FACT CHECK | ಪಾಕ್‌ನ ಭೂ ಕಂಪನದ ವಿಡಿಯೋವನ್ನು ದೆಹಲಿಯದ್ದು ಎಂದು ತಪ್ಪಾಗಿ ಹಂಚಿಕೆ

ದಿಲ್ಲಿಯಲ್ಲಿ ಸಂಭವಿಸಿದ ಭೂ ಕಂಪನದ ವಿಡಿಯೋ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸಿಸಿಟಿವಿ ದೃಶ್ಯವೊಂದು ಪ್ರಸಾರವಾಗುತ್ತಿದೆ.

ದಿಲ್ಲಿ-ಎನ್‌ಸಿಆರ್‌ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಭೂಕಂಪ ಸಂಭವಿಸಿದೆ. ಮುಂಜಾನೆ ನಡೆದ ಈ ಕಂಪನ ಜನರನ್ನು ಬೆಚ್ಚಿಬೀಳಿಸಿದೆ ಎಂದು ಹಂಚಿಕೊಳ್ಳಲಾಗುತ್ತಿದೆ. ಈ ಭೂಕಂಪದ ನಂತರ ಜನರು ತಮ್ಮ ಅನುಭವಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ಪ್ರಾರಂಭಿಸಿದ್ದರು. ಕೆಲವು ಫೋಟೋಗಳು ಮತ್ತು ವಿಡಿಯೋಗಳನ್ನು ಸಹ ಪೋಸ್ಟ್‌ ಮಾಡಿದ್ದರು. ಇದೇ ವೇಳೆ ದಿಲ್ಲಿ- ಎನ್‌ಸಿಆರ್‌ನಲ್ಲಿ ಸಂಭವಿಸಿದ ಭೂಕಂಪದ ದೃಶ್ಯ ಎಂದು ನಿರ್ದಿಷ್ಟ ಸಿಸಿಟಿವಿಯ ವಿಡಿಯೋ ಒಂದು ವೈರಲ್‌ ಆಗಿದೆ.

‘ಮನೀಶ್ ಮಿಶ್ರಾ’ ಎಂಬ ಎಕ್ಸ್‌ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. “ದಿಲ್ಲಿ – ಎನ್‌ಸಿಆರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿದೆ. ಬೆಳಗ್ಗೆ 5:38ಕ್ಕೆ ತೀವ್ರ ಕಂಪನದ ಅನುಭವವಾಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ಈ ವಿಡಿಯೋವನ್ನು ನೋಡಿ ಭೂಕಂಪದ ತೀವ್ರತೆಯನ್ನು ಅಂದಾಜಿಸಿ,” ಎಂದು ಅವರು ಬರೆದುಕೊಂಡಿದ್ದಾರೆ.

‘ಪವನ್’ ಎಂಬ ಇನ್ನೋರ್ವ ‘ಎಕ್ಸ್‌’ ಬಳಕೆದಾರರೂ ಈ ವಿಡಿಯೋವನ್ನು ಹಂಚಿಕೊಂಡಿದ್ದು, “ಸ್ಫೋಟ ಮತ್ತು ಕಂಪನವನ್ನು ನೋಡಿ. ಇದು ಬೇರೆಯ ಮಟ್ಟದಲ್ಲಿತ್ತು. ನಾನಿನ್ನೂ ಅದರ ಬಗ್ಗೆ ಯೋಚಿಸುತ್ತಿದ್ದೇನೆ. ನನ್ನ ಮನೆಯ ಸಿಸಿಟಿವಿ ವಿಡಿಯೋ,” ಎಂದು ಹೇಳಿದ್ದಾರೆ. ಇದೇ ರೀತಿ ಹಲವು ಸಾಮಾಜಿಕ ಮಾಧ್ಯಮಗಳ ಬಳಕದಾರರು ಹಂಚಿಕೊಂಡಿರುವ ವಿಡಿಯೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಪ್ರಮುಖ ಫ್ರೇಮ್‌ನ ಸ್ಕ್ರೀನ್‌ ಗ್ರ್ಯಾಬ್‌ ತೆಗೆದು ಗೂಗಲ್‌ ಲೆನ್ಸ್‌ನಲ್ಲಿ ಸರ್ಚ್ ಮಾಡಿದಾಗ, ಫೆಬ್ರವರಿ 16ರಂದು ರಾತ್ರಿ 12:33ಕ್ಕೆ ಪೋಸ್ಟ್ ಮಾಡಲಾದ ಟ್ವೀಟ್ ಲಭ್ಯವಾಗಿದೆ. ಈ ಟ್ವೀಟ್ ಪ್ರಕಾರ, ಇದು ಫೆಬ್ರವರಿ 15ರ ರಾತ್ರಿ 10:48ಕ್ಕೆ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಸಂಭವಿಸಿದ ಭೂಕಂಪದ್ದಾಗಿದೆ.

