FACT CHECK | ಭಗತ್ ಸಿಂಗ್, ಅಂಬೇಡ್ಕರ್‌ ಫೋಟೋವನ್ನು ದೆಹಲಿ ಸಿಎಂ ಕಚೇರಿಯಿಂದ ತೆಗೆಯಲಾಗಿದೆಯೇ?

ದೆಹಲಿಯಲ್ಲಿ BJP ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಸಿಎಂ ಆಗಿ ರೇಖಾ ಗುಪ್ತಾ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ದಿಲ್ಲಿಯ ಹೊಸ ಸರ್ಕಾರ ಮತ್ತು ಸಿಎಂ ರೇಖಾ ಗುಪ್ತಾ ಅವರ ಮೇಲೆ ಆಪಾದನೆಯೊಂದು ಕೇಳಿ ಬಂದಿದ್ದು, ಮುಖ್ಯಮಂತ್ರಿ ಕಚೇರಿಯಿಂದ ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಭಗತ್ ಸಿಂಗ್ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಅವರ ಫೋಟೋಗಳನ್ನು ತೆಗೆದುಹಾಕಲಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ರಾಜೇಂದ್ರ ಬೈರ್ವ ಎಎಸ್‌ಪಿ ಹೆಸರಿನ ಎಕ್ಸ್ ಬಳಕೆದಾರರು ತಮ್ಮ ಖಾತೆಯಲ್ಲಿ ಸಿಎಂ ಕಚೇರಿಯ ಫೋಟೋವನ್ನು ಪೋಸ್ಟ್‌ ಮಾಡಿದ್ದಾರೆ. ಇದರಲ್ಲಿ ಮುಖ್ಯಮಂತ್ರಿಯ ಕುರ್ಚಿಯ ಹಿಂದೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಫೋಟೋಗಳನ್ನು ಕಾಣಬಹುದಾಗಿದೆ.

ಈ ಫೋಟೋವನ್ನು ಹಂಚಿಕೊಂಡಿರುವ ರಾಜೇಂದ್ರ ಬೈರವಾ ಅವರು, ದಿಲ್ಲಿ ಬಿಜೆಪಿ ಸರ್ಕಾರ ಬಾಬಾಸಾಹೇಬ್ ಬಗ್ಗೆ ಎಷ್ಟು ಶ್ರದ್ಧೆ ಹೊಂದಿದೆ ಎಂಬುದನ್ನು ಈ ಫೋಟೋ ತೋರಿಸುತ್ತದೆ. ಬಾಬಾಸಾಹೇಬ್ ಮತ್ತು ಭಗತ್ ಸಿಂಗ್ ಅವರ ಫೋಟೋಗಳನ್ನು ತೆಗೆದುಹಾಕುವ ಮೂಲಕ ದಿಲ್ಲಿ ಬಿಜೆಪಿ ಸರ್ಕಾರ ತನ್ನ ಹೇಯ ಮನಸ್ಥಿತಿಯನ್ನು ಬಿಚ್ಚಿಟ್ಟಿದೆ’ ಎಂದು ಅವರು ಕಿಡಿಕಾರಿದ್ದಾರೆ.

ಇದೇ ರೀತಿಯ ಪೋಸ್ಟ್‌ಗಳನ್ನು ರಾಕೇಶ್ ಬೈರವಾ, ಶೈಲೇಶ್, ಇಲಾಹಾಬಾದ್ ವಾಲಾ ನೀಲಾಂಜಯ್, ಎಂಬವರ ಖಾತೆಗಳಲ್ಲೂ ಕಾಣಬಹುದಾಗಿದೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ. ಇದಲ್ಲದೆ ವಿರೋಧ ಪಕ್ಷ ಎಎಪಿ ಕೂಡ ಭಗತ್‌ ಸಿಂಗ್‌ ಹಾಗೂ ಅಂಬೇಡ್ಕರ್ ಫೋಟೋವನ್ನು ಸಿಎಂ ಕಚೇರಿಯಿಂದ ತೆಗೆದು ಹಾಕಲಾಗಿದೆ ಎಂದು ಆರೋಪ ಮಾಡಿತ್ತು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

 ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಸಂಬಂಧಿತ ಕೀವರ್ಡ್‌ಗಳೊಂದಿಗೆ ದಿಲ್ಲಿ ಸಿಎಂ ಕಚೇರಿಯ ಫೋಟೋಗಳಿಗಾಗಿ ಸರ್ಚ್ ಮಾಡಿದಾಗ, ವಿವಿಧ ಎಕ್ಸ್ ಖಾತೆಗಳಿಂದ ಮಾಡಲಾದ ಟ್ವೀಟ್‌ಗಳು ಲಭ್ಯವಾಗಿವೆ.

ಫೋಟೋಗಳನ್ನು ನೋಡಿದಾಗ ಮುಖ್ಯಮಂತ್ರಿ ಕುಳಿತುಕೊಳ್ಳುವ ಕುರ್ಚಿಯ ಹಿಂಬದಿಯಲ್ಲಿದ್ದ ಭಗತ್ ಸಿಂಗ್ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಚಿತ್ರಗಳನ್ನು ತೆಗೆದಿರುವುದು ಕಾಣಿಸುತ್ತದೆ. ಈ ಜಾಗದಲ್ಲಿ ಮೇಲೆ ಹೇಳಿದಂತೆ ಗಾಂಧೀಜಿ, ದ್ರೌಪದಿ ಮುರ್ಮು ಹಾಗೂ ಪ್ರಧಾನಿ ಮೋದಿ ಫೋಟೋಗಳನ್ನು ಇಡಲಾಗಿದೆ.

ಆದರೆ, ಸಿಎಂ ಕಚೇರಿಯ ಇನ್ನೊಂದು ಭಾಗದಲ್ಲಿ ಭಗತ್‌ ಸಿಂಗ್‌ ಹಾಗೂ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಚಿತ್ರ ಇದೆ. ಸ್ವತಃ ದಿಲ್ಲಿ ಬಿಜೆಪಿ ಎಕ್ಸ್‌ ಹ್ಯಾಂಡಲ್‌ನಲ್ಲೂ ಈ ಚಿತ್ರವನ್ನು ಪೋಸ್ಟ್‌ ಮಾಡಲಾಗಿದೆ. ಭಗತ್‌ ಸಿಂಗ್‌ ಹಾಗೂ ಅಂಬೇಡ್ಕರ್‌ ಚಿತ್ರವನ್ನು ಬೇರೆ ಜಾಗದಲ್ಲಿ ಹಾಕಿರುವುದನ್ನು ನೋಡಬಹುದು.

Bhagat Singh Ambedkar

 ಒಟ್ಟಾರೆಯಾಗಿ ಹೇಳುವುದಾದರೆ, ದೆಹಲಿಯಲ್ಲಿ BJP ಸರ್ಕಾರ ರಚನೆಯಾದ ನಂತರ ಸಿಎಂ ಕಚೇರಿಯಿಂದ ಶಹೀದ್ ಭಗತ್ ಸಿಂಗ್ ಮತ್ತು ಡಾ. ಬಿ. ಆರ್. ಅಂಬೇಡಕರ್ ಅವರ ಫೋಟೋಗಳನ್ನು ತೆಗೆದುಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ವಾಸ್ತವವಾಗಿ ಫೋಟೊದ ಜಾಗವನ್ನು ಬದಲಾಯಿಸಲಾಗಿದೆಯೇ ಹೊರತು ಕಚೇರಿಯಿಂದ ಫೋಟೊವನ್ನು ತೆಗೆಯಲಾಗಿದೆ ಎಂಬುದು ಸುಳ್ಳು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ನಟ ಯಶ್ ದಂಪತಿ ಮತ್ತು ಮಕ್ಕಳು ಮಹಾಕುಂಭ ಮೇಳಕ್ಕೆ ಹೋಗಿ ಪುಣ್ಯ ಸ್ನಾನ ಮಾಡಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights