FACT CHECK | ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಎಂದು ಪಾಕ್ನಲ್ಲಿ ನಡೆದ ಅಪಘಾತದ ವಿಡಿಯೋ ಹಂಚಿಕೆ
ಪ್ರಯಾಗ್ರಾಜ್ನ ಮಹಾ ಕುಂಭಮೇಳದಲ್ಲಿ ನಡೆದ ಕಾಲ್ತುಳಿತದ ವಿಡಿಯೋ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಅವರ ಸರ್ಕಾರವನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಮಹಾ ಕುಂಭಮೇಳದಲ್ಲಿ ವ್ಯವಸ್ಥೆಗಳು ಸರಿಯಾಗಿಲ್ಲ ಎಂದು ಟೀಕಿಸಿದ್ದಾರೆ.

ಇನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನಲ್ಲಿ ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡುತ್ತಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಹಲವರು ಭಯಭೀತರಾಗಿರುವುದು ಮತ್ತು ಏನೋ ದುರ್ಘಟನೆ ಸಂಭವಿಸಿರುವುದು ವಿಡಿಯೋ ಮೂಲಕ ಖಚಿತವಾಗುತ್ತಿದೆ. ಹಾಗಿದ್ದರೆ ವಿಡಿಯೋ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ವಿಡಿಯೋವಿನ ಕೆಲವೊಂದು ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವಿಡಿಯೋಗೆ ಸಂಬಂಧಿಸಿದಂತೆ 29 ಜನವರಿ 2025ರಂದು ಇಕ್ರಮ್ ಬಿನ್ ಅಬ್ದುಲ್ ಜಬ್ಬಾರ್ ಎಂಬುವವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದ ಪೋಸ್ಟ್ವೊಂದು ಲಭ್ಯವಾಗಿದೆ. ಇದರಲ್ಲಿ “ಪಾಕಿಸ್ತಾನದ ಕಿರ್ಕ್ ಅಂಬ್ರಿ ಚೌಕ್ನಲ್ಲಿ ಕಂಟೇನರ್ನ ಬ್ರೇಕ್ ವಿಫಲವಾದ ನಂತರ ಸಂಭವಿಸಿದ ಅಪಘಾತ” ಎಂದು ಬರೆದುಕೊಂಡಿರುವುದು ಕಂಡು ಬಂದಿದೆ.

ಇದರಿಂದ ಸುಳಿವು ತೆಗೆದುಕೊಂಡು ವಿವಿಧ ಕೀ ವರ್ಡ್ಗಳನ್ನು ಬಳಸಿ ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ನಾವು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 11 ಜನವರಿ 2025 ರಂದು ಶರಬ್ ಜನನ್ ಎಂಬ ಮತ್ತೊಬ್ಬ ಫೇಸ್ಬುಕ್ ಬಳಕೆದಾರ ಅಪಘಾತದ ಮತ್ತೊಂದು ವೀಡಿಯೊವನ್ನು ಹಂಚಿಕೊಂಡಿರುವುದು ಕಂಡು ಬಂದಿದೆ. ಬಳಕೆದಾರರ ತಮ್ಮ ಪ್ರೊಫೈಲ್ನಲ್ಲಿ ಪಾಕಿಸ್ತಾನದ ಸಂಖ್ಯೆಯನ್ನು ನೀಡಿರುವುದು ಕೂಡ ಸ್ಪಷ್ಟವಾಗಿದೆ. ಇನ್ನು ಇದಕ್ಕೆ ಸಂಬಂಧಿಸಿದಂತೆ ಕೆಲವೊಂದು ಸುದ್ದಿ ವಾಹಿನಿಗಳ ವರದಿಗಳು ಕೂಡ ನಮಗೆ ಕಂಡುಬಂದಿದೆ.
ಹಲವು ಸುದ್ದಿ ವಾಹಿನಿಗಳು ಪಾಕಿಸ್ತಾನದ ಕಿರ್ಕ್ ಅಂಬ್ರಿ ಚೌಕ್ನಲ್ಲಿ ಕಂಟೇನರ್ನ ಬ್ರೇಕ್ ವಿಫಲವಾದ ನಂತರ ಭೀಕರ ಅಪಘಾತ ಸಂಭವಿಸಿದೆ. ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ, ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯನ್ನು ಪ್ರಕಟಿಸಿರುವುದು ಕಂಡು ಬಂದಿದೆ. ಹಾಗಾಗಿ ವೈರಲ್ ವಿಡಿಯೋವನ್ನು ದಾರಿ ತಪ್ಪಸುವ ಉದ್ದೇಶದಿಂದ ಹಂಚಿಕೊಳ್ಳಲಾಗುತ್ತಿದೆ ಎಂಬುದು ಈ ವರದಿಗಳಿಂದ ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೆಳುವುದಾದರೆ, ಪ್ರಯಾಗ್ರಾಜ್ನ ಮಹಾಕುಂಭ ಮೇಳದಲ್ಲಿ ಭೀಕರ ಕಾಲ್ತುಳಿತದ ಪರಿಣಾಮವಾಗಿ ಹಲವರು ಸಾವಿನ್ನಪ್ಪಿದ್ದಕ್ಕೆ ಸಂಬಂಧಿಸಿದ ವಿಡಿಯೋ ಎಂದು ಪಾಕಿಸ್ತಾನದ ಅಪಘಾತದ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮಹಾಕುಂಭ ಮೇಳಕ್ಕೆ ತೆರಳಲು ರೈಲಿನಲ್ಲಿ ಜಾಗ ಸಿಗದಿದ್ದಕ್ಕೆ ವ್ಯಕ್ತಿಯೊಬ್ಬ ರೈಲಿನ ಟಾಪ್ನಲ್ಲಿ ಮಲಗಿಕೊಂಡು ಪ್ರಯಾಣಿಸಿದ್ರಾ?

