸರಿನಲ್ಲಿ ನೀಡಲಾದ ಲಿಂಕ್ ನಕಲಿ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ದೆಹಲಿಯಲ್ಲಿ BJP ಅಧಿಕಾರಕ್ಕೆ ಬರುತ್ತಿದಂತೆ ಹಿಂದೂಗಳ ಅಂಗಡಿಗಳನ್ನು ಗುರುತು ಹಾಕಲಾಗುತ್ತಿದೆ ಎಂಬುದು ನಿಜವೇ?