ಸಿಸಿಟಿವಿ ದೃಶ್ಯದಲ್ಲಿ ದಿನಾಂಕ ಮತ್ತು ಸಮಯ ಕೂಡ ನಮೂದಾಗಿದೆ. ಮೊಹಮ್ಮದ್ ಅಬ್ದುಲ್ಲಾ ಹಾಶ್ಮಿ ಎಂಬವರು ಇದನ್ನು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ಭೂಕಂಪದ ಸಮಯದಲ್ಲಿ ತಮ್ಮ ಮನೆಯ ಹೊರಗೆ ಇರುವ ಸಿಸಿಟಿವಿ ಕ್ಯಾಮೆರಾದ ದೃಶ್ಯ ಇದು ಎಂದು ಹೇಳಿಕೊಂಡಿದ್ದಾರೆ.

ಇನ್ನು ಇಸ್ಲಮಾಬಾದ್‌ನಲ್ಲಿ ಭೂಕಂಪ ನಡೆದಿತ್ತೇ ಎಂದು ಪರಿಶೀಲಿಸಲು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, ‘ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್‌’ನ ವರದಿ ಲಭ್ಯವಾಗಿದೆ. ಇದರ ಪ್ರಕಾರ ಫೆಬ್ರವರಿ 15ರಂದು ಪಾಕಿಸ್ತಾನದ ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್‌ನಲ್ಲಿ ತೀವ್ರ ಭೂಕಂಪ ಸಂಭವಿತ್ತು ಎಂದು ವರದಿಯಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 4.8 ದಾಖಲಾಗಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ದಿಲ್ಲಿ – ಎನ್‌ಸಿಆರ್ ಭಾಗದಲ್ಲಿ ಸಂಭವಿಸಿದ ಭೂಕಂಪದ ವಿಡಿಯೋ ಎಂದು ಸಾಮಾಜಿಕ ಮಾಧ್ಯಮಗಳಲ್ಲ ವೈರಲ್‌ ಆಗಿರುವ ಸಿಸಿಟಿವಿ ದೃಶ್ಯ ದಿಲ್ಲಿಯದ್ದಲ್ಲ. ಈ ವೈರಲ್ ವಿಡಿಯೋ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಸಂಭವಿಸಿದ ಭೂಕಂಪದ್ದು ಎಂಬುದು ಸ್ಪಷ್ಟವಾಗಿದೆ. ಫೆಬ್ರವರಿ 15ರ ರಾತ್ರಿ ಇಸ್ಲಾಮಾಬಾದ್‌ನಲ್ಲಿ ಭೂಕಂಪ ಸಂಭವಿಸಿತ್ತು. ಆಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳನ್ನೇ ದಿಲ್ಲಿಯ ಭೂಕಂಪದ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕ್ರಿಶ್ಚಿಯನ್ನರನ್ನು ಕೊಲ್ಲುವುದಾಗಿ ಪ್ರಮಾಣ ವಚನ ಸ್ವೀಕರಿಸಿದ್ರಾ ಸಂಘ ಪರಿವಾರದ ಸದಸ್ಯರು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights