FACT CHECK | ದೆಹಲಿಯಲ್ಲಿ BJP ಅಧಿಕಾರಕ್ಕೆ ಬಂದ ನಂತರ ಯಮುನಾ ನದಿ ಸ್ವಚ್ಛತಾ ಕಾರ್ಯ ಪ್ರಾರಂಭಿಸಲಾಗಿದೆ ಎಂದು ಹಳೆಯ ವಿಡಿಯೋ ಹಂಚಿಕೆ

ಈ ಬಾರಿ ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ BJP ಭರ್ಜರಿ ಗೆಲುವು ಸಾಧಿಸಿದ್ದು,  ದೆಹಲಿಯ ಆಡಳಿತ ಈಗ ನೂತನ ಸಿಎಂ ರೇಖಾ ಗುಪ್ತಾ ಅವರ ಕೈಯಲ್ಲಿದೆ. ಯಮುನಾ ನದಿಯನ್ನು ಸ್ವಚ್ಛಗೊಳಿಸುವ ವಿಚಾರ ಚುನಾವಣೆಯ ಸಂದರ್ಭದಲ್ಲಿ ಹೆಚ್ಚು ಚರ್ಚೆಯಾಗಿತ್ತು. ಈಗ ಸಾಮಾಜಿಕ ಮಾಧ್ಯಮಗಳಲ್ಲಿಯೂ ಇದೇ ವಿಚಾರ ಹೆಚ್ಚು ಚರ್ಚೆಯಾಗುತ್ತಿದೆ.

ಈಗ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಕೆಲವು ಯುವಕರು ಯಮುನಾ ನದಿಯನ್ನು ಸ್ವಚ್ಛಗೊಳಿಸುತ್ತಿದ್ದು, BJP ಅಧಿಕಾರಕ್ಕೆ ಬರುತ್ತಿದಂತೆ ಯಮುನಾ ನದಿ ಸ್ವಚ್ಛ ಕಾರ್ಯ ಆರಂಭವಾಗಿದೆ. ಪ್ರಧಾನಿ ಮೋದಿ ಮತ್ತು ಹೊಸ ಸಿಎಂ ರೇಖಾ ಗುಪ್ತಾ ಅವರಿಗೆ ಧನ್ಯವಾದಗಳನ್ನು ಎಂದು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ.

ಯುವಕರು ಯಮುನಾದಿಂದ ಕಸ ತೆಗೆಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿರುವ  @bageshwarlal ಎಂಬ ಎಕ್ಸ್‌ ಖಾತೆ ಬಳಕೆದಾರರು, ‘ಯಮುನಾ ನದಿಯನ್ನು ಸ್ವಚ್ಛಗೊಳಿಸಲಾಗುತ್ತಿದೆ, ಧನ್ಯವಾದಗಳು ಮೋದಿ ಜೀ, ಧನ್ಯವಾದಗಳು ರೇಖಾ ಗುಪ್ತಾ ಜೀ’ ಎಂದು ಬರೆದಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ತಿಳಿಸಿರುವಂತೆ ಯಮುನಾ ನದಿ ಸ್ವಚ್ಛತಾ ಕಾರ್ಯವನ್ನು  ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ಮಾಡಲಾಗುತ್ತಿರುವುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ಕೀಫ್ರೇಮ್‌ಗಳನ್ನು ತೆಗೆದು ಗೂಗಲ್ ಲೆನ್ಸ್‌ನೊಂದಿಗೆ ವಿಡಿಯೋವನ್ನು ಸರ್ಚ್ ಮಾಡಿದಾಗ, @Earthworri1 ಹೆಸರಿನ X ಖಾತೆಯೊಂದು ಲಭ್ಯವಾಗಿದೆ.  ವೈರಲ್ ವೀಡಿಯೊವನ್ನು ಮರುಟ್ವೀಟ್ ಮಾಡುತ್ತಿರುವ ಈ ಪೋಸ್ಟ್‌ನಲ್ಲಿ  ‘ಈ ವೀಡಿಯೊ 2024 ರ ನಮ್ಮ ತಂಡದ್ದು, ಮತ್ತು ನಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲ ಮತ್ತು ದೆಹಲಿಯ ಕಾಳಿಂದಿ ಕುಂಜ್ ಘಾಟ್‌ನಲ್ಲಿ 5 ವರ್ಷಗಳಿಂದ ಸ್ವಚ್ಛತಾ ಅಭಿಯಾನವನ್ನು ನಡೆಸುತ್ತಿದ್ದೇವೆ!’ ಎಂದು ಬರೆದುಕೊಂಡಿದ್ದಾರೆ.

ಇನ್ನು ಮತ್ತೊಬ್ಬ ಎಕ್ಸ್ ಬಳಕೆದಾರ ಭವ್ರಿನ್ ಕಂದಾರಿ ಅವರು ಕೂಡ ಶರ್ಮಾ ಅವರ ಪೋಸ್ಟ್ ಗೆ ಕಮೆಂಟ್ ಮಾಡಿದ್ದು, “ಈ ವೈರಲ್ ವಿಡಿಯೋದಲ್ಲಿ ಇರುವುದು ಅರ್ಥ್ ವಾರಿಯರ್ಸ್, ಅವರಿಗೆ ಇದರ ಶ್ರೇಯ ಸಲ್ಲಬೇಕು. ಈ ತಂಡ ಹಲವು ಸ್ವಚ್ಛತಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.” ಎಂದು ಬರೆದುಕೊಂಡಿರುವುದು ಕಂಡುಬಂದಿದೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ನಾವು ವಿವಿಧ ಕೀವರ್ಡ್ಸ್‌ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು. ಈ ವೇಳೆ 2024ರ ಈಟಿವಿ ಭಾರತ್ ವರದಿಯೊಂದು ಕಂಡು ಬಂದಿದೆ. ಇದರಲ್ಲಿ ದೆಹಲಿಯ ಆಕ್ಸಿಜನ್ ಮ್ಯಾನ್ ಎಂದೇ ಪ್ರಸಿದ್ಧರಾಗಿರುವ ಪಂಕಜ್ ಕುಮಾರ್ ಎಂಬುವರು ಕಾಳಿಂದಿ ಕುಂಜ್ ಘಾಟ್‌ನ ಸ್ವಚ್ಛತಾ ಕಾರ್ಯಕ್ಕಾಗಿ ಅರ್ಥ್ ವಾರಿಯರ್ಸ್ ಎಂಬ ಸ್ವಯಂಸೇವಕ ಗುಂಪನ್ನು ಮುನ್ನಡೆಸಿದರು ಎಂದು ಉಲ್ಲೇಖಿಸಿರುವುದು ಕಂಡುಬಂದಿದೆ. ಈ ಮೂಲಕ ವೈರಲ್ ವಿಡಿಯೋವನ್ನು ದಾರಿ ತಪ್ಪಿಸುವ ಬರಹಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂಬುದು ಸಾಬೀತಾಗಿದೆ

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಯಮುನಾವನ್ನು ಸ್ವಚ್ಛಗೊಳಿಸುವ ವೀಡಿಯೊ ಕಳೆದ ವರ್ಷದ್ದು. ದೆಹಲಿಯಲ್ಲಿ BJP ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಮುನಾ ನದಿಯ ಸ್ವಚ್ಛತಾ ಕಾರ್ಯವನ್ನು ಮಾಡಲಾಗುತ್ತಿದೆ ಎಂಬುದು ಸುಳ್ಳು. ಈ ಹಿಂದೆಯೇ ಅರ್ಥ್ ವಾರಿಯರ್ ಎಂಬ ತಂಡದವರು ಈ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮಹಾಕುಂಭ ಮೇಳದಲ್ಲಿ ಸನ್ನಿ ಲಿಯೋನ್ ಪುಣ್ಯ ಸ್ನಾನ ಮಾಡಿ ಪಾಪ ಕಳೆದುಕೊಂಡ್ರಾ? ವೈರಲ್ ವಿಡಿಯೋದ ಅಸಲೀಯತ್ತೇನು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights